Saturday, January 2, 2021

ದಕ್ಷ, ಪ್ರಾಮಾಣಿಕ, ಜನಮೆಚ್ಚಿದ ಅಧಿಕಾರಿ ಪೌರಾಯುಕ್ತ ಮನೋಹರ್ ವರ್ಗಾವಣೆಗೊಳಿಸದಿರಿ

ವಿವಿಧ ಸಂಘ-ಸಂಸ್ಥೆಗಳಿಂದ ಸರ್ಕಾರಕ್ಕೆ ಮನವಿ : ವರ್ಗಾವಣೆ ರದ್ದು

ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್ ವರ್ಗಾವಣೆಗೊಳಿಸದಿರುವಂತೆ ಒತ್ತಾಯಿಸಿ ಹಳೇನಗರದ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಪದಾಧಿಕಾರಿಗಳಾದ ಶೋಭಾ ಗಂಗಾರಾಜ್, ಕಮಲಾಕುಮಾರಿ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜ. ೨: ದಕ್ಷ, ಪ್ರಾಮಾಣಿಕ, ಜನಮೆಚ್ಚಿದ ಅಧಿಕಾರಿ ನಗರಸಭೆ ಪೌರಾಯುಕ್ತ ಮನೋಹರ್ ವರ್ಗಾವಣೆಗೊಳಿಸದಿರುವಂತೆ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ತಾಲೂಕು ಶಾಖೆ, ಹಳೇನಗರದ ಮಹಿಳಾ ಸೇವಾ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
   ನಗರಸಭೆ ಪೌರಾಯುಕ್ತ ಮನೋಹರ್‌ರವರನ್ನು ವರ್ಗಾವಣೆಗೊಳಿಸಿರುವ ವಿಚಾರ ತಿಳಿದು ಬಂದಿದ್ದು, ತಕ್ಷಣ ಅವರ ವರ್ಗಾವಣೆ ರದ್ದುಗೊಳಿಸುವ ಮೂಲಕ ನಗರದಲ್ಲಿಯೇ ಅವರ ಸೇವೆಯನ್ನು ಮುಂದುವರೆಸಬೇಕು. ಮನೋಹರ್ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ನಗರದಲ್ಲಿ ನಿರೀಕ್ಷಿಸಲಾರದಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಅಲ್ಲದೆ ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು, ಪ್ರಸ್ತುತ ಅವರ ಸೇವೆ ಇನ್ನೂ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಮುಂದುವರೆಸುವಂತೆ ಹಳೇನಗರದ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಪದಾಧಿಕಾರಿಗಳಾದ ಶೋಭಾ ಗಂಗಾರಾಜ್, ಕಮಲಾಕುಮಾರಿ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
    ಇದೆ ರೀತಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ತಾಲೂಕು ಶಾಖೆ ಅಧ್ಯಕ್ಷ ಎನ್. ಮಂಜುನಾಥ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಪೌರಾಯುಕ್ತರನ್ನು ಯಾವುದೇ ಕಾರಣಕ್ಕೂ ವರ್ಗಾವಣೆಗೊಳಿಸದಿರುವಂತೆ ಸರ್ಕಾರಕ್ಕೆ ಒತ್ತಾಯಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಮಾಡಲಾಗಿದೆ.
    ನಗರದ ಹಲವು ಸಂಘ-ಸಂಸ್ಥೆಗಳ ಮುಖಂಡರು, ವಿವಿಧ ಪಕ್ಷಗಳ ಪ್ರಮುಖರು ಸಹ ವಾಟ್ಸಫ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಪೌರಾಯುಕ್ತರನ್ನು ವರ್ಗಾವಣೆಗೊಳಿಸದಿರುವಂತೆ ಮನವಿ ಮಾಡಿದ್ದಾರೆ.
     ಮುಂದಿನ ಒಂದು ವರ್ಷದ ವರೆಗೆ ವರ್ಗಾವಣೆ ರದ್ದು :
    ಈ ನಡುವೆ ಪೌರಾಯುಕ್ತರ ವರ್ಗಾವಣೆ ವಿಚಾರವನ್ನು ಸಂಸದ ಬಿ.ವೈ ರಾಘವೇಂದ್ರರವರ ಗಮನಕ್ಕೆ ತಂದಿದ್ದು, ನಗರದಲ್ಲಿ ಅವರ ಸೇವೆ ಇನ್ನೂ ಅಗತ್ಯವಿರುವ ಬಗ್ಗೆ ಮನವರಿಕೆ ಮಾಡಕೊಡಲಾಗಿದೆ. ಈ ಹಿನ್ನಲೆಯಲ್ಲಿ ಸ್ಪಂದಿಸಿದ ಸಂಸದರು ರಾಜ್ಯ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಒಂದು ವರ್ಷದವರೆಗೆ ವರ್ಗಾವಣೆಗೆ ತಡೆ ಹಿಡಿದಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕರ್ನಾಟಕ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಅದ್ದೂರಿ ಸ್ವಾಗತ

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಭದ್ರಾವತಿ ನಗರಕ್ಕೆ ಆಗಮಿಸಿದ ಮಾಜಿ ಸಚಿವ ಸಿ.ಟಿ ರವಿಯವರನ್ನು ಶನಿವಾರ ಸಂಜೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
    ಭದ್ರಾವತಿ, ಜ. ೨: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಮಾಜಿ ಸಚಿವ ಸಿ.ಟಿ ರವಿಯವರನ್ನು ಶನಿವಾರ ಸಂಜೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
     ಶಿವಮೊಗ್ಗದಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಜ್ಯ ಬಿಜೆಪಿ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಿ.ಟಿ ರವಿಯವರನ್ನು ತಾಲೂಕಿನ ಗಡಿ ಭಾಗದ ಬಾರಂದೂರು ಗ್ರಾಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸುವ ಜೊತೆಗೆ ನಗರದ ಹುತ್ತಾ ಕಾಲೋನಿವರೆಗೂ ಬೈಕ್ ರ‍್ಯಾಲಿ ನಡೆಸಿದರು. ಸಿ.ಟಿ ರವಿ ಕೆಲ ಸಮಯ ಮುಖಂಡರು, ಕಾರ್ಯಕರ್ತರೊಂದಿಗೆ ಸಂಭ್ರಮ ಹಂಚಿಕೊಂಡು ನಂತರ ಶಿವಮೊಗ್ಗಕ್ಕೆ ತೆರಳಿದರು.

ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ ರನ್‌ಗೆ ಚಾಲನೆ

ಈಗಾಗಲೇ ಕೈಗೊಳ್ಳಲಾಗಿರುವ ಕೊರೋನಾ ಲಸಿಕಾ ಪೂರ್ವ ಸಿದ್ದತೆ ಪರಿಶೀಲನೆ(ಡ್ರೈ ರನ್)ಗೆ ಶನಿವಾರ ಭದ್ರಾವತಿ ತಾಲೂಕಿನ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಲಾಗಿದ್ದು, ಡ್ರೈ ರನ್‌ನಲ್ಲಿ ಪಾಲ್ಗೊಂಡಿರುವ ತಂಡ.
ಭದ್ರಾವತಿ, ಜ. ೨:  ಈಗಾಗಲೇ ಕೈಗೊಳ್ಳಲಾಗಿರುವ ಕೊರೋನಾ ಲಸಿಕಾ ಪೂರ್ವ ಸಿದ್ದತೆ ಪರಿಶೀಲನೆ(ಡ್ರೈ ರನ್)ಗೆ ಶನಿವಾರ ತಾಲೂಕಿನ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಲಾಯಿತು.
    ಕೊರೋನಾ ಲಸಿಕೆ ಲಭ್ಯವಾದ ನಂತರ ಲಸಿಕೆ ಹಾಕುವ ವಿಧಾನಗಳು, ಅನುಸರಿಸಬೇಕಾದ ಕ್ರಮಗಳು ಇತ್ಯಾದಿಗಳನ್ನು ವೈದ್ಯರು ಹಾಗೂ ಸಹಾಯಕರು ಮತ್ತು ಸುಮಾರು ೨೫ ಮಂದಿ ಆರೋಗ್ಯ ಇಲಾಖೆ ಕಾರ್ಯಕರ್ತರು ಸೇರಿದಂತೆ ೫೦ ಮಂದಿ ಕೇಂದ್ರದಲ್ಲಿ ಪೂರ್ವ ಸಿದ್ದತೆಗಳ ಪರಿಶೀಲನೆಯಲ್ಲಿ ಭಾಗಿಯಾಗಿದ್ದರು.
    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ನಾಗರಾಜ್‌ನಾಯ್ಕ ತಂಡದ ನೇತೃತ್ವ ವಹಿಸಿದ್ದು, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಚ್.ಎಸ್ ಗಿರೀಶ್, ಡಾ. ಭರತ್, ಡಾ. ದಿನೇಶ್, ಇವಿಐಎನ್ ವ್ಯವಸ್ಥಾಪಕ ಸುದರ್ಶನ್, ಜಿಲ್ಲಾ ಕ್ಷಯ ರೋಗ ನಿಯಂತ್ರಣ ವಿಭಾಗದ ಮೇಲ್ವಿಚಾರಕ ಗಜೇಂದ್ರ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದಕ್ಷ, ಪ್ರಾಮಾಣಿಕ ನಗರಸಭೆ ಪೌರಾಯುಕ್ತ ಮನೋಹರ್‌ಗೆ ‘ಜನಸ್ಪಂದಕ ಅಧಿಕಾರಿ’ ಬಿರುದು

ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಪ್ರಶಂಸೆ

ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನ್ಯೂಟೌನ್ ನಗರಸಭೆ ಶಾಖಾ ಕಛೇರಿ ಅವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ  'ಜನಸ್ಪಂದಕ ಅಧಿಕಾರಿ' ಬಿರುದು ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಜ. ೨: ನಗರದ ಸರ್ವತೋರ್ಮುಖ ಬೆಳವಣಿಗೆಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್‌ರವರ ಸೇವೆ ಅಪಾರವಾಗಿದ್ದು, ಅವರ ಸೇವೆ ಮುಂದಿನ ದಿನಗಳಲ್ಲೂ ಇದೆ ರೀತಿ ಮುಂದುವರೆಯುವಂತಾಗಲಿ ಎಂದು ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ‍್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಆಶಯ ವ್ಯಕ್ತಪಡಿಸಿದರು.
     ಕಳೆದ ಸುಮಾರು ೨ ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದ ನಗರಸಭೆ ಆಡಳಿತವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಜೊತೆಗೆ ಜನ ಮೆಚ್ಚುಗೆಗೆ ಪಾತ್ರರಾಗಿರುವ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನ್ಯೂಟೌನ್ ನಗರಸಭೆ ಶಾಖಾ ಕಛೇರಿ ಅವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ  'ಜನಸ್ಪಂದಕ ಅಧಿಕಾರಿ' ಬಿರುದು ಪ್ರಧಾನ ಹಾಗು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
     ಮನೋಹರ್‌ರವರು ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ನಗರದ ಸರ್ವತೋಮುಖ ಬೆಳವಣಿಗೆಯಾಗುತ್ತಿದ್ದು, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರಸಭೆ ವ್ಯಾಪ್ತಿಯಲ್ಲಿರುವ ಸುಮಾರು ೭೦ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುವ ಜೊತೆಗೆ ತಾಲೂಕು ಆಡಳಿತದ ಸಹಕಾರದಿಂದ ಬೌಂಡರಿ ನಿಗದಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್ ನಿರ್ಮೂಲನೆ, ರಸ್ತೆ, ಚರಂಡಿ ನಿರ್ಮಾಣ, ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಕಲ್ಪಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
     ಅದರಲ್ಲೂ ನ್ಯೂಟೌನ್ ಭಾಗದ ಜನ್ನಾಪುರ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಪ್ರಮುಖವಾಗಿ ಮುಂದಿನ ೫೦ ವರ್ಷಗಳಿಗೆ ಅನುಗುಣವಾಗಿ ಸಮರ್ಪಕ ಕುಡಿಯುವ ನೀರಿನ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು. ನ್ಯೂಟೌನ್ ಶಾಖಾ ಕಛೇರಿ ಆವರಣದಲ್ಲಿ ಆಧಾರ್ ಕೌಂಟರ್ ತೆರೆಯಲು ಅವಕಾಶ ನೀಡಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಿಕೊಟ್ಟಿರುವುದು. ಕೆಇಬಿ ಕೌಂಟರ್ ಮತ್ತು ನೆಮ್ಮದಿಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಬಿಸಿಲು, ಮಳೆ, ಗಾಳಿಯಿಂದ ತೊಂದರೆಯಾಗದಂತೆ ಶೆಲ್ಟರ್ ನಿರ್ಮಿಸಿಕೊಟ್ಟಿರುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ದಕ್ಷ, ಪ್ರಾಮಾಣಿಕ, ಸರಳ ಸಜ್ಜನಿಕೆ ಅಧಿಕಾರಿಯಾಗಿ ಮನೋಹರ್ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
    ಕಾರ್ಯಕ್ರಮದಲ್ಲಿ ಅರ್. ವೇಣುಗೋಪಾಲ್‌ರವರ ೬೩ನೇ ವರ್ಷದ ಜನ್ಮದಿನದ ಅಂಗವಾಗಿ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ರಮಾವೆಂಕಟೇಶ್, ಶೈಲಜಾ ರಾಮಕೃಷ್ಣ, ದೇವಿಕಾ ನಾಗರಾಜ್, ಶ್ಯಾಮಲಾ ರಾಜು, ಗ್ಸೇವಿಯರ್, ಸುಬ್ರಮಣ್ಯ, ಗೀತಾರವಿ, ವಿಜಯಲಕ್ಷ್ಮಿ, ಸುಧಾ, ಮುರುಗನ್, ವಿಶ್ವೇಶ್ವರರಾವ್ ಗಾಯಕ್ವಾಡ್, ಕೋಟೆಗೌಡ, ಗಿರಿನಾಯ್ಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಜ.೩ರಂದು ಸಮಾಜವಾದದ ಚಿಂತನೆಗಳು ವಿಚಾರ ಸಂಕೀರ್ಣ

