Thursday, May 8, 2025

ಯಶಸ್ವಿಯಾಗಿ ಜರುಗಿದ ಸರ್.ಎಂ.ವಿ ಸರ್ಕಾರಿ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರ

ಭದ್ರಾವತಿ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್‌ಎಸ್‌ಎಸ್ ಘಟಕ-೧ ಮತ್ತು ಘಟಕ-೨ರ ಸಹಯೋಗದೊಂದಿಗೆ ಶಿವಮೊಗ್ಗ ತಾಲೂಕಿನ ಕಾಟಿಕೆರೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರದವರೆಗೆ ವಾರ್ಷಿಕ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ : ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್‌ಎಸ್‌ಎಸ್ ಘಟಕ-೧ ಮತ್ತು ಘಟಕ-೨ರ ಸಹಯೋಗದೊಂದಿಗೆ ಶಿವಮೊಗ್ಗ ತಾಲೂಕಿನ ಕಾಟಿಕೆರೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರದವರೆಗೆ ವಾರ್ಷಿಕ ಶಿಬಿರ ಆಯೋಜಿಸಲಾಗಿತ್ತು.
ಮೇ.೨ರಿಂದ ಜರುಗಿದ ವಾರ್ಷಿಕ ಶಿಬಿರದಲ್ಲಿ ಶ್ರಮದಾನ, ವ್ಯಕ್ತಿತ್ವ ವಿಕಸನ, ಉಚಿತ ಕಾನೂನು ಅರಿವು-ನೆರವು, ಕೃಷಿ ಸಮಸ್ಯೆ ಸವಾಲುಗಳು, ಶಾಲಾ ಆಟದ ಮೈದಾನ ಸ್ವಚ್ಛತೆ, ರಸ್ತೆ ನಿರ್ಮಾಣ ಮತ್ತು ರಸ್ತೆ ಸುರಕ್ಷತಾ ಕ್ರಮಗಳು, ಯೋಗ ಮತ್ತು ಧ್ಯಾನ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆ, ಸಂಸ್ಕೃತಿ, ಸಮುದಾಯ ಜೀವನ ಮೌಲ್ಯಗಳ ಅರಿವು, ಅಗ್ನಿ ದುರಂತಗಳ ಬಗ್ಗೆ ಅರಿವು ಮತ್ತು ಜಾಗೃತಿ, ದೇವಸ್ಥಾನ ಆವರಣದ ಸ್ವಚ್ಛತೆ, ರಸ್ತೆ ಮತ್ತು ಚರಂಡಿ ಸ್ವಚ್ಛತೆ, ನಿರ್ಮಾಣ, ಉಚಿತ ಜಾನುವಾರುಗಳ ಲಸಿಕೆ/ತಪಾಸಣೆ, ಆರೋಗ್ಯ ಮಾಹಿತಿ ಮತ್ತು ಗ್ರಾಮ ಸಮೀಕ್ಷೆ ಕಾರ್ಯಕ್ರಮಗಳು ಜರುಗಿದವು. 
`ಸಂವಿಧಾನ ಮತ್ತು ಮಹಿಳಾ ಸಂರಕ್ಷಣೆ ಹಕ್ಕುಗಳು' ಎಂಬ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ನಗರದ ನ್ಯಾಯವಾದಿ ಎಂ. ಶಿವಕುಮಾರ್ ಮಾತನಾಡಿದರು. ಪ್ರತಿಯೊಬ್ಬರು ಸಂವಿಧಾನದ ಮಹತ್ವ ಅರಿತು ಅದನ್ನು ಗೌರವಿಸಬೇಕು. ವಿಶೇಷವಾಗಿ ಮಹಿಳಾ ಸಂರಕ್ಷಣೆ ಹಕ್ಕುಗಳನ್ನು ತಿಳಿದುಕೊಳ್ಳಬೇಕೆಂದರು. 
ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ, ಶಿಬಿರಾಧಿಕಾರಿಗಳಾದ ಕೆ.ಎಂ ಮಹೇಶ್ ಕುಮಾರ್, ಎಂ. ಸತೀಶ್, ಸಹ ಶಿಬಿರಾಧಿಕಾರಿ ಎಸ್.ಕೆ ಶಂಕರಯಾದವ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಬೋಧಕ/ಬೋಧಕೇತರ ವರ್ಗ, ಅತಿಥಿ ಉಪನ್ಯಾಸಕರ ವರ್ಗ, ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಹಿರಿಯ ವಿದ್ಯಾರ್ಥಿಗಳು ಮತ್ತು ಕಾಟಿಕೆರೆ ಗ್ರಾಮಸ್ಥರು. ಶಿಬಿರದಲ್ಲಿ ಪಾಲ್ಗೊಂಡಿದ್ದರು. 

ಮಧು ಲ್ಯಾಬ್‌ನಿಂದ ಪೌರ ಕಾರ್ಮಿಕರಿಗೆ ಗೌರವಾರ್ಪಣೆ

ಭದ್ರಾವತಿ ನಗರದ ರಂಗಪ್ಪ ವೃತ್ತದ ಮಧು ಲ್ಯಾಬೋರೇಟರಿ ವತಿಯಿಂದ ಪೌರ ಕಾರ್ಮಿಕರನ್ನು ಗೌರವಿಸುವ ಮೂಲಕ ವಿಶ್ವ ಕಾರ್ಮಿಕರ ದಿನಾಚರಣೆ ವಿನೂತನವಾಗಿ ಆಚರಿಸಲಾಯಿತು. 
    ಭದ್ರಾವತಿ : ನಗರದ ರಂಗಪ್ಪ ವೃತ್ತದಲ್ಲಿರುವ ಮಧು ಲ್ಯಾಬೋರೇಟರಿ ವತಿಯಿಂದ ಪೌರ ಕಾರ್ಮಿಕರನ್ನು ಗೌರವಿಸುವ ಮೂಲಕ ವಿಶ್ವ ಕಾರ್ಮಿಕರ ದಿನಾಚರಣೆ ವಿನೂತನವಾಗಿ ಆಚರಿಸಲಾಯಿತು. 
    ರಂಗಪ್ಪ ವೃತ್ತ ಮತ್ತು ಕೇಶವಪುರ ಬಡಾವಣೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಗರಸಭೆ ಪೌರ ಕಾರ್ಮಿಕರಾದ ಎಸ್. ಶರವಣ, ಲಕ್ಷ್ಮಮ್ಮ ಮತ್ತು ತಿರುಮಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಲ್ಯಾಬ್ ಮಾಲೀಕ ಎಸ್.ಆರ್ ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ಸಮಾಜದ ಸ್ವಾಸ್ಥ್ಯ, ಸ್ವಚ್ಚತೆ ಮತ್ತು ನೈರ್ಮಲ್ಯ ಕಾಪಾಡುವ, ಜನರ ಆರೋಗ್ಯ ರಕ್ಷಿಸುವ ನಿಜವಾದ ವೈದ್ಯರು. ಜಗತ್ತು ಸುಖ ನಿದ್ರೆಯಲ್ಲಿದ್ದಾಗ ಎದ್ದು ತಮ್ಮ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರ ಕಾರ್ಯ ಅಭಿನಂದನೀಯ ಎಂದರು. 
    ಪೌರ ಕಾಮಿಕರ ಕುಟುಂಬ ವರ್ಗ ಉತ್ತಮ ಗುಣಮಟ್ಟದ ಜೀವನ ನಡೆಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಸಮಾಜದ ಪ್ರತಿಯೊಬ್ಬ ನಾಗರಿಕ ಪೌರ ಕಾರ್ಮಿಕರನ್ನು ಗೌರವದಿಂದ ಕಾಣುವಂತಾಗಬೇಕೆಂದರು.
    ಕಾರ್ಯಕ್ರಮದಲ್ಲಿ ಮಧು ಸಾರಥಿ, ಎಚ್. ಲೀಲಾವತಿ, ಎಂ. ದೀಪಿಕಾ, ಚಿರಾಗ್ ಸಾರಥಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಾರ್ವಜನಿಕರಿಗೆ ಸಿಹಿ ಹಂಚಿಕೆ ಮಾಡಲಾಯಿತು.

