ವಿನಾಕಾರಣ ಅಲೆಯುವಂತೆ ಮಾಡದಿರಿ, ಕರ್ತವ್ಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ
ಭದ್ರಾವತಿ ಹಳೇ ತಾಲೂಕು ಕಛೇರಿ ಆವರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನ ಸಂಪರ್ಕ, ಅಹವಾಲು ಸ್ವೀಕಾರ ಸಭೆಯ ನೇತೃತ್ವ ವಹಿಸಿ ಪೊಲೀಸ್ ಉಪಾಧೀಕ್ಷಕ ವಸಂತಕುಮಾರ್ ಮಾತನಾಡಿದರು.
ಭದ್ರಾವತಿ, ಮಾ. ೨೩: ಸಾರ್ವಜನಿಕರನ್ನು ಕಛೇರಿಯಿಂದ ಕಛೇರಿಗೆ ಅಲೆಯುವಂತೆ ಮಾಡದೆ ನಿಗದಿತ ಸಮಯದಲ್ಲಿ ಅವರ ಕೆಲಸ ಮಾಡಿಕೊಡುವುದು ಸರ್ಕಾರಿ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಅಲ್ಲದೆ ಗ್ರಾಮೀಣ ಭಾಗದಿಂದ ಬರುವ ಜನರಿಗೆ ತಮ್ಮ ಕೆಲಸದ ಬಗ್ಗೆ ತಿಳುವಳಿಕೆ ಮೂಡಿಸಬೇಕು. ವಿನಾಕಾರಣ ಅವರೊಂದಿಗೆ ಸಂಘರ್ಷಕ್ಕೆ ಇಳಿಯಬಾರದು. ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ರೀತಿ ಭ್ರಷ್ಟಾಚಾರವಿರಬಾರದು ಎಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಉಪಾಧೀಕ್ಷಕ ವಸಂತಕುಮಾರ್ ಹೇಳಿದರು.
ಅವರು ಬುಧವಾರ ಹಳೇ ತಾಲೂಕು ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನ ಸಂಪರ್ಕ, ಅಹವಾಲು ಸ್ವೀಕಾರ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಸರ್ಕಾರಿ ಅಧಿಕಾರಿಗಳ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿದ್ದು, ಸರ್ಕಾರಿ ಇಲಾಖೆಗಳ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕೆಂಬುದು ಇಲಾಖೆಯ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ನಡೆದುಕೊಳ್ಳಬೇಕು. ತಮ್ಮ ಕರ್ತವ್ಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದರು.
ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸದ ಹಾಗು ಅವರ ಕೆಲಸಗಳನ್ನು ಮಾಡಿಕೊಡಲು ವಿನಾಕಾರಣ ತೊಂದರೆ ಕೊಡುವ ಅಧಿಕಾರಿಗಳ ವಿರುದ್ಧ ಇಲಾಖೆಗೆ ದೂರು ನೀಡಬಹುದು. ಇಲಾಖೆ ದೂರುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ನ್ಯಾಯ ಒದಗಿಸಿಕೊಡಲಿದೆ ಎಂದರು.
ಪೊಲೀಸ್ ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್, ಇಲಾಖೆಯ ಸುಧೀಂದ್ರ, ಅರುಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತ ಕೆ. ಪರಮೇಶ್, ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಸ್ಥಳದಲ್ಲಿಯೇ ಹಲವಾರು ದೂರುಗಳು ಸಲ್ಲಿಕೆಯಾದವು. ಉಪ ತಹಸೀಲ್ದಾರ್ ಮಂಜನಾಯ್ಕ ನಿರೂಪಿಸಿದರು.
No comments:
Post a Comment