Thursday, May 11, 2023

ಭಾರಿ ಗಾಳಿ ಮಳೆಗೆ ಧರೆಗುರುಳಿ ಬಿದ್ದ ಮರಗಳು, ಹಾರಿ ಹೋದ ತಗಡಿನ ಮೇಲ್ಛಾವಣಿ

ಭದ್ರಾವತಿಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಡಬಲ್ ರಸ್ತೆಯಲ್ಲಿ ಮರ ಉರುಳಿ ಬಿದ್ದಿದ್ದು, ಕೊಂಬೆಗಳು ಮುರಿದು ಬಿದ್ದಿವೆ.
ಭದ್ರಾವತಿ, ಮೇ. ೧೧: ಕ್ಷೇತ್ರದಲ್ಲಿ ಬುಧವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಕೆಲವೆಡೆ ಮರಗಳು ಧರೆಗುರುಳಿದ್ದು, ಮತ್ತೆ ಕೆಲವೆಡೆ  ಮರದ ಕೊಂಬೆಗಳು ಮುರಿದು ಬಿದ್ದಿರುವ ಘಟನೆ ನಡೆದಿದೆ.
ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಡಬಲ್ ರಸ್ತೆಯಲ್ಲಿ ಮರ ಉರುಳಿ ಬಿದ್ದಿದ್ದು, ಕೊಂಬೆಗಳು ಮುರಿದು ಬಿದ್ದಿವೆ. ಹುಡ್ಕೋ ಕಾಲೋನಿಯಲ್ಲಿ ಮನೆಯೊಂದರ ಮುಂಭಾಗ ತೆಂಗಿನ ಮರ ಉರುಳಿ ಬಿದ್ದಿದ್ದು, ಇದೆ ರೀತಿ ಹಲವೆಡೆ ಗಾಳಿ ಮಳೆಗೆ ಮರಗಳು ಧರೆಗುರುಳಿ ಬಿದ್ದಿವೆ. ಉಜ್ಜನಿಪುರದಲ್ಲಿ ಮನೆಯೊಂದರ ತಗಡಿನ ಮೇಲ್ಛಾವಣಿ ಹಾರಿ ಹೋಗಿರುವ ಘಟನೆ ನಡೆದಿದೆ.


ಭದ್ರಾವತಿ ಉಜ್ಜನಿಪುರದಲ್ಲಿ ಮನೆಯೊಂದರ ತಗಡಿನ ಮೇಲ್ಛಾವಣಿ ಹಾರಿ ಹೋಗಿರುವುದು.
    ಸಂಜೆ ೪.೩೦ ರಿಂದ ಸುಮಾರ ೧ ತಾಸು ಸುರಿದ ಗಾಳಿಮಳೆಯಿಂದಾಗಿ ಮತದಾರರು ಮತದಾನ ಮಾಡಲು ಪರದಾಡುವಂತಾಯಿತು. ಕೆಲವು ಮತಗಟ್ಟೆಗಳಲ್ಲಿ ಗಾಳಿ ಮಳೆಯಿಂದ ಸೋರಿಕೆ ಉಂಟಾಗಿದ್ದು, ಮಳೆಯಲ್ಲಿಯೇ ಮತದಾರರು ಮತದಾನ ಮಾಡುವ ಸ್ಥಿತಿ ಕಂಡು ಬಂದಿತು. ಗುರುವಾರ ಸಂಜೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

