Thursday, November 2, 2023

ಜಾತ್ರೆ ರೂಪ ಪಡೆದುಕೊಳ್ಳುತ್ತಿದೆ ವಿಐಎಸ್‌ಎಲ್ ಶತಮಾನೋತ್ಸವ : ಇಂದು ಸಂಜೆ ಭದ್ರಾರತಿಗೆ ಚಾಲನೆ

ಬೃಹತ್ ವೇದಿಕೆ, ಮಹಾದ್ವಾರ, ಆಕರ್ಷಕ ವಿದ್ಯುತ್ ದೀಪಗಳ ಅಲಂಕಾರ, ಪ್ರಮುಖ ರಸ್ತೆಗಳ ಮೆರಗು

ಭದ್ರಾವತಿ ಪ್ರಮುಖ ವೃತ್ತಗಳಲ್ಲಿ ವಿಐಎಸ್‌ಎಲ್ ಶತಮಾನೋತ್ಸವ ಅಂಗವಾಗಿ ನಿರ್ಮಿಸಲಾಗಿರುವ ಮಹಾದ್ವಾರ.
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆಗೊಂಡು ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ನೇತೃತ್ವದಲ್ಲಿ ನ.೩ ರಿಂದ ೫ರವರೆಗೆ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಶತಮಾನೋತ್ಸವ ಜಾತ್ರೆಯ ರೂಪ ಪಡೆದುಕೊಳ್ಳುತ್ತಿದ್ದು, ಕಳೆದ ೫ ದಿನಗಳಿಂದ ಬೃಹತ್ ವೇದಿಕೆ ನಿರ್ಮಾಣ ಸೇರಿದಂತೆ ಭರದ ಸಿದ್ದತೆಗಳು ನಡೆದಿವೆ.  
    ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಬೃಹತ್ ವಾಟರ್ ಪ್ರೂಪ್ ವೇದಿಕೆ ನಿರ್ಮಾಣಗೊಂಡಿದ್ದು, ಸಾವಿರಾರು ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಎರಡು ದಿನ ಊಟದ ವ್ಯವಸ್ಥೆ ಸಹ ಕೈಗೊಳ್ಳಲಾಗಿದೆ. ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಂತೆ ಬೃಹತ್ ಡಿಜಿಟಲ್ ಪ್ರದರ್ಶಕಗಳನ್ನು(ಡಿಸ್ ಪ್ಲೇ) ಹಾಗು ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.


ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ವಿಐಎಸ್‌ಎಲ್ ಶತಮಾನೋತ್ಸವ ಅಂಗವಾಗಿ ನಿರ್ಮಿಸಿರುವ ವಾಟರ್ ಪ್ರೂಪ್ ಬೃಹತ್ ವೇದಿಕೆ.
    ನಗರದ ಪ್ರಮುಖ ವೃತ್ತಗಳಲ್ಲಿ ಶತಮಾನೋತ್ಸವ ಮಹಾದ್ವಾರಗಳನ್ನು ನಿರ್ಮಿಸಲಾಗಿದ್ದು, ಪ್ರಮುಖ ರಸ್ತೆಗಳು ಅಲಂಕೃತಗೊಂಡು ಮೆರಗು ನೀಡುತ್ತಿವೆ. ರಾತ್ರಿ ವೇಳೆ ಆಕರ್ಷಕವಾಗಿ ಕಂಗೊಳಿಸುವ ವಿದ್ಯುತ್ ದೀಪಗಳ ಅಲಂಕಾರ ಕೈಗೊಳ್ಳಲಾಗಿದೆ. ಕಾಯಂ, ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು, ಅಧಿಕಾರಿಗಳು, ವಿವಿಧ ಸಂಘಟನೆಗಳು ಶತಮಾನೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಿವೆ.
    ನ.೩ರಂದು ಶುಕ್ರವಾರ ಸಂಜೆ ೪.೩೦ಕ್ಕೆ ಹಳೆನಗರದ ಶ್ರೀಲಕ್ಷ್ಮೀನರಸಿಂಹ ದೇವಾಲಯದಲ್ಲಿ ವಿಐಎಸ್‌ಎಲ್ ಮಾಜಿ ಉದ್ಯೋಗಿ ಹಾಗು ಚಲನಚಿತ್ರನಟ ಭದ್ರಾರತಿಗೆ ಚಾಲನೆ ನೀಡಲಿದ್ದಾರೆ.
    ಈ ಸಂಬಂಧ ಜ್ಯೋತಿಯನ್ನು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಿಂದ ಹಳದಮ್ಮ ಕೇರಿ, ರಂಗಪ್ಪ ವೃತ್ತ, ಬಿ.ಹೆಚ್.ರಸ್ತೆ, ಮಾಧವಚಾರ್ ವೃತ್ತದ ಮಾರ್ಗದ ಮೂಲಕ ಭದ್ರಾ ಹಳೇ ಸೇತುವೆ ಬಳಿಯ ಶ್ರೀ ಸಂಗಮೇಶ್ವರ ದೇವಾಲಯಕ್ಕೆ ಮೆರವಣಿಗೆ ಮೂಲಕ ತಂದು ಭದ್ರಾರತಿ ಪೂಜೆ ನೆರವೇರಿಸಲಾಗುವುದು.
    ನ.೪ ಮತ್ತು ೫ ಎರಡು ದಿನ ಕೇಂದ್ರ ಹಾಗು ರಾಜ್ಯ ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಗಣ್ಯರು, ಕಲಾವಿದರು, ಸಾಧಕರು ಪಾಲ್ಗೊಳ್ಳಲಿದ್ದಾರೆ. ನಿರೀಕ್ಷೆಗೂ ಮೀರಿ ಹೆಚ್ಚಿನ ಜನರು ಪಾಲ್ಗೊಳ್ಳುವ ವಿಶ್ವಾಸವಿದ್ದು, ೩ ದಿನಗಳ ಕಾಲ ನಗರದಲ್ಲಿ ಜಾತ್ರೆಯ ಸಂಭ್ರಮ ಕಂಡು ಬರಲಿದೆ.


ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದ ಶತಮಾನೋತ್ಸವ ಹಿನ್ನಲೆಯಲ್ಲಿ ಅಲಂಕೃತಗೊಂಡು ಕಂಗೊಳಿಸುತ್ತಿರುವುದು.

No comments:

Post a Comment