Friday, June 20, 2025

ಜೈನ ಮುನಿಶ್ರೀ ೧೦೮ ವಿದ್ಯಾಸಾಗರ್‌ಜಿ ಮಹಾರಾಜರ ತಂಡ ನಗರಕ್ಕೆ ಆಗಮನ : ಭಕ್ತರಿಗೆ ಆಶೀರ್ವಚನ


ಮುನಿಶ್ರೀ ೧೦೮ ವಿದ್ಯಾಸಾಗರ್‌ಜಿ ಮಹಾರಾಜರು.
    ಭದ್ರಾವತಿ: ಜೈನ ಧರ್ಮದ ಮುನಿಗಳಾದ ಶಾಂತಮೂರ್ತಿ, ವಾತ್ಸಲ್ಯರತ್ನಾಕರ್ ಪ.ಪೂ. ೧೦೮ ಆಚಾರ್ಯ ಶ್ರೀ ಸನ್ಮತಿಸಾಗರಜಿ ಮಹಾರಾಜರ ಶಿಷ್ಯರಾದ ಆಗಮಚಕ್ರವರ್ತಿ ನಿರ್ಯಾಪಾಕಾಶ್ರಮಣ ಮುನಿಶ್ರೀ ೧೦೮ ವಿದ್ಯಾಸಾಗರ್‌ಜಿ ಮಹಾರಾಜರು ಹಾಗು ೮ ಮಂದಿ ಮುನಿರಾಜರು ಶುಕ್ರವಾರ ಹಳೇನಗರದ ಜೈನ್ ಸ್ಥಾನಕ್ ಭವನಕ್ಕೆ ಆಗಮಿಸಿ ಇಲ್ಲಿನ ಭಕ್ತರಿಗೆ ಆಶೀರ್ವಚನ ನೀಡಿ ತೆರಳಿದರು. 
    ಬೆಳಗಾವಿ ಕಾಗ್‌ವಾಡ್ ತಾಲೂಕಿನ ಶಿರಗುಪ್ಪಿಯಿಂದ ಶ್ರೀ ಕ್ಷೇತ್ರ ಶ್ರವಣಬೆಳಗೊಳದವರೆಗೆ ಮಹಾಶ್ರಮಣ ಭಗವಾನ ಬಾಹುಬಲಿ ಚರಣ ವಂದನಾ ವಾತ್ಸಲ್ಯ ವಿಹಾರ-೨೦೨೫ ಅಂಗವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಮುನಿಗಳ ತಂಡದೊಂದಿಗೆ ನೂರಾರು ಭಕ್ತರು ಸಹ ಪಾದಯಾತ್ರೆಯೊಂದಿಗೆ ಆಗಮಿಸಿ ಸ್ಥಾನಕ್ ಭವನದಲ್ಲಿ ವಿಶ್ರಾಂತಿ ಪಡೆದು ಮಧ್ಯಾಹ್ನ ತೆರಳಿದರು. 


ಭದ್ರಾವತಿ ಹಳೇನಗರದ ಜೈನ್ ಸ್ಥಾನಕ್ ಭವನಕ್ಕೆ ಶುಕ್ರವಾರ ಆಗಮಿಸಿದ ಮುನಿಶ್ರೀ ೧೦೮ ವಿದ್ಯಾಸಾಗರ್‌ಜಿ ಮಹಾರಾಜರು. 

    ದಿಗಂಬರ ಜೈನ್ ಸಂಘದ ಅಧ್ಯಕ್ಷ ಪಿ.ಸಿ ಜೈನ್ ಹಾಗು ರಾಕೇಶ್ ಜೈನ್, ಅಜಯ್, ಅಭಯ್ ಕುಮಾರ್, ಸುಕುಮಾರ್, ಬಾಹುಬಲಿ ಸೇರಿದಂತೆ ಇನ್ನಿತರರು ಮುನಿಗಳ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸಿ ಬೀಳ್ಕೊಡುಗೆ ನೀಡಿದರು. 

ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ಸುಧಾರಣೆಗೆ ಉಚಿತ ಎಚ್‌ಪಿವಿ ಲಸಿಕಾ ಕಾರ್ಯಕ್ರಮ

ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳಿಂದ ಆಯೋಜನೆ 


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ, ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಶುಕ್ರವಾರ ೧೪ ರಿಂದ ೧೫ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಉಚಿತ ಎಚ್‌ಪಿವಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: ದೇಶದಲ್ಲಿ ಹೆಣ್ಣು ಮಕ್ಕಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಎಚ್‌ಪಿವಿ ಲಸಿಕಾ ಕಾರ್ಯಕ್ರಮಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ(ಉತ್ತರ), ಶ್ರೀ ಸತ್ಯ ಸಾಯಿ ಟ್ರಸ್ಟ್, ಕರ್ನಾಟಕ ಪ್ರಿವೀವ್ ಹೆಲ್ತ್ ವತಿಯಿಂದ ಉಚಿತ ಎಚ್‌ಪಿವಿ ಲಸಿಕಾ ಕಾರ್ಯಕ್ರಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ತಿಳಿಸಿದರು. 
    ಅವರು ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ, ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ೧೪ ರಿಂದ ೧೫ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಉಚಿತ ಎಚ್‌ಪಿವಿ ಲಸಿಕಾ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು. 
    ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗರ್ಭಕಂಠ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್‌ಗಳಿಗೆ ಕಾರಣವಾಗುವ ರೋಗಾಣುಗಳ ವಿರುದ್ಧ ಹೋರಾಡಲು ಎಚ್‌ಪಿವಿ ಲಸಿಕೆ ಸಹಕಾರಿಯಾಗಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ದೇಶ್ಯಾದ್ಯಂತ ಎಚ್‌ಪಿವಿ ಲಸಿಕೆ ಹಾಕುವ ಯೋಜನೆ ರೂಪಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಪೂರಕವಾಗುವಂತೆ ಸಂಸ್ಥೆ ವತಿಯಿಂದ ಉಚಿತವಾಗಿ ಲಸಿಕೆ ಹಾಕುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸಂಸ್ಥೆಯ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಯೋಜನೆ ರೂಪಿಸಿಕೊಳ್ಳಲಾಗಿದೆ. ಒಟ್ಟಾರೆ ಹೆಣ್ಣು ಮಕ್ಕಳ ಆರೋಗ್ಯ ಸುಧಾರಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು. 
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಓ. ಮಲ್ಲಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಎಚ್‌ಪಿವಿ ಲಸಕಾ ಕಾರ್ಯಕ್ರಮ ಆಯೋಜಿಸುವ ನಿರೀಕ್ಷೆ ಇದೆ. ಪ್ರಸ್ತುತ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ(ಉತ್ತರ), ಶ್ರೀ ಸತ್ಯ ಸಾಯಿ ಟ್ರಸ್ಟ್, ಕರ್ನಾಟಕ ಪ್ರಿವೀವ್ ಹೆಲ್ತ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಉಚಿತ ಲಸಿಕಾ ಕಾರ್ಯಕ್ರಮ ಹದಿಹರೆಯದ ಹೆಣ್ಣು ಮಕ್ಕಳಿಗೆ ಸಹಕಾರಿಯಾಗಿದೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದರು. 
    ಪ್ರಸ್ತುತ ಇಲಾಖೆ ವತಿಯಿಂದ ಮಳೆಗಾಲದಲ್ಲಿ ಎದುರಾಗುವ ಸಾಂಕ್ರಾಮಿಕ ರೋಗಗಳ ಬಗ್ಗೆ ಕಳೆದ ೨-೩ ತಿಂಗಳಿನಿಂದ ನಗರ ಹಾಗು ಗ್ರಾಮಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಸಹ ಕೈಗೊಳ್ಳುತ್ತಿದೆ. ವೈಯಕ್ತಿಕ ಹಾಗು ಸುತ್ತಲಿನ ಪರಿಸರದಲ್ಲಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕರೆ ನೀಡಲಾಗುತ್ತಿದೆ ಎಂದರು. 
    ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಪ್ರಸೂತಿ ಹಾಗು ಸ್ತ್ರೀ ರೋಗ ತಜ್ಞೆ ಡಾ. ವೀಣಾ ಭಟ್, ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ ಸೇರಿದಂತೆ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಕಾಡಾನೆ ದಾಳಿ : ವಿಐಎಸ್‌ಎಲ್ ಭದ್ರತಾ ಸಿಬ್ಬಂದಿ ಸಾವು

