Wednesday, March 23, 2022

ರೆಸ್ಟೋರೆಂಟ್, ಮದ್ಯದಂಗಡಿ ಬೇರೆಡೆಗೆ ಸ್ಥಳಾಂತರಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ವಾಣಿಜ್ಯ ರಸ್ತೆಯಲ್ಲಿ ರೆಸ್ಟೋರೆಂಟ್ ಮತ್ತು ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇವುಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಬುಧವಾರ ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪದಲ್ಲಿರುವ ಆಟೋ ನಿಲ್ದಾಣ ಬಳಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ವಾಣಿಜ್ಯ ರಸ್ತೆಯಲ್ಲಿ ರೆಸ್ಟೋರೆಂಟ್ ಮತ್ತು ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇವುಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಬುಧವಾರ ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪದಲ್ಲಿರುವ ಆಟೋ ನಿಲ್ದಾಣ ಬಳಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಸ್ಥಳೀಯ ಮುಖಂಡ ಶಶಿಕುಮಾರ್ ಎಸ್. ಗೌಡ ಮಾತನಾಡಿ, ಜನ್ನಾಪುರ ವಾಣಿಜ್ಯ ರಸ್ತೆ ನಗರಸಭೆ ಶಾಖಾ ಕಛೇರಿ, ನಗರ ಆರೋಗ್ಯ ಕೇಂದ್ರ, ಕ್ಲಿನಿಕ್‌ಗಳು, ಶಾಲೆಗಳು, ದೇವಸ್ಥಾನ, ನ್ಯಾಯಬೆಲೆ ಅಂಗಡಿ, ಬ್ಯಾಂಕ್‌ಗಳು, ಔಷಧಿ ಹಾಗು ದಿನಸಿ ಅಂಗಡಿಗಳು ಸೇರಿದಂತೆ ಇನ್ನಿತರ ಅಂಗಡಿ ಮುಂಗಟ್ಟುಗಳಿಂದ ಕೂಡಿದೆ. ಇದರಿಂದಾಗಿ ಫಿಲ್ಟರ್‌ಶೆಡ್, ವೇಲೂರ್‌ಶೆಡ್, ಕೂಲಿಬ್ಲಾಕ್, ಆಂಜನೇಯ ಆಗ್ರಹಾರ, ನ್ಯೂಕಾಲೋನಿ, ವಿದ್ಯಾಮಂದಿರ, ಹಾಲಪ್ಪಶೆಡ್, ಹಾಜಪ್ಪ ಲೇಔಟ್, ಕೆ.ಸಿ ಬ್ಲಾಕ್, ಗಣೇಶ್‌ಕಾಲೋನಿ, ಜಿಂಕ್‌ಲೈನ್, ಭಂಡಾರಹಳ್ಳಿ ಸೇರಿದಂತೆ ಸುತ್ತಮುತ್ತನ ನಿವಾಸಿಗಳು ಪ್ರತಿ ದಿನ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಾರೆ ಎಂದರು.
    ಈ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಸುಮಾರು ೫ ರೆಸ್ಟೋರೆಂಟ್‌ಗಳು ಮತ್ತು ಅಬಕಾರಿ ನಿಯಮಗಳನ್ನು ಪಾಲನೆ ಮಾಡದ ಸಿಎಲ್೨ ಎರಡು ಹಾಗು ಎಂಎಸ್‌ಐಎಲ್ ಒಂದು ಮದ್ಯದಂಗಡಿ ಇದ್ದು, ಈ ಭಾಗದಲ್ಲಿ ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದ್ದು,  ಮಹಿಳೆಯರು, ವಯೋವೃದ್ಧರು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ಅಹಿತಕರ ಘಟನೆಯೊಂದು ನಡೆದಿದ್ದು, ಆದರೂ ಸಹ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
    ರೆಸ್ಟೋರೆಂಟ್ ಮತ್ತು ಮದ್ಯದಂಗಡಿಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣ ಬೇರೆಡೆಗೆ ಸ್ಥಳಾಂತರಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಇಲ್ಲವಾದಲ್ಲಿ ಶಿವಮೊಗ್ಗ ಜಿಲ್ಲೆಗೆ ಏ.೨೪ರಂದು ಆಗಮಿಸಲಿರುವ  ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಪಾದಯಾತ್ರೆ ಮೂಲಕ ಭೇಟಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದೂರು ನೀಡುವುದಾಗಿ ಎಚ್ಚರಿಸಿದರು.
    ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.


