Thursday, November 2, 2023

ಜಾತ್ರೆ ರೂಪ ಪಡೆದುಕೊಳ್ಳುತ್ತಿದೆ ವಿಐಎಸ್‌ಎಲ್ ಶತಮಾನೋತ್ಸವ : ಇಂದು ಸಂಜೆ ಭದ್ರಾರತಿಗೆ ಚಾಲನೆ

ಬೃಹತ್ ವೇದಿಕೆ, ಮಹಾದ್ವಾರ, ಆಕರ್ಷಕ ವಿದ್ಯುತ್ ದೀಪಗಳ ಅಲಂಕಾರ, ಪ್ರಮುಖ ರಸ್ತೆಗಳ ಮೆರಗು

ಭದ್ರಾವತಿ ಪ್ರಮುಖ ವೃತ್ತಗಳಲ್ಲಿ ವಿಐಎಸ್‌ಎಲ್ ಶತಮಾನೋತ್ಸವ ಅಂಗವಾಗಿ ನಿರ್ಮಿಸಲಾಗಿರುವ ಮಹಾದ್ವಾರ.
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆಗೊಂಡು ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ನೇತೃತ್ವದಲ್ಲಿ ನ.೩ ರಿಂದ ೫ರವರೆಗೆ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಶತಮಾನೋತ್ಸವ ಜಾತ್ರೆಯ ರೂಪ ಪಡೆದುಕೊಳ್ಳುತ್ತಿದ್ದು, ಕಳೆದ ೫ ದಿನಗಳಿಂದ ಬೃಹತ್ ವೇದಿಕೆ ನಿರ್ಮಾಣ ಸೇರಿದಂತೆ ಭರದ ಸಿದ್ದತೆಗಳು ನಡೆದಿವೆ.  
    ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಬೃಹತ್ ವಾಟರ್ ಪ್ರೂಪ್ ವೇದಿಕೆ ನಿರ್ಮಾಣಗೊಂಡಿದ್ದು, ಸಾವಿರಾರು ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಎರಡು ದಿನ ಊಟದ ವ್ಯವಸ್ಥೆ ಸಹ ಕೈಗೊಳ್ಳಲಾಗಿದೆ. ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಂತೆ ಬೃಹತ್ ಡಿಜಿಟಲ್ ಪ್ರದರ್ಶಕಗಳನ್ನು(ಡಿಸ್ ಪ್ಲೇ) ಹಾಗು ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.


ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ವಿಐಎಸ್‌ಎಲ್ ಶತಮಾನೋತ್ಸವ ಅಂಗವಾಗಿ ನಿರ್ಮಿಸಿರುವ ವಾಟರ್ ಪ್ರೂಪ್ ಬೃಹತ್ ವೇದಿಕೆ.
    ನಗರದ ಪ್ರಮುಖ ವೃತ್ತಗಳಲ್ಲಿ ಶತಮಾನೋತ್ಸವ ಮಹಾದ್ವಾರಗಳನ್ನು ನಿರ್ಮಿಸಲಾಗಿದ್ದು, ಪ್ರಮುಖ ರಸ್ತೆಗಳು ಅಲಂಕೃತಗೊಂಡು ಮೆರಗು ನೀಡುತ್ತಿವೆ. ರಾತ್ರಿ ವೇಳೆ ಆಕರ್ಷಕವಾಗಿ ಕಂಗೊಳಿಸುವ ವಿದ್ಯುತ್ ದೀಪಗಳ ಅಲಂಕಾರ ಕೈಗೊಳ್ಳಲಾಗಿದೆ. ಕಾಯಂ, ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು, ಅಧಿಕಾರಿಗಳು, ವಿವಿಧ ಸಂಘಟನೆಗಳು ಶತಮಾನೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಿವೆ.
    ನ.೩ರಂದು ಶುಕ್ರವಾರ ಸಂಜೆ ೪.೩೦ಕ್ಕೆ ಹಳೆನಗರದ ಶ್ರೀಲಕ್ಷ್ಮೀನರಸಿಂಹ ದೇವಾಲಯದಲ್ಲಿ ವಿಐಎಸ್‌ಎಲ್ ಮಾಜಿ ಉದ್ಯೋಗಿ ಹಾಗು ಚಲನಚಿತ್ರನಟ ಭದ್ರಾರತಿಗೆ ಚಾಲನೆ ನೀಡಲಿದ್ದಾರೆ.
    ಈ ಸಂಬಂಧ ಜ್ಯೋತಿಯನ್ನು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಿಂದ ಹಳದಮ್ಮ ಕೇರಿ, ರಂಗಪ್ಪ ವೃತ್ತ, ಬಿ.ಹೆಚ್.ರಸ್ತೆ, ಮಾಧವಚಾರ್ ವೃತ್ತದ ಮಾರ್ಗದ ಮೂಲಕ ಭದ್ರಾ ಹಳೇ ಸೇತುವೆ ಬಳಿಯ ಶ್ರೀ ಸಂಗಮೇಶ್ವರ ದೇವಾಲಯಕ್ಕೆ ಮೆರವಣಿಗೆ ಮೂಲಕ ತಂದು ಭದ್ರಾರತಿ ಪೂಜೆ ನೆರವೇರಿಸಲಾಗುವುದು.
    ನ.೪ ಮತ್ತು ೫ ಎರಡು ದಿನ ಕೇಂದ್ರ ಹಾಗು ರಾಜ್ಯ ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಗಣ್ಯರು, ಕಲಾವಿದರು, ಸಾಧಕರು ಪಾಲ್ಗೊಳ್ಳಲಿದ್ದಾರೆ. ನಿರೀಕ್ಷೆಗೂ ಮೀರಿ ಹೆಚ್ಚಿನ ಜನರು ಪಾಲ್ಗೊಳ್ಳುವ ವಿಶ್ವಾಸವಿದ್ದು, ೩ ದಿನಗಳ ಕಾಲ ನಗರದಲ್ಲಿ ಜಾತ್ರೆಯ ಸಂಭ್ರಮ ಕಂಡು ಬರಲಿದೆ.


ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದ ಶತಮಾನೋತ್ಸವ ಹಿನ್ನಲೆಯಲ್ಲಿ ಅಲಂಕೃತಗೊಂಡು ಕಂಗೊಳಿಸುತ್ತಿರುವುದು.

ವಾಹನ ತಪಾಸಣೆ ವೇಳೆ ವ್ಯಕ್ತಿ ಸೆರೆ : ೪ ದ್ವಿಚಕ್ರ ವಾಹನ ವಶ

ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ (ಎಚ್.ಕೆ ಜಂಕ್ಷನ್) ಬಳಿ ವಾಹನ ತಪಾಸಣೆ ವೇಳೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ವ್ಯಕ್ತಿಯೋರ್ವನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಭದ್ರಾವತಿ: ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ (ಎಚ್.ಕೆ ಜಂಕ್ಷನ್) ಬಳಿ ವಾಹನ ತಪಾಸಣೆ ವೇಳೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ವ್ಯಕ್ತಿಯೋರ್ವನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಬಂಧಿತ ವ್ಯಕ್ತಿ ಉಮೇಶ ಅಲಿಯಾಸ್ ಮುದ್ದ ಬಿನ್ ಹರಿಹರಪ್ಪ ಎಂದು ಗುರುತಿಸಲಾಗಿದೆ. ಈತನಿಂದ ಕಳ್ಳತನ ಮಾಡಲಾಗಿರುವ ೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಅಂದಾಜು ಮೌಲ್ಯ ಒಟ್ಟು ೮೦ ಸಾವಿರ ರುಪಾಯಿಗಳಾಗಿರುತ್ತದೆ.
     ಕಾರ್ಯಾಚರಣೆ ತಂಡದಲ್ಲಿ ಪಾಲ್ಗೊಂಡಿದ್ದ ಠಾಣಾ ಪೊಲೀಸ್ ನಿರೀಕ್ಷಕ ಜಗದೀಶ್ ಹಂಚಿನಾಲ್, ಠಾಣಾಧಿಕಾರಿಗಳಾದ ಶ್ರೀಶೈಲ ಕೆಂಚಣ್ಣವರ, ಜಯಪ್ಪ, ಶಿಲ್ಪ ನಾಯನೇಗಲಿ, ಮಹೇಶ್, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಮಂಜುನಾಥ್, ಈರಯ್ಯ ಮತ್ತು ಶಿವಪ್ಪರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ಧಾರೆ.

ಮದ್ಯವರ್ಜನ ಶಿಬಿರ ಉತ್ತಮ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ : ಎಂ. ಪಾಲಾಕ್ಷಪ್ಪ

ಭದ್ರಾವತಿ ಶ್ರೀರಾಮನಗರದ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ೧೭೫೨ನೇ ಮದ್ಯವರ್ಜನ ಶಿಬಿರಕ್ಕೆ ಗುರುವಾರ ಚಾಲನೆ ನೀಡಲಾಯಿತು.  
    ಭದ್ರಾವತಿ: ಮದ್ಯವರ್ಜನ ಶಿಬಿರ ರಾಜ್ಯಕ್ಕೆ ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ, ಪದ್ಮ ವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ದಂಪತಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ನೀಡಿದ ಮಹತ್ವದ ಕೊಡುಗೆಯಾಗಿದೆ  ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಎಂ.ಪಾಲಾಕ್ಷಪ್ಪ ಹೇಳಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಱವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್-೨, ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಬೆಂಗಳೂರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ,  ಶಿವಮೊಗ್ಗ ಜಿಲ್ಲಾ ಜನಜಾಗೃತಿ ವೇದಿಕೆ ಹಾಗು ನಾಗತಿಬೆಳಗಲು ವಲಯ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಿವಿಧ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀರಾಮನಗರದ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ೧೭೫೨ನೇ ಮದ್ಯವರ್ಜನ ಶಿಬಿರಕ್ಕೆ ಗುರುವಾರ ಅವರು ಚಾಲನೆ ನೀಡಿ ಮಾತನಾಡಿದರು.
    ಸಂಕಷ್ಟದ ಸ್ಥಿತಿಗೆ ಸಿಲುಕಿದ ಅನೇಕ ಕುಟುಂಬಗಳು ಮದ್ಯವರ್ಜನ ಶಿಬಿರದಿಂದಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿವೆ. ತಂದೆ-ತಾಯಿ, ಗಂಡ-ಹೆಂಡತಿ, ಮಕ್ಕಳು  ಸಾಮರಸ್ಯದಿಂದ ಬದುಕುವ ವಾತಾವರಣ ನಿರ್ಮಾಣಗೊಂಡಿದೆ ಎಂದರು.
    ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಆರ್.ಕರುಣಾಮೂರ್ತಿ ಮಾತನಾಡಿ, ಅನೇಕರ ಮನಪರಿವರ್ತನೆಗೆ ಮದ್ಯವರ್ಜನ ಶಿಬಿರ ಸಹಕಾರಿಯಾಗಿದೆ. ಇದರಿಂದ ಬಹಳಷ್ಟು ಕುಟುಂಬಗಳು ಸುಧಾರಣೆಗೆ ಬಂದಿವೆ ಎಂದರು.
    ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಎಲ್ ಯಶೋಧರಯ್ಯ, ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಎಸ್.ಎಂ ರಮೇಶ್, ಪೊಲೀಸ್ ನಗರ ವೃತ್ತ ನಿರೀಕ್ಷಕ ಜೆ. ಶ್ರೀಶೈಲ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಱವೃದ್ಧಿ ಯೋಜನೆ .ಬಿ.ಸಿ. ಟ್ರಸ್ಟ್ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್, ವೀರಾಪುರ ಗ್ರಾಪಂ ಅಧ್ಯಕ್ಷ ಪಿ. ರಂಗಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಜಿ. ಆನಂದ್, ಸದಸ್ಯರಾದ ಜಯರಾಮ್ ಗೊಂದಿ, ಪಿ. ಪಾರ್ವತಮ್ಮ, ಕ್ಷೇತ್ರ ಯೋಜನಾಧಿಕಾರಿ-೨ ಮಾಧವ, ಮೇಲ್ವಿಚಾರಕ ಪಿ. ಶ್ರೀನಿವಾಸ್, ಜಿ.ಎಂ ನಿಂಗಪ್ಪ, ಎಚ್.ಆರ್ ಮಹೇಶ್ ಕುಮಾರ್, ರಾಜು ರೇವಣಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಭದ್ರಾವತಿ ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸಿ : ಜಾನ್‌ಬೆನ್ನಿ ಮನವಿ

ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭಾ ಚುನಾವಣೆ ಪರಾಜಿತ ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ ಮಾತನಾಡಿದರು.
    ಭದ್ರಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ನಗರದಲ್ಲಿ ಆಯೋಜಿಸಲಾಗಿರುವ ವಿಐಎಸ್‌ಎಲ್ ಶತಮಾನೋತ್ಸವ ಸಮಾರಂಭಕ್ಕೆ ಆಗಮಿಸುತ್ತಿರುವುದು ತುಂಬಾ ಸಂತೋಷವನ್ನುಂಟು ಮಾಡಿದ್ದು, ರಾಜ್ಯ ಸರ್ಕಾರ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವಂತೆ ವಿಧಾನಸಭಾ ಚುನಾವಣೆ ಪರಾಜಿತ ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ ಮನವಿ ಮಾಡಿದ್ದಾರೆ.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಅವನತಿ ದಾರಿ ಹಿಡಿದಿವೆ. ಭದ್ರಾವತಿ ಹೊರತುಪಡಿಸಿ ರಾಜ್ಯದ ಎಲ್ಲಾ ತಾಲೂಕುಗಳು ಅಭಿವೃದ್ಧಿ ಹೊಂದಿವೆ. ತಾಲೂಕು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದು,  ಇಲ್ಲಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸಬೇಕೆಂಬುದು ಕ್ಷೇತ್ರದ ಜನರ ಒತ್ತಾಯವಾಗಿದೆ ಎಂದರು.
    ವಿಐಎಸ್‌ಎಲ್ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ತನ್ನ ಅಧೀನಕ್ಕೆ ಒಳಪಡಿಸಿಕೊಂಡಾಗಿನಿಂದಲೂ ಯಾವುದೇ ರೀತಿ ಅಭಿವೃದ್ಧಿಪಡಿಸದೆ ಅಧೋಗತಿಯತ್ತ ಸಾಗಲು ಕಾರಣವಾಗಿದೆ. ಕಾರ್ಖಾನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.
    ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿಲ್ಲ. ಅಲ್ಲದೆ ಭವಿಷ್ಯದ ಕಾಮಗಾರಿಗಳಿಗೂ ಶಂಕು ಸ್ಥಾಪನೆ ನಡೆಯುತ್ತಿಲ್ಲ. ಎಂಪಿಎಂ ಕಾರ್ಖಾನೆ ಈಗಾಗಲೇ ಸಂಪೂರ್ಣವಾಗಿ ಮುಚ್ಚಿದ್ದು,  ಕಾರ್ಮಿಕರು ಹಾಗು ಅವರ ಕುಟುಂಬ ವರ್ಗದವರು ಬೀದಿ ಪಾಲಾಗಿದ್ದಾರೆ. ಎರಡು ಕಾರ್ಖಾನೆಗಳ ವಸತಿ ಗೃಹಗಳು ಪಾಳುಬಿದ್ದಿದ್ದು, ಹಂದಿ, ನಾಯಿ, ದನ, ಕರುಗಳ ಆಶ್ರಯ ತಾಣವಾಗಿ ಮಾರ್ಪಾಡಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
    ರಾಜ್ಯ ಸರ್ಕಾರ ಎರಡು ಕಾರ್ಖಾನೆಗಳ ಅಭಿವೃದ್ಧಿಗೆ ಸುಮಾರು ೩ ಸಾವಿರ ಕೋಟಿ ರು. ಹಣ ಸಾಲದ ರೂಪದಲ್ಲಿ ನೀಡಬೇಕು. ಈ ಹಣ ಮುಂದಿನ ೪ ವರ್ಷಗಳಲ್ಲಿ ೬ ಸಾವಿರ ಕೋಟಿ ರು. ಪರಿವರ್ತನೆಯಾಗಿ ರಾಜ್ಯದ ಬೊಕ್ಕಸಕ್ಕೆ ಹಿಂದಿರುಗಿಸುವ ವಿಶ್ವಾಸ ಹೊಂದಿದ್ದು, ಈ ಹಿನ್ನಲೆಯಲ್ಲಿ ೩ ಸಾವಿರ ಕೋಟಿ. ರು. ನೀಡಬೇಕು. ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ವಸತಿ ಗೃಹಗಳನ್ನು ಬಡ ಕಾರ್ಮಿಕರಿಗೆ ಬಾಡಿಗೆಗೆ ನೀಡುವ ಮೂಲಕ ಪಾಳುಬಿದ್ದು ಹಾಳಾಗುವುದನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ ಕುಮಾರ್ ಮತ್ತು ಹೇಮಂತ್ ಕುಮಾರ್ ಉಪಸ್ಥಿತರಿದ್ದರು.

ಯುವ ಮುಖಂಡ ಮಂಗೋಟೆ ರುದ್ರೇಶ್ ನೂತನ ಜನಸಂಪರ್ಕ ಕಛೇರಿ ಉದ್ಘಾಟನೆ

ಭದ್ರಾವತಿ ಭಾರತೀಯ ಜನತಾ ಪಕ್ಷದ ನಗರದ ಯುವ ಮುಖಂಡ, ನ್ಯಾಯವಾದಿ ಮಂಗೋಟೆ ರುದ್ರೇಶ್‌ರವರ ಜನಸಂಪರ್ಕ ಕಛೇರಿ ಗುರುವಾರ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಶ್ ಉದ್ಘಾಟಿಸಿದರು.
    ಭದ್ರಾವತಿ: ಭಾರತೀಯ ಜನತಾ ಪಕ್ಷದ ನಗರದ ಯುವ ಮುಖಂಡ, ನ್ಯಾಯವಾದಿ ಮಂಗೋಟೆ ರುದ್ರೇಶ್‌ರವರ ಜನಸಂಪರ್ಕ ಕಛೇರಿ ಗುರುವಾರ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಶ್ ಉದ್ಘಾಟಿಸಿದರು.
    ಮಂಗೋಟೆ ರುದ್ರೇಶ್ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದರು. ಸಾರ್ವಜನಿಕವಾಗಿ ಹೆಚ್ಚಿನ ಜನಸಂಪರ್ಕ ಸಾಧಿಸುವ ಗುರಿ ಹಾಗು ಜನಸಾಮಾನ್ಯರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಉದ್ದೇಶದೊಂದಿಗೆ ನಗರದ ರಂಗಪ್ಪ ವೃತ್ತ, ಕೃಷ್ಣಮೂರ್ತಿ ಲೇ ಔಟ್‌ನಲ್ಲಿ ಕಛೇರಿಯನ್ನು ಆರಂಭಿಸಿದ್ದಾರೆ.
    ನೂತನ ಕಛೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಂ. ಸಂತೋಷ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಉಮೇಶ್, ವೀರಶೈವ ಸಮಾಜದ ಅಧ್ಯಕ್ಷ ಎಚ್. ತೀರ್ಥಯ್ಯ, ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್, ಎನ್. ವಿಶ್ವನಾಥರಾವ್, ಶೋಭಾ ಪಾಟೀಲ್, ಮಂಜುಳಾ, ಶಶಿಕಲಾ ನಾರಾಯಣಪ್ಪ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ಶುಭ ಹಾರೈಸಿದರು.