ಭದ್ರಾವತಿ ಹಳೇನಗರದ ಕ್ಷೇತ್ರ ಸಂಪನ್ಮೂಲ ಕಛೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ೧೪ ವಿಕಲಚೇತನ ಮಕ್ಕಳಿಗೆ ಉಚಿತವಾಗಿ ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು.
ಭದ್ರಾವತಿ, ಜ. ೫ : ಅಂಗವೈಕಲ್ಯ ಮಕ್ಕಳು ಸಹ ಸಮಾಜದ ಆಸ್ತಿಗಳಾಗಿದ್ದು, ಶಿಕ್ಷಣ ಇಲಾಖೆ ಇಂತಹ ಮಕ್ಕಳಿಗೆ ಉಚಿತವಾಗಿ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸುವ ಜೊತೆಗೆ ಶಿಕ್ಷಣ ನೀಡುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ(ಅಭಿವೃದ್ಧಿ), ಡಯಟ್ ಪ್ರಾಂಶುಪಾಲ ಬಿ.ಆರ್ ಬಸವರಾಜಪ್ಪ ಹೇಳಿದರು.
ಅವರು ಗುರುವಾರ ಹಳೇನಗರದ ಕ್ಷೇತ್ರ ಸಂಪನ್ಮೂಲ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಪೌಷ್ಠಿಕತೆ ಸೇರಿದಂತೆ ಕೆಲವೊಂದು ಕಾರಣಗಳಿಂದ ಮಕ್ಕಳು ತಾಯಿಯ ಗರ್ಭಾವಸ್ಥೆಯಲ್ಲಿರುವಾಗಲೇ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದು, ಇಂತಹ ಮಕ್ಕಳ ಅಂಗ ವೈಕಲ್ಯ ಸಹಜವಾಗಿದೆ. ಈ ಮಕ್ಕಳು ಸಹ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಇವರಿಗೂ ಶಿಕ್ಷಣ ನೀಡಬೇಕೆಂಬ ಉದ್ದೇಶ ಇಲಾಖೆ ಹೊಂದಿದೆ. ಪ್ರಸ್ತುತ ತಾಲೂಕಿನಲ್ಲಿ ೫೪೨ ಅಂಗವೈಕಲ್ಯದಿಂದ ಕೂಡಿರುವ ಮಕ್ಕಳನ್ನು ಗುರುತಿಸಲಾಗಿದೆ. ಕೆಲವು ಮಕ್ಕಳು ಶಾಲೆಗಳಿಗೆ ಬರುತ್ತಿದ್ದು, ಇನ್ನೂ ಕೆಲವು ಮಕ್ಕಳು ಶಾಲೆಗಳಿಗೆ ಬರಲು ಸಾಧ್ಯವಾಗದೆ ಮನೆಗಳಲ್ಲಿಯೇ ಉಳಿದುಕೊಂಡಿದ್ದಾರೆ. ಇಂತಹ ಮಕ್ಕಳಿಗೆ ಮನೆಗಳಿಗೆ ತೆರಳಿ ಶಿಕ್ಷಣ ನೀಡಲಾಗುತ್ತಿದೆ. ಶಿಬಿರದಲ್ಲಿ ಅಂಗವೈಕಲ್ಯಕ್ಕೆ ತುತ್ತಾಗಿರುವ ಮಕ್ಕಳಿಗೆ ತಜ್ಞ ವೈದ್ಯರು ತಪಾಸಣೆ ನಡೆಸಿ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಶಿಫಾರಸ್ಸು ಮಾಡುತ್ತಿದ್ದು, ಇಲಾಖೆ ವತಿಯಿಂದ ಉಚಿತವಾಗಿ ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಶಿಬಿರದಲ್ಲಿ ಒಟ್ಟು ೧೪ ಮಕ್ಕಳಿಗೆ ಗಾಲಿ ಕುರ್ಚಿಗಳನ್ನು ಹಾಗು ಸುಮಾರು ೪೬ ಮಕ್ಕಳಿಗೆ ಅಗತ್ಯವಿರುವ ಸಾಧನ ಸಲಕರಣೆಗಳಿಗೆ ವೈದ್ಯರು ಶಿಫಾರಸ್ಸು ಮಾಡಿದ್ದು, ಸರ್ಕಾರಿ ಹಾಗು ಅನುದಾನಿತ ಶಾಲೆಗಳ ಒಟ್ಟು ೩೧೦ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್, ಕಾರ್ಯದರ್ಶಿ ನಾಗರಾಜ್ ಶೇಟ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಸ್.ಕೆ ಮೋಹನ್, ಶ್ರೀಧರ ಗೌಡ, ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗು ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.
No comments:
Post a Comment