Friday, March 12, 2021

ಶಾಸಕರ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್

ಜನಾಕ್ರೋಶ ಬೃಹತ್ ಪ್ರತಿಭಟನೆ ಯಶಸ್ವಿಗೆ ಕರೆ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸಕ್ಕೆ ಪಕ್ಷದ ಜಿಲ್ಲಾ ಮುಖಂಡರೊಂದಿಗೆ ಖುದ್ದಾಗಿ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು
     ಭದ್ರಾವತಿ, ಮಾ. ೧೨: ನಗರದಲ್ಲಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾವಳಿಯ ಮುಕ್ತಾಯದ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರ ನಡುವೆ ನಡೆದಿರುವ ಗಲಾಟೆಗೆ ಸಂಬಂಧಿಸಿದಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ದಾಖಲಿಸಿರುವ ಪ್ರಕರಣಗಳನ್ನು ಖಂಡಿಸಿ ಹಾಗು ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಮಾ.೧೩ರಂದು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿರುವ ಜನಾಕ್ರೋಶ ಬೃಹತ್ ಪ್ರತಿಭಟನೆ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
      ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹೆಚ್ಚಿನ ಬೆಂಬಲ ನೀಡಿದ್ದು, ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲೆ ಉಳಿದುಕೊಂಡಿರುವ ದೃವನಾರಾಯಣ್ ಎಲ್ಲಾ ಸಿದ್ದತೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸಕ್ಕೆ ಪಕ್ಷದ ಜಿಲ್ಲಾ ಮುಖಂಡರೊಂದಿಗೆ ಖುದ್ದಾಗಿ ಭೇಟಿ ನೀಡಿ ಗಲಾಟೆಗೆ ಸಂಬಂಧಿಸಿದಂತೆ ಇದುವರೆಗೂ ನಡೆದಿರುವ ಬೆಳವಣಿಗೆಗಳು ಹಾಗು ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಶಾಸಕರು ಹಾಗು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದ ದೃವನಾರಾಯಣ್ ನಂತರ ಪೂರ್ವಭಾವಿ ಸಭೆ ನಡೆಸುವ ಮೂಲಕ ಜನಾಕ್ರೋಶ ಬೃಹತ್ ಪ್ರತಿಭಟನೆ ಯಶಸ್ವಿಗೊಳಿಸಲು ಮುಂದಾಗುವಂತೆ ಕರೆ ನೀಡಿದರು.
     ಪಕ್ಷದ ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ನಗರಸಭೆ ಅಧ್ಯಕ್ಷ ಟಿ. ಚಂದ್ರೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಕ್ರೀಡಾ ಮನೋಭಾವನೆಯೊಂದಿಗೆ ಕಬಡ್ಡಿ ಪಂದ್ಯಾವಳಿ ಆಯೋಜನೆ : ಯಾವುದೇ ರಾಜಕೀಯವಿಲ್ಲ

ಪತ್ರಿಕಾ ಹೇಳಿಕೆಯಲ್ಲಿ ಆಯೋಜಕರು, ಮಾಲೀಕರು ಸ್ಪಷ್ಟನೆ

ಭದ್ರಾವತಿ, ಮಾ. ೧೨: ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬಿವೈಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಫೆ.೨೭ ಮತ್ತು ೨೮ರಂದು ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿಗೆ ಸಂಬಂಧಿಸಿದಂತೆ ಇದೀಗ ಕ್ಲಬ್ ಮೌನ ಮುರಿದಿದ್ದು, ಯಾವುದೇ ರಾಜಕೀಯ ಪಕ್ಷದ ಪರವಾಗಿ ಪಂದ್ಯಾವಳಿ ಆಯೋಜಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.
   ಪಂದ್ಯಾವಳಿಯ ಬಹುಮಾನ ವಿತರಣೆ ಮುಕ್ತಾಯದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ನಡುವೆ ನಡೆದಿರುವ ಗಲಾಟೆ ಪ್ರಕರಣ ರಾಜ್ಯಮಟ್ಟದಲ್ಲಿ ಸುದ್ದಿಯಾಗುವ ಮೂಲಕ ಇದೀಗ ಇಡೀ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ತಿರುಗಿ ಬಿದ್ದಿದ್ದು, ಶಿವಮೊಗ್ಗದಲ್ಲಿ ಮಾ.೧೩ರ ಶನಿವಾರ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಈ ಹಂತದಲ್ಲಿ ಇದೀಗ ಕ್ಲಬ್ ಮೌನ ಮುರಿದಿದೆ.
    ವಿವಿಧ ತಂಡಗಳ ಮಾಲೀಕರು ಹಾಗು ಆಯೋಜಕರು ಈ ಕುರಿತು ಪತ್ರಿಕಾಹೇಳಿಕೆ ನೀಡಿದ್ದು, ನಗರದಲ್ಲಿ ಕಬಡ್ಡಿ ಕ್ರೀಡೆಯನ್ನು ಉತ್ತೇಜಿಸುವ ಹಾಗು ಪ್ರತಿಭಾವಂತ ಕಬಡ್ಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರೀಡಾ ಮನೋಭಾವನೆಯೊಂದಿಗೆ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಇಲ್ಲಿ ಯಾವುದೇ ರಾಜಕೀಯವಿಲ್ಲ ಪಕ್ಷಾತೀತವಾಗಿ ಎಲ್ಲರೂ ಸೇರಿ ಪಂದ್ಯಾವಳಿಯನ್ನು ನಡೆಸಲಾಗಿದೆ ಎಂದು ಮಾಲೀಕರು ಹಾಗು ಆಯೋಜಕರಾಗಿರುವ ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ವಿ. ವೆಂಕಟೆಶ್, ಉಮೇಶ್, ಆನಂದ್, ಮಣಿ ಎಎನ್‌ಎಸ್ ಮತ್ತು ಬಿ.ಎಸ್ ಜಗದೀಶ್ ತಿಳಿಸಿದ್ದಾರೆ.

