ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಜಿ.ಆರ್ ಷಡಾಕ್ಷರಪ್ಪ ಆರೋಪ
![](https://blogger.googleusercontent.com/img/a/AVvXsEiZ7SzZ-n7L1yGWIQva93IqB4ZZQf4CnufG2VcGJcKOoE-iyz9xcfy54e3uMEL4BzPhJGjX7nv5iyD2hZ1BoAQI-_egDYWSHVZ6N7hcda6rUXzMjG5tuYsIv4OFE_MLKY0yBghzozktHifF9r-m1pQxF690VrhN0_xM03ErVvTvqzGsqthJjAmZgwKFEWmK=w400-h226-rw)
ಭದ್ರಾವತಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರದ ಪರಾಜಿತ ಅಭ್ಯರ್ಥಿ, ನ್ಯಾಯವಾದಿ ಜಿ.ಆರ್ ಷಡಾಕ್ಷರಪ್ಪ, ಎಚ್.ಎಂ. ಶಿವಣ್ಣ, ಚಿತ್ರಪ್ಪ ಯರಬಾಳ, ಎಂ. ಅಣ್ಣಪ್ಪ, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ: ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಯವರು ಅ. ೨೮ರಂದು ನರಸಿಂಹರಾಜಪುರ ತಾಲೂಕಿನ ಭೈರಾಪುರ-ಅಲ್ದಾರ ಗ್ರಾಮದಲ್ಲಿ ದಲಿತ ಮುಖಂಡ, ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಚಿತ್ರಪ್ಪ ಯರಬಾಳ ಅವರು ಅರಣ್ಯ ಭೂಮಿ ಒತ್ತುವರಿ ಮಾಡಿ ಆಕ್ರಮ ಮಣ್ಣು ಗಣಿಗಾರಿಕೆ ನಡೆಸಿದ್ದಾರೆಂದು ಆರೋಪಿಸಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರದ ಪರಾಜಿತ ಅಭ್ಯರ್ಥಿ, ನ್ಯಾಯವಾದಿ ಜಿ.ಆರ್ ಷಡಾಕ್ಷರಪ್ಪ ಆರೋಪಿಸಿದರು.
ಅವರು ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಸುಳ್ಳು ಪ್ರಕರಣ ದಾಖಲಿಸಿ ದಲಿತರ ಮೇಲೆ ಹಲ್ಲೆ ನಡೆಸಿ, ಅರಣ್ಯ ಇಲಾಖೆಯ ಭ್ರಷ್ಟಾಚಾರದ ವಿರುದ್ಧದ ಹೋರಾಟ ಹತ್ತಿಕ್ಕುತ್ತಿರುವ ಪ್ರಯತ್ನ ಅರಣ್ಯಾಧಿಕಾರಿಗಳು ಮಾಡುತ್ತಿದ್ದಾರೆ. ಚಿತ್ರಪ್ಪ ಯರಬಾಳ ಅವರ ವಿರುದ್ಧ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಬಾಬು ರಾಜೇಂದ್ರಪ್ರಸಾದ್ ಕರ್ನಾಟಕ ಅರಣ್ಯ ಕಾಯ್ದೆ ೧೯೬೩ರ ಕಲಂ ೩೩,೬೨ ಮತ್ತು ೮೦ರಂತೆ ಪ್ರಕರಣ ದಾಖಲಿಸಿದ್ದಾರೆ. ಅಂದೇನ್ಯಾಯಾಲಯದ ಅನುಮತಿ ಪಡೆದು, ಅಂದು ಮಧ್ಯಾಹ್ನವೇ ಅಲ್ದಾರದ ಸರ್ವೆ ನಂ.೪೪ರಲ್ಲಿರುವ ಚಿತ್ರಪ್ಪ ಯರಬಾಳ ಅವರ ತಂದೆ ಕೊಲ್ಲಪ್ಪ ಬಿನ್ ಮುಕುಂದಪ್ಪ ಇವರ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಅಲ್ಲಿ ಸ್ವಂತ ಬಳಕೆಗೆಂದು ಸುಟ್ಟಿದ್ದ ಇಟ್ಟಿಗೆ ಗೂಡನ್ನು ಕೆಡವಿಹಾಕಿ, ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು, ಸುಮಾರು ೧೦ ಟ್ರ್ಯಾಕ್ಟರ್‌ನಷ್ಟು ಇಟ್ಟಿಗೆಗಳನ್ನು ಸ್ಥಳದಲ್ಲಿ ಅಮಾನತ್ತು ಪಡಿಸಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಸ್ವಂತ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿದ ಅಧಿಕಾರಿಗಳನ್ನು ತಡೆದ ೮೦ ವರ್ಷ ವಯಸ್ಸಿನ ಕೊಲ್ಲಪ್ಪ ಮತ್ತು ಅವರ ಪತ್ನಿ ನಾಗಮ್ಮ ಇವರುಗಳ ಮೇಲೆ ದೌರ್ಜನ್ಯವೆಸಗಿ, ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ನಡೆಸಿದ್ದಾರೆಂದು ದೂರಿದರು.
