Thursday, November 2, 2023

ಭದ್ರಾವತಿ ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸಿ : ಜಾನ್‌ಬೆನ್ನಿ ಮನವಿ

ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭಾ ಚುನಾವಣೆ ಪರಾಜಿತ ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ ಮಾತನಾಡಿದರು.
    ಭದ್ರಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ನಗರದಲ್ಲಿ ಆಯೋಜಿಸಲಾಗಿರುವ ವಿಐಎಸ್‌ಎಲ್ ಶತಮಾನೋತ್ಸವ ಸಮಾರಂಭಕ್ಕೆ ಆಗಮಿಸುತ್ತಿರುವುದು ತುಂಬಾ ಸಂತೋಷವನ್ನುಂಟು ಮಾಡಿದ್ದು, ರಾಜ್ಯ ಸರ್ಕಾರ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವಂತೆ ವಿಧಾನಸಭಾ ಚುನಾವಣೆ ಪರಾಜಿತ ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ ಮನವಿ ಮಾಡಿದ್ದಾರೆ.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಅವನತಿ ದಾರಿ ಹಿಡಿದಿವೆ. ಭದ್ರಾವತಿ ಹೊರತುಪಡಿಸಿ ರಾಜ್ಯದ ಎಲ್ಲಾ ತಾಲೂಕುಗಳು ಅಭಿವೃದ್ಧಿ ಹೊಂದಿವೆ. ತಾಲೂಕು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದು,  ಇಲ್ಲಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸಬೇಕೆಂಬುದು ಕ್ಷೇತ್ರದ ಜನರ ಒತ್ತಾಯವಾಗಿದೆ ಎಂದರು.
    ವಿಐಎಸ್‌ಎಲ್ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ತನ್ನ ಅಧೀನಕ್ಕೆ ಒಳಪಡಿಸಿಕೊಂಡಾಗಿನಿಂದಲೂ ಯಾವುದೇ ರೀತಿ ಅಭಿವೃದ್ಧಿಪಡಿಸದೆ ಅಧೋಗತಿಯತ್ತ ಸಾಗಲು ಕಾರಣವಾಗಿದೆ. ಕಾರ್ಖಾನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.
    ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿಲ್ಲ. ಅಲ್ಲದೆ ಭವಿಷ್ಯದ ಕಾಮಗಾರಿಗಳಿಗೂ ಶಂಕು ಸ್ಥಾಪನೆ ನಡೆಯುತ್ತಿಲ್ಲ. ಎಂಪಿಎಂ ಕಾರ್ಖಾನೆ ಈಗಾಗಲೇ ಸಂಪೂರ್ಣವಾಗಿ ಮುಚ್ಚಿದ್ದು,  ಕಾರ್ಮಿಕರು ಹಾಗು ಅವರ ಕುಟುಂಬ ವರ್ಗದವರು ಬೀದಿ ಪಾಲಾಗಿದ್ದಾರೆ. ಎರಡು ಕಾರ್ಖಾನೆಗಳ ವಸತಿ ಗೃಹಗಳು ಪಾಳುಬಿದ್ದಿದ್ದು, ಹಂದಿ, ನಾಯಿ, ದನ, ಕರುಗಳ ಆಶ್ರಯ ತಾಣವಾಗಿ ಮಾರ್ಪಾಡಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
    ರಾಜ್ಯ ಸರ್ಕಾರ ಎರಡು ಕಾರ್ಖಾನೆಗಳ ಅಭಿವೃದ್ಧಿಗೆ ಸುಮಾರು ೩ ಸಾವಿರ ಕೋಟಿ ರು. ಹಣ ಸಾಲದ ರೂಪದಲ್ಲಿ ನೀಡಬೇಕು. ಈ ಹಣ ಮುಂದಿನ ೪ ವರ್ಷಗಳಲ್ಲಿ ೬ ಸಾವಿರ ಕೋಟಿ ರು. ಪರಿವರ್ತನೆಯಾಗಿ ರಾಜ್ಯದ ಬೊಕ್ಕಸಕ್ಕೆ ಹಿಂದಿರುಗಿಸುವ ವಿಶ್ವಾಸ ಹೊಂದಿದ್ದು, ಈ ಹಿನ್ನಲೆಯಲ್ಲಿ ೩ ಸಾವಿರ ಕೋಟಿ. ರು. ನೀಡಬೇಕು. ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ವಸತಿ ಗೃಹಗಳನ್ನು ಬಡ ಕಾರ್ಮಿಕರಿಗೆ ಬಾಡಿಗೆಗೆ ನೀಡುವ ಮೂಲಕ ಪಾಳುಬಿದ್ದು ಹಾಳಾಗುವುದನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ ಕುಮಾರ್ ಮತ್ತು ಹೇಮಂತ್ ಕುಮಾರ್ ಉಪಸ್ಥಿತರಿದ್ದರು.

No comments:

Post a Comment