ಕಾಡಾನೆಯೊಂದು ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಬಂಡಿಗುಡ್ಡದಲ್ಲಿ ನಡೆದಿದೆ. 
    ಭದ್ರಾವತಿ : ಕಾಡಾನೆಯೊಂದು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಬಂಡಿಗುಡ್ಡದಲ್ಲಿ ನಡೆದಿದೆ. 
    ಮೃತಪಟ್ಟ ವ್ಯಕ್ತಿಯನ್ನು ಕುಮಾರ್(೫೩) ಎಂದು ಗುರುತಿಸಲಾಗಿದೆ. ವಿಐಎಸ್‌ಎಲ್ ಕಾರ್ಖಾನೆ ಆರಂಭಗೊಂಡ ಸಂದರ್ಭದಲ್ಲಿ ಬಂಡಿಗುಡ್ಡದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಗಣಿಗಾರಿಕೆ ನಡೆಸುವ ಕಾರ್ಮಿಕರಿಗಾಗಿ ಈ ಭಾಗದಲ್ಲೂ ಕಾರ್ಖಾನೆ ವತಿಯಿಂದ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ವಸತಿಗೃಹಗಳು ಈಗಲೂ ಇದ್ದು, ಭದ್ರತಾ ಸಿಬ್ಬಂದಿಗಳನ್ನು ಕಾರ್ಖಾನೆ ವತಿಯಿಂದ ನೇಮಿಸಲಾಗಿದೆ. ಭದ್ರತಾ ಸಿಬ್ಬಂದಿಯಾಗಿರುವ ಕುಮಾರ್ ರಾತ್ರಿ ಊಟ ಮುಗಿಸಿಕೊಂಡು ಕರ್ತವ್ಯಕ್ಕೆ ತೆರಳುತ್ತಿದ್ದಾಗ ವಸತಿ ಗೃಹಗಳ ಸಮೀಪ ಕಾಡಾನೆ ದಾಳಿ ನಡೆಸಿದೆ ಎನ್ನಲಾಗಿದೆ. 
    ಬಂಡಿಗುಡ್ಡ, ಬದನೆಹಾಳು, ಬೆಳ್ಳಿಗೆರೆ, ಉದಯನಗರ ಸೇರಿದಂತೆ ಹಲವು ಗ್ರಾಮಗಳು ಅರಣ್ಯ ವ್ಯಾಪ್ತಿಯಲ್ಲಿದ್ದು, ಈ ಭಾಗದಲ್ಲಿ ಕಾಡಾನೆ, ಕಾಡುಕೋಣ, ಕರಡಿ, ಚಿರತೆ ಸೇರಿದಂತೆ ಇನ್ನಿತರ ವ್ಯನ್ಯಜೀವಿಗಳ ಸಂಚಾರವಿದೆ. ಆಗಾಗ ವ್ಯನ್ಯಜೀವಿಗಳು ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿವೆ. ಅಲ್ಲದೆ ಬೆಳೆ ಹಾನಿ ಹಾಗು ಗ್ರಾಮಸ್ಥರ ಮೇಲೆ ದಾಳಿ ಸಹ ನಡೆಸುತ್ತಿವೆ. ಈ ಸಂಬಂಧ ಅರಣ್ಯ ಇಲಾಖೆ ವತಿಯಿಂದ ಈ ಭಾಗದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ವ್ಯನ್ಯ ಜೀವಿಗಳನ್ನು ಗ್ರಾಮಗಳಿಂದ ಅರಣ್ಯದೊಳಗೆ ಓಡಿಸಲಾಗುತ್ತಿದೆ.  ಆದರೂ ಸಹ ಈ ರೀತಿಯ ದುರ್ಘಟನೆಗಳು ನಡೆಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿವೆ. 
    ಘಟನಾ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ವ್ಯನ್ಯಜೀವಿ ವಿಭಾಗದ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತದೇಹದ ಪರೀಕ್ಷಾ ವರದಿ ಬಂದ ನಂತರ ಅರಣ್ಯ ಇಲಾಖೆ ವತಿಯಿಂದ ಸರ್ಕಾರದ ನಿಯಮಾನುಸಾರ ಪರಿಹಾರ ವಿತರಿಸಲಾಗುತ್ತದೆ ಎಂದು ತಿಳಿದುಬಂದಿದೆ. 
    ಈ ನಡುವೆ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ವ್ಯನ್ಯಜೀವಿಗಳ ಹಾವಳಿಯಿಂದ ಜೀವಭಯದಿಂದ ಬದುಕುವಂತಾಗಿದೆ. ವ್ಯನ್ಯಜೀವಿಗಳ ಹಾವಳಿ ಕುರಿತು ಹಲವಾರು ಬಾರಿ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. 

