Wednesday, April 28, 2021

ಕಲ್ಯಾಣ ಮಂಟಪಗಳಿಗೆ ಭೇಟಿ : ಮದುವೆ ಕಾರ್ಯ ಪರಿಶೀಲನೆ

ಕೋವಿಡ್-೧೯ ಮಾರ್ಗಸೂಚಿ ಪಾಲನೆ ಕಡ್ಡಾಯ


     ಭದ್ರಾವತಿ, ಏ. ೨೮: ನಗರದ ವಿವಿಧೆಡೆ ಕಲ್ಯಾಣಮಂಟಪಗಳಲ್ಲಿ ಈಗಾಗಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಲ್ಲಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಸರಿಯಾಗಿ ಕಟ್ಟುನಿಟ್ಟಿನಿಂದ ಪಾಲಿಸುವಂತೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಮದುವೆ ಆಯೋಜಕರು ಹಾಗು ಕಲ್ಯಾಣ ಮಂಟಪಗಳ ಮಾಲೀಕರಿಗೆ ಸೂಚಿಸಿತು.



     ನಗರದ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟಪ, ಮಾಧವನಗರದಲ್ಲಿರುವ ದೈವಜ್ಞ ಕಲ್ಯಾಣ ಮಂಟಪ, ಸಿದ್ದಾರೂಢನಗರದ ಶ್ರೀ ಶಂಕರ ಮಠ ಸಮುದಾಯ ಭವನ ಸೇರಿದಂತೆ ವಿವಿಧ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿದ ತಂಡ, ಊಟದ ಕೊಠಡಿ, ಮದುವೆ ಸ್ಥಳ, ಆಸನಗಳ ಪರಿಶೀಲನೆ, ಸಾಮಾಜಿಕ ಅಂತರ ಹಾಗು ಮದುವೆಯಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಸ್ಯಾನಿಟೈಜರ್, ಮಾಸ್ಕ್ ಬಳಕೆ ಮಾಡುವುದು ಸೇರಿದಂತೆ ಇನ್ನಿತರೆ ಪರಿಶೀಲನೆಗಳನ್ನು ನಡೆಸಲಾಯಿತು.
ಸರ್ಕಾರ ಈಗಾಗಲೇ ನಿಗದಿಪಡಿಸಿರುವ ಮದುವೆ ಕಾರ್ಯಗಳಲ್ಲಿ ಸುಮಾರು ೫೦ ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲದೆ ಮದುವೆ ಕಾರ್ಯಗಳಿಗೂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರು ಮದುವೆ ಕಾರ್ಯಗಳಿಗೆ ಅನುಮತಿ ನೀಡುವ ಅಧಿಕಾರ ಹೊಂದಿದ್ದಾರೆ.



ಭದ್ರಾವತಿ ನಗರದ ವಿವಿಧೆಡೆ ಕಲ್ಯಾಣಮಂಟಪಗಳಲ್ಲಿ ಈಗಾಗಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಲ್ಲಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಸರಿಯಾಗಿ ಕಟ್ಟುನಿಟ್ಟಿನಿಂದ ಪಾಲಿಸುವಂತೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಮದುವೆ ಆಯೋಜಕರು ಹಾಗು ಕಲ್ಯಾಣ ಮಂಟಪಗಳ ಮಾಲೀಕರಿಗೆ ಸೂಚಿಸಿತು.

ಜನತಾ ಕರ್ಪ್ಯೂ ಮೊದಲ ದಿನ ಬಹುತೇಕ ಯಶಸ್ವಿ

ಭದ್ರಾವತಿಯಲ್ಲಿ ಬುಧವಾರ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದು.
     ಭದ್ರಾವತಿ, ಏ. ೨೮: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಪ್ಯೂ ಬುಧವಾರ ಮೊದಲ ದಿನ ಬಹುತೇಕ ಯಶಸ್ವಿಯಾಗಿದ್ದು, ಸಾರ್ವಜನಿಕರು, ವ್ಯಾಪಸ್ಥರು ಪೂರಕವಾಗಿ ಸ್ಪಂದನೆ ವ್ಯಕ್ತಪಡಿಸಿದರು
    ಮಂಗಳವಾರ ನಗರಸಭೆ ಚುನಾವಣೆ ಮುಗಿದ ತಕ್ಷಣ ಪೊಲೀಸರು ನಗರದೆಲ್ಲೆಡೆ ಕರ್ಪ್ಯೂ ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪೂರ್ವ ಸಿದ್ದತೆಗಳನ್ನು ಕೈಗೊಂಡಿದ್ದರು. ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಬ್ಯಾರಿಗೇಡ್‌ಗಳನ್ನು ಅಳವಡಿಸುವ ಜೊತೆಗೆ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಕೆಲವೆಡೆ ಪೊಲೀಸರು ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸುವ ಜೊತೆಗೆ ಅನ್ಯವಶ್ಯಕವಾಗಿ ತಿರುಗಾಡುವವರಿಗೆ ಎಚ್ಚರಿಕೆ ನೀಡಿದರು.
     ಬೆಳಿಗ್ಗೆ ೬ ರಿಂದ ೧೦ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಜನರು ಸ್ವಲ್ಪಮಟ್ಟಿಗೆ ನಿರಾಳವಾಗಿದ್ದು, ಸರ್ಕಾರಿ ಹಾಗು ಖಾಸಗಿ ಬಸ್‌ಗಳು ಮತ್ತು ಶಿವಮೊಗ್ಗ-ಭದ್ರಾವತಿ ನಡುವೆ ಸಂಚರಿಸುವ ಮ್ಯಾಕ್ಸಿಕ್ಯಾಬ್‌ಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದಾಗಿ ತುರ್ತು ಅಗತ್ಯವಿರುವ ಕೆಲವರು ತಮ್ಮ ಸ್ವಂತ ವಾಹನಗಳಲ್ಲಿ ಶಿವಮೊಗ್ಗ, ತರೀಕೆರೆ, ಚನ್ನಗಿರಿ ಸೇರಿದಂತೆ ಇನ್ನಿತರ ಭಾಗಗಳಿಗೆ ಸಂಚರಿಸುವಂತಾಯಿತು. ಉಳಿದಂತೆ ಕೆಲವೆಡೆ ಆಟೋಗಳ ಸೇವೆ ಲಭ್ಯವಿರುವುದು ಕಂಡು ಬಂದಿತು. ಸರ್ಕಾರಿ ಕಛೇರಿಗಳು, ಬ್ಯಾಂಕ್‌ಗಳು, ಎಂದಿನಂತೆ ತೆರೆದಿದ್ದವು. ಆದರೆ ಬಹುತೇಕ ಕಛೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಕಂಡು ಬಂದಿತು. ಬ್ಯಾಂಕ್‌ಗಳಲ್ಲಿ ತುರ್ತು ಅಗತ್ಯವಿರುವವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು.
     ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಯಾವುದೇ ವಾಹನಗಳು ಬರದಂತೆ ಎರಡು ಕಡೆ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಈ ನಡುವೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಬೆಳಿಗ್ಗೆ ನಗರಕ್ಕೆ ಅಗಮಿಸಿ ಪರಿಶೀಲನೆ ನಡೆಸಿದರು.  ಸ್ಥಳೀಯ ಪೊಲೀಸರಿಗೆ ಅನಾವಶ್ಯಕವಾಗಿ ತಿರುಗಾಡುವವರ ಹಾಗು ಸರ್ಕಾರದ ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.  


ಭದ್ರಾವತಿಯಲ್ಲಿ ಬುಧವಾರ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಪೊಲೀಸರು ವಾಹನಗಳನ್ನು ತಡೆದು ವಿಚಾರಣೆ ನಡೆಸಿ ಸಂಚರಿಸಲು ಅವಕಾಶ ನೀಡುತ್ತಿರುವುದು.

ಕೋವಿಡ್-೧೯ ಸೋಂಕಿತರಿಗೆ ಇಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-೧೯ರ ಹಿನ್ನಲೆಯಲ್ಲಿ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು.
   ಭದ್ರಾವತಿ, ಏ. ೨೮: ಕೋವಿಡ್-೧೯ ಸೋಂಕಿತರಿಗೆ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿಯೇ ಸೂಕ್ತ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.
   ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್-೧೯ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಅವರು ಬುಧವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತುರ್ತು ಸಭೆಯ ನೇತೃತ್ವ ವಹಿಸಿ ಮಾತನಾಡಿದರು.  
    ಕೋವಿಡ್-೧೯ ಪುನಃ ಕಾಣಿಸಿಕೊಳ್ಳುವುದಿಲ್ಲ ಎಂಬ ಜನರಲ್ಲಿನ ಮನೋಭಾವನೆ ಹಾಗು ಸರ್ಕಾರದ ನಿರ್ಲಕ್ಷ್ಯತನದಿಂದಾಗಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ. ಪ್ರಸ್ತುತ ಇನ್ನಾದರೂ ಎಚ್ಚೆತ್ತುಕೊಂಡು ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಸರ್ಕಾರ ಕೇವಲ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-೧೯ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವುದಾಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಸೌಲರ್ಭ್ಯಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸೋಂಕಿತರನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ. ಆದರೆ ಅಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ಅವಕಾಶ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಪ್ರಸ್ತುತ ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆ ಸಂಖ್ಯೆಯನ್ನು ಹೆಚ್ಚಿಸಿಕೊಂಡು ವೆಂಟಿಲೇಟರ್ ಹಾಗು ಆಕ್ಸಿಜನ್ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕೆಂದರು.
    ಕೋವಿಡ್-೧೯ ನಿಯಂತ್ರಣಕ್ಕೆ ತಾಲೂಕು ಆಡಳಿತ, ನಗರಸಭೆ ಹಾಗು ಆರೋಗ್ಯ ಇಲಾಖೆ ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ಕೋವಿಡ್-೧೯ ಸೋಂಕಿತರ ತಪಾಸಣೆ ನಡೆಸಿ ಸೋಂಕು ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ೧೧ ಕೋವಿಡ್-೧೯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ೧೬ ವೆಂಟಿಲೇಟರ್ ಮತ್ತು ಆಕ್ಸಿಜನ್ ಇದ್ದು, ಪ್ರಸ್ತುತ ಯಾವುದೇ ಕೊರತೆ ಕಂಡು ಬಂದಿಲ್ಲ  ಎಂದು ಮಾಹಿತಿ ನೀಡಿದರು.
    ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್ ಹಾಗು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕೊವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಉಪಸ್ಥಿತರಿದ್ದರು. ನಗರ ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.