ಸೋಮವಾರ, ಆಗಸ್ಟ್ 18, 2025

ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು : ಪ್ರವಾಹ ಭೀತಿ

೨ನೇ ಬಾರಿಗೆ ಮುಳುಗಿದ ಹೊಸ ಸೇತುವೆ 

ಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಹಿನ್ನಲೆಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಹೊಸಸೇತುವೆ ಈ ವರ್ಷ ೨ನೇ ಬಾರಿಗೆ ಮುಳುಗಡೆಗೊಂಡಿದೆ. 
    ಭದ್ರಾವತಿ: ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಕಳೆದ ೩-೪ ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಸುಮಾರು ೪೦ ಸಾವಿರ ಕ್ಯೂಸೆಕ್ ನೀರು ಒಳಹರಿವು ಹೊಂದಿದ್ದು, ಇಷ್ಟೆ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಈ ನಡುವೆ ನಗರದ ಹೃದಯ ಭಾಗದಲ್ಲಿರುವ ಹೊಸ ಸೇತುವೆ ಈ ವರ್ಷ ೨ನೇ ಬಾರಿಗೆ ಮುಳುಗಡೆಗೊಂಡಿದೆ. 
    ಭಾನುವಾರ ರಾತ್ರಿಯಿಂದಲೇ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಸೋಮವಾರ ಬೆಳಿಗ್ಗೆ ಹೊಸಸೇತುವೆ ಮೇಲೆ ಹರಿಯುತ್ತಿದ್ದು, ಈ ಹಿನ್ನಲೆಯಲ್ಲಿ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ಸೇತುವೆ ಎರಡು ಬದಿಯಲ್ಲಿ ಬ್ಯಾರಿಗೇಡ್‌ಗಳನ್ನು ಅಳವಡಿಸಿ ಸಂಚಾರ ನಿಷೇಧಿಸಲಾಗಿದೆ. ಇದರಿಂದಾಗಿ ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ದಟ್ಟಣೆ ನಿಯಂತ್ರಿಸಲು ಸಂಚಾರಿ ಪೊಲೀಸರು ಹರಸಹಾಸ ಪಡುವಂತಾಗಿದೆ. 
    ಮಳೆ ಪ್ರಮಾಣ ಹೆಚ್ಚಾದ್ದಲ್ಲಿ ನದಿಗೆ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣ ನೀರು ಹೊರ ಬಿಡುವ ಸಾಧ್ಯತೆ ಇದ್ದು, ಇದರಿಂದಾಗಿ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲವೃತಗೊಳ್ಳಲಿವೆ. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ ಆಡಳಿತಗಳು ಪ್ರವಾಹ ಎದುರಿಸಲು ಸಿದ್ದತೆಗಳನ್ನು ಕೈಗೊಂಡಿವೆ. ತಗ್ಗು ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. 

