Wednesday, June 4, 2025

ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳ ಮಹಾಪೂರ

ಪಂದ್ಯಾವಳಿ ವೀಕ್ಷಣೆಗೆ ಎಲ್‌ಸಿಡಿ ಪರದೆ ವ್ಯವಸ್ಥೆ, ಮದುವೆ ಮಂಟಪದಲ್ಲೂ ಕ್ರಿಕೆಟ್ ಸಂಭ್ರಮ 

ಭದ್ರಾವತಿಯ ಪ್ರಮುಖ ಸ್ಥಳಗಳಲ್ಲಿ ಅಭಿಮಾನಿಗಳು ಮಂಗಳವಾರ ಐಪಿಎಲ್ ಕ್ರಿಕಿಟ್ ಪಂದ್ಯಾವಳಿ ವೀಕ್ಷಿಸುತ್ತಿರುವುದು. 
    ಭದ್ರಾವತಿ: ಈ ಬಾರಿ ಐಪಿಎಲ್ ಚಾಂಪಿಯನ್ ಲೀಗ್ ಪಂದ್ಯಾವಳಿ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡಕ್ಕೆ ತಾಲೂಕಿನಾದ್ಯಂತ ಅಭಿನಂದನೆಗಳ ಮಹಾಪೂರ ಹರಿದು ಬಂದಿದ್ದು, ಅಲ್ಲದೆ ಗೆಲುವಿನ ಸಂಭ್ರಮಚರಣೆ ಮುಗಿಲು ಮುಟ್ಟಿದೆ. 
    ಮಂಗಳವಾರ ರಾತ್ರಿ ಕ್ರಿಕೆಟ್ ಆರಂಭಗೊಳ್ಳುವ ೨ ಗಂಟೆಗಳ ಮುಂಚೆಯೇ ನಗರದಲ್ಲಿ ಸ್ವಯಂ ಘೋಷಿತ ಕರ್ಫ್ಯೂ ಆಚರಣೆಯಲ್ಲಿರುವಂತೆ ಕಂಡು ಬಂದಿತು. ಬಹುತೇಕ ವಾಣಿಜ್ಯ ರಸ್ತೆಗಳ ಅಂಗಡಿಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಅಲ್ಲದೆ ಜನಸಂದಣಿ ವಿರಳವಾಗಿರುವುದು ಕಂಡು ಬಂದಿತು. 
    ಅಭಿಮಾನಿಗಳ ಇಚ್ಛೆಯಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರು ನಗರದ ಪ್ರಮುಖ ಆಟೋ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಎಲ್‌ಸಿಡಿ ಪರದೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಆರ್‌ಸಿಬಿ ತಂಡ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿದರು. ಎಲ್ಲೂ ಸಹ ಯಾವುದೇ ಅಹಿತಕರ ಘಟನೆಗಳು ನಡೆದಿರುವುದು ಕಂಡು ಬಂದಿಲ್ಲ. 

ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಗಳವಾರ ಆರ್‌ಸಿಬಿ ತಂಡ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ಅಭಿಮಾನಿಗಳು ಸಂಭ್ರಮಿಸಿದರು. 
    ಅಭಿನಂದನೆಗಳ ಮಹಾಪೂರ: 
    ೧೮ ವರ್ಷಗಳ ದೀರ್ಘ ಕಾಯುವಿಕೆಯ ನಂತರ ಆರ್‌ಸಿಬಿ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡು ಕೋಟ್ಯಾಂತರ ಅಭಿಮಾನಿಗಳ ಕನಸು ನನಸಾಗಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಆರ್‌ಸಿಬಿ ತಂಡಕ್ಕೆ ಕ್ಷೇತ್ರದ ನಾಗರಿಕರ, ಅಭಿಮಾನಿಗಳ ಪರವಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ನಗರದ ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಕ್ರೀಡಾ ಪ್ರಮುಖರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 
    ವಾಟ್ಸಪ್, ಫೇಸ್‌ಬುಕ್, ಎಕ್ಸ್, ಲಿಂಕ್ಡ್‌ಇನ್, ಯುಟ್ಯೂಬ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದಾಡುತ್ತಿದ್ದು, ಬುಧವಾರ ಸಹ ಸಂಭ್ರಮಾಚರಣೆ ಮುಂದುವರೆದಿದೆ. 


