Monday, May 15, 2023

ಕುವೆಂಪು ವಿಶ್ವವಿದ್ಯಾಲಯದಲ್ಲಿ ಏಕಾಂಗಿ ಹೋರಾಟ : ಕುಲಪತಿಗಳಿಂದ ಸ್ಪಂದನೆ

ಮೇ.೧೯ರ ಸಿಂಡಿಕೇಟ್‌ಸಭೆಯಲ್ಲಿ ಕ್ರಮ ಕೈಗೊಳ್ಳುವ ಭರವಸೆ

ಭದ್ರಾವತಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ನಿರ್ಣಯಗಳ ಮತ್ತು ಕುಲಪತಿಗಳ ಆದೇಶಗಳ ಅನುಷ್ಠಾನಕ್ಕೆ ಆಗ್ರಹಿಸಿ ಕುವೆಂಪು ವಿಶ್ವನಿದ್ಯಾನಿಲಯ ವಿಲೀನೀಕರಣಗೊಂಡ ಅಧ್ಯಾಪಕೇತರ ನೌಕರರ ವೇದಿಕೆ ವತಿಯಿಂದ ಉಪಾಧ್ಯಕ್ಷ ಎಂ.ಎಂ ಸ್ವಾಮಿ ಸೋಮವಾರ ಏಕಾಂಗಿಯಾಗಿ ಸತ್ಯಾಗ್ರಹ ನಡೆಸಿದರು. 
    ಭದ್ರಾವತಿ, ಮೇ. ೧೫ : ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ನಿರ್ಣಯಗಳ ಮತ್ತು ಕುಲಪತಿಗಳ ಆದೇಶಗಳ ಅನುಷ್ಠಾನಕ್ಕೆ ಆಗ್ರಹಿಸಿ ಕುವೆಂಪು ವಿಶ್ವನಿದ್ಯಾನಿಲಯ ವಿಲೀನೀಕರಣಗೊಂಡ ಅಧ್ಯಾಪಕೇತರ ನೌಕರರ ವೇದಿಕೆ ವತಿಯಿಂದ ಉಪಾಧ್ಯಕ್ಷ ಎಂ.ಎಂ ಸ್ವಾಮಿ ಸೋಮವಾರ ಏಕಾಂಗಿಯಾಗಿ ಸತ್ಯಾಗ್ರಹ ನಡೆಸಿದರು.
    ಎಂ.ಎಂ ಸ್ವಾಮಿ ಸತ್ಯಾಗ್ರಹ ಆರಂಭಿಸಿದ ಹಿನ್ನಲೆಯಲ್ಲಿ ತಕ್ಷಣ ಸ್ಪಂದಿಸಿದ ವಿಶ್ವವಿದ್ಯಾಲಯದ ಕುಲಪತಿಗಳು ಸಿಂಡಿಕೇಟ್ ಸದಸ್ಯರ ಮತ್ತು ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಮಾತುಕತೆ ನಡೆಸಿ ಮೇ.೧೯ರಂದು ನಡೆಯಲಿರುವ ಸಿಂಡಿಕೇಟ್ ಸಭೆಯಲ್ಲಿ ಸಿಂಡಿಕೇಟ್ ನಿರ್ಣಯ ಮತ್ತು ಕುಲಪತಿಗಳ ಆದೇಶದ ಮೇರೆಗೆ ಉಳಿದ ವಿಲೀನೀಕರಣ ನೌಕರರಿಗೂ ಸೇವಾ-ಸೌಲಭ್ಯಗಳ ವಿಸ್ತರಣೆ ಮಂಜೂರಾತಿ ಆದೇಶ ನೀಡುವ ಸಂಬಂಧ ಸಿಂಡಿಕೇಟ್ ಸಭೆಯಲ್ಲಿ ವಾಸ್ತವಾಂಶಗಳನ್ನು ಮತ್ತು ಸತ್ಯಾಂಶಗಳನ್ನು ಪ್ರಸ್ತುತ ಪಡಿಸಲು ಅವಕಾಶ ನೀಡುವುದಾಗಿ ಹಾಗು ಸೇವಾ-ಸೌಲಭ್ಯಗಳ ವಿಸ್ತರಣೆ ಮಂಜೂರಾತಿ ಆದೇಶ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಎಂ.ಎಂ ಸ್ವಾಮಿ ಸತ್ಯಾಗ್ರಹ ಹೋರಾಟ ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

ಮೇ.೧೬ರಿಂದ ದಿಂಡಿ ಮಹೋತ್ಸವ

    ಭದ್ರಾವತಿ, ಮೇ. ೧೫ : ಭಾವಸಾರ ಕ್ಷತ್ರಿಯ ಸಮಾಜ ವತಿಯಿಂದ ಭೂತನಗುಡಿ ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ೮೭ನೇ ವರ್ಷದ ದಿಂಡಿ ಮಹೋತ್ಸವ ಮೇ.೧೬ ರಿಂದ ೧೮ರವರೆಗೆ ನಡೆಯಲಿದೆ.
    ಮೇ.೧೬ರ ಮಂಗಳವಾರ ಸಂಜೆ ೫ ಗಂಟೆಯಿಂದ ಶ್ರೀ ಸಂತಸಾಮ್ರಾಟ ಜ್ಞಾನದೇವರ ವಿರಚಿತ ಶ್ರೀ ಜ್ಞಾನೇಶ್ವರಿ ಗ್ರಂಥದ ಪೋಥೀ ಸ್ಥಾಪನೆ, ಬದರಿನಾಥ್ ಉತ್ತರ್‌ಕರ್‌ರವರಿಂದ ಭಜನೆ, ಕೀರ್ತನೆ ನಡೆಯಲಿದೆ. ೧೭ರಂದು ಮುಂಜಾನೆ ೫ ಗಂಟೆಯಿಂದ ಕಾಕಡಾರತಿ ಭಜನೆ, ಆರತಿ, ಆನಂತರ ಸಂಜೆ ೫ ