Friday, October 22, 2021

ಬೀದಿ ಪಾಲಾದ ಎಂಪಿಎಂ ಕಾರ್ಮಿಕರು : ಕರ್ತವ್ಯಕ್ಕೆ ಹಾಜರಾಗದಂತೆ ಸೂಚನೆ

ಭದ್ರಾವತಿ ಎಂಪಿಎಂ ಕಾರ್ಖಾನೆ ಸಂಪೂರ್ಣವಾಗಿ ಮುಚ್ಚಲು ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಕಾರ್ಖಾನೆಯಲ್ಲಿ ಮಸ್ಟರ್ ರೋಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಶುಕ್ರವಾರದಿಂದ ಕರ್ತವ್ಯ ಹಾಜರಾಗದಂತೆ ಮುಖ್ಯ ಆಡಳಿತಾಧಿಕಾರಿ ಪತ್ರದ ಮೂಲಕ ಸೂಚಿಸಿರುವುದು.
    ಭದ್ರಾವತಿ, ಅ. ೨೨: ಪ್ರಸ್ತುತ ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಉಳಿದುಕೊಂಡಿರುವ ಕಾರ್ಮಿಕರು ಕೊನೆಗೂ ಬೀದಿ ಪಾಲಾಗಿದ್ದು, ಶುಕ್ರವಾರದಿಂದ ಕರ್ತವ್ಯಕ್ಕೆ ಹಾಜರಾಗದಂತೆ ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ಸೂಚಿಸಿದ್ದಾರೆ.  
    ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಅ.೭ರಂದು ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಕಾರ್ಖಾನೆಯಲ್ಲಿ ಕಾರ್ಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಮಸ್ಟರ್ ರೋಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಹಾಜರಾಗದಿರುವಂತೆ ಮುಖ್ಯ ಆಡಳಿತಾಧಿಕಾರಿ ಶ್ರೀನಿವಾಸ್ ಈ ಸಂಬಂಧ ಹೊರಡಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. .
    ಪ್ರಸ್ತುತ ಕಾರ್ಖಾನೆಯಲ್ಲಿ ಅಸ್ತಿತ್ವದಲ್ಲಿರುವ ಎರಡು ಕಾರ್ಮಿಕ ಸಂಘಟನೆಗಳು ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಅ.೭ರಂದು ಹೊರಡಿಸಿರುವ ಆದೇಶವನ್ನು   ನ್ಯಾಯಾಲಯದಲ್ಲಿ ಪ್ರಶ್ನಿಸಲು ಮುಂದಾಗಿವೆ. ಈ ನಡುವೆ ಕಂಪನಿ ಕಾರ್ಯದರ್ಶಿ ಈಗಾಗಲೇ ಕಾರ್ಯದರ್ಶಿಗಳ ಆದೇಶವನ್ನು ಪ್ರಶ್ನಿಸದಂತೆ ತಡೆಯಾಜ್ಞೆ ಸಹ ತಂದಿದ್ದು, ಇದೀಗ ಕಾರ್ಮಿಕರನ್ನು ಕರ್ತವ್ಯಕ್ಕೆ ಹಾಜರಾಗದಂತೆ ಸೂಚಿಸಲಾಗಿದೆ. ಸರ್ಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಕೈಗೊಳ್ಳುತ್ತಿರುವ ತರಾತುರಿ ನಿರ್ಧಾರಗಳು ಕಾರ್ಮಿಕರು ಹಾಗು ಕುಟುಂಬ ವರ್ಗದವರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಇದೀಗ ಕಾರ್ಮಿಕ ಸಂಘಟನೆಗಳಿಗೆ ಹೋರಾಟ ಮಾತ್ರ ಬಾಕಿ ಉಳಿದಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ.

ವಕೀಲರ ಸಂಘದ ಅಧ್ಯಕ್ಷರಾಗಿ ಕೆ.ಎನ್ ಶ್ರೀಹರ್ಷ


ಭದ್ರಾವತಿ ತಾಲೂಕು ವಕೀಲರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ವಕೀಲರು ಅಭಿನಂದಿಸಿದರು.
    ಭದ್ರಾವತಿ, ಅ. ೨೨: ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಕೆ.ಎನ್ ಶ್ರೀಹರ್ಷ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
    ೨ ವರ್ಷ ಅವಧಿಯ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್ ಶ್ರೀಹರ್ಷ ಹಾಗು ಬಿ.ಸಿ ಕೇಶವಮೂರ್ತಿ ಸ್ಪರ್ಧಿಸಿದ್ದು, ಈ ಪೈಕಿ ಹರ್ಷ ೯೮ ಮತಗಳನ್ನು ಹಾಗು ಕೇಶವಮೂರ್ತಿ ೮೦ ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ೧೮ ಮತಗಳ ಅಂತರದಿಂದ ಹರ್ಷ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಡಿ.ಎಂ ವಿಶ್ವನಾಥ್, ಕಾರ್ಯದರ್ಶಿಯಾಗಿ ಉದಯಕುಮಾರ್ ಮತ್ತು ಜಂಟಿ ಕಾರ್ಯದರ್ಶಿಯಾಗಿ ಮಂಜಪ್ಪ ಆಯ್ಕೆಯಾಗಿದ್ದಾರೆ.
    ಒಟ್ಟು ೧೮೫ ಸದಸ್ಯರ ಪೈಕಿ ೧೭೮ ಸದಸ್ಯರು ಮತ ಚಲಾಯಿಸಿದರು. ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಮತದಾನ ನಡೆಯಿತು. ಸೈಯದ್ ನಿಯಾಜ್, ಉಮಾಶಂಕರ್ ಮತ್ತು ಕೂಡ್ಲಿಗೆರೆ ಮಂಜುನಾಥ್ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

ಅ.೨೫ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ಅ. ೨೨: ಕುವೆಂಪು ವಿಶ್ವ ವಿದ್ಯಾನಿಲಯದ ಬಳಿ ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.೨೫ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಲಕ್ಕವಳ್ಳಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಗೋಣಿಬೀಡು, ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ, ಶಂಕರಘಟ್ಟ, ತಾವರಘಟ್ಟ, ಎಚ್.ಕೆ ಜಂಕ್ಷನ್, ಕುವೆಂಪು ವಿಶ್ವ ವಿದ್ಯಾನಿಲಯ, ರಂಗನಾಥಪುರ, ತಮ್ಮಡಿಹಳ್ಳಿ, ನಲ್ಲಿಸರ, ಮಲ್ಲಿಗೇನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಂಗಮೇಶ್ವರ್ ಮತಯಾಚನೆ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಕಳೆದ ೩-೪ ದಿನಗಳಿಂದ ಸಿಂದಗಿ, ಹಾನಗಲ್ ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆ ನಡೆಸುತ್ತಿದ್ದಾರೆ.
    ಭದ್ರಾವತಿ, ಅ. ೨೨: ಶಾಸಕ ಬಿ.ಕೆ ಸಂಗಮೇಶ್ವರ್ ಕಳೆದ ೩-೪ ದಿನಗಳಿಂದ ಸಿಂದಗಿ, ಹಾನಗಲ್ ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆ ನಡೆಸುತ್ತಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಜೊತೆಗೆ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಮತ್ತು ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಉದ್ಯಮಿ ಬಿ.ಕೆ ಜಗನ್ನಾಥ್ ಸೇರಿದಂತೆ ಇನ್ನಿತರರು ಸಹ ತೆರಳಿದ್ದು, ಪಕ್ಷದ ಪ್ರಮುಖರಾದ ಮಾಜಿ ಸಚಿವರಾದ ಎಂ.ಬಿ ಪಾಟೀಲ್, ಯ.ಟಿ ಖಾದರ್ ಸೇರಿದಂತೆ ಇನ್ನಿತರರೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.