ಭದ್ರಾವತಿಯಲ್ಲಿ ಮದುವೆ ಮಂಟಪದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆ ಮಾಡುತ್ತಿರುವುದು.  
    ಮದುವೆ ಮಂಟಪದಲ್ಲಿ ಪಂದ್ಯಾವಳಿ ವೀಕ್ಷಣೆ : 
    ನಗರದ ಪತ್ರಕರ್ತ ಸುರೇಶ್-ಶಾಂತಕುಮಾರಿ ದಂಪತಿಯ ಪುತ್ರಿ ಶಿವಾನಿ(ಬಿ.ಎಸ್ ಪ್ರಗತಿ) ಮತ್ತು ಜಿ.ಎಂ ವೀರಭದ್ರಪ್ಪರವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಮಂಗಳವಾರ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಭವನದಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಐಪಿಎಲ್ ಕ್ರಿಕೆಟ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. 
    ಆರತಕ್ಷತೆಗೆ ಬಂದವರು ಕೆಲ ಸಮಯ ಕ್ರಿಕೆಟ್ ವೀಕ್ಷಿಸುವ ಮೂಲಕ ಸಂಭ್ರಮಿಸಿದರು. ಆರ್‌ಸಿಬಿ ಗೆಲುವು ಮದುವೆ ಮಂಟಪದಲ್ಲಿ ಮತ್ತಷ್ಟು ಸಂಭ್ರಮ ಹೆಚ್ಚಿಸಿತ್ತು.

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ತಂಬಾಕು ನಿಷೇಧ ದಿನ ಆಚರಣೆ

ಭದ್ರಾವತಿಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ ಸಹಯೋಗದೊಂದಿಗೆ ಬುಧವಾರ ವಿಶ್ವ ತಂಬಾಕು ನಿಷೇಧ ದಿನ ಆಚರಿಸಲಾಯಿತು. 
    ಭದ್ರಾವತಿ : ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ ಸಹಯೋಗದೊಂದಿಗೆ ಬುಧವಾರ ವಿಶ್ವ ತಂಬಾಕು ನಿಷೇಧ ದಿನ ಆಚರಿಸಲಾಯಿತು. 
    ರಾಷ್ಟ್ರೀಯ ತಂಬಾಕು ನಿಷೇಧ ಇಲಾಖೆ ಸಂಪನ್ಮೂಲ ವ್ಯಕ್ತಿಗ ಕೆ.ಎಂ ಹೇಮಂತ್ ರಾಜ್‌ಅರಸ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್ ಉಮೇಶ್ ಸೇರಿದಂತೆ ಇನ್ನಿತರರು ಮಾತನಾಡಿ, ತಂಬಾಕು ಸೇವನೆಯ ದುಷ್ಪರಿಣಾಮಗಳು ಹಾಗೂ ತಂಬಾಕು ನಿಷೇಧದ ಬಗ್ಗೆ ಜಾಗೃತಿ ಮೂಡಿಸಿದರು. 
    ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಹಾಗೂ ಬಿ.ಇಡಿ ವಿಭಾಗದ ಪ್ರಾಂಶುಪಾಲ ಡಾ. ಎಸ್.ಪಿ ರಾಕೇಶ್,  ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಹಾಗೂ ವಕೀಲ ಎನ್. ರಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪನ್ಮೂಲ ವ್ಯಕ್ತಿ ದಯಾನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಪ್ರಾರ್ಥಿಸಿ,  ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಾ ಬಾಯಿ ನಿರೂಪಿಸಿದರು. ಉಪನ್ಯಾಸಕಿ ವೀಣಾ ಸ್ವಾಗತಿಸಿ, ಹಿರಿಯ ಆರೋಗ್ಯ ನಿರೀಕ್ಷಕ ಆನಂದ ಮೂರ್ತಿ ವಂದಿಸಿದರು. 