ತಾಯ್ತನಕ್ಕಿಂತ ತಾಯಿ ಹೃದಯ ಅತ್ಯಂತ ಮುಖ್ಯ : ಬಿ.ಕೆ ಮಾಲಕ್ಕ

ಭದ್ರಾವತಿ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ತಾಯಂದಿರ ದಿನ ಕಾರ್ಯಕ್ರಮದಲ್ಲಿ ಪತ್ರಕರ್ತ ಸುಭಾಷ್ ರಾವ್ ಸಿಂಧ್ಯಾ ಹಾಗು ಸವಿತಾ ದಂಪತಿ ಪುತ್ರಿ ಎಸ್. ಹರ್ಷಿತಾ ಅವರ ಭರತನಾಟ್ಯ ಮನಸೂರೆಗೊಳಿಸಿತು. ವಿಶ್ವವಿದ್ಯಾಲಯದ ವತಿಯಿಂದ ಹರ್ಷಿತಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ : ತಾಯ್ತನಕ್ಕಿಂತ ತಾಯಿ ಹೃದಯ ಅತ್ಯಂತ ಮುಖ್ಯವಾಗಿದ್ದು, ಜಗತ್ತಿಗೆ ತಾಯಿ ಪ್ರೀತಿ ಹಂಚಿದ ಮದರ್ ತೆರೇಸಾ ಹಾಗೂ ಮರಗಳನ್ನೇ ಮಕ್ಕಳಂತೆ ಪ್ರೀತಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇಂತಹ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ ಮಾಲಕ್ಕ ಹೇಳಿದರು. 
    ಅವರು ಗುರುವಾರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ತಾಯಂದಿರ ದಿನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಭಗವಂತನನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ತಾಯಿಯನ್ನು ಪ್ರತ್ಯಕ್ಷ ದೈವ ಎಂದು ಪೂಜಿಸಲಾಗುತ್ತದೆ. ಸಹಿಷ್ಣುತ ಗುಣವುಳ್ಳ ತಾಯಿಯನ್ನು ಪ್ರಕೃತಿಯಲ್ಲಿ ಭೂಮಿ ಸೇರಿದಂತೆ ವಿವಿಧ ರೀತಿಯಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು.
    ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಮಾತನಾಡಿ, ತಾಯಿಯನ್ನು ಮೊದಲ ಗುರು ಎಂದು ಪೂಜಿಸಲ್ಪಡುವ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಭಾರತ ದೇಶದಲ್ಲಿ ತಾಯಿಗೆ ಮಹತ್ವದ ಸ್ಥಾನ ನೀಡಲಾಗಿದೆ. ತಾಯಿಯ ಋಣ ತೀರಿಸಲು ಅಸಾಧ್ಯವಾಗಿದ್ದು, ಮಕ್ಕಳು ಹೆತ್ತವರನ್ನು ಕೊನೆಯ ಕಾಲದಲ್ಲಿ ನೋಡಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ ಎಂದರು.
    ಹೇಮಶ್ರೀ ಪ್ರಾರ್ಥಿಸಿ, ಪುಷ್ಪಲತಾ, ದೇವರಾಜ್ ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಸುಭಾಷ್ ರಾವ್ ಸಿಂಧ್ಯಾ ಹಾಗು ಸವಿತಾ ದಂಪತಿ ಪುತ್ರಿ ಎಸ್. ಹರ್ಷಿತಾ ಅವರ ಭರತನಾಟ್ಯ ಮನಸೂರೆಗೊಳಿಸಿತು. ವಿಶ್ವವಿದ್ಯಾಲಯದ ವತಿಯಿಂದ ಹರ್ಷಿತಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.