ಎಲ್ಲಾ ಬೇಡಿಕೆಗಳು ಸರ್ಕಾರದ ಮಟ್ಟದಲ್ಲಿ ಈಡೇರಲಿ

ಭದ್ರಾವತಿ ನಗರಸಭೆಯಲ್ಲಿ ಶುಕ್ರವಾರ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು.
ಭದ್ರಾವತಿ : ಪೌರ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಕೆಲವು ದಿನಗಳ ಹಿಂದೆ ನಗರಸಭೆ ಮುಂಭಾಗ ನಡೆಸಿದ್ದ ಹೋರಾಟಕ್ಕೆ ಪೂರಕವಾಗುವಂತೆ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡಿದ್ದು, ಪೌರಕಾರ್ಮಿಕರ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಸಭೆ ಆರಂಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಶಾಖೆ ಅಧ್ಯಕ್ಷ ಚೇತನ್ ಕುಮಾರ್, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಾದ್ಯಂತ ಸಂಘದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿತ್ತು. ನಗರಸಭೆ ಮುಂಭಾಗ ಮೇ.೩೦ ರಿಂದ ಜೂ.೧ರವರೆಗೆ ೩ ದಿನಗಳ ಕಾಲ ಹೋರಾಟ ನಡೆಸಲಾಗಿದ್ದು, ಹೋರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜೂ.೨ ರಿಂದ ಪೌರಕಾರ್ಮಿಕರು ದೈನಂದಿನ ಕೆಲಸಗಳನ್ನು ಪ್ರಾರಂಭಿಸಿರುತ್ತಾರೆ ಎಂದರು.
ರಾಜ್ಯ ಸರ್ಕಾರಿ ನೌಕರರಿಗೆ ನೀಡು ಪ್ರತಿಯೊಂದು ಸವಲತ್ತುಗಳನ್ನು ಪೌರಸೇವಾ ನೌಕರರಿಗೆ ಪ್ರತ್ಯೇಕ ಆದೇಶವಿಲ್ಲದೆ ವಿಸ್ತರಿಸುವುದು. ರಾಜ್ಯದ ನಗರಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ/ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಇರುವ ನೌಕರರನ್ನು ಸಕ್ರಮಾತಿಗಳಿಸುವುದು. ನಗರಸಭೆಗಳಲ್ಲಿ ಶೇ.೧೦೦ರಷ್ಟು ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಡಿ ನೇಮಕಾತಿ ಮಾಡಿಕೊಳ್ಳುವುದು. ೨೦೨೨ನೇ ಸಾಲಿನ ವಿಶೇಷ ನೇಮಕಾತಿ ಅಡಿ ಆಯ್ಕೆಯಾದ ಪೌರಕಾರ್ಮಿಕರು/ಲೋಡರ್ಸ್‌ಗಳಿಗೆ ಎಸ್.ಎಫ್.ಸಿ ವೇತನ ನಿಧಿಯಿಂದ ವೇತನ ಪಾವತಿಸುವುದು. ನಗರಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರುಗಳನ್ನು ವಿಶೇಷ ನೇಮಕಾತಿ ಅಡಿ ಪರಿಗಣಿಸಿ ನೇಮಕಾತಿಗೊಳಿಸುವುದು. ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀನಿವಿ/ನಗದು ರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸಿಕೊಡುವುದು ಹಾಗು ಐ.ಟಿ ಸಿಬ್ಬಂದಿ/ಅಕೌಂಟ್ ಕನ್ಸಲೆಂಟ್/ಕಂಪ್ಯೂಟರ್ ಅಪರೇಟರ್/ವಾಹನ ಚಾಲಕ/ಸ್ಯಾನಿಟರಿ ಸೂಪರ್ ವೈಸರ್ ಹಾಗೂ ಇತರೆ ವೃಂದದ ನೌಕರರನ್ನು ಪೌರ ಸೇವಾ ನೌಕರರೆಂದು ಪರಿಗಣಿಸಿ ವಿಲೀನಗೊಳಿಸುವುದು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಪ್ರತಿಯಾಗಿ ಮಾತನಾಡಿದ ಸದಸ್ಯರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಚನ್ನಪ್ಪ, ಲತಾ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಪೌರಸೇವಾ ನೌಕರರ ಬೇಡಿಕೆಗಳಿಗೆ ನಮ್ಮ ಬೆಂಬಲ ಸಹ ಇದೆ. ಚುನಾಯಿತ ಹಾಗು ನಾಮನಿರ್ದೇಶಿತ ಎಲ್ಲಾ ೪೦ ಜನ ಸದಸ್ಯರು ಸಹ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ. ನೌಕರರ ಎಲ್ಲಾ ಬೇಡಿಕೆಗಳು ರಾಜ್ಯಮಟ್ಟದಲ್ಲಿ ಈಡೇರಬೇಕು. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒಮ್ಮತದ ತೀರ್ಮಾನ ಕೈಗೊಂಡರು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಉಪಸ್ಥಿತರಿದ್ದರು.
ಸದಸ್ಯರಾದ ಶಶಿಕಲಾ ನಾರಾಯಣಪ್ಪ, ಮಂಜುಳ ಸುಬ್ಬಣ್ಣ, ನಾಗರತ್ನ ಅನಿಲ್‌ಕುಮಾರ್, ಸವಿತ ಉಮೇಶ್, ಬಸವರಾಜ ಬಿ. ಆನೇಕೊಪ್ಪ, ಟಪ್ಪು ಸುಲ್ತಾನ್, ಆರ್. ಮೋಹನ್‌ಕುಮಾರ್, ಎ. ಜಾಜ್, ಐ.ವಿ ಸಂತೋಷ್ ಕುಮಾರ್, ಬಷೀರ್ ಅಹಮದ್, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಹಾಗು ತಾಲೂಕು ಶಾಖೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.