Sunday, January 3, 2021

ಜ.೧೭ರಂದು ಕ್ಷಿಪ್ರ ಕಾರ್ಯ ಪಡೆ ಘಟಕ ಶಿಲಾನ್ಯಾಸಕ್ಕೆ ಗೃಹ ಸಚಿವ ಅಮಿತ್ ಶಾ

ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ

ಭಾನುವಾರ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭದ್ರಾವತಿಯಲ್ಲಿ ಕಾರ್ಯಾರಂಭಗೊಳ್ಳಲಿರುವ ಆರ್‌ಎಎಫ್ ಘಟಕದ ಸ್ಥಳ ಪರಿಶೀಲನೆ ನಡೆಸಿತು.
     ಭದ್ರಾವತಿ, ಜ. ೩: ಶಿವಮೊಗ್ಗ ಜಿಲ್ಲೆಗೆ ಮಂಜೂರಾತಿಯಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ ವಲಯದ ಕ್ಷಿಪ್ರ ಕಾರ್ಯ ಪಡೆ (ರ‍್ಯಾಪಿಡ್ ಆಕ್ಷನ್ ಪೋರ್ಸ್-ಆರ್‌ಎಎಫ್) ಘಟಕ ನಗರದ ಮಿಲ್ಟ್ರಿಕ್ಯಾಂಪ್ ಹೊಸ ಬುಳ್ಳಾಪುರದಲ್ಲಿ  ಕಾರ್ಯಾರಂಭಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಜ.೧೭ರಂದು ಘಟಕದ ಶಿಲಾನ್ಯಾಸ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿಲಾನ್ಯಾಸ ನೆರವೇರಿಸಲಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು. ಈಗಾಗಲೇ ಅನುಮೋದನೆಗೊಂಡಿರುವ ನಕ್ಷೆಯಲ್ಲಿನ ಸ್ಥಳದ ಸುತ್ತಮುತ್ತಲಿನ ಪ್ರದೇಶ ಪರಿಶೀಲನೆ ನಡೆಸಿದ ತಂಡ ಸಮಾರಂಭಕ್ಕೆ ಕೈಗೊಳ್ಳಬೇಕಾಗಿರುವ ಸಿದ್ದತೆಗಳನ್ನು ರೂಪಿಸುವ ಸಂಬಂಧ ಚರ್ಚೆ ನಡೆಸಿತು.
    ಕೇಂದ್ರ ಮೀಸಲು ಪೊಲೀಸ್ ಪಡೆ ಮಹಾನಿರ್ದೇಶಕರಾದ ಮೀನಾ ಮತ್ತು ಸಂಜಯ್, ರಾಜ್ಯ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಪ್ರತಾಪ್‌ರೆಡ್ಡಿ, ಗುಪ್ತದಳ ಇಲಾಖೆ ಮಹಾನಿರ್ದೇಶಕ ದಯಾನಂದ್, ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕ ರವಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment