Thursday, January 5, 2023

ಅಂಗವೈಕಲ್ಯ ಮಕ್ಕಳು ಸಹ ಸಮಾಜದ ಆಸ್ತಿ : ಬಿ.ಆರ್ ಬಸವರಾಜಪ್ಪ

ಭದ್ರಾವತಿ ಹಳೇನಗರದ ಕ್ಷೇತ್ರ ಸಂಪನ್ಮೂಲ ಕಛೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ೧೪ ವಿಕಲಚೇತನ ಮಕ್ಕಳಿಗೆ ಉಚಿತವಾಗಿ ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು.  
    ಭದ್ರಾವತಿ, ಜ. ೫ : ಅಂಗವೈಕಲ್ಯ ಮಕ್ಕಳು ಸಹ ಸಮಾಜದ ಆಸ್ತಿಗಳಾಗಿದ್ದು, ಶಿಕ್ಷಣ ಇಲಾಖೆ ಇಂತಹ ಮಕ್ಕಳಿಗೆ ಉಚಿತವಾಗಿ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸುವ ಜೊತೆಗೆ ಶಿಕ್ಷಣ ನೀಡುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ(ಅಭಿವೃದ್ಧಿ), ಡಯಟ್ ಪ್ರಾಂಶುಪಾಲ ಬಿ.ಆರ್ ಬಸವರಾಜಪ್ಪ ಹೇಳಿದರು.
    ಅವರು ಗುರುವಾರ ಹಳೇನಗರದ ಕ್ಷೇತ್ರ ಸಂಪನ್ಮೂಲ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಅಪೌಷ್ಠಿಕತೆ ಸೇರಿದಂತೆ ಕೆಲವೊಂದು ಕಾರಣಗಳಿಂದ ಮಕ್ಕಳು ತಾಯಿಯ ಗರ್ಭಾವಸ್ಥೆಯಲ್ಲಿರುವಾಗಲೇ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದು, ಇಂತಹ ಮಕ್ಕಳ ಅಂಗ ವೈಕಲ್ಯ ಸಹಜವಾಗಿದೆ. ಈ ಮಕ್ಕಳು ಸಹ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಇವರಿಗೂ ಶಿಕ್ಷಣ ನೀಡಬೇಕೆಂಬ ಉದ್ದೇಶ ಇಲಾಖೆ ಹೊಂದಿದೆ.  ಪ್ರಸ್ತುತ ತಾಲೂಕಿನಲ್ಲಿ ೫೪೨ ಅಂಗವೈಕಲ್ಯದಿಂದ ಕೂಡಿರುವ ಮಕ್ಕಳನ್ನು ಗುರುತಿಸಲಾಗಿದೆ. ಕೆಲವು ಮಕ್ಕಳು ಶಾಲೆಗಳಿಗೆ ಬರುತ್ತಿದ್ದು, ಇನ್ನೂ ಕೆಲವು ಮಕ್ಕಳು ಶಾಲೆಗಳಿಗೆ ಬರಲು ಸಾಧ್ಯವಾಗದೆ ಮನೆಗಳಲ್ಲಿಯೇ ಉಳಿದುಕೊಂಡಿದ್ದಾರೆ. ಇಂತಹ ಮಕ್ಕಳಿಗೆ ಮನೆಗಳಿಗೆ ತೆರಳಿ ಶಿಕ್ಷಣ ನೀಡಲಾಗುತ್ತಿದೆ. ಶಿಬಿರದಲ್ಲಿ ಅಂಗವೈಕಲ್ಯಕ್ಕೆ ತುತ್ತಾಗಿರುವ ಮಕ್ಕಳಿಗೆ ತಜ್ಞ ವೈದ್ಯರು ತಪಾಸಣೆ ನಡೆಸಿ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಶಿಫಾರಸ್ಸು ಮಾಡುತ್ತಿದ್ದು, ಇಲಾಖೆ ವತಿಯಿಂದ ಉಚಿತವಾಗಿ ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ಶಿಬಿರದಲ್ಲಿ ಒಟ್ಟು ೧೪ ಮಕ್ಕಳಿಗೆ ಗಾಲಿ ಕುರ್ಚಿಗಳನ್ನು ಹಾಗು ಸುಮಾರು ೪೬ ಮಕ್ಕಳಿಗೆ ಅಗತ್ಯವಿರುವ ಸಾಧನ ಸಲಕರಣೆಗಳಿಗೆ ವೈದ್ಯರು ಶಿಫಾರಸ್ಸು ಮಾಡಿದ್ದು, ಸರ್ಕಾರಿ ಹಾಗು ಅನುದಾನಿತ ಶಾಲೆಗಳ ಒಟ್ಟು ೩೧೦ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್, ಕಾರ್ಯದರ್ಶಿ ನಾಗರಾಜ್ ಶೇಟ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಸ್.ಕೆ ಮೋಹನ್, ಶ್ರೀಧರ ಗೌಡ, ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗು ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.

ಕಾಲ್ವರಿ ಕಾರುಣ್ಯ ಟ್ರಸ್ಟ್ ವತಿಯಿಂದ ಅಂಬ್ಯುಲೆನ್ಸ್ ಸೇವೆಗೆ ಚಾಲನೆ

ಭದ್ರಾವತಿ ಕಾಲ್ವರಿ ಕಾರುಣ್ಯ ಟ್ರಸ್ಟ್ ವತಿಯಿಂದ ನೂತನವಾಗಿ ಅಂಬ್ಯುಲೆನ್ಸ್ ಸೇವೆ ಆರಂಭಿಸಲಾಗಿದ್ದು, ಗುರುವಾರ ಸೇವೆಗೆ ಚಾಲನೆ ನೀಡಲಾಯಿತು.
    ಭದ್ರಾವತಿ, ಜ. ೫ : ನಗರದ ಕಾಲ್ವರಿ ಕಾರುಣ್ಯ ಟ್ರಸ್ಟ್ ವತಿಯಿಂದ ನೂತನವಾಗಿ ಅಂಬ್ಯುಲೆನ್ಸ್ ಸೇವೆ ಆರಂಭಿಸಲಾಗಿದ್ದು, ಗುರುವಾರ ಸೇವೆಗೆ ಚಾಲನೆ ನೀಡಲಾಯಿತು.
    ತುರ್ತು ಸಂದರ್ಭದಲ್ಲಿ ಕಡುಬಡವರಿಗೆ ಕಡಿಮೆ ದರದಲ್ಲಿ ಸೇವೆ ನೀಡುವ ಉದ್ದೇಶ ಟ್ರಸ್ಟ್ ಹೊಂದಿದ್ದು, ಅಂಬ್ಯುಲೆನ್ಸ್ ರಾಜ್ಯದ ಎಲ್ಲೆಡೆ ಸಂಚರಿಸಲಿದೆ. ಚಾಲನೆ ನೀಡಿದ ಪ್ರಮುಖರು ಮಾತನಾಡಿ, ಟ್ರಸ್ಟ್ ಕಾರ್ಯ ಶ್ಲಾಘನೀಯವಾಗಿದೆ. ಉತ್ತಮ ಸೇವೆ ನೀಡುವ ಕಡೆ ಹೆಚ್ಚಿನ ಗಮನ ಹರಿಸಿ ಸೇವಾ ಕಾರ್ಯ ಸಾರ್ಥಕಗೊಳಿಸಬೇಕೆಂದು ಕರೆ ನೀಡಿದರು.  
    ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸ್ಟೀವನ್ ಜೋನಾಥನ್, ಕಾರ್ಯದರ್ಶಿ ಮನೋಹರ್ ಬಾಬು, ಪಾಸ್ಟರ್ ರವಿಕುಮಾರ್, ಪಾಸ್ಟರ್ ರೈಮಂಡ್, ತೆಲುಗು ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಬಾಸ್ಕರ್ ಬಾಬು, ಯುವ ಮುಖಂಡ ವಿಲ್ಸನ್ ಬಾಬು, ನಗರಸಭೆ ಮಾಜಿ ಸದಸ್ಯ ಮುಕುಂದಪ್ಪ, ಯಂಗ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಆರ್. ಮೋಸಸ್, ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ತಾಲೂಕು ಅಧ್ಯಕ್ಷ ಸಂತೋಷ್ ಕುಮಾರ್, ಕಾಕನಿ ಪ್ರಕಾಶ್, ಬಾಬು, ಕೇವಿನ, ಬಾಲಾಜಿ, ಅಶೋಕ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾಮಾಜಿಕ ಜಾಲತಾಣಗಳ ಬಳಕೆ ಮಿತಿಯಲ್ಲಿರಲಿ, ಎಚ್ಚರಿಕೆ ವಹಿಸಿ : ಜಿ.ಕೆ ಮಿಥುನ್ ಕುಮಾರ್

ಭದ್ರಾವತಿ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌ಎವಿ ಶಾಲೆ ಮತ್ತು ಕಾಲೇಜುಗಳ ವಾರ್ಷಿಕೋತ್ಸವ ೨೫ನೇ ವರ್ಷದ ಬೆಳ್ಳಿ ಉತ್ಸವ ಸಮಾರಂಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಜ. ೫ : ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಹೇಳಿದರು.
    ಅವರು ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌ಎವಿ ಶಾಲೆ ಮತ್ತು ಕಾಲೇಜುಗಳ ವಾರ್ಷಿಕೋತ್ಸವ ೨೫ನೇ ವರ್ಷದ ಬೆಳ್ಳಿ ಉತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಾಮಾಜಿಕ ಜಾಲತಾಣಗಳ ಬಳಕೆ ಮಿತಿಯಲ್ಲಿರಬೇಕು. ಅಲ್ಲದೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದಂತೆ, ಮಾದಕ ದ್ರವ್ಯ ವ್ಯಸನದಿಂದ ದೂರವಿರುವಂತೆ ಹಾಗೂ ದಿನನಿತ್ಯದ  ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳುವಂತೆ ಕರೆ ನೀಡಿದರು.
    ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಣ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

ಅಂತಿಮ ಮತದಾರರ ಪಟ್ಟಿ ಪ್ರಕಟ: ಹೊಸ ಸೇರ್ಪಡೆ 6,191, ಕೈ ಬಿಟ್ಟಿರುವುದು 5,323

ಭದ್ರಾವತಿ,  ಜ. 5: ಭದ್ರಾವತಿ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಗುರುವಾರ ತಹಸೀಲ್ದಾರ್ ಆರ್. ಪ್ರದೀಪ್ ಪ್ರಕಟಿಸಿದರು.
    ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ  ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೊಸದಾಗಿ 6,191 ಮತದಾರರು ಸೇರ್ಪಡೆಗೊಂಡಿದ್ದು, ಉಳಿದಂತೆ 5,323 ಮತದಾರರನ್ನು ಕೈ ಬಿಡಲಾಗಿದೆ. 2,405 ತಿದ್ದುಪಡಿಯಲಿದ್ದು, ಅಂತಿಮವಾಗಿ 2,07,609 ಮತದಾರರಿದ್ದಾರೆ. ಈ ಪೈಕಿ 1,01,058 ಪುರುಷ ಹಾಗು 1,06,546 ಮಹಿಳಾ ಮತ್ತು 5 ತೃತೀಯ ಲಿಂಗ ಮತದಾರರಿದ್ದು, ಒಟ್ಟಾರೆ ಅಂತಿಮ ಮತಪಟ್ಟೆಯಲ್ಲಿ 2,885 ಮತದಾರರ ಸಂಖ್ಯೆ ಹೆಚ್ಚಳವಾಗಿದೆ  ಎಂದರು.
    ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1266 ಮಂದಿ ಮತದಾರರು ಮರಣ ಹೊಂದಿದ್ದು, 3,366 ಮತದಾರರು ಸ್ಥಳಾಂತರ, 161 ಮತದಾರರು ಪುನರಾವರ್ತನೆ ಹಾಗು 530 ಮತದಾರರು ವಲಸೆ ಗೊಂಡಿದ್ದು,  ಈ ಹಿನ್ನೆಲೆಯಿಂದ  ಒಟ್ಟು 5323 ಮಂದಿ ಮತದಾರರನ್ನು ಕೈ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.
     18 ರಿಂದ 19 ವಯಸ್ಸಿನ 911 ಯುವ ಮತದಾರರು ಹಾಗೂ 1776 ವಿಕಲಚೇತನ ಮತ್ತು 355 ಗಣ್ಯ ವ್ಯಕ್ತಿ ಮತದಾರರಿದ್ದು, 253 ಮತಕಟ್ಟೆ ಅಧಿಕಾರಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.
     ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಾದ ಟಿ. ಚಂದ್ರೇಗೌಡ, ಡಿ.ಸಿ ಮಾಯಣ್ಣ, ಆರ್.  ಕರುಣಾ ಮೂರ್ತಿ, ಬಿ.ಟಿ ನಾಗರಾಜ್, ಸಿ.ಎಂ ಖಾದರ್, ಮೊಸರಹಳ್ಳಿ ಸುರೇಶ್, ಎನ್ ರಾಮಕೃಷ್ಣ  ಮೆಡಿಕಲ್ ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.