Tuesday, April 6, 2021

ದೆಹಲಿ ರೈತರ ಹೋರಾಟಕ್ಕೆ ಪಾದಯಾತ್ರೆ ಮೂಲಕ ಬೆಂಬಲ

ಉಕ್ಕಿನ ನಗರ ತಲುಪಿದ ಎಂಜಿನಿಯರ್ ನಾಗರಾಜ್ ಕಲಗುಟಕರ್


ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಬಾಗಲಕೋಟೆಯ ಎಂಜಿನಿಯರ್, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಕಲಗುಟಕರ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಭದ್ರಾವತಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರು, ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.  
    ಭದ್ರಾವತಿ, ಏ. ೬: ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಬಾಗಲಕೋಟೆಯ ಎಂಜಿನಿಯರ್, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಕಲಗುಟಕರ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಗರದ ಆಮ್ ಆದ್ಮಿ ಪಾರ್ಟಿ ಮುಖಂಡರು, ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    ನಾಗರಾಜ್ ಕಲಗುಟಕರ್ ಸುಮಾರು ೭ ತಿಂಗಳು ಕಾಲ ಪಾದಯಾತ್ರೆ ಹಮ್ಮಿಕೊಂಡಿದ್ದು, ಒಟ್ಟು ೬ ಸಾವಿರ ಕಿ.ಮೀ. ದೂರ ಸಾಗಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಿ ಅಂತಿಮವಾಗಿ ವಿಜಯಪುರದಿಂದ ಮಹಾರಾಷ್ಟ್ರ ಮಾರ್ಗವಾಗಿ ದೆಹಲಿಗೆ ತೆರಳಲಿದ್ದಾರೆ.
     ಚಾಮರಾಜನಗರದಿಂದ ಫೆ.೧೧ರಂದು ಪಾದಯಾತ್ರೆ ಆರಂಭಿಸಿರುವ ನಾಗರಾಜ್ ಏ.೪ರ ಭಾನುವಾರ ಉಕ್ಕಿನ ನಗರಕ್ಕೆ ಆಗಮಿಸಿದರು. ಆಮ್ ಆದ್ಮಿ ಪಾರ್ಟಿ ಸ್ಥಳಿಯ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ರೈತರ ಹೋರಾಟಕ್ಕೆ ವಿಶೇಷವಾಗಿ ಪಾದಯಾತ್ರೆ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.
     ಆಮ್ ಆದ್ಮಿ ಪಾರ್ಟಿ ಪ್ರಮುಖರಾದ ಪರಮೇಶ್ವರಚಾರ್, ಎಚ್. ರವಿಕುಮಾರ್, ಇಬ್ರಾಹಿಂ ಖಾನ್, ಅಬ್ದುಲ್ ಖದೀರ್, ಮಹಿಳಾ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
      ಕೆಎಸ್‌ಆರ್‌ಟಿಸಿ ನೌಕರರ ಹೋರಾಟಕ್ಕೆ ಬೆಂಬಲ:
   ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಪಾರ್ಟಿ ಬೆಂಬಲ ವ್ಯಕ್ತಪಡಿಸಿದೆ.
     ಈ ಕುರಿತು ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಪತ್ರಿಕೆಗೆ ಮಾಹಿತಿ ನೀಡಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನೌಕರರು ಈ ಹಿಂದೆಯೇ ಹೋರಾಟ ನಡೆಸಿದ್ದರು. ರಾಜ್ಯ ಸರ್ಕಾರ ೩ ತಿಂಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ  ಇದುವರೆಗೂ ಬೇಡಿಕೆ ಈಡೇರಿಸಿಲ್ಲ. ಇದೀಗ ಚುನಾವಣೆ ನೆಪದಲ್ಲಿ ಮುಂದಿನ ದಿನಗಳಲ್ಲಿ ಬೇಡಿಕೆಗಳನ್ನು ಈಡೇರಿಸಿಕೊಡುವುದಾಗಿ ಪುನಃ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ರೈತರ ಹೋರಾಟಕ್ಕೆ ಆಮ್ ಆದ್ಮಿ ಪಾರ್ಟಿ ಬೆಂಬಲ ಸೂಚಿಸುವ ಜೊತೆಗೆ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ತಾಲೂಕು ಕಛೇರಿಗೆ ಬರುವವರಿಗೆ ಅಲೆದಾಡಿಸದಿರಿ, ಸೂಕ್ತ ಮಾಹಿತಿ ನೀಡಿ ಸಹಕರಿಸಿ

ಮಂಗಳವಾರ ತಾ.ಪಂ. ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರ ಆಗ್ರಹ


ಭದ್ರಾವತಿಯಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
    ಭದ್ರಾವತಿ, ಏ. ೬: ತಾಲೂಕು ಕಛೇರಿಗೆ ವಿವಿಧ ದಾಖಲೆಗಳನ್ನು ಪಡೆಯಲು ಬರುವವರಿಗೆ ಸರಿಯಾದ ಮಾಹಿತಿ ನೀಡದೆ ಅಲೆದಾಡಿಸುವುದು ಸರಿಯಲ್ಲ. ತಾಲೂಕು ಆಡಳಿತ ವ್ಯಾಪ್ತಿಗೆ ಒಳಪಡುವ ಇಲಾಖೆಗಳ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುವಂತೆ ತಾಲೂಕು ಪಂಚಾಯಿತಿ ಸದಸ್ಯರು ಆಗ್ರಹಿಸಿದರು.
    ಮಂಗಳವಾರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾಗರಾಜ್, ಕಳೆದ ೬ ತಿಂಗಳುಗಳಿಂದ ಸರಿಯಾಗಿ ಪಿಂಚಣಿ ಬಂದಿಲ್ಲ. ಪಿಂಚಣಿಗಾಗಿ ತಾಲೂಕು ಕಛೇರಿ ಅಲೆದಾಡುವಂತಾಗಿದೆ. ಅಧಿಕಾರಿಗಳನ್ನು ಸಮರ್ಪಕಿಸಿದರೆ ಅದೇನೋ ಎರಡು ಕಡೆ ಲಾಕ್ ಆಗಿದೆ. ಎರಡು ಬಾರಿ ಆದೇಶ ಪತ್ರ ಮಂಜೂರಾಗಿದೆ. ಇತ್ಯಾದಿ ಕಾರಣಗಳನ್ನು ಹೇಳಿ ಕಳುಹಿಸಲಾಗುತ್ತಿದೆ. ಅಲ್ಲದೆ ಹೊದಸಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸುತ್ತಿದ್ದಾರೆ. ಇದರಿಂದಾಗಿ ಪಿಂಚಣಿಯನ್ನು ನಂಬಿರುವ ಬಡವರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಇದಕ್ಕೆ ಉತ್ತರಿಸಿದ ಉಪತಹಸೀಲ್ದಾರ್ ಮಲ್ಲಿಕಾರ್ಜುನಯ್ಯ, ಹೊಸದಾಗಿ ಪಿಂಚಣಿ ಮಾಡಿಸುವ ಅಗತ್ಯವಿಲ್ಲ. ಆಧಾರ್ ಕಾರ್ಡ್, ಬ್ಯಾಂಕ್‌ಪಾಸ್‌ಬುಕ್ ನೀಡಿದರೆ ಸಾಕು ಪಿಂಚಣಿ ಸಮಸ್ಯೆ ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದರು.
     ಹಿರಿಯ ಸದಸ್ಯ ಧರ್ಮೇಗೌಡ ಮಾತನಾಡಿ, ಆಹಾರ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ ತಾಲೂಕು ಕಛೇರಿಗೆ ಬರರುವವರಿಗೆ ಸೂಕ್ತ ಮಾಹಿತಿ ನೀಡುವ ಜೊತೆಗೆ ಪೂರಕವಾಗಿ ಸ್ಪಂದಿಸಬೇಕು. ಆದರೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಅಲೆದಾಡುಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
 ಆರಂಭದಲ್ಲಿ ಸದಸ್ಯ ದಿನೇಶ್ ಮಾತನಾಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳನ್ನು ಹೆಚ್ಚು ದಿನ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲಿ. ಇದರ ಹಿಂದೆ ಯಾವುದೋ ವೈಫಲ್ಯವಿರುವಂತೆ ಎದ್ದು ಕಾಣುತ್ತಿದೆ. ತಾಲೂಕು ಪಂಚಾಯಿತಿ ವ್ಯಾಪ್ತಿಯ ಸಮಗ್ರ ಚಿತ್ರಣ ಅರಿತುಕೊಂಡು ಅಭಿವೃದ್ಧಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುವ  ಮೊದಲೇ ವರ್ಗವಣೆಗೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
    ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಅಧಿಕಾರಿಯನ್ನು ಸರ್ಕಾರವೇ ವರ್ಗಾವಣೆಗೊಳಿಸಿದೆ. ಅಧಿಕಾರಿಗಳನ್ನು ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿಲ್ಲ ಎಂದರು.
    ನೂತನ ಕಾರ್ಯನಿರ್ವಹಣಾಧಿಕಾರಿ ರಮೇಶ್ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ನನ್ನನ್ನು ನಿಯೋಜನೆಗೊಳಿಸಲಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.
    ಉಪಾಧ್ಯಕ್ಷೆ ನೇತ್ರಾಬಾಯಿ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಸದಸ್ಯರಾದ ಶಾಮಾಬಾನು, ಆಶಾ ಶ್ರೀಧರ್, ಯಶೋದಮ್ಮ, ಎ.ಎನ್ ಉಷಾಕಿರಣ, ಎಸ್. ರಮೇಶ್, ಕೆ.ವಿ ರುದ್ರಪ್ಪ, ಅಣ್ಣಾಮಲೈ, ತಿಪ್ಪೇಶ್‌ರಾವ್ ಅರಣ್ಯ, ಕೃಷಿ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.