ಗ್ರಾಮಾಂತರ ಕಾಂಗ್ರೆಸ್ ಯುವ ಘಟಕದಿಂದ ಭಗತ್ ಸಿಂಗ್ ಪುಣ್ಯ ಸ್ಮರಣೆ

ಭದ್ರಾವತಿಯಲ್ಲಿ ವೀರಯೋಧರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಬುಧವಾರ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಪುಣ್ಯ ಸ್ಮರಣೆ ವಿಶೇಷವಾಗಿ ಆಚರಿಸಲಾಯಿತು.  
    ಭದ್ರಾವತಿ, ಮಾ. ೨೩: ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಬುಧವಾರ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಪುಣ್ಯ ಸ್ಮರಣೆ ವಿಶೇಷವಾಗಿ ಆಚರಿಸಲಾಯಿತು.  
    ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹ ಕಛೇರಿಯಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವೀರಯೋಧರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಭಗತ್ ಸಿಂಗ್‌ರವರ ದೇಶ ಪ್ರೇಮ, ಆದರ್ಶತನ ಹಾಗು ಕ್ರಾಂತಿಕಾರಿ ಹೋರಾಟಗಳನ್ನು ಸ್ಮರಿಸಲಾಯಿತು. ಇದಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಬೈಕ್ ರ್‍ಯಾಲಿ ನಡೆಸಲಾಯಿತು.
    ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಆಫ್ತಬ್ ಅಹಮದ್ ನೇತೃತ್ವ ವಹಿಸಿದ್ದರು. ಉದ್ಯಮಿ ಬಿ.ಕೆ ಜಗನ್ನಾಥ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ವಕ್ತಾರ ಆಮೋಸ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ. ಗಂಗಾಧರ್, ಅಸಂಘಟಿತ ಕಾರ್ಮಿಕ ವಲಯ ನಗರ ಘಟಕದ ಅಧ್ಯಕ್ಷ ಐಸಾಕ್ ಲಿಂಕನ್, ಗ್ರಾಮಾಂತರ ಯುವ ಕಾಂಗ್ರೆಸ್ ಉಪಾಧ್ಯಕ್ಷ ತಬ್ರೆಜ್ ಖಾನ್, ನವೀನ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸಜ್ಜದ್, ಆನಂದ್, ವರುಣ್ ಹಾಗು ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಸಾರ್ವಜನಿಕರ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮಾಡಿಕೊಡುವುದು ಸರ್ಕಾರಿ ಅಧಿಕಾರಿಗಳ ಜವಾಬ್ದಾರಿ

ವಿನಾಕಾರಣ ಅಲೆಯುವಂತೆ ಮಾಡದಿರಿ, ಕರ್ತವ್ಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ 

ಭದ್ರಾವತಿ ಹಳೇ ತಾಲೂಕು ಕಛೇರಿ ಆವರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನ ಸಂಪರ್ಕ, ಅಹವಾಲು ಸ್ವೀಕಾರ ಸಭೆಯ ನೇತೃತ್ವ ವಹಿಸಿ ಪೊಲೀಸ್ ಉಪಾಧೀಕ್ಷಕ ವಸಂತಕುಮಾರ್ ಮಾತನಾಡಿದರು. 
    ಭದ್ರಾವತಿ, ಮಾ. ೨೩: ಸಾರ್ವಜನಿಕರನ್ನು ಕಛೇರಿಯಿಂದ ಕಛೇರಿಗೆ ಅಲೆಯುವಂತೆ ಮಾಡದೆ ನಿಗದಿತ ಸಮಯದಲ್ಲಿ ಅವರ ಕೆಲಸ ಮಾಡಿಕೊಡುವುದು ಸರ್ಕಾರಿ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಅಲ್ಲದೆ ಗ್ರಾಮೀಣ ಭಾಗದಿಂದ ಬರುವ ಜನರಿಗೆ ತಮ್ಮ ಕೆಲಸದ ಬಗ್ಗೆ ತಿಳುವಳಿಕೆ ಮೂಡಿಸಬೇಕು. ವಿನಾಕಾರಣ ಅವರೊಂದಿಗೆ ಸಂಘರ್ಷಕ್ಕೆ ಇಳಿಯಬಾರದು. ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ರೀತಿ ಭ್ರಷ್ಟಾಚಾರವಿರಬಾರದು ಎಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಉಪಾಧೀಕ್ಷಕ ವಸಂತಕುಮಾರ್ ಹೇಳಿದರು. 
ಅವರು ಬುಧವಾರ ಹಳೇ ತಾಲೂಕು ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನ ಸಂಪರ್ಕ, ಅಹವಾಲು ಸ್ವೀಕಾರ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. 
ಸರ್ಕಾರಿ ಅಧಿಕಾರಿಗಳ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿದ್ದು, ಸರ್ಕಾರಿ ಇಲಾಖೆಗಳ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕೆಂಬುದು ಇಲಾಖೆಯ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ನಡೆದುಕೊಳ್ಳಬೇಕು. ತಮ್ಮ ಕರ್ತವ್ಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದರು. 
ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸದ ಹಾಗು ಅವರ ಕೆಲಸಗಳನ್ನು ಮಾಡಿಕೊಡಲು ವಿನಾಕಾರಣ ತೊಂದರೆ ಕೊಡುವ ಅಧಿಕಾರಿಗಳ ವಿರುದ್ಧ ಇಲಾಖೆಗೆ ದೂರು ನೀಡಬಹುದು. ಇಲಾಖೆ ದೂರುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ನ್ಯಾಯ ಒದಗಿಸಿಕೊಡಲಿದೆ ಎಂದರು. 
ಪೊಲೀಸ್ ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್, ಇಲಾಖೆಯ ಸುಧೀಂದ್ರ, ಅರುಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತ ಕೆ. ಪರಮೇಶ್, ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಸ್ಥಳದಲ್ಲಿಯೇ ಹಲವಾರು ದೂರುಗಳು ಸಲ್ಲಿಕೆಯಾದವು. ಉಪ ತಹಸೀಲ್ದಾರ್ ಮಂಜನಾಯ್ಕ ನಿರೂಪಿಸಿದರು.