ಹಬ್ಬ ಆಚರಿಸುವುದು ಹಕ್ಕು, ಆದರೆ ಇನ್ನೊಬ್ಬರಿಗೆ ತೊಂದರೆಯಾಗದಿರಲಿ : ಜಿ.ಕೆ ಮಿಥುನ್ ಕುಮಾರ್

ಭದ್ರಾವತಿ ನಗರದ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಸೋಮವಾರ ಗೌರಿ-ಗಣೇಶ, ಈದ್ ಮಿಲಾದ್ ಹಬ್ಬದ ಅಂಗವಾಗಿ ಜಿಲ್ಲಾ ಪೊಲೀಸ್ ಭದ್ರಾವತಿ ಉಪವಿಭಾದ ವತಿಯಿಂದ ಶಾಂತಿಸಭೆ ಏರ್ಪಡಿಸಲಾಗಿತ್ತು. 
    ಭದ್ರಾವತಿ : ಹಬ್ಬಗಳನ್ನು ಆಚರಿಸುವುದು ನಾಗರಿಕರ ಹಕ್ಕು. ನಾಗರಿಕರು ತಮ್ಮ ಕರ್ತವ್ಯಗಳನ್ನು ನಿಭಾಯಿಸುವ ಜವಾಬ್ದಾರಿ ಹೊರಬೇಕಾಗಿದೆ. ಹಬ್ಬಗಳ ಆಚರಣೆಯಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಹೇಳಿದರು. 
    ಅವರು ಸೋಮವಾರ ನಗರದ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗೌರಿ-ಗಣೇಶ, ಈದ್ ಮಿಲಾದ್ ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಶಾಂತಿಸಭೆ ನೇತೃತ್ವವಹಿಸಿ ಮಾತನಾಡಿದರು. 
    ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಮಹತ್ವವಿದೆ. ಇದನ್ನು ಪ್ರತಿಯೊಬ್ಬರು ಮೊದಲು ಅರ್ಥಮಾಡಿಕೊಳ್ಳಬೇಕು. ಪ್ರತಿಷ್ಠೆಗಾಗಿ, ತೋರ್ಪಡಿಕೆಗಾಗಿ ಹಬ್ಬಗಳನ್ನು ಆಚರಿಸಬಾರದು ಎಂದರು. 
    ಸಮಾಜದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬದುಕಬೇಕು. ಈ ನಿಟ್ಟಿನಲ್ಲಿ ಇಲಾಖೆ ಎಲ್ಲಾ ರೀತಿಯ ಕಾರ್ಯಕ್ಕೂ ಸಿದ್ದವಿದೆ. ಸಮಾಜದಲ್ಲಿ ಆಶಾಂತಿ ನಿರ್ಮಾಣ ಮಾಡುವ ಕಿಡಿಗೇಡಿಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಪದೇ ಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ, ಅಪರಾಧಿ ಪ್ರಕರಣಗಳ ಹಿನ್ನಲೆಯುಳ್ಳ ಒಟ್ಟು ೮೬ ಮಂದಿ ಗಡಿಪಾರಿಗೆ ಆದೇಶವಾಗಿದ್ದು, ಇನ್ನಷ್ಟು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು. 
    ನಗರದ ಸೂಕ್ಷ್ಮ ಹಾಗು ಅತಿ ಸೂಕ್ಷ್ಮ ಸ್ಥಳಗಳಲ್ಲಿ ಈಗಾಗಲೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಬಾರಿ ಸರ್ಕಾರ ಡಿಜೆ ಬಳಸದಂತೆ ನಿಷೇಧ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡುವುದಿಲ್ಲ. ಹಬ್ಬಗಳ ಯಶಸ್ವಿಗೆ ತಾಲೂಕು ಆಡಳಿತ, ನಗರಸಭೆ, ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಬೇಕೆಂದರು.
    ಸಭೆಯಲ್ಲಿ ಪ್ರಮುಖರಾದ ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ತಾಲೂಕು ಅಧ್ಯಕ್ಷ ಅಯೂಬ್ ಖಾನ್, ಕಾಂಗ್ರೆಸ್ ಅಲ್ಪಸಂಖ್ಯಾರ ಘಟಕದ ಮುಖಂಡ ಸಿ.ಎಂ ಖಾದರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ನಗರಸಭೆ ಸದಸ್ಯರಾದ ಬಿ.ಟಿ ನಾಗರಾಜ್, ಚನ್ನಪ್ಪ, ಮಾಜಿ ಸದಸ್ಯ ಬಾಬಾ ಜಾನ್, ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಚುನಾಯಿತ ಪ್ರತಿನಿಧಿಗಳು ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 
    ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭ, ಪೇಪರ್‌ಟೌನ್ ಪೊಲೀಸ್ ಠಾಣೆ ನಿರೀಕ್ಷಕಿ ನಾಗಮ್ಮ ಇನ್ನಿತರರು ಉಪಸ್ಥಿತರಿದ್ದರು. 
    ಪ್ರಮುಖರಾದ ಮುತುರ್ಜಾಖಾನ್, ಲತಾ ಚಂದ್ರಶೇಖರ್, ಮಣಿ ಎಎನ್‌ಎಸ್, ನಾಗೇಶ್, ಬಸವರಾಜ ಬಿ. ಆನೇಕೊಪ್ಪ, ದಿಲ್‌ದಾರ್, ಬಿ. ಮೂರ್ತಿ, ಎಂ.ಎಸ್ ರವಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. 
    ನಗರವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಸ್ವಾಗತಿಸಿ, ಗ್ರಾಮಾಂತರ ವೃತ್ತ ನಿರೀಕ್ಷಕ ಜಗದೀಶ್ ಹಂಚಿನಾಳ ವಂದಿಸಿದರು.  

ದೇಹದಾರ್ಢ್ಯಪಟು ಸಿರಿಲ್ ಡಿ'ಕಾಸ್ಟ ನಿಧನ

ಸಿರಿಲ್ ಡಿ'ಕಾಸ್ಟ

    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ, ಅಂತರಾಷ್ಟ್ರೀಯ ಮಟ್ಟದ ದೇಹದಾರ್ಢ್ಯಪಟು ಸಿರಿಲ್ ಡಿ'ಕಾಸ್ಟ(೭೭) ಸೋಮವಾರ ನಿಧನ ಹೊಂದಿದರು. 
    ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಒಟ್ಟು ೬ ಜನ ಮಕ್ಕಳು ಹಾಗು ಮೊಮ್ಮಕ್ಕಳು ಇದ್ದಾರೆ. ಸಿರಿಲ್ ಡಿ'ಕಾಸ್ಟ ಅವರು ಪವರ್ ಲಿಫ್ಟಿಂಗ್ ಮತ್ತು ವೆಯಿಟ್ ಲಿಫ್ಟಿಂಗ್ ಎರಡರಲ್ಲೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.  ರಾಯಲ್ ಹೆಲ್ತ್ ಕ್ಲಬ್ ವ್ಯಾಯಾಮ ಶಾಲೆ ಆರಂಭಿಸುವ ಹಲವಾರು ಕ್ರೀಡಾಪಟುಗಳನ್ನು ಪ್ರೋತ್ಸಾಯಿಸಿ ಗುರುತಿಸಿಕೊಳ್ಳುವಲ್ಲಿ ಕಾರಣಕರ್ತರಾಗಿದ್ದರು. 

ಪತ್ನಿ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ ವ್ಯಕ್ತಿಯಿಂದ ಹಲ್ಲೆ ಪ್ರಕರಣ

ಆರೋಪಿಗೆ ೧೦ ವರ್ಷ ಕಾರಾಗೃಹ ಶಿಕ್ಷೆ, ೨೬ ಸಾವಿರ ರು. ದಂಡ 

ಕಿರಣ ಅಲಿಯಾಸ್ ಅಭಿ
    ಭದ್ರಾವತಿ : ಸುಮಾರು ೩ ವರ್ಷಗಳ ಹಿಂದೆ ಕಾಗದ ಕತ್ತರಿಸುವ ಸಣ್ಣ ಕತ್ತರಿಯಿಂದ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್‌ರವರು ೧೦ ವರ್ಷ ಕಾರಾಗೃಹ ಶಿಕ್ಷೆ ಹಾಗು ೨೬ ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 
    ಶಿವಮೊಗ್ಗ ಯಲವಟ್ಟಿ ಗ್ರಾಮದ ನಿವಾಸಿ ಕಿರಣ ಅಲಿಯಾಸ್ ಅಭಿ ಶಿಕ್ಷೆಗೊಳಗಾದ ಆರೋಪಿಯಾಗಿದ್ದು, ಇದೆ ಗ್ರಾಮದ ಕುಮಾರನಾಯ್ಕ ಹಲ್ಲೆಗೊಳಗಾಗಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಸಂಬಂಧ ೨೦೨೨ರಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಕಿರಣನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 
    ಪ್ರಕರಣ ವಿವರ:
    ಕುಮಾರನಾಯ್ಕ ತಾಲೂಕಿನ ರಾಮನಕೊಪ್ಪ ಗ್ರಾಮದ ನಿವಾಸಿ ಚಂದ್ರನಾಯ್ಕರವರ ಪುತ್ರಿ ಕಾವ್ಯ ಅಲಿಯಾಸ್ ಗಿರಿಜಬಾಯಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರು ಯಲವಟ್ಟಿ ಗ್ರಾಮದಲ್ಲಿ ವಾಸವಾಗಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು ಸಹ ಇದ್ದಾರೆ. ಕುಮಾರನಾಯ್ಕನ ಪತ್ನಿ ಕಾವ್ಯ ಕಿರಣನ ಜೊತೆ ಸಂಬಂಧ ಬೆಳೆಸಿ ಅವನ ಜೊತೆ ಓಡಿ ಹೋಗಿದ್ದು, ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿತ್ತು. ನಂತರ ಇಬ್ಬರು ಪತ್ತೆಯಾಗುವ ಮೂಲಕ ಪ್ರಕರಣ ಮುಕ್ತಾಯಗೊಂಡಿತ್ತು. 
    ಈ ನಡುವೆ ಹಿರಿಯರು ಮಾತುಕತೆ ನಡೆಸಿ ಕುಮಾರನಾಯ್ಕ ಮತ್ತು ಕಾವ್ಯ ಇಬ್ಬರಿಗೂ ಬುದ್ದಿವಾದ ಹೇಳಿ ಒಟ್ಟಿಗೆ ಜೀವನ ನಡೆಸುವಂತೆ ತಿಳಿಸಿದ್ದರು. ಅದರಂತೆ ಕಾವ್ಯ ತನ್ನ ಮಕ್ಕಳು ಹಾಗು  ಪತಿ ಜೊತೆ ತವರು ಮನೆಗೆ ಬಂದು ವಾಸವಾಗಿದ್ದು, ಈ ನಡುವೆ ಮೇ.೧೫, ೨೦೨೨ರಂದು ಮಧ್ಯ ರಾತ್ರಿ ಕುಮಾರನಾಯ್ಕ ಮನೆಯಲ್ಲಿ ಮಲಗಿದ್ದಾಗ ಕಿರಣ ಹಲ್ಲೆ ನಡೆಸಿ ಪರಾರಿಯಾಗಿದ್ದನು. 
    ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪ ಠಾಣಾ ನಿರೀಕ್ಷಕ ಅರುಣ್‌ಕುಮಾರ್ ತನಿಖಾಧಿಕಾರಿಯಾಗಿ ಹಾಗು ಮುಖ್ಯ ಕಾನ್‌ಸ್ಟೇಬಲ್ ಮೋಹನ್ ಕುಮಾರ್ ಸಹಾಯಕ ತನಿಖಾಧಿಕಾರಿ ನಿಯೋಜನೆಗೊಂಡು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ರೋಷಾರೋಪಣ ಪಟ್ಟಿ ಸಲ್ಲಿಸಿದ್ದರು.  ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು. 

ಬೆರಳಚ್ಚುಗಾರ ಮಂಜುನಾಥ್ ನಿಧನ

ಮಂಜುನಾಥ್ 
    ಭದ್ರಾವತಿ: ನಗರದ ರಂಗಪ್ಪ ವೃತ್ತ, ಜೆಎಂಎಫ್‌ಸಿ ನ್ಯಾಯಾಲಯ ಸಮೀಪದ ಬೆರಳಚ್ಚುಗಾರ(ಟೈಪಿಸ್ಟ್) ಮಂಜುನಾಥ್(೭೩) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗು ಸಹೋದರರು ಇದ್ದಾರೆ. ಹೊಸಮನೆ ಕುವೆಂಪು ನಗರದಲ್ಲಿ ವಾಸವಾಗಿದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಮಂಜುನಾಥ್‌ರವರು ಹಲವಾರು ವರ್ಷಗಳಿಂದ ಬೆರಳಚ್ಚುಗಾರ ವೃತ್ತಿಯಲ್ಲಿ ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು. ಇವರ ನಿಧನಕ್ಕೆ ನಗರದ ಬೆರಳಚ್ಚುಗಾರರು, ಗಣ್ಯರು ಸಂತಾಪ ಸೂಚಿಸಿದ್ದಾರೆ.