Friday, May 6, 2022

ಅವೈಜ್ಞಾನಿಕವಾಗಿ ನಗರಸಭೆ ಆಸ್ತಿ ತೆರಿಗೆ ಹೆಚ್ಚಳ : ಮೇ.೯ರಂದು ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ

ಟಿ.ಜಿ ಬಸವರಾಜಯ್ಯ
    ಭದ್ರಾವತಿ, ಮೇ. ೬: ನಗರಸಭೆ ಆಸ್ತಿ ತೆರಿಗೆಯನ್ನು ಅವೈಜ್ಞಾನಿಕವಾಗಿ ಹೆಚ್ಚು ಮಾಡಿರುವುದನ್ನು ವಿರೋಧಿಸಿ ಮನೆ ಮಾಲೀಕರ ಸಂಘದ ವತಿಯಿಂದ ಮೇ.೯ರ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
    ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ನೌಕರರು ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದು, ನಿವೃತ್ತಿ ನಂತರ ಬಂದ ಹಣದಲ್ಲಿ ಕಷ್ಟಪಟ್ಟು ಸ್ವಂತ ಮನೆ ಅಥವಾ ನಿವೇಶನ ಹೊಂದಿರುತ್ತಾರೆ. ಈ ನಡುವೆ ಜೀವನ ನಿರ್ವಹಣೆ ಕಷ್ಟಕರವಾಗಿರುವಾಗ ನಗರಸಭೆ ಆಡಳಿತ ೨೦೨೦-೨೧ನೇ ಸಾಲಿನಲ್ಲಿ ಶೇ.೧೫ರಷ್ಟು, ೨೦೨೧-೨೨ನೇ ಸಾಲಿನಲ್ಲಿ ಶೇ.೩೦ರಷ್ಟು, ಇದೀಗ ಪ್ರಸಕ್ತ ಸಾಲಿನಲ್ಲಿ ಶೇ.೫ ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದು, ಅಲ್ಲದೆ ಖಾಲಿ ನಿವೇಶನಗಳ ತೆರಿಗೆಯನ್ನು ಶೇ.೬೦೦ರಷ್ಟು ಹೆಚ್ಚಳ ಮಾಡಲಾಗಿದೆ. ಮುಂದಿನ ವರ್ಷ ಸಹ ನೋಂದಾಣಿ ಶುಲ್ಕ ಮೌಲ್ಯ ಹೆಚ್ಚಾಗುವುದರಿಂದ ಪುನಃ ಶೇ.೫೦ರಷ್ಟು ತೆರಿಗೆ ಹೆಚ್ಚಾಗುವ ಸಾಧ್ಯತೆ ಇದೆ.
    ತೆರಿಗೆ ಪಾವತಿಸಲು ವಿಳಂಬವಾದಲ್ಲಿ ಶೇ.೨೪ರಷ್ಟು ದಂಡ ವಿಧಿಸಲಾಗುತ್ತಿದೆ. ದಂಡದ ಹಣದಲ್ಲಿಯೇ ನಗರಸಭೆ ನಡೆಸುವ ಲಕ್ಷಣಗಳು ಕಂಡು ಬರುತ್ತಿವೆ. ತೆರಿಗೆ ಶುಲ್ಕ ಕಟ್ಟಲು ಆಸ್ತಿಯನ್ನೇ ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಲ್ಲದೆ ಘನ ತ್ಯಾಜ್ಯ ವಿಲೇವಾರಿ ಶುಲ್ಕ ಸಹ ಬೇಕಾಬಿಟ್ಟಿಯಾಗಿ ವಸೂಲಾತಿ ಮಾಡಲಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ನಗರಸಭೆ ಆಡಳಿತಕ್ಕೆ ಮನವಿ ಮಾಡಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.    
    ಸರ್ಕಾರದ ಆದೇಶದಂತೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಿದ್ದು, ಸರ್ಕಾರ ಇಲ್ಲಿನ ನಿವಾಸಿಗಳ ಬದುಕು ಅರ್ಥ ಮಾಡಿಕೊಳ್ಳಬೇಕು. ತೆರಿಗೆ ಕಡಿಮೆ ಮಾಡಬೇಕೆಂಬ ಬೇಡಿಕೆಯೊಂದಿಗೆ ಹೋರಾಟ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ.

1 comment:

  1. Let Dharani Programme be a Grand Success.
    K M Satheesh

    ReplyDelete