Friday, May 6, 2022

ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿ : ಬಿ.ವೈ.ಕೆ ತಂಡಕ್ಕೆ ದ್ವಿತೀಯ ಬಹುಮಾನ

ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭದ್ರಾವತಿ ಹಳೇನಗರದ ಬಿ.ವೈ.ಕೆ ಕಬಡ್ಡಿ ತಂಡ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಮೇ. ೬: ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಹಳೇನಗರದ ಬಿ.ವೈ.ಕೆ ಕಬಡ್ಡಿ ತಂಡ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘ ಹಾಗು ಆರ್‌ಎಸ್‌ಎನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನ್ಯೂಟೌನ್ ಆಂಜನೇಯ ಅಗ್ರಹಾರದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ಸಮೀಪದ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಬಿ.ವೈ.ಕೆ ಕಬಡ್ಡಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ತಂಡದ ತರಬೇತಿದಾರ ಕಬಡ್ಡಿ ಕೇಸರಿ ಪ್ರಸಸ್ತಿ ವಿಜೇತ ಎಚ್.ಆರ್ ರಂಗನಾಥ್ ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.

ಅವೈಜ್ಞಾನಿಕವಾಗಿ ನಗರಸಭೆ ಆಸ್ತಿ ತೆರಿಗೆ ಹೆಚ್ಚಳ : ಮೇ.೯ರಂದು ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ

ಟಿ.ಜಿ ಬಸವರಾಜಯ್ಯ
    ಭದ್ರಾವತಿ, ಮೇ. ೬: ನಗರಸಭೆ ಆಸ್ತಿ ತೆರಿಗೆಯನ್ನು ಅವೈಜ್ಞಾನಿಕವಾಗಿ ಹೆಚ್ಚು ಮಾಡಿರುವುದನ್ನು ವಿರೋಧಿಸಿ ಮನೆ ಮಾಲೀಕರ ಸಂಘದ ವತಿಯಿಂದ ಮೇ.೯ರ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
    ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ನೌಕರರು ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದು, ನಿವೃತ್ತಿ ನಂತರ ಬಂದ ಹಣದಲ್ಲಿ ಕಷ್ಟಪಟ್ಟು ಸ್ವಂತ ಮನೆ ಅಥವಾ ನಿವೇಶನ ಹೊಂದಿರುತ್ತಾರೆ. ಈ ನಡುವೆ ಜೀವನ ನಿರ್ವಹಣೆ ಕಷ್ಟಕರವಾಗಿರುವಾಗ ನಗರಸಭೆ ಆಡಳಿತ ೨೦೨೦-೨೧ನೇ ಸಾಲಿನಲ್ಲಿ ಶೇ.೧೫ರಷ್ಟು, ೨೦೨೧-೨೨ನೇ ಸಾಲಿನಲ್ಲಿ ಶೇ.೩೦ರಷ್ಟು, ಇದೀಗ ಪ್ರಸಕ್ತ ಸಾಲಿನಲ್ಲಿ ಶೇ.೫ ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದು, ಅಲ್ಲದೆ ಖಾಲಿ ನಿವೇಶನಗಳ ತೆರಿಗೆಯನ್ನು ಶೇ.೬೦೦ರಷ್ಟು ಹೆಚ್ಚಳ ಮಾಡಲಾಗಿದೆ. ಮುಂದಿನ ವರ್ಷ ಸಹ ನೋಂದಾಣಿ ಶುಲ್ಕ ಮೌಲ್ಯ ಹೆಚ್ಚಾಗುವುದರಿಂದ ಪುನಃ ಶೇ.೫೦ರಷ್ಟು ತೆರಿಗೆ ಹೆಚ್ಚಾಗುವ ಸಾಧ್ಯತೆ ಇದೆ.
    ತೆರಿಗೆ ಪಾವತಿಸಲು ವಿಳಂಬವಾದಲ್ಲಿ ಶೇ.೨೪ರಷ್ಟು ದಂಡ ವಿಧಿಸಲಾಗುತ್ತಿದೆ. ದಂಡದ ಹಣದಲ್ಲಿಯೇ ನಗರಸಭೆ ನಡೆಸುವ ಲಕ್ಷಣಗಳು ಕಂಡು ಬರುತ್ತಿವೆ. ತೆರಿಗೆ ಶುಲ್ಕ ಕಟ್ಟಲು ಆಸ್ತಿಯನ್ನೇ ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಲ್ಲದೆ ಘನ ತ್ಯಾಜ್ಯ ವಿಲೇವಾರಿ ಶುಲ್ಕ ಸಹ ಬೇಕಾಬಿಟ್ಟಿಯಾಗಿ ವಸೂಲಾತಿ ಮಾಡಲಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ನಗರಸಭೆ ಆಡಳಿತಕ್ಕೆ ಮನವಿ ಮಾಡಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.    
    ಸರ್ಕಾರದ ಆದೇಶದಂತೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಿದ್ದು, ಸರ್ಕಾರ ಇಲ್ಲಿನ ನಿವಾಸಿಗಳ ಬದುಕು ಅರ್ಥ ಮಾಡಿಕೊಳ್ಳಬೇಕು. ತೆರಿಗೆ ಕಡಿಮೆ ಮಾಡಬೇಕೆಂಬ ಬೇಡಿಕೆಯೊಂದಿಗೆ ಹೋರಾಟ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ.

ಎಂಪಿಎಂ ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಹಣ ಪಾವತಿಸುವುದಾಗಿ ಜಿಲ್ಲಾಧಿಕಾರಿ ಭರವಸೆ

ಶಿವಮೊಗ್ಗ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ತಾಲೂಕು ಘಟಕ ಕೃತಜ್ಞತೆ


    ಭದ್ರಾವತಿ, ಮೇ. ೬: ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಂಡು ಸುಮಾರು ೭ ವರ್ಷಗಳು ಕಳೆದಿವೆ. ಈ ನಡುವೆ ೧೨ ವರ್ಷಗಳ ನಿರಂತರ ಹೋರಾಟದ ಪರಿಣಾಮ ಕಾರ್ಖಾನೆಗೆ ಕಬ್ಬು ಪೂರೈಸಿರುವ ರೈತರಿಗೆ ಬಾಕಿ ಹಣ ನೀಡುವುದಾಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಭರವಸೆ ನೀಡಿರುತ್ತಾರೆಂದು ಶಿವಮೊಗ್ಗ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ತಾಲೂಕು ಘಟಕ ತಿಳಿಸಿದೆ.
    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಕೆ. ಈರಣ್ಣ, ಪ್ರಧಾನ ಕಾರ್ಯದರ್ಶಿ ಸಣ್ಣಯ್ಯ ಮತ್ತು ರಾಜ್ಯ ಜಿಲ್ಲಾ ಸಂಚಾಲಕ ಎನ್.ಎಚ್ ದೇವಕುಮಾರ್‌ರವರು, ೨೦೧೦-೧೧ನೇ ಸಾಲಿನಲ್ಲಿ ಎಂಪಿಎಂ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಸರಬರಾಜು ಮಾಡಿದ್ದು, ಪ್ರತಿ ಟನ್‌ಗೆ ೧,೮೦೦ ರು. ಬೆಲೆ ನಿಗದಿ ಮಾಡಿ ಹಣ ಪಾವತಿಸಲಾಗಿತ್ತು. ಅಂದಿನ ಮುಖ್ಯಮಂತ್ರಿಯಾಗಿದ್ದ ಡಿ.ವಿ ಸದಾನಂದಗೌಡರವರು ಹೆಚ್ಚುವರಿಯಾಗಿ ಪ್ರತಿ ಟನ್ ಕಬ್ಬಿಗೆ ೧೦೦ ರು. ನೀಡುವುದಾಗಿ ಆದೇಶಿಸಿದ್ದರು. ಆದರೆ ಕಾರ್ಖಾನೆ ವತಿಯಿಂದ ೧೦೦ ರು. ಪಾವತಿಸದ ಹಿನ್ನಲೆಯಲ್ಲಿ ಸಂಘದ ವತಿಯಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿತ್ತು. ಬಾಕಿ ಹಣ ೨.೯೪ ಕೋ. ರು. ನೀಡುವಂತೆ ಹಲವಾರು ಮುಖ್ಯಮಂತ್ರಿಗಳಿಗೆ, ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.
    ಡಾ. ಸೆಲ್ವಮಣಿಯವರು ಜಿಲ್ಲಾಧಿಕಾರಿಯಾಗಿ ಹಾಗು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಘದ ವತಿಯಿಂದ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕಬ್ಬು ಬೆಳೆಗಾರರ ಹಿತ ಕಾಪಾಡುವುದಾಗಿ ತಿಳಿಸಿ ಕಡಿಮೆ ಬಾಕಿ ಇರುವ ರೈತರಿಗೆ ಹೆಚ್ಚುವರಿ ೧೦೦ ರು. ಮೊದಲು ಪಾವತಿಸಿ ನಂತರ ಹೆಚ್ಚು ಹಣ ಬಾಕಿ ಇರುವವರಿಗೆ ನೀಡಲಾಗುವುದು ಎಂದು ಭರವಸೆ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಕಬ್ಬು ಬೆಳೆಗಾರರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.  

