ಭದ್ರಾವತಿ ಬಿ.ಎಚ್ ರಸ್ತೆ ನಂದಿನಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ನೂತನ ಪದಾಧಿಕಾರಿಗಳಿಗೆ ಹಾಗು ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಜ. ೮: ನ್ಯಾಯಬೆಲೆ ಅಂಗಡಿ ವಿತರಕರಿಗೆ ನೀಡಬೇಕಾಗಿರುವ ಕಮಿಷನ್ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸುವ ಮೂಲಕ ಹಿತ ಕಾಪಾಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಸಿದ್ದಲಿಂಗಯ್ಯ ಮನವಿ ಮಾಡಿದರು.
ಅವರು ನಗರದ ಬಿ.ಎಚ್ ರಸ್ತೆ ನಂದಿನಿ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳಿಗೆ ಹಾಗು ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೋವಿಡ್-೧೯ರ ನಡುವೆಯೂ ಪಡಿತರ ವಿತರಕರು ತಮ್ಮ ಜೀವದ ಹಂಗನ್ನು ತೊರೆದು ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಸಹ ಪಡಿತರ ವಿತರಕರ ಸಂಕಷ್ಟಗಳಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಪೂರಕವಾಗಿ ಸ್ಪಂದಿಸದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ಕೇಂದ್ರ ಸರ್ಕಾರದಿಂದ ೫ ತಿಂಗಳು ಹಾಗು ರಾಜ್ಯ ಸರ್ಕಾರದಿಂದ ೩ ತಿಂಗಳು ಕಮಿಷನ್ ಬಾಕಿ ಬರಬೇಕಾಗಿದೆ. ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿರುವ ವಿತಕರಿಗೆ ಯಾವುದೇ ಪರಿಹಾರ ಸಹ ಲಭಿಸಿರುವುದಿಲ್ಲ. ಈ ಕುರಿತು ಜ.೫ರಂದು ಬೆಂಗಳೂರಿನಲ್ಲಿ ನಡೆದ ಸಂಘದ ಕ್ಯಾಲೆಂಡರ್ ಹಾಗು ಸಮ್ಮೇಳನದ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಸಚಿವ ಕೆ. ಗೋಪಾಲಯ್ಯನವರ ಗಮನಕ್ಕೂ ಸಹ ತರಲಾಗಿದೆ ಎಂದರು.
ಪ್ರಸ್ತುತ ಪಡಿತರ ಇಲಾಖೆಯ ಸಹ ನಿರ್ದೇಶಕರು ಜನವರಿ ತಿಂಗಳಿನಿಂದ ಕೆ.ವೈ.ಸಿ ಕಡ್ಡಾಯಗೊಳಿಸಿದ್ದಾರೆ. ಆದರೆ ಸರ್ವರ್ ಸಮಸ್ಯೆ ಇರುವುದರಿಂದ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ಹಿಂದಿನ ಕೆ.ವೈ.ಸಿ ಬಾಕಿ ಸಹ ಬಂದಿರುವುದಿಲ್ಲ. ಇದರಿಂದಾಗಿ ಪಡಿತರ ವಿತರಕರು ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಪಡಿತರ ವಿತರಕರಿಗೆ ಬರಬೇಕಾಗಿರುವ ಬಾಕಿ ಬಿಡುಗಡೆಯಾದ ನಂತರ ಕೆ.ವೈ.ಸಿ ಪ್ರಾರಂಭಿಸಬೇಕು. ಸರ್ಕಾರ ಮುಕ್ತ ಮಾರುಕಟ್ಟೆಯ ದಿನಬಳಕೆ ವಸ್ತುಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಸೋಪು, ಉಪ್ಪು, ಸಕ್ಕರೆ, ರವೆ, ಮೈದಾಹಿಟ್ಟು, ಅಗರಬತ್ತಿ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಪಡಿತರದಾರರು ಸಹ ಸಹಕರಿಸುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರಾದ ಪರಮೇಶ್ವರಪ್ಪ ಹಾಗೂ ಕೆ. ಈಶ್ವರಚಾರಿ ಹಾಗೂ ೪ ಬಾರಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿರುವ ಸಿ.ಆರ್ ಶಿವರಾಮ್ ಹಾಗು ಭದ್ರಾವತಿ ನಗರ ಘಟಕದ ನೂತನ ಅಧ್ಯಕ್ಷ ಎಸ್.ಆರ್ ನಾಗರಾಜ್ ಹಾಗೂ ಶಿವಮೊಗ್ಗ ನಗರ ಅಧ್ಯಕ್ಷ ನಾಗರಾಜ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವೈ.ವಿ. ಮೋಹನ್‌ಕುಮಾರ್ ಸ್ವಾಗತಿಸಿದರು. ಎಸ್. ವಾಗೀಶ್ ನಿರೂಪಿಸಿದರು.