Friday, June 20, 2025

ಕಾಡಾನೆ ದಾಳಿ : ವಿಐಎಸ್‌ಎಲ್ ಭದ್ರತಾ ಸಿಬ್ಬಂದಿ ಸಾವು

ಕಾಡಾನೆಯೊಂದು ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಬಂಡಿಗುಡ್ಡದಲ್ಲಿ ನಡೆದಿದೆ. 
    ಭದ್ರಾವತಿ : ಕಾಡಾನೆಯೊಂದು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಬಂಡಿಗುಡ್ಡದಲ್ಲಿ ನಡೆದಿದೆ. 
    ಮೃತಪಟ್ಟ ವ್ಯಕ್ತಿಯನ್ನು ಕುಮಾರ್(೫೩) ಎಂದು ಗುರುತಿಸಲಾಗಿದೆ. ವಿಐಎಸ್‌ಎಲ್ ಕಾರ್ಖಾನೆ ಆರಂಭಗೊಂಡ ಸಂದರ್ಭದಲ್ಲಿ ಬಂಡಿಗುಡ್ಡದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಗಣಿಗಾರಿಕೆ ನಡೆಸುವ ಕಾರ್ಮಿಕರಿಗಾಗಿ ಈ ಭಾಗದಲ್ಲೂ ಕಾರ್ಖಾನೆ ವತಿಯಿಂದ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ವಸತಿಗೃಹಗಳು ಈಗಲೂ ಇದ್ದು, ಭದ್ರತಾ ಸಿಬ್ಬಂದಿಗಳನ್ನು ಕಾರ್ಖಾನೆ ವತಿಯಿಂದ ನೇಮಿಸಲಾಗಿದೆ. ಭದ್ರತಾ ಸಿಬ್ಬಂದಿಯಾಗಿರುವ ಕುಮಾರ್ ರಾತ್ರಿ ಊಟ ಮುಗಿಸಿಕೊಂಡು ಕರ್ತವ್ಯಕ್ಕೆ ತೆರಳುತ್ತಿದ್ದಾಗ ವಸತಿ ಗೃಹಗಳ ಸಮೀಪ ಕಾಡಾನೆ ದಾಳಿ ನಡೆಸಿದೆ ಎನ್ನಲಾಗಿದೆ. 
    ಬಂಡಿಗುಡ್ಡ, ಬದನೆಹಾಳು, ಬೆಳ್ಳಿಗೆರೆ, ಉದಯನಗರ ಸೇರಿದಂತೆ ಹಲವು ಗ್ರಾಮಗಳು ಅರಣ್ಯ ವ್ಯಾಪ್ತಿಯಲ್ಲಿದ್ದು, ಈ ಭಾಗದಲ್ಲಿ ಕಾಡಾನೆ, ಕಾಡುಕೋಣ, ಕರಡಿ, ಚಿರತೆ ಸೇರಿದಂತೆ ಇನ್ನಿತರ ವ್ಯನ್ಯಜೀವಿಗಳ ಸಂಚಾರವಿದೆ. ಆಗಾಗ ವ್ಯನ್ಯಜೀವಿಗಳು ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿವೆ. ಅಲ್ಲದೆ ಬೆಳೆ ಹಾನಿ ಹಾಗು ಗ್ರಾಮಸ್ಥರ ಮೇಲೆ ದಾಳಿ ಸಹ ನಡೆಸುತ್ತಿವೆ. ಈ ಸಂಬಂಧ ಅರಣ್ಯ ಇಲಾಖೆ ವತಿಯಿಂದ ಈ ಭಾಗದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ವ್ಯನ್ಯ ಜೀವಿಗಳನ್ನು ಗ್ರಾಮಗಳಿಂದ ಅರಣ್ಯದೊಳಗೆ ಓಡಿಸಲಾಗುತ್ತಿದೆ.  ಆದರೂ ಸಹ ಈ ರೀತಿಯ ದುರ್ಘಟನೆಗಳು ನಡೆಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿವೆ. 
    ಘಟನಾ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ವ್ಯನ್ಯಜೀವಿ ವಿಭಾಗದ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತದೇಹದ ಪರೀಕ್ಷಾ ವರದಿ ಬಂದ ನಂತರ ಅರಣ್ಯ ಇಲಾಖೆ ವತಿಯಿಂದ ಸರ್ಕಾರದ ನಿಯಮಾನುಸಾರ ಪರಿಹಾರ ವಿತರಿಸಲಾಗುತ್ತದೆ ಎಂದು ತಿಳಿದುಬಂದಿದೆ. 
    ಈ ನಡುವೆ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ವ್ಯನ್ಯಜೀವಿಗಳ ಹಾವಳಿಯಿಂದ ಜೀವಭಯದಿಂದ ಬದುಕುವಂತಾಗಿದೆ. ವ್ಯನ್ಯಜೀವಿಗಳ ಹಾವಳಿ ಕುರಿತು ಹಲವಾರು ಬಾರಿ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. 

No comments:

Post a Comment