ನಗರದ ವಿವಿಧೆಡೆ ಆದಿ ಶಂಕರಚಾರ್ಯರ ಜಯಂತ್ಯೋತ್ಸವ

ಭದ್ರಾವತಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಶಂಕರಚಾರ್ಯರ ಜಯಂತ್ಯೋತ್ಸವ ಸರಳವಾಗಿ ನಡೆಯಿತು.
    ಭದ್ರಾವತಿ, ಮೇ. ೬: ತಾಲೂಕು ಕಚೇರಿ ಸೇರಿದಂತೆ ವಿವಿಧೆಡೆ ಶುಕ್ರವಾರ ಆದಿ ಶಂಕರಚಾರ್ಯರ ಜಯಂತ್ಯೋತ್ಸವ ನಡೆಯಿತು.
    ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಜಯಂತ್ಯೋತ್ಸವ ಸರಳವಾಗಿ ನಡೆಯಿತು.
    ಆದಿ ಶಂಕರಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ತಾಲೂಕು ಬ್ರಾಹ್ಮಣ ಸಮಾಜದ ಗೌರವಾಧ್ಯಕ್ಷ ಕೃಷ್ಣ ಸೋಮಯಾಜಿಯವರು ಉಪನ್ಯಾಸ ನಡೆಸಿಕೊಟ್ಟರು.
    ಉಪತಹಸೀಲ್ದಾರ್ ಮಂಜಾನಾಯ್ಕ, ಶಿರಸ್ತೇದಾರ್ ರಾಧಾಕೃಷ್ಣ ಭಟ್, ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ನರಸಿಂಹಚಾರ್, ರಮಾಕಾಂತ್, ಅರ್ಚಕರಾದ ಮುರಳಿ ಭಟ್, ನಾಗರಾಜ್ ಭಟ್ ಹಾಗು ತಾಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
      ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ  ಜಯಂತ್ಯೋತ್ಸವ :
    ಹಳೇನಗರದ ಶ್ರೀ ರಾಮೇಶ್ವರ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಆದಿ ಶಂಕರಚಾರ್ಯರ ಜಯಂತಿ ಅಂಗವಾಗಿ ಉತ್ಸವ ಮೆರವಣಿಗೆ ನಡೆಸಲಾಯಿತು.
    ಜಯಂತ್ಯೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಶತರುದ್ರಾಭಿಷೇಕ ಹಾಗು ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದವರೆಗೆ ಉತ್ಸವ ಮೆರವಣಿಗೆ ಜರುಗಿತು. ನಂತರ ಮಹಾಮಂಗಳಾರತಿ ತೀರ್ಥಪ್ರಸಾದ ನೆರವೇರಿತು.
    ಶ್ರೀ ರಾಮೇಶ್ವರ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಆನಂದ್ ರಾವ್, ರಾಮರಾವ್, ಮಧು, ನಾಗರಾಜ್, ಮಂಜುನಾಥ್‌ರಾವ್, ಸುರೇಶ್‌ರಾವ್, ಶೇಷಾಚಲ, ಕೃಷ್ಣಮೂರ್ತಿ, ಗೋಪಾಲ್ ಜೋಯಿಸ್, ರಮಾಕಾಂತ್, ಪ್ರಧಾನ ಅರ್ಚಕ ಚಂದನ್ ಜೋಯ್ಸ್, ರಂಗನಾಥ್, ಲಲಿತಾ ಮಹಿಳಾ ಮಂಡಳಿಯ ಮಹಿಳೆಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಸಿದ್ದರೂಢನಗರದ ಶೃಂಗೇರಿ ಶಂಕರ ಮಠದಲ್ಲಿ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ನೇತೃತ್ವದಲ್ಲಿ, ನ್ಯೂಟೌನ್ ದತ್ತಮಂದಿರದಲ್ಲಿ ಹಾಗು ಜನ್ನಾಪರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಸೋಮಯಾಜಿಯವರ ನೇತೃತ್ವದಲ್ಲಿ ಶ್ರೀ ಆದಿ ಶಂಕರಚಾರ್ಯರ ಜಯಂತ್ಯೋತ್ಸವ ನಡೆಯಿತು.


ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಆದಿ ಶಂಕರಚಾರ್ಯರ ಜಯಂತಿ ಅಂಗವಾಗಿ ಉತ್ಸವ ಮೆರವಣಿಗೆ ನಡೆಸಲಾಯಿತು.


ಮೇ.೭ರಂದು ಭದ್ರಾವತಿ ರಾಮಾಚಾರಿ ಸಂಪಾದಕತ್ವದ ‘ಅಪ್ಪು ಅಮರ’ ಒಂದು ಅವಲೋಕನ ಪುಸ್ತಕ ಬಿಡುಗಡೆ

'ಅಪ್ಪು ಅಮರ' ಒಂದು ಅವಲೋಕನ ಪುಸ್ತಕ
    ಭದ್ರಾವತಿ, ಮೇ. ೬: ಮೂಲತಃ ನಗರದ ಬೊಮ್ಮನಕಟ್ಟೆ ನಿವಾಸಿಯಾಗಿರುವ ವಿಭಿನ್ನ ಬಗೆಯ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಭದ್ರಾವತಿ ರಾಮಚಾರಿ ಇದೀಗ ಕಾವ್ಯ ಸ್ಪಂದನ ಪಬ್ಲಿಕೇಷನ್ ಮೂಲಕ ಗುರುತಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    ಸಿನಿಮಾ ಕ್ಷೇತ್ರದಲ್ಲೂ ಗುರುತಿಸಿಕೊಂಡು ಸಾಹಿತ್ಯ ಸೇವೆಯಲ್ಲಿ ತೊಡಗಿರುವ ರಾಮಚಾರಿಯವರು ತಮ್ಮದೇ ಸಂಪಾದಕತ್ವದಲ್ಲಿ ನಟ, ಸಮಾಜ ಸೇವಕ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ ಸವಿನೆನಪಿನಲ್ಲಿ 'ಅಪ್ಪು ಅಮರ' ಒಂದು ಅವಲೋಕನ ಎಂಬ ಬೃಹತ್ ಪುಸ್ತಕವನ್ನು ಹೊರತಂದಿದ್ದಾರೆ. ಮೇ.೭ರಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಛೇರಿ ಸಮೀಪದಲ್ಲಿರುವ ನಯನ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಪುಸ್ತಕ ಬಿಡುಗಡೆಗೊಳ್ಳಲಿದೆ.
    ವಿಶೇಷ ಎಂದರೆ ರಾಮಚಾರಿಯವರು ಪುಸ್ತಕ ಹೊರತರುವಲ್ಲಿ ಹುಟ್ಟೂರಿನ ಪ್ರಮುಖರ ಸಹಕಾರ ಪಡೆದುಕೊಂಡಿದ್ದಾರೆ.  ಪರಿಸರವಾದಿ, ನಟ ಶಿವರಾಮ್, ಗ್ರಂಥಾಲಯ ಇಲಾಖೆಯ ಕುಮಾರ್ ಭದ್ರಾವತಿ  ಹಾಗು ಎಸ್. ತಾರಾನಾಥ್ ಅವರಿಗೂ  ಸಂಪಾದಕೀಯ ಮಂಡಳಿಯಲ್ಲಿ ಸ್ಥಾನ ನೀಡಿದ್ದಾರೆ. ಇವರೊಂದಿಗೆ ಲೇಖಕ, ಪ್ರಕಾಶಕ ರಮೇಶ್ ಸುರ್ವೆ, ಸುಮಾಲಿನಿ ಹಾಗು ಅಪ್ಪು ವೆಂಕಟೇಶ್ ಸಹ ಕೈಜೋಡಿಸಿದ್ದಾರೆ.