ಸರ್ಕಾರಿ ಕಛೇರಿಗಳಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರ ವಿತರಣೆ

ಭದ್ರಾವತಿ ನಗರದ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಒಡೆಯರ್‌ರವರ ಭಾವಚಿತ್ರ ಹಾಗು ಕರ್ನಾಟಕ ರಾಜ್ಯ ಲಾಂಛನ ಕಛೇರಿಗಳಿಗೆ ನೀಡುವ ಮೂಲಕ ಬುಧವಾರ ಒಡೆಯರ್‌ರವರ ಜನ್ಮದಿನ ವಿಶಿಷ್ಟವಾಗಿ ಆಚರಿಸಲಾಯಿತು. 
    ಭದ್ರಾವತಿ: ನಗರದ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಒಡೆಯರ್‌ರವರ ಭಾವಚಿತ್ರ ಹಾಗು ಕರ್ನಾಟಕ ರಾಜ್ಯ ಲಾಂಛನ ಕಛೇರಿಗಳಿಗೆ ನೀಡುವ ಮೂಲಕ ಬುಧವಾರ ಒಡೆಯರ್‌ರವರ ಜನ್ಮದಿನ ವಿಶಿಷ್ಟವಾಗಿ ಆಚರಿಸಲಾಯಿತು. 
ನಗರದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ಮೈಸೂರು ಕಾಗದ ಕಾರ್ಖಾನೆ ಆರಂಭಿಸುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಅನ್ನದಾತರಾದ ಮೈಸೂರು ಮಹಾರಾಜ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ನೆನಪಿನಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ  ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘ ಹಲವಾರು ಜನಪರ ಹಾಗು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಅನ್ಯಾಯ, ಶೋಷಣೆಗಳ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿದೆ. 
ಒಡೆಯರ್‌ರವರ ಹೆಸರನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಅವರ ಭಾವಚಿತ್ರ ಸರ್ಕಾರಿ ಕಛೇರಿಗಳಿಗೆ ಉಚಿತವಾಗಿ ನೀಡುವ ಕಾರ್ಯಕ್ಕೆ ಮುಂದಾಗಿದೆ. ಬುಧವಾರ ನಗರದ ನ್ಯೂಟೌನ್ ಪೊಲೀಸ್ ಠಾಣೆಗೆ ತೆರಳಿ ಠಾಣಾ ಉಪ ನಿರೀಕ್ಷಕ ರಮೇಶ್‌ರವರಿಗೆ ಭಾವಚಿತ್ರ ವಿತರಿಸಲಾಯಿತು. 
ಸಂಘದ ಅಧ್ಯಕ್ಷ ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರವಿನಾಯ್ಕ, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಕುಮಾರ್, ಖಜಾಂಚಿ ಶಂಕರ್ ನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಉಕ್ಕಿನ ನಗರದ ಅನ್ನದಾತ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಆಚರಣೆ

ಭದ್ರಾವತಿಯಲ್ಲಿ ಕೈಗಾರಿಕೆಗಳ ನಿರ್ಮಾತೃ, ನಗರದ ಅನ್ನದಾತ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಜನ್ಮದಿನ ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲಾಯಿತು. 
    ಭದ್ರಾವತಿ: ಕೈಗಾರಿಕೆಗಳ ನಿರ್ಮಾತೃ, ನಗರದ ಅನ್ನದಾತ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಜನ್ಮದಿನ ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲಾಯಿತು. 
    ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ರಾಜ್ಯಕ್ಕೆ, ನಾಡಿಗೆ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು. ತಹಸೀಲ್ದಾರ್ ಗ್ರೇಡ್-೨ ಮಂಜಾನಾಯ್ಕರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ರಾಜ್ ಅರಸ್, ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರವಿನಾಯ್ಕ, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಕುಮಾರ್, ಖಜಾಂಚಿ ಶಂಕರ್, ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.