ವಿಧಾನಸಭಾ ಚುನಾವಣೆ : ಕಳೆದ ಬಾರಿಗಿಂತ ಕಡಿಮೆ ಮತದಾನ, ಫಲ ನೀಡದ ಜಾಗೃತಿ

೭೫,೭೧೫ ಪುರುಷ, ೭೮,೧೪೮ ಮಹಿಳಾ 

ಒಟ್ಟು ೧,೫೩,೯೦೦ ಮತದಾರರು ಹಕ್ಕು ಚಲಾವಣೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಎಸ್. ಮಹಾದೇವರವರು ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
    ಭದ್ರಾವತಿ, ಮೇ. ೧೧ : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಒಟ್ಟು ೨,೧೨,೧೬೫ ಮತದಾರರಲ್ಲಿ ೧,೫೩,೯೦೦ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು,  ಒಟ್ಟಾರೆ ೭೨.೫೪ರಷ್ಟು ಮತದಾನವಾಗಿದೆ.
    ೧,೦೩,೧೯೮ ಪುರುಷ ಮತದಾರರ ಪೈಕಿ ೭೫,೭೧೫ ಮಂದಿ ಶೇ.೭೩.೩೭ರಷ್ಟು ಮತ್ತು ೧,೦೮,೯೬೨ ಮಹಿಳಾ ಮತದಾರರ ಪೈಕಿ ೭೮,೧೮೪ ಮಂದಿ ಶೇ.೭೧.೭೫ರಷ್ಟು ಹಾಗು ಇತರೆ ೧ ಸೇರಿ ಒಟ್ಟು ೧,೫೩,೯೦೦ ಮಂದಿ ಶೇ.೭೨.೫೪ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನದಲ್ಲಿ ಪುರುಷ ಮತದಾರರು ಮೇಲುಗೈ ಸಾಧಿಸಿದ್ದಾರೆ.
    ಕಳೆದ ಬಾರಿಗಿಂತ ಕಡಿಮೆ ಮತದಾನ :
    ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮತದಾನವಾಗಿದ್ದು, ೨೦೧೮ರಲ್ಲಿ  ಚುನಾವಣೆಯಲ್ಲಿ ೭೩.೫೯ರಷ್ಟು ಮತದಾನ ನಡೆದಿದ್ದು, ಈ ಬಾರಿ ೭೨.೫೪ರಷ್ಟು ಕಡಿಮೆ ಮತದಾನ ನಡೆದಿದೆ.  
ಈ ಹಿಂದಿನ ೪ ಚುನಾವಣೆಗಳು ಹಾಗು ಪ್ರಸ್ತುತ ಚುನಾವಣೆ ಸೇರಿದಂತೆ ಒಟ್ಟು ೫ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಶೇ.೭೫ರ ಗುರಿ ತಲುಪಿಲ್ಲ. ಈ ಬಾರಿ ಹೆಚ್ಚಿನ ಗುರಿ ಸಾಧಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹೆಚ್ಚಿನ ಗಮನ ಹರಿಸಿತ್ತು. ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ ಮೂಲಕ ಮತದಾನ ಜಾಗೃತಿ ಮೂಡಿಸಿತ್ತು. ಆದರೆ ನಿರೀಕ್ಷೆಯಂತೆ ಹೆಚ್ಚಿನ ಗುರಿ ತಲುಪಿಲ್ಲ.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.೭೯.೫೯ರಷ್ಟು ಮತದಾನ :
    ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫ ಮತಗಟ್ಟೆಗಳ ಒಟ್ಟು ೩,೮೯೬ ಮತದಾರರ ಪೈಕಿ ೩೧೦೧ ಮತದಾರರು ಒಟ್ಟು ಶೇ.೭೯.೫೯ರಷ್ಟು ಮತದಾನವಾಗಿದೆ ಎನ್ನಲಾಗಿದೆ.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಎಸ್. ಮಹಾದೇವರವರು ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಮೇ.೧೨ರಂದು ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ಮಹಾರಥೋತ್ಸವ

    ಭದ್ರಾವತಿ, ಮೇ. ೧೧: ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮೇ.೧೨ರಂದು ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ಮಹಾರಥೋತ್ಸವ ನಡೆಯಲಿದೆ.
    ಗುರುವಾರ ಬೆಳಿಗ್ಗೆ ಗುರು ಗಣಪತಿ ಪೂಜೆ, ಪುಣ್ಯಾಹ ದೇವನಾಂದಿ ಪಣ್ಣಾರಿಕೇಳ ಗಣಯಾಗ ಧ್ವಜಾರೋಹಣ, ಕೌತುಕ ಬಂಧನ, ಅಂಕುರಾರ್ಪಣ, ಸಂಜೆ ಬೇರಿತಾಡನ, ಅಗ್ನಿಜನನ ಹೋಮ, ಆಧಿವಾಸ ಹೋಮ, ಉತ್ಸವ, ಬಲಿದಾನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಮೇ.೧೨ರ ಬೆಳಿಗ್ಗೆ ನವಗ್ರಹ ಹೋಮ, ಆದಿವಾಸ ಹೋಮ, ರಥ ಶುದ್ಧಿ ಹೋಮ, ರಥಾಧಿವಾಸ ಹೋಮ, ಶ್ರೀ ಸ್ವಾಮಿಯ ರಥಾರೋಹಣ, ಮಧ್ಯಾಹ್ನ ೧೨ ಗಂಟೆಗೆ ದೇವಸ್ಥಾನ ಮುಂಭಾಗದಿಂದ ಮಹಾರಥೋತ್ಸವ ಆರಂಭಗೊಂಡು ರಂಗಪ್ಪ ವೃತ್ತ ಹಾಗು ಅಂಬೇಡ್ಕರ್ ವೃತ್ತದವರೆಗೂ ಸಾಗಲಿದೆ. ಸಂಜೆ ರಥಾವರೋಹಣ, ಅಷ್ಟಾವಧಾನ ಸೇವೆ, ಶಯನೋತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ದೇವಸ್ಥಾನ ಸೇವಾ ಸಮಿತಿ ಕೋರಿದೆ.