ಆರೋಪಿಗೆ ೧೦ ವರ್ಷ ಕಾರಾಗೃಹ ಶಿಕ್ಷೆ, ೨೬ ಸಾವಿರ ರು. ದಂಡ
ಕಿರಣ ಅಲಿಯಾಸ್ ಅಭಿ
ಭದ್ರಾವತಿ : ಸುಮಾರು ೩ ವರ್ಷಗಳ ಹಿಂದೆ ಕಾಗದ ಕತ್ತರಿಸುವ ಸಣ್ಣ ಕತ್ತರಿಯಿಂದ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್‌ರವರು ೧೦ ವರ್ಷ ಕಾರಾಗೃಹ ಶಿಕ್ಷೆ ಹಾಗು ೨೬ ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಶಿವಮೊಗ್ಗ ಯಲವಟ್ಟಿ ಗ್ರಾಮದ ನಿವಾಸಿ ಕಿರಣ ಅಲಿಯಾಸ್ ಅಭಿ ಶಿಕ್ಷೆಗೊಳಗಾದ ಆರೋಪಿಯಾಗಿದ್ದು, ಇದೆ ಗ್ರಾಮದ ಕುಮಾರನಾಯ್ಕ ಹಲ್ಲೆಗೊಳಗಾಗಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಸಂಬಂಧ ೨೦೨೨ರಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಕಿರಣನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿವರ:
ಕುಮಾರನಾಯ್ಕ ತಾಲೂಕಿನ ರಾಮನಕೊಪ್ಪ ಗ್ರಾಮದ ನಿವಾಸಿ ಚಂದ್ರನಾಯ್ಕರವರ ಪುತ್ರಿ ಕಾವ್ಯ ಅಲಿಯಾಸ್ ಗಿರಿಜಬಾಯಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರು ಯಲವಟ್ಟಿ ಗ್ರಾಮದಲ್ಲಿ ವಾಸವಾಗಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು ಸಹ ಇದ್ದಾರೆ. ಕುಮಾರನಾಯ್ಕನ ಪತ್ನಿ ಕಾವ್ಯ ಕಿರಣನ ಜೊತೆ ಸಂಬಂಧ ಬೆಳೆಸಿ ಅವನ ಜೊತೆ ಓಡಿ ಹೋಗಿದ್ದು, ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿತ್ತು. ನಂತರ ಇಬ್ಬರು ಪತ್ತೆಯಾಗುವ ಮೂಲಕ ಪ್ರಕರಣ ಮುಕ್ತಾಯಗೊಂಡಿತ್ತು.
ಈ ನಡುವೆ ಹಿರಿಯರು ಮಾತುಕತೆ ನಡೆಸಿ ಕುಮಾರನಾಯ್ಕ ಮತ್ತು ಕಾವ್ಯ ಇಬ್ಬರಿಗೂ ಬುದ್ದಿವಾದ ಹೇಳಿ ಒಟ್ಟಿಗೆ ಜೀವನ ನಡೆಸುವಂತೆ ತಿಳಿಸಿದ್ದರು. ಅದರಂತೆ ಕಾವ್ಯ ತನ್ನ ಮಕ್ಕಳು ಹಾಗು ಪತಿ ಜೊತೆ ತವರು ಮನೆಗೆ ಬಂದು ವಾಸವಾಗಿದ್ದು, ಈ ನಡುವೆ ಮೇ.೧೫, ೨೦೨೨ರಂದು ಮಧ್ಯ ರಾತ್ರಿ ಕುಮಾರನಾಯ್ಕ ಮನೆಯಲ್ಲಿ ಮಲಗಿದ್ದಾಗ ಕಿರಣ ಹಲ್ಲೆ ನಡೆಸಿ ಪರಾರಿಯಾಗಿದ್ದನು.
ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪ ಠಾಣಾ ನಿರೀಕ್ಷಕ ಅರುಣ್‌ಕುಮಾರ್ ತನಿಖಾಧಿಕಾರಿಯಾಗಿ ಹಾಗು ಮುಖ್ಯ ಕಾನ್‌ಸ್ಟೇಬಲ್ ಮೋಹನ್ ಕುಮಾರ್ ಸಹಾಯಕ ತನಿಖಾಧಿಕಾರಿ ನಿಯೋಜನೆಗೊಂಡು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ರೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