ಮಾ.೧೬ರಂದು ವಿಶ್ವ ಮಹಿಳಾ ದಿನಾಚರಣೆ

ಭದ್ರಾವತಿ, ಮಾ. ೧೨: ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮಾ.೧೬ರಂದು ಬೆಳಿಗ್ಗೆ ೧೦.೩೦ಕ್ಕೆ ಅಪ್ಪರ್‌ಹುತ್ತಾ ಶ್ರೀ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
   ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಆರ್. ಅನುರಾಧ ಪಟೇಲ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಶಾರದ ಅಪ್ಪಾಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ಅದ್ದೂರಿಯಾಗಿ ಜರುಗಿದ ಮಲೆಮಹದೇಶ್ವರ ಜಾತ್ರಾ ಮಹೋತ್ಸವ

ಭದ್ರಾವತಿ ನಗರಸಭೆ ಜಿಂಕ್‌ಲೈನ್ ವ್ಯಾಪ್ತಿಯಲ್ಲಿರುವ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಯಿತು.
   ಭದ್ರಾವತಿ, ಮಾ. ೧೨: ನಗರಸಭೆ ಜಿಂಕ್‌ಲೈನ್ ವ್ಯಾಪ್ತಿಯಲ್ಲಿರುವ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
   ಪ್ರತಿ ವರ್ಷದಂತೆ ಈ ಬಾರಿ ಸಹ ಮಹಾಶಿವರಾತ್ರಿ ಆಚರಣೆಯೊಂದಿಗೆ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಗುರುವಾರ ಮತ್ತು ಶುಕ್ರವಾರ ೨ ದಿನ ಬೆಳಿಗ್ಗೆಯಿಂದಲೇ ಭಕ್ತಾಧಿಗಳು ಸುಮಾರು ಅರ್ಧ ಕಿ.ಮೀ. ವರೆಗೂ ಸರದಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು.


ಭದ್ರಾವತಿ ನಗರಸಭೆ ಜಿಂಕ್‌ಲೈನ್ ವ್ಯಾಪ್ತಿಯಲ್ಲಿರುವ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಾಮಿಯ ಉತ್ಸವ ಮೆರವಣಿಗೆ ನಡೆಯಿತು.
   ಜಾತ್ರಾ ಮಹೋತ್ಸವ ಅಂಗವಾಗಿ ಸ್ವಾಮಿಯ ಉತ್ಸವ  ಮೆರವಣಿಗೆ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.


ಭದ್ರಾವತಿ ನಗರಸಭೆ ಜಿಂಕ್‌ಲೈನ್ ವ್ಯಾಪ್ತಿಯಲ್ಲಿರುವ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
  ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿದ್ದರು. ಕೊವೀಡ್ ನಡುವೆಯೂ ಜಾತ್ರಾಮಹೋತ್ಸವ ಅದ್ದೂರಿಯಾಗಿ ನಡೆಯಿತು.


ಭದ್ರಾವತಿ ನಗರಸಭೆ ಜಿಂಕ್‌ಲೈನ್ ವ್ಯಾಪ್ತಿಯಲ್ಲಿರುವ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಸ್ವಾಮಿಯ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿರುವ ಭಕ್ತರು.
 

ಹೊಯ್ಸಳ ಕರ್ನಾಟಕ ಸಂಘದ ಕಾರ್ಯ ಚಟುವಟಿಕೆಗಳಿಗೆ ಚಾಲನೆ

ಹೊಯ್ಸಳ ಕರ್ನಾಟಕ ಸಂಘದ ಭದ್ರಾವತಿ ತಾಲೂಕು ಶಾಖೆಯ ಪುನಶ್ಚೇತನ ಕಾರ್ಯಚಟುವಟಿಕೆಗಳಿಗೆ ನ್ಯೂಟೌನ್ ಶ್ರೀ ದತ್ತಾಶ್ರಮದಲ್ಲಿ ಚಾಲನೆ ನೀಡಲಾಯಿತು.
  ಭದ್ರಾವತಿ, ಮಾ. ೧೨: ನಗರದ ಹೊಯ್ಸಳ ಕರ್ನಾಟಕ ಸಂಘದ ಪುನಶ್ಚೇತನ ಕಾರ್ಯಚಟುವಟಿಕೆಗಳಿಗೆ ನ್ಯೂಟೌನ್ ಶ್ರೀ ದತ್ತಾಶ್ರಮದಲ್ಲಿ ಚಾಲನೆ ನೀಡಲಾಯಿತು.
   ಕಾರಣಾಂತರಗಳಿಂದ ಸಂಘದ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದು, ಈ ಹಿನ್ನಲೆಯಲ್ಲಿ ಸತ್ಯನಾರಾಯಣಸ್ವಾಮಿ ಪೂಜೆಯೊಂದಿಗೆ ಪುನರ್ ಚಾಲನೆ ನೀಡಲಾಯಿತು. ಶಿವಮೊಗ್ಗ ಹೊಯ್ಸಳ ಕರ್ನಾಟಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಶಂಕರ್, ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಸಂಘದ ಅಧ್ಯಕ್ಷ ಎ.ಎನ್ ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ್ ಸ್ವಾಗತಿಸಿದರು. ಶಾರದ ವೆಂಕಟೇಶ್ ನಿರೂಪಿಸಿದರು. ಎಸ್. ಶೇಷಾದ್ರಿ ವಂದಿಸಿದರು.