Saturday, January 2, 2021

ದಕ್ಷ, ಪ್ರಾಮಾಣಿಕ, ಜನಮೆಚ್ಚಿದ ಅಧಿಕಾರಿ ಪೌರಾಯುಕ್ತ ಮನೋಹರ್ ವರ್ಗಾವಣೆಗೊಳಿಸದಿರಿ

ವಿವಿಧ ಸಂಘ-ಸಂಸ್ಥೆಗಳಿಂದ ಸರ್ಕಾರಕ್ಕೆ ಮನವಿ : ವರ್ಗಾವಣೆ ರದ್ದು

ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್ ವರ್ಗಾವಣೆಗೊಳಿಸದಿರುವಂತೆ ಒತ್ತಾಯಿಸಿ ಹಳೇನಗರದ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಪದಾಧಿಕಾರಿಗಳಾದ ಶೋಭಾ ಗಂಗಾರಾಜ್, ಕಮಲಾಕುಮಾರಿ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜ. ೨: ದಕ್ಷ, ಪ್ರಾಮಾಣಿಕ, ಜನಮೆಚ್ಚಿದ ಅಧಿಕಾರಿ ನಗರಸಭೆ ಪೌರಾಯುಕ್ತ ಮನೋಹರ್ ವರ್ಗಾವಣೆಗೊಳಿಸದಿರುವಂತೆ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ತಾಲೂಕು ಶಾಖೆ, ಹಳೇನಗರದ ಮಹಿಳಾ ಸೇವಾ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
   ನಗರಸಭೆ ಪೌರಾಯುಕ್ತ ಮನೋಹರ್‌ರವರನ್ನು ವರ್ಗಾವಣೆಗೊಳಿಸಿರುವ ವಿಚಾರ ತಿಳಿದು ಬಂದಿದ್ದು, ತಕ್ಷಣ ಅವರ ವರ್ಗಾವಣೆ ರದ್ದುಗೊಳಿಸುವ ಮೂಲಕ ನಗರದಲ್ಲಿಯೇ ಅವರ ಸೇವೆಯನ್ನು ಮುಂದುವರೆಸಬೇಕು. ಮನೋಹರ್ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ನಗರದಲ್ಲಿ ನಿರೀಕ್ಷಿಸಲಾರದಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಅಲ್ಲದೆ ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು, ಪ್ರಸ್ತುತ ಅವರ ಸೇವೆ ಇನ್ನೂ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಮುಂದುವರೆಸುವಂತೆ ಹಳೇನಗರದ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಪದಾಧಿಕಾರಿಗಳಾದ ಶೋಭಾ ಗಂಗಾರಾಜ್, ಕಮಲಾಕುಮಾರಿ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
    ಇದೆ ರೀತಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ತಾಲೂಕು ಶಾಖೆ ಅಧ್ಯಕ್ಷ ಎನ್. ಮಂಜುನಾಥ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಪೌರಾಯುಕ್ತರನ್ನು ಯಾವುದೇ ಕಾರಣಕ್ಕೂ ವರ್ಗಾವಣೆಗೊಳಿಸದಿರುವಂತೆ ಸರ್ಕಾರಕ್ಕೆ ಒತ್ತಾಯಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಮಾಡಲಾಗಿದೆ.
    ನಗರದ ಹಲವು ಸಂಘ-ಸಂಸ್ಥೆಗಳ ಮುಖಂಡರು, ವಿವಿಧ ಪಕ್ಷಗಳ ಪ್ರಮುಖರು ಸಹ ವಾಟ್ಸಫ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಪೌರಾಯುಕ್ತರನ್ನು ವರ್ಗಾವಣೆಗೊಳಿಸದಿರುವಂತೆ ಮನವಿ ಮಾಡಿದ್ದಾರೆ.
     ಮುಂದಿನ ಒಂದು ವರ್ಷದ ವರೆಗೆ ವರ್ಗಾವಣೆ ರದ್ದು :
    ಈ ನಡುವೆ ಪೌರಾಯುಕ್ತರ ವರ್ಗಾವಣೆ ವಿಚಾರವನ್ನು ಸಂಸದ ಬಿ.ವೈ ರಾಘವೇಂದ್ರರವರ ಗಮನಕ್ಕೆ ತಂದಿದ್ದು, ನಗರದಲ್ಲಿ ಅವರ ಸೇವೆ ಇನ್ನೂ ಅಗತ್ಯವಿರುವ ಬಗ್ಗೆ ಮನವರಿಕೆ ಮಾಡಕೊಡಲಾಗಿದೆ. ಈ ಹಿನ್ನಲೆಯಲ್ಲಿ ಸ್ಪಂದಿಸಿದ ಸಂಸದರು ರಾಜ್ಯ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಒಂದು ವರ್ಷದವರೆಗೆ ವರ್ಗಾವಣೆಗೆ ತಡೆ ಹಿಡಿದಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕರ್ನಾಟಕ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

No comments:

Post a Comment