ಸುಗಮ ಸಂಚಾರಕ್ಕೆ ನಗರಸಭೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ

ಭದ್ರಾವತಿಯಲ್ಲಿ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯಲ್ಲಿ ಸುಗಮ ಸಂಚಾರ ಸಂಬಂಧ ಸಾಕಷ್ಟು ದೂರುಗಳು ನಗರಸಭೆಗೆ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. 
    ಸಭೆಯಲ್ಲಿ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ನಗರಸಭೆ ಸದಸ್ಯರಿಂದ ಹಲವು ಸಲಹೆಗಳು ವ್ಯಕ್ತವಾದವು. ನಗರದ ಬಿ.ಎಚ್ ರಸ್ತೆ  ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದ ಕೆನರಾ ಬ್ಯಾಂಕ್ ಬಳಿ ಹಾಗು ಮದ್ಯಂಗಡಿಗಳ ಬಳಿ ವಾಹನ ದಟ್ಟಣೆ ಅಧಿಕವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಬೇಕು. ಈ ಹಿಂದಿನ ಸಭೆಯಲ್ಲಿ ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿರುವ ಮದ್ಯಂಗಡಿಗಳ ಮಾಲೀಕರಿಗೆ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಸೂಚನಾ ಪತ್ರ ನೀಡುವಂತೆ ತೀರ್ಮಾನಿಸಲಾಗಿತ್ತು. ಆದರೆ ಯಾವುದೇ ಮದ್ಯಂಗಡಿಗಳಿಗೆ ಸೂಚನಾ ಪತ್ರ ನೀಡದಿರುವುದು ತಿಳಿದುಬಂದಿದೆ. ಮತ್ತೊಮ್ಮೆ ಸೂಚನಾ ಪತ್ರ ನೀಡುವಂತೆ ಸಲಹೆ ನೀಡಲಾಯಿತು. 
    ವಾಹನ ದಟ್ಟಣೆ ಅಧಿಕವಾಗಿರುವ ಪ್ರಮುಖ ರಸ್ತೆಗಳಲ್ಲಿ ಸಂಚಾರಿ ಸೂಚನಾ ಫಲಕ, ನಗರದ ಪ್ರಮುಖ ೧೦ ಸ್ಥಳಗಳಲ್ಲಿ ೫೦ ಮೀಟರ್‌ನಂತೆ ೩೦ ಕಿ.ಮೀ ವೇಗಮಿತಿ ಸೂಚನಾ ಫಲಕ ಅಳವಡಿಸುವುದು. ಮಾಧವಚಾರ್ ವೃತ್ತ, ತಿಮ್ಮಯ್ಯ ಮಾರುಕಟ್ಟೆ ಸೇರಿದಂತೆ ಖಾಸಗಿ ಬಸ್‌ಗಳು ನಿಲುಗಡೆಗೊಳ್ಳುವ ಸ್ಥಳಗಳಲ್ಲಿ ನಿಲುಗಡೆಗೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಅಳವಡಿಸುವುದು. ಹಳೇಸೇತುವೆ ಬಳಿ ರಸ್ತೆಗೆ ಎರಡು ಬದಿ ವೇಗ ನಿಯಂತ್ರಕ ಅಳವಡಿಸುವುದು(ಹಂಮ್ಸ್), ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸುವುದು. ಪ್ರಮುಖ ವೃತ್ತಗಳಲ್ಲಿ ಸೂಚನಾ ದೀಪ(ಸಿಗ್ನಲ್ ಲೈಟ್)ಗಳನ್ನು ಅಳವಡಿಸುವುದು. ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದು. ಶಾಲಾ-ಕಾಲೇಜುಗಳ ಬಳಿ ಮಕ್ಕಳ ಸುರಕ್ಷತೆಗೆ ಗಮನ ಹರಿಸುವುದು ಸೇರಿದಂತೆ ಇನ್ನಿತರ ಸಲಹೆಗಳನ್ನು ವ್ಯಕ್ತಪಡಿಸಲಾಯಿತು.    
      ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. 
    ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹಮದ್ ಉಪಸ್ಥಿತರಿದ್ದರು. ವಿವಿಧ ಪೊಲೀಸ್ ಠಾಣೆಗಳ ನಿರೀಕ್ಷಕರು ಹಾಗು ಉಪ ನಿರೀಕ್ಷಕರುಗಳಾದ ನಾಗಮ್ಮ, ರಮೇಶ್, ಚಂದ್ರಶೇಖರ್ ನಾಯ್ಕ, ಕೃಷ್ಣಕುಮಾರ್ ಮಾನೆ, ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಬಿ.ಟಿ ನಾಗರಾಜ್, ಚನ್ನಪ್ಪ, ಬಸವರಾಜ್ ಬಿ. ಆನೇಕೊಪ್ಪ, ಬಿ.ಎಂ ಮಂಜುನಾಥ್, ಐ.ವಿ ಸಂತೋಷ್‌ಕುಮಾರ್ ಸೇರಿದಂತೆ ನಗರಸಭೆ ಹಾಗು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.