ಭದ್ರಾವತಿ, ಜ. ೨: ಜೆ.ಎಚ್ ಪಟೇಲ್‌ರವರ ಅಭಿಮಾನಿಗಳ ಬಳಗದ ವತಿಯಿಂದ ಜ.೩ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಬಿ.ಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಜೆ.ಎಚ್ ಪಟೇಲ್‌ರವರ ನೆನಪಿನಲ್ಲಿ ಸಮಾಜವಾದದ ಚಿಂತನೆಗಳು ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿದೆ.
     ಬಿಳಿಕಿ ಹಿರೇಮಠದ ಶ್ರೀ ರಾಜೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದು, ಜೆ.ಎಚ್ ಪಟೇಲ್‌ರವರ ಪುತ್ರ ಮಾಜಿ ಶಾಸಕ ಮಹಿಮ ಜೆ. ಪಟೇಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಆಯೋಜಕ ಶಶಿಕುಮಾರ್ ಎಸ್. ಗೌಡ ಮತ್ತು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಉಪಸ್ಥಿತರಿರುವರು.
       ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ಪೌರಾಯುಕ್ತ ಮನೋಹರ್, ಮಂಗೋಟೆ ರುದ್ರೇಶ್, ಸ್ನೇಹ ಜೀವಿ ಉಮೇಶ್, ಧನಂಜಯ, ಡಾ.ಕೆ ನಾಗರಾಜ್, ದೀಪಕ್ ನರಾಜ್, ಬಿ.ಆರ್ ದಿನೇಶ್‌ಕುಮಾರ್, ಲಕ್ಕಣ್ಣ, ಎಚ್.ಆರ್ ಲೋಕೇಶ್‌ರಾವ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.