ಅಲ್ದಾರ ಗ್ರಾಮದ ಸರ್ವೆ ನಂಬರ್ ೪೪ರಲ್ಲಿ ಪರಿಶಿಷ್ಟ ಜಾತಿ ಭೋವಿ ಜನಾಂಗದ ೩೦ ಕುಟುಂಬಗಳು ಸುಮಾರು ೫೦ ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದು, ಕಾಲಕಾಲಕ್ಕೆ ಸರ್ಕಾರಕ್ಕೆ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸುತ್ತಾ ಬಂದಿರುತ್ತಾರೆ. ೧೯೯೧ರಲ್ಲಿ ಫಾರಂ ೫೦ ಅಡಿಯಲ್ಲಿ, ನಂತರ ಫಾರಂ ನಂ. ೫೩ರಡಿ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಗಳನ್ನು ಪರಿಶೀಲಿಸಿದ ಬಗರ್ ಹುಕುಂ ಕಮಿಟಿ ಕಾನೂನು ವ್ಯಾಪ್ತಿಯಲ್ಲಿ ಕಂದಾಯ ಭೂಮಿಯನ್ನು ತಮಗಿರುವ ಅಧಿಕಾರ ಬಳಸಿ ೨೦೧೭-೧೮ನೇ ಸಾಲಿನಲ್ಲಿ ಈ ೩೦ ಕುಟುಂಬಗಳಿಗೂ ತಲಾ ೨ ಎಕರೆಯಿಂದ ೩ ಎಕರೆಯವರೆಗೂ ರೈತರು ಸ್ವಾಧೀನದಲ್ಲಿದ್ದ ಪ್ರಮಾಣಕ್ಕನುಗುಣವಾಗಿ ಮಂಜೂರು ಮಾಡಿದ್ದು, ಕೊಲ್ಲಪ್ಪ ಬಿನ್ ಮುಕುಂದಪ್ಪ ಇವರಿಗೂ ೨ ಎಕರೆ ೨೫ ಗುಂಟೆ ಜಮೀನು ಮಂಜೂರಾತಿ ಮಾಡಿದ್ದು, ಇವರೆಲ್ಲರ ಹೆಸರಿಗೆ ಪಹಣಿ ಮತ್ತು ಖಾತೆ ದಾಖಲಾಗಿರುತ್ತದೆ ಎಂದರು.
೨೦೧೯ನೇ ಸಾಲಿನಲ್ಲಿ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳ ಕಚೇರಿಯಿಂದ ಕೆಲ ಪರಿಶಿಷ್ಟ ಜಾತಿಗೆ ಸೇರಿದ ಸಾಗುವಳಿದಾರರ ವಿರುದ್ಧ ಮಾತ್ರ ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿರುತ್ತದೆ. ಅದರಂತೆ ಕೊಲ್ಲಪ್ಪ ಬಿನ್ ಮುಕುಂದಪ್ಪ ಇವರ ವಿರುದ್ಧವೂ ಪ್ರಕರಣ ಸಂಖ್ಯೆ: ಎಲ್.ಜಿ.ಸಿ. (ಜಿ) ನಂ. ೧೫೦೭/೨೦೧೯ರಂತೆ ದಾವೆ ಹೂಡಲಾಗಿದೆ. ಆದರೆ, ಕರ್ನಾಟಕ ಸರ್ಕಾರದ ರಾಜ್ಯಪತ್ರ ಸಂವ್ಯಶಾಇ ಶಾಸನ ೨೦೨೨, ಬೆಂಗಳೂರು ದಿನಾಂಕ: ೧೩-೧೦-೨೦೨೨ರಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ಅಧಿನಿಯಮ, ೨೦೨೨ರಲ್ಲಿ ಈ ಎಲ್ಲಾ ದಾವೆಗಳನ್ನು ಮುಕ್ತಾಯಗೊಳಿಸಿದೆ. ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಚಿತ್ರಪ್ಪ ಯರಬಾಳ ಅವರು ಜಮೀನಿನ ಮಾಲೀಕರಲ್ಲದಿದ್ದರೂ, ಅವರು ಸ್ಥಳದಲ್ಲಿ ಇಲ್ಲದಿದ್ದರೂ ಕೊಲ್ಲಪ್ಪ ಅವರ ಖಾತೆ ಜಮೀನನ್ನೇ ಚಿತ್ರಪ್ಪ ಯರಬಾಳ ಅವರು ೩ ಎಕರೆ ೦೭ ಗುಂಟೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡುವ ಮೂಲಕ ಅಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸಿದ್ದಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ನ್ಯಾಯಾಲಯಕ್ಕೆ ೨ ಎಕರೆ ೩೨ ಗುಂಟೆ ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಕೇಸು ದಾಖಲಿಸಿದ್ದ ಅಧಿಕಾರಿಗಳು ಈಗ ಅದೇ ಜಮೀನನ್ನು ೩ ಎಕರೆ ೭ ಗುಂಟೆ ಎಂದು ಸುಳ್ಳು ದೂರು ದಾಖಲಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯಲ್ಲಿನ ಅಕ್ರಮ ಹಾಗು ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧದ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಚಿತ್ರಪ್ಪ ಯರಬಾಳ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಸರ್ಕಾರ ತಕ್ಷಣ ಅರಣ್ಯ ಇಲಾಖೆ ಅಕ್ರಮಗಳ ವಿರುದ್ಧ ತನಿಖೆ ನಡೆಸಿ ಭ್ರಷ್ಟಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಚ್.ಎಂ. ಶಿವಣ್ಣ, ಚಿತ್ರಪ್ಪ ಯರಬಾಳ, ಎಂ. ಅಣ್ಣಪ್ಪ, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.