ಭದ್ರಾವತಿಯಲ್ಲಿ ಬುಧವಾರ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದು.
ಭದ್ರಾವತಿ, ಏ. ೨೮: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಪ್ಯೂ ಬುಧವಾರ ಮೊದಲ ದಿನ ಬಹುತೇಕ ಯಶಸ್ವಿಯಾಗಿದ್ದು, ಸಾರ್ವಜನಿಕರು, ವ್ಯಾಪಸ್ಥರು ಪೂರಕವಾಗಿ ಸ್ಪಂದನೆ ವ್ಯಕ್ತಪಡಿಸಿದರು
ಮಂಗಳವಾರ ನಗರಸಭೆ ಚುನಾವಣೆ ಮುಗಿದ ತಕ್ಷಣ ಪೊಲೀಸರು ನಗರದೆಲ್ಲೆಡೆ ಕರ್ಪ್ಯೂ ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪೂರ್ವ ಸಿದ್ದತೆಗಳನ್ನು ಕೈಗೊಂಡಿದ್ದರು. ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಬ್ಯಾರಿಗೇಡ್‌ಗಳನ್ನು ಅಳವಡಿಸುವ ಜೊತೆಗೆ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಕೆಲವೆಡೆ ಪೊಲೀಸರು ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸುವ ಜೊತೆಗೆ ಅನ್ಯವಶ್ಯಕವಾಗಿ ತಿರುಗಾಡುವವರಿಗೆ ಎಚ್ಚರಿಕೆ ನೀಡಿದರು.
ಬೆಳಿಗ್ಗೆ ೬ ರಿಂದ ೧೦ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಜನರು ಸ್ವಲ್ಪಮಟ್ಟಿಗೆ ನಿರಾಳವಾಗಿದ್ದು, ಸರ್ಕಾರಿ ಹಾಗು ಖಾಸಗಿ ಬಸ್‌ಗಳು ಮತ್ತು ಶಿವಮೊಗ್ಗ-ಭದ್ರಾವತಿ ನಡುವೆ ಸಂಚರಿಸುವ ಮ್ಯಾಕ್ಸಿಕ್ಯಾಬ್‌ಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದಾಗಿ ತುರ್ತು ಅಗತ್ಯವಿರುವ ಕೆಲವರು ತಮ್ಮ ಸ್ವಂತ ವಾಹನಗಳಲ್ಲಿ ಶಿವಮೊಗ್ಗ, ತರೀಕೆರೆ, ಚನ್ನಗಿರಿ ಸೇರಿದಂತೆ ಇನ್ನಿತರ ಭಾಗಗಳಿಗೆ ಸಂಚರಿಸುವಂತಾಯಿತು. ಉಳಿದಂತೆ ಕೆಲವೆಡೆ ಆಟೋಗಳ ಸೇವೆ ಲಭ್ಯವಿರುವುದು ಕಂಡು ಬಂದಿತು. ಸರ್ಕಾರಿ ಕಛೇರಿಗಳು, ಬ್ಯಾಂಕ್‌ಗಳು, ಎಂದಿನಂತೆ ತೆರೆದಿದ್ದವು. ಆದರೆ ಬಹುತೇಕ ಕಛೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಕಂಡು ಬಂದಿತು. ಬ್ಯಾಂಕ್‌ಗಳಲ್ಲಿ ತುರ್ತು ಅಗತ್ಯವಿರುವವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಯಾವುದೇ ವಾಹನಗಳು ಬರದಂತೆ ಎರಡು ಕಡೆ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಈ ನಡುವೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಬೆಳಿಗ್ಗೆ ನಗರಕ್ಕೆ ಅಗಮಿಸಿ ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸರಿಗೆ ಅನಾವಶ್ಯಕವಾಗಿ ತಿರುಗಾಡುವವರ ಹಾಗು ಸರ್ಕಾರದ ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಭದ್ರಾವತಿಯಲ್ಲಿ ಬುಧವಾರ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಪೊಲೀಸರು ವಾಹನಗಳನ್ನು ತಡೆದು ವಿಚಾರಣೆ ನಡೆಸಿ ಸಂಚರಿಸಲು ಅವಕಾಶ ನೀಡುತ್ತಿರುವುದು.
No comments:
Post a Comment