Sunday, January 3, 2021

ಸಮಾಜವಾದದ ಮೂಲ ಆಶಯ ಸಮಾನತೆ, ಶೋಷಣೆ ಮುಕ್ತ ಸಮಾಜ ನಿರ್ಮಾಣ

ಭದ್ರಾವತಿ ಬಿಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆ.ಎಚ್ ಪಟೇಲ್ ರವರ ನೆನಪಿನಲ್ಲಿ ಸಮಾಜವಾದದ ಚಿಂತನೆಗಳು ವಿಚಾರ ಸಂಕೀರ್ಣ ಮಾಜಿ ಶಾಸಕ, ಜೆ.ಎಚ್ ಪಟೇಲ್ ಪುತ್ರ ಮಹಿಮಾ ಜೆ. ಪಟೇಲ್ ಉದ್ಘಾಟಿಸಿದರು.
    ಭದ್ರಾವತಿ, ಜ. ೩: ಸಮಾನತೆ, ಶೋಷಣೆ ಮುಕ್ತ  ಸಮಾಜ ನಿರ್ಮಾಣ ಮಾಡುವ ಪರಿಕಲ್ಪನೆಯೇ ಸಮಾಜವಾದದ ಮೂಲ ಆಶಯವಾಗಿದೆ ಎಂದು ನಗರದ  ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಜಿ ಧನಂಜಯ ಹೇಳಿದರು.
     ಅವರು ಭಾನುವಾರ ಬಿಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆ ಎಚ್ ಪಟೇಲ್ ರವರ ನೆನಪಿನಲ್ಲಿ ಸಮಾಜವಾದದ ಚಿಂತನೆಗಳು ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡು ಮಾತನಾಡಿದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಲಕಾಲಕ್ಕೆ ತಕ್ಕಂತೆ ಸಮಾಜವಾದಿ ನೆಲೆಗಟ್ಟಿನ ಮೇಲೆ ಸೂಕ್ತ ನಿರ್ಧಾರಗಳನ್ನು ಕೈಗೊಂಡು ಸಮಾನತೆ ಪರಿಕಲ್ಪನೆ ಮೇಲೆ ಆಡಳಿತ ನಡೆಸಿದ ಏಕೈಕ ರಾಜಕಾರಣಿ ಜೆ ಎಚ್ ಪಟೇಲ್ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
     ಪ್ರಸ್ತುತ ಸಮಾಜದಲ್ಲಿ  ಸಮಾಜವಾದಿ ಪರಿಕಲ್ಪನೆ ಮರೆಯಾಗಿದೆ.  ನಾವುಗಳು ಸಮಾಜವಾದದ ಮೂಲ ಆಶಯಗಳನ್ನು ಅರಿತುಕೊಳ್ಳಬೇಕಾಗಿದೆ. ರಾಜಕಾರಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೇ ಸಮಾಜದ ಏಳಿಗೆಗಾಗಿ ಸಾಧನವಾಗಿ ಬಳಸಿಕೊಳ್ಳಬೇಕಾಗಿದೆ ಎಂದರು.
    ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿದ್ದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಬಿಳಿಕಿ ಹಿರೇಮಠ ಮಾತನಾಡಿ,  ರಾಜ್ಯದಲ್ಲಿ  ಸಮಾಜವಾದದ ಸಿದ್ಧಾಂತಗಳನ್ನು  ಕೊಡುಗೆಯಾಗಿ  ನೀಡಿದ ಮಹಾನ್ ಚೇತನ ಜೆ ಎಚ್ ಪಟೇಲ್  ಸ್ಮರಣೆ  ನಿಜಕ್ಕೂ ಅರ್ಥಪೂರ್ಣವಾಗಿದೆ. ಅವರ ಆಶಯದಂತೆ ಸರ್ವರನ್ನು ಸಮಾನತೆಯಿಂದ ಕಾಣುವ ಸಮಾಜ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.  
    ಮಾಜಿ ಶಾಸಕ, ಜೆ ಎಚ್ ಪಟೇಲ್ ಪುತ್ರ ಮಹಿಮಾ ಜೆ ಪಟೇಲ್ ಮಾತನಾಡಿ,  ಸಮಾಜವಾದಿ ನೆಲೆಗಟ್ಟಿನಲ್ಲಿ  ನಮ್ಮ ತಂದೆಯವರು ದ್ವೇಷ ರಹಿತ,  ಸ್ನೇಹಮಯ ರಾಜಕಾರಣಕ್ಕೆ ಒತ್ತು ನೀಡಿದರು. ಈ ಹಿನ್ನೆಲೆಯಲ್ಲಿ ಅವರು ಎಲ್ಲಾ ಪಕ್ಷದವರಿಗೂ ಪ್ರೀತಿಪಾತ್ರರಾಗಿದ್ದರು. ಅವರ ಆದರ್ಶತನಗಳನ್ನು, ಸಮಾಜವಾದಿ ಚಿಂತನೆಗಳನ್ನು  ನಾನು   ಸಹ ಮೈಗೂಡಿಸಿಕೊಂಡು ಮುನ್ನಡೆಯುತ್ತಿದ್ದು,  ರಾಜ್ಯದಲ್ಲಿ ಭವಿಷ್ಯದಲ್ಲಿ ಉತ್ತಮ ರಾಜಕಾರಣ  ನಿರ್ಮಾಣ ಮಾಡುವ ಆಶಯ ಹೊಂದಿದ್ದೇನೆ  ಎಂದರು.
ಶಾಸಕ ಬಿ ಕೆ ಸಂಗಮೇಶ್ವರ್ ಮಾತನಾಡಿ, ಜೆ ಎಚ್ ಪಟೇಲ್ ರವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಪ್ರಸ್ತುತ  ಇಂತಹ ಅಪರೂಪದ  ರಾಜಕಾರಣಿಯನ್ನು ನಾವುಗಳು ಕಾಣಲು ಸಾಧ್ಯವಿಲ್ಲ. ಅವರ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕೆಂದರು.
     ಮುಖಂಡರಾದ ಎಂ ಎಸ್ ಜನಾರ್ದನ ಅಯ್ಯಂಗಾರ್,  ವಿ. ಕದಿರೇಶ್, ಮಂಗೋಟೆ ರುದ್ರೇಶ್,  ಎಚ್ ಆರ್ ಲೋಕೇಶ್ವರ ರಾವ್, ಎಂ ಶಿವಕುಮಾರ್, ಬಿ.ಎನ್ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
    ಕಾರ್ಯಕ್ರಮದ ಆಯೋಜಕ ಶಶಿಕುಮಾರ್ ಎಸ್ ಗೌಡ,    ಬಿ.ವಿ ಗಿರೀಶ್, ಸಿದ್ಧಲಿಂಗಯ್ಯ, ಬಿ ಗಂಗಾಧರ, ಲಕ್ಷ್ಮೀಕಾಂತ್, ಎನ್ ಮಂಜುನಾಥ್, ಸಂದೇಶ್ ಗೌಡ, ಜೆ ಎಚ್ ಪಟೇಲ್ ರವರ ಅಭಿಮಾನಿಗಳ ಬಳಗ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  


1 comment: