ಗುರುವಾರ, ಜೂನ್ 18, 2020

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ

ಸರ್ಕಾರಿ ಶಾಲೆಗಳ ಆರಂಭಕ್ಕೂ ಮೊದಲು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರ ಸಂಘದ ವತಿಯಿಂದ ಗುರುವಾರ ಭದ್ರಾವತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯರಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜೂ. ೧೮: ಸರ್ಕಾರಿ ಶಾಲೆಗಳ ಆರಂಭಕ್ಕೂ ಮೊದಲು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರ ಸಂಘದ ವತಿಯಿಂದ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯರಿಗೆ ಮನವಿ ಸಲ್ಲಿಸಲಾಯಿತು. 
ಶಾಲಾ ಪ್ರಾರಂಭದ ಮುಂಚಿತವಾಗಿ ಎಲ್ಲಾ ಶಾಲೆಗಳಿಗೆ ಸ್ಯಾನಿಟೈಸರ್, ಮಾಸ್ಕ್‌ಗಳು, ಗ್ಲೌಸ್‌ಗಳು, ಥರ್ಮಾ ಟೆಸ್ಟರ್‌ಗಳನ್ನು ವಿತರಿಸುವುದು. ೨೦೨೦-೨೧ನೇ ಸಾಲಿನ ಪಠ್ಯ ಪುಸ್ತಕ, ಸಮವಸ್ತ್ರ, ಶುಚಿ ಪ್ಯಾಡ್‌ಗಳನ್ನು ಆಯಾ ಶಾಲೆಗಳಿಗೆ ಸರಬರಾಜು ಮಾಡುವುದು. ಸಿ.ಆರ್.ಪಿಗಳು ಮಾಹಿತಿಗಳನ್ನು ಶಾಲೆಗಳಿಗೆ ಭೇಟಿ ಮಾಡಿ ಸಂಗ್ರಹಿಸುವುದು ಮತ್ತು ಸ್ಯಾಟ್ಸ್ ಮಾಹಿತಿಗಳನ್ನು ನಿರ್ವಹಿಸುವುದು. ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರುಗಳಿಗೆ ಆಯಾ ಕ್ಲಸ್ಟರ್‌ಗಳ ಸಿ.ಆರ್.ಪಿಗಳು ಶೈಕ್ಷಣಿಕ ವರ್ಷದ ಮಂಜೂರಾದ ವಿವಿಧ ಅನುದಾನಗಳ ಮಾಹಿತಿಯನ್ನು ತಿಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. 
ಸಂಘದ ಅಧ್ಯಕ್ಷ ಕೆ.ಬಿ ಜುಂಜಾನಾಯ್ಕ್, ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕಾರ್ಯಾಧ್ಯಕ್ಷ ಎಸ್. ಉಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜೂ.೧೯ರಂದು ಸಮುದಾಯ ಭವನದ ಗುದ್ದಲಿ ಪೂಜೆ

ಭದ್ರಾವತಿ, ಜೂ. ೧೮: ನಗರದ ವೀರಶೈವ ಸೇವಾ ಸಮಿತಿ ವತಿಯಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಮುದಾಯ ಭವನದ ಗುದ್ದಲಿ ಪೂಜೆ ಜೂ.೧೯ರ ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ. 
ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿದ್ದು, ಸಂಸದ ಬಿ.ವೈ ರಾಘವೇಂದ್ರ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಉಪಸ್ಥಿತರಿರುವರು. 

ವೀರಯೋಧರಿಗೆ ಕೆಜಿಎನ್ ನೌಜವಾನ್ ಕಮಿಟಿ ವತಿಯಿಂದ ಶ್ರದ್ದಾಂಜಲಿ

ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಉಂಟಾಗಿರುವ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಭದ್ರಾವತಿ ಅನ್ವರ್ ಕಾಲೋನಿ ಕೆಜಿಎನ್ ನೌಜವಾನ್ ಕಮಿಟಿ ಯುವಪಡೆ ವತಿಯಿಂದ ಗುರುವಾರ ಕೆಜಿಎನ್ ವೃತ್ತದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು. 
ಭದ್ರಾವತಿ, ಜೂ. ೧೮:  ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಉಂಟಾಗಿರುವ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ನಗರದ ಅನ್ವರ್ ಕಾಲೋನಿ ಕೆಜಿಎನ್ ನೌಜವಾನ್ ಕಮಿಟಿ ಯುವಪಡೆ ವತಿಯಿಂದ ಗುರುವಾರ ಕೆಜಿಎನ್ ವೃತ್ತದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು. 
ಕಮಿಟಿ ಯುವಪಡೆ ಮುಖಂಡರು ಮಾತನಾಡಿ, ಚೀನಾ ದೇಶದ ನಡೆಯನ್ನು ತೀವ್ರವಾಗಿ ಖಂಡಿಸಿದರು. ವೀರಯೋಧರ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಸಂತಾಪ ಸೂಚಿಸಿ ಮೌನಾಚರಣೆ ನಡೆಸಿದರು. 
ನಗರಸಭೆ ಪೌರಾಯುಕ್ತ ಮನೋಹರ್, ಪ್ರಗತಿಪರ ಸಂಘಟನೆಗಳ ಮುಖಂಡ ಮುನಿರ್ ಅಹಮದ್,  ಕಮಿಟಿ ಯುವಪಡೆ ಅಧ್ಯಕ್ಷ ಅಸಾದುಲ್ಲಾ ಖಾನ್, ಉಪಾಧ್ಯಕ್ಷ ಮಹಮದ್ ಶಾಹಿದ್, ಕಾರ್ಯದರ್ಶಿ ಮಹಮ್ಮದ್ ಇಮ್ರಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನದೀಮ್ ಸ್ವಾಗತಿಸಿದರು. ಅಬ್ದುಲ್ ಖದೀರ್ ನಿರೂಪಿಸಿದರು. 

ಬೆಲೆ ಏರಿಕೆಯಿಂದ ನೆಮ್ಮದಿ ಕಳೆದುಕೊಂಡ ಜನಸಾಮಾನ್ಯರು

ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಟಿ. ಚಂದ್ರೇಗೌಡ ಆರೋಪ

ಭದ್ರಾವತಿಯಲ್ಲಿ ಗುರುವಾರ ಯುವ ಕಾಂಗ್ರೆಸ್ ಘಟಕದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿ ತಹಸೀಲ್ದಾಡ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜೂ. ೧೮: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವ ವಾತಾವರಣ ರೂಪಿಸಿಕೊಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನೆಮ್ಮದಿ ಕಳೆದುಕೊಳ್ಳುವಂತಾಗಿದೆ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಆರೋಪಿಸಿದರು. 
ಅವರು ಗುರುವಾರ ಯುವ ಕಾಂಗ್ರೆಸ್ ಘಟಕದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. 
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುವ ಜೊತೆಗೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಪ್ರಸ್ತುತ ದೇಶದಲ್ಲಿ ಜನಸಾಮಾನ್ಯರಿಗೆ ಮಾರಕವಾಗಿರುವ ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಬಂಡವಾಳಶಾಹಿಗಳು, ಶ್ರೀಮಂತರ ಪರವಾದ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದು, ಶ್ರೀಸಾಮಾನ್ಯರು ಬದುಕುವುದೇ ಕಷ್ಟಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ತಕ್ಷಣ ಪ್ರಧಾನಮಂತ್ರಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
ಯುವ ಘಟಕದ ಅಧ್ಯಕ್ಷ ಜಿ. ವಿನೋದ್‌ಕುಮಾರ್ ನೇತೃತ್ವ ವಹಿಸಿದ್ದರು. ಮುಖಂಡರಾದ ಪ್ರಾನ್ಸಿಸ್, ರಾಘವೇಂದ್ರ ಸರಾಟೆ, ಯುವ ಘಟಕದ ನಗರ ಅಧ್ಯಕ್ಷ ಕೇಶವ್, ಜಿಲ್ಲಾ ಕಾರ್ಯದರ್ಶಿಗಳಾದ ಸಚಿನ್ ಸಿಂಧ್ಯಾ, ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕಲ್ಪನಾಹಳ್ಳಿ, ಗಂಗಾಧರ್, ವಿನ್‌ಸ್ಟನ್,ನಾಗೇಶ್, ಕಿರಣ್, ಪ್ರವೀಣ್, ಭರತ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇನ್ನಿತರರು ಭಾಗವಹಿಸಿದ್ದರು. ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 

ವಿವಿಧ ಸಂಘಟನೆಗಳಿಗೆ ಹುತಾತ್ಮ ವೀರ ಯೋಧರಿಗೆ ಪುಷ್ಪ ನಮನ, ಸಂತಾಪ

ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಉಂಟಾಗಿರುವ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಭದ್ರಾವತಿ ರಂಗಪ್ಪ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಗುರುವಾರ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು. 
ಭದ್ರಾವತಿ, ಜೂ. ೧೮: ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಉಂಟಾಗಿರುವ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ನಗರದ ರಂಗಪ್ಪ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಗುರುವಾರ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು. 
ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಚೀನಾ ನಡೆಯನ್ನು ತೀವ್ರವಾಗಿ ಖಂಡಿಸಿ ಹುತಾತ್ಮ ವೀರ ಸೈನಿಕರ ಹೋರಾಟವನ್ನು ಶ್ಲಾಘಿಸಿದರು. ಭವಿಷ್ಯದಲ್ಲಿ ದೇಶ ಮತ್ತಷ್ಟು ಬಲಿಷ್ಠಗೊಳ್ಳುವ ಜೊತೆಗೆ ನಮ್ಮ ಸೈನಿಕರು ತಕ್ಕ ಉತ್ತರ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಯಾರು ಸಹ ಧೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದರು.
ಆರಂಭದಲ್ಲಿ ಹುತಾತ್ಮ ವೀರ ಯೋಧರಿಗೆ ಪುಷ್ಮ ನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಕೊನೆಯಲ್ಲಿ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಶಿವಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಕೊಟ್ರೇಶಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಆಶಾ ಶ್ರೀಧರ್, ಸದಸ್ಯರಾದ ತುಂಗಮ್ಮ, ಕೆ. ಮಂಜುನಾಥ್, ಬಿಜೆಪಿ ಪಕ್ಷದ ಮುಖಂಡರಾದ ವಿ. ಕದಿರೇಶ್, ಮಂಗೋಟೆ ರುದ್ರೇಶ್, ಎನ್. ವಿಶ್ವನಾಥರಾವ್, ಹೇಮಾವತಿ ವಿಶ್ವನಾಥ್, ರಾಮನಾಥಬರ್ಗೆ, ವಿಜಯ್, ನಕುಲ್‌ರೇವಣಕರ್, ಧನುಷ್ ಬೋಸ್ಲೆ, ಆನಂದ ಸಾಮಾಜಿಕ ಸೇವಾ ಸಂಸ್ಥೆಯ ಜಿ. ಆನಂದಕುಮಾರ್, ಸುನಿಲ್‌ಗಾಯಕ್‌ವಾಡ್, ವಿಶ್ವ ಹಿಂದೂಪರಿಷತ್ ಪ್ರಮುಖರಾದ ಹಾ. ರಾಮಪ್ಪ, ತಾಲೂಕು ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

‘ಮಾಸ್ಕ್ ದಿನ’ : ಕೊರೋನಾ ನಿರ್ಮೂಲನೆಗೆ ಸಹಕರಿಸಲು ಶಾಸಕ ಸಂಗಮೇಶ್ವರ್ ಕರೆ

ಭದ್ರಾವತಿಯಲ್ಲಿ ಗುರುವಾರ ನಗರಸಭೆ ವತಿಯಿಂದ ರಂಗಪ್ಪ ವೃತ್ತದಲ್ಲಿ ‘ಮಾಸ್ಕ್ ದಿನ’ದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. 
ಭದ್ರಾವತಿ, ಜೂ. ೧೮: ಮಹಾಮಾರಿ ಕೊರೋನಾ ವೈರಸ್ ನಿರ್ಮೂಲನೆಗೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು. 
ಅವರು ಗುರುವಾರ ನಗರಸಭೆ ವತಿಯಿಂದ ರಂಗಪ್ಪ ವೃತ್ತದಲ್ಲಿ ‘ಮಾಸ್ಕ್ ದಿನ’ದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 
ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಮಾಸ್ಕ್ ಸಹಕಾರಿಯಾಗಿದ್ದು, ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಬಳಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದರು. 
ನಗರಸಭೆ ಪೌರಾಯುಕ್ತ ಮನೋಹರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಹಸೀಲ್ದಾರ್ ಶಿವಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಕೊಟ್ರೇಶಪ್ಪ, ನಗರಸಭೆ ಪರಿಸರ ಇಂಜಿನಿಯರ್ ರುದ್ರೇಗೌಡ, ಪೊಲೀಸ್ ನಗರ ವೃತ್ತ ನಿರೀಕ್ಷಕ ನಂಜಪ್ಪ, ಕಂದಾಯಾಧಿಕಾರಿ ಪ್ರಶಾಂತಿ, ಶಿರಸ್ತೆದಾರ್ ಮಂಜಾನಾಯ್ಕ ಸೇರಿದಂತೆ ವಿವಿಧ ಇಲಾಖೆಗಳು ಅಧಿಕಾರಿಗಳು, ಮಹಿಳಾ ಒಕ್ಕೂಟಗಳ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.