Sunday, June 15, 2025

ಮನೆಯ ಮೇಲ್ಛಾವಣಿ ಹಂಚು ತೆಗೆದು ಕಳ್ಳತನ

    ಭದ್ರಾವತಿ: ತಾಲೂಕಿನ ಸುಣ್ಣದಹಳ್ಳಿ ಮನೆಯೊಂದರ ಮೇಲ್ಛಾವಣಿ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ ನಗದು, ಚಿನ್ನಾಭರಣ ಕಳವು ಮಾಡಿರುವ ಘಟನೆ ಕಳೆದ ೩ ದಿನಗಳ ಹಿಂದೆ ನಡೆದಿದೆ. 
    ನಾಗರಾಜ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯವರು ಜೂ.೧೩ರ ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ಮನೆಗೆ ಬೀಗ ಹಾಕಿ ತುಮಕೂರಿಗೆ ಹೋಗಿದ್ದು, ಪುನಃ ಹಿಂದಿರುಗಿ ಸಂಜೆ ೬.೩೦ರ ಸಮಯದಲ್ಲಿ ಮನೆಗೆ ಬಂದು ನೋಡಿದಾಗ ಕಳ್ಳತನ ಮಾಡಿರುವುದು ಕಂಡು ಬಂದಿದೆ. 
    ಬೀರುವಿನಲ್ಲಿದ್ದ ಸುಮಾರು ೬೫ ಸಾವಿರ ರು. ಮೌಲ್ಯದ ಚಿನ್ನಾಭರಣ ಹಾಗು ೩ ಲಕ್ಷ ರು. ನಗದು ಹಣ ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಓಸಿ ಮಟ್ಕಾ ಜೂಜಾಟ ಎರಡು ಪ್ರತ್ಯೇಕ ಪ್ರಕರಣಗಳು ದಾಖಲು

    ಭದ್ರಾವತಿ : ನ್ಯಾಯಾಲಯದ ಆದೇಶದ ಮೇರೆಗೆ ಓಸಿ ಮಟ್ಕಾ ಜೂಜಾಟ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
    ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಹಣಮಂತ ಅಮಾತಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಕಾಗದನಗರದ ೧೦ನೇ ವಾರ್ಡ್ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಪರಿಶೀಲನೆ ನಡೆಸಿದಾಗ ಯಾರೋ ಒಬ್ಬ ವ್ಯಕ್ತಿ ಓಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಆತನನ್ನು ವಶಕ್ಕೆ ಪಡೆದು ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಮತ್ತೊಂದು ಪ್ರಕರಣದಲ್ಲಿ ಹಳೇನಗರ ಪೊಲೀಸ್ ಠಾಣೆ ಸಿಬ್ಬಂಧಿ ಉದಯ್ ಕುಮಾರ್ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಭೂತನಗುಡಿ ೨ನೇ ಕ್ರಾಸ್ ಹತ್ತಿರದ ಆಸ್ಪತ್ರೆ ಪಕ್ಕದಲ್ಲಿ ಪರಿಶೀಲನೆ ನಡೆಸಿದಾಗ ಯಾರೋ ಒಬ್ಬ ವ್ಯಕ್ತಿ ಓಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಆತನನ್ನು ವಶಕ್ಕೆ ಪಡೆದು ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ತಂದೆ ಎಂದರೆ ಆದರ್ಶ, ಆಪ್ತರಕ್ಷಕ, ಮಾರ್ಗದರ್ಶಕ : ಫಾದರ್ ಸ್ಟೀವನ್ ಡೇಸಾ

ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ ತಂದೆಯಂದಿರ ದಿನ ಆಚರಿಸಲಾಯಿತು. 
    ಭದ್ರಾವತಿ : ಕುಟುಂಬದಲ್ಲಿ ಮಕ್ಕಳಿಗೆ ತಂದೆಯೇ ನಾಯಕ, ಶಕ್ತಿ, ಆಸರೆ, ಆಧಾರ ಸ್ತಂಭ, ಕಷ್ಟಗಳನ್ನು ನಿವಾರಿಸುವ ಪರಿಪಾಲಕ ಅವರನ್ನು ಗೌರವಿಸುವುದು ಮಕ್ಕಳ ಆದ್ಯ ಕರ್ತವ್ಯ ಎಂದು ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರು ಫಾದರ್ ಸ್ಟೀವನ್ ಡೇಸಾ ಹೇಳಿದರು. 
    ಅವರು ಭಾನುವಾರ ಧರ್ಮ ಕೇಂದ್ರದ ವತಿಯಿಂದ ಶ್ರೀಸಾಮಾನ್ಯ ಆಯೋಗದ ನಿರ್ದೇಶಕಿ ಸಿಸ್ಟರ್ ಶೋಭನ ನೇತೃತ್ವದಲ್ಲಿ ನಡೆದ ತಂದೆಯಂದಿರ ದಿನಾಚರಣೆ ಅಂಗವಾಗಿ ಮಾತನಾಡಿದರು. 
    ತಂದೆಯಂದಿರು ಕುಟುಂಬದ ಬೆನ್ನೆಲುಬು, ಮಾರ್ಗದರ್ಶಕರು ಮತ್ತು ಪ್ರೇರಣೆ ನೀಡುವ ವ್ಯಕ್ತಿಯಾಗಿದ್ದಾರೆ. ಕುಟುಂಬಕ್ಕಾಗಿ ಹಗಲಿರುಳು ದುಡಿದು, ಅನೇಕ ತ್ಯಾಗಗಳನ್ನು ಮಾಡುವುದರೊಂದಿಗೆ ಕುಟುಂಬವನ್ನು ಆರ್ಥಿಕವಾಗಿ, ಸದೃಢವನ್ನಾಗಿ ಮಾಡುವಲ್ಲಿ ಶ್ರಮಿಸುತ್ತಾರೆ. ಅವರಿಗಾಗಿ ಕುಟುಂಬದ ಸದಸ್ಯರು ದೇವರಲ್ಲಿ ಪ್ರತಿದಿನ ಪ್ರಾರ್ಥಿಸುವುದರೊಂದಿಗೆ, ಪ್ರೀತಿಸಬೇಕು ಎಂದರು. 
    ನಂತರ ಧರ್ಮ ಕೇಂದ್ರದಲ್ಲಿರುವ ಎಲ್ಲಾ ತಂದೆಯಂದಿರಿಗೆ ವಿಶೇಷವಾಗಿ ಪ್ರಾರ್ಥಿಸಿ, ತೈಲಾಭಿಷೇಕ ನೆರವೇರಿಸಿ, ಸಿಹಿಯೊಂದಿಗೆ ಉಡುಗೊರೆ ನೀಡಲಾಯಿತು. ಸಿಸ್ಟರ್ ತೆರೇಸಾ, ಆಯೋಗದ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಪತ್ರಕರ್ತ ಕಣ್ಣಪ್ಪ ದಂಪತಿ ೫೦ನೇ ವಿವಾಹ ವಾರ್ಷಿಕೋತ್ಸವ

ಭದ್ರಾವತಿ ನಗರದ ಹಿರಿಯ ಪತ್ರಕರ್ತ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ತಮ್ಮ ೫೦ನೇ ವರ್ಷದ ವಿವಾಹ ವಾರ್ಷಿಕೋತ್ಸವ ಭಾನುವಾರ ಪತ್ನಿ ಶಾಂತ ಅವರೊಂದಿಗೆ ತಾಲೂಕಿನ ತಮ್ಮಡಿಹಳ್ಳಿ ಶ್ರೀಗಂಧ ಪ್ರಕೃತಿಧಾಮದಲ್ಲಿ ಆಚರಿಸಿಕೊಂಡರು. 
    ಭದ್ರಾವತಿ : ನಗರದ ಹಿರಿಯ ಪತ್ರಕರ್ತ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ತಮ್ಮ ೫೦ನೇ ವರ್ಷದ ವಿವಾಹ ವಾರ್ಷಿಕೋತ್ಸವ ಭಾನುವಾರ ಪತ್ನಿ ಶಾಂತ ಅವರೊಂದಿಗೆ ತಾಲೂಕಿನ ತಮ್ಮಡಿಹಳ್ಳಿ ಶ್ರೀಗಂಧ ಪ್ರಕೃತಿಧಾಮದಲ್ಲಿ ಆಚರಿಸಿಕೊಂಡರು. 
    ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಸಹೋದರರು ಸೇರಿದಂತೆ ಬಂಧು-ಬಳಗದವರೊಂದಿಗೆ ವಿವಾಹ ವಾರ್ಷಿಕೋತ್ಸವ ವಿಶೇಷವಾಗಿ ಆಚರಿಸಿಕೊಳ್ಳಲಾಯಿತು. ಕಣ್ಣಪ್ಪ ದಂಪತಿಗೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು, ವಿಧಾನಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೊದಲಿಯಾರ್ ಹಾಗು ತಮಿಳು ಸಂಘದ ಜಿಲ್ಲಾ ಹಾಗು ತಾಲೂಕು ಸಂಘ, ಲಾರಿ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು ಪಾಲ್ಗೊಂಡು ಸಂಭ್ರಮ ಹಂಚಿಸಿಕೊಂಡರು. 

ಜಯಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷರಾಗಿ ಎಂ. ಮುಕುಂದನ್

ಎಂ. ಮುಕುಂದನ್ 
ಭದ್ರಾವತಿ: ನಗರದ ನ್ಯೂಕಾಲೋನಿ ನಿವಾಸಿ ಎಂ. ಮುಕುಂದನ್ ಅವರನ್ನು ಜಯಕರ್ನಾಟಕ ಸಂಘಟನೆ ಜಿಲ್ಲಾ ಸಮಿತಿಗೆ ೨ನೇ ಬಾರಿಗೆ ಕಾರ್ಯಾಧ್ಯಕ್ಷರಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. 
    `ಕಟ್ಟೋಣ ನಾವು ಹೊಸ ನಾಡೊಂದನ್ನು' ಎಂಬ ಶೀರ್ಷಿಕೆಗೆ ಬದ್ಧರಾಗಿ, ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ನಾಡಿನ ನೆಲ-ಜಲ, ಪರಿಸರ ಸಾಮಾಜಿಕ ಕಳಕಳಿಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಸಂರಕ್ಷಣೆಯ ಸಮಾಜಮುಖಿ ಕೆಲಸ-ಕಾರ್ಯಗಳನ್ನು ನಿರ್ವಹಿಸಲು ತಮ್ಮನ್ನು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಿ.ಎ ಸುರೇಶ್‌ಶೆಟ್ಟಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. 
    ಮುಕುಂದನ್‌ರವರ ನೇಮಕಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದು, ಜಯಕರ್ನಾಟಕ ಸಂಘಟನೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಲಿ ಎಂದು ಆಶಿಸಿದ್ದಾರೆ.