ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಪ್ರಾಧಿಕಾರದ ಅಧ್ಯಕ್ಷರಾದ ಅಮರೇಂದು ಪ್ರಕಾಶ್ ಮತ್ತು ಕೇಂದ್ರ ಉಕ್ಕು ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್ ಅವರನ್ನೊಳಗೊಂಡ ಉನ್ನತ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಪ್ರಾಧಿಕಾರದ ಅಧ್ಯಕ್ಷರಾದ ಅಮರೇಂದು ಪ್ರಕಾಶ್ ಮತ್ತು ಕೇಂದ್ರ ಉಕ್ಕು ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್ ಅವರನ್ನೊಳಗೊಂಡ ಉನ್ನತ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕಾರ್ಖಾನೆಗೆ ಭೇಟಿ ನೀಡಿದ ತಂಡ ಯಂತ್ರಗಳ ಕಾರ್ಯನಿರ್ವಹಣೆ, ಉತ್ಪಾದನೆ ಸಾಮರ್ಥ್ಯ, ಗುಣಮಟ್ಟ, ತಾಂತ್ರಿಕ ಬಳಕೆ, ಸಂಪನ್ಮೂಲ, ಮಾರುಕಟ್ಟೆ ವಹಿವಾಟು ಇತ್ಯಾದಿಗಳ ಕುರಿತು ಪರಿಶೀಲನೆ ನಡೆಸಿತು. ನಂತರ ಕಾರ್ಖಾನೆಯ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಸಂಘಗಳೊಂದಿಗೆ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿತು ಎಂದು ತಿಳಿದು ಬಂದಿದೆ.
ಉನ್ನತ ಅಧಿಕಾರಿಗಳ ನಿಯೋಗದಲ್ಲಿ ಉಕ್ಕು ಪ್ರಾಧಿಕಾರದ ಜಂಟಿ ಕಾರ್ಯದರ್ಶಿ ಅಭಿಜಿತ್ ನರೇಂದ್ರ, ತಾಂತ್ರಿಕ ನಿರ್ದೇಶಕ ಎಂ.ಆರ್ ಗುಪ್ತಾ ಇನ್ನಿತರರು ಇದ್ದರು. ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಸೇರಿದಂತೆ ಕಾರ್ಖಾನೆಯ ಇನ್ನಿತರ ಅಧಿಕಾರಿಗಳು ಉನ್ನತ ಅಧಿಕಾರಿಗಳ ತಂಡಕ್ಕೆ ಅಗತ್ಯ ಮಾಹಿತಿಗಳನ್ನು ನೀಡಿದರು.
ಗುರುವಾರ ತಮಿಳುನಾಡಿನ ಸೇಲಂ ಸ್ಟೀಲ್ ಪ್ಲಾಂಟ್ ಕಾರ್ಖಾನೆಗೆ ಭೇಟಿ ನೀಡಿದ್ದ ಉನ್ನತ ಅಧಿಕಾರಿಗಳ ತಂಡ ಬೆಳಿಗ್ಗೆ ಸುಮಾರು ೧೧.೩೦ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಕಾರ್ಖಾನೆಯ ಅತಿಥಿಗೃಹಕ್ಕೆ ಆಗಮಿಸಿತ್ತು. ನಂತರ ಕಾರ್ಖಾನೆಗೆ ಭೇಟಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಜೆ ೪.೩೦ಕ್ಕೆ ಪುನಃ ಹಿಂದಿರುಗಿತು.
ಇತ್ತೀಚೆಗೆ ಮೇ.೨೩ರಂದು ದೆಹಲಿಯಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಕಾರ್ಖಾನೆಯನ್ನು ಸಂಪೂರ್ಣವಾಗಿ ಹೊಸದಾಗಿ ಮರು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ೧೦ ಸಾವಿರ ಕೋ.ರು ಬಂಡವಾಳ ತೊಡಗಿಸುವುದಾಗಿ ತಿಳಿಸಿದ್ದರು. ಈ ಸಂಬಂಧ ೨ ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ದಪಡಿಸುವುದಾಗಿ ಹಾಗು ವರ್ಷಾಂತ್ಯಕ್ಕೆ ಯೋಜನೆಯ ಅನುಷ್ಠಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಅಡಿಗಲ್ಲು ಹಾಕುವುದಾಗಿ ಮಾಹಿತಿ ನೀಡಿದ್ದರು.
ಇದಕ್ಕೆ ಪೂರಕವೆಂಬಂತೆ ಉಕ್ಕು ಪ್ರಾಧಿಕಾರದ ಅಧ್ಯಕ್ಷರಾದ ಅಮರೇಂದು ಪ್ರಕಾಶ್ ಮತ್ತು ಕೇಂದ್ರ ಉಕ್ಕು ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್ ಅವರನ್ನೊಳಗೊಂಡ ಉನ್ನತ ಅಧಿಕಾರಿಗಳ ತಂಡ ಕಾರ್ಖಾನೆಗೆ ಭೇಟಿ ನೀಡಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಮಹತ್ವ ಪಡೆದುಕೊಂಡಿದೆ.
No comments:
Post a Comment