    ಈ ಪುಸ್ತಕ  ಸುಮಾರು ೩೫೦ ಬಹುವರ್ಣದ ಪುಟಗಳನ್ನು ಒಳಗೊಂಡಿದೆ. ಹಿರಿಯ ನಟ ರಾಮಕೃಷ್ಣರವರು ಪುಸ್ತುಕ ಬಿಡುಗಡೆ ಮಾಡಲಿದ್ದಾರೆ. ಚಿತ್ರ ನಿರ್ದೇಶಕ ಓಂ ಸಾಯಿ ಪ್ರಕಾಶ್, ನಿರ್ಮಾಪಕ ಎಸ್.ಎ ಗೋವಿಂದರಾಜ್, ಸಂಗೀತ ನಿರ್ದೇಶಕರಾದ ಗುರುಕಿರಣ್, ವಿ. ಮನೋಹರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ ಕುಮಾರ ಹೊಸಮನಿ, ಡಾ.ಸಿ.ಸೋಮಶೇಖರ್, ಧೀರೆನ್ ರಾಮ್‌ಕುಮಾರ್, ಭಾ.ಮ.ಹರೀಶ್, ನಟಿ ಪ್ರೇಮಾ, ಕಿರುತೆರೆ ನಟಿ ಅಪೂರ್ವ ಡಿ. ಸಾಗರ್, ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ ಎಲ್.ನಾಗರಾಜಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಸಮಾರಂಭದಲ್ಲಿ ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಎನ್.ಆರ್ ರಮೇಶ್‌ರವರಿಗೆ 'ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ' ಹಾಗು ಭದ್ರಾವತಿಯ ಡಾ. ವಿಜಯದೇವಿಯವರ 'ಅಲ್ಲಮ ಪ್ರಭು ದೇವರು', ಕಾವ್ಯ ಕಲ್ಪವಲ್ಲಿಯವರ 'ಮೇರುಗುರು ಕೈವಾರ ತಾತಯ್ಯ', ಗಣೇಶ ವಿ. ಸಾಗರ ಅವರ  'ರಾಮಕಥಾ ಮಿತ್ರ' ಹಾಗು ವಿ.ಟಿ ರಾಮಕೃಷ್ಣಯ್ಯನವರ 'ಊರುಗೋಲಿನ ಸುತ್ತ ಮುತ್ತ' ಕೃತಿಗಳಿಗೆ 'ಸಾಹಿತ್ಯ ಸುಮ ಪ್ರಶಸ್ತಿ' ಪ್ರದಾನ ನಡೆಯಲಿದೆ.
ಬದುಕು ಕಟ್ಟಿಕೊಳ್ಳಬೇಕೆಂಬ ಆಶಯದೊಂದಿಗೆ ಸುಮಾರು ೨ ದಶಕಗಳ ಹಿಂದೆ ಭದ್ರಾವತಿಯಿಂದ ಬೆಂಗಳೂರಿಗೆ ತೆರಳಿದ  ರಾಮಚಾರಿಯವರು ಕಾವ್ಯಸ್ಪಂದನ ಪಬ್ಲಿಕೇಷನ್ ಹುಟ್ಟು ಹಾಕುವ ಮೂಲಕ ಹಲವಾರು ಕವಿಗಳಿಗೆ, ಸಾಹಿತಿಗಳಿಗೆ, ಲೇಖಕರಿಗೆ ನೆರವಾಗಿ ನೂರಾರು ಪುಸ್ತಕಗಳ ಪ್ರಕಾಶಕರಾಗಿ ಹೊರಹೊಮ್ಮಿದ್ದಾರೆ.
    ಪುನೀತ್‌ರಾಜ್‌ಕುಮಾರ್‌ರವರ ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಗೊಳ್ಳಲು ಎಲ್ಲರೂ ಸಹಕಾರ ನೀಡಬೇಕೆಂದು ರಾಮಾಚಾರಿ ಕೋರಿದ್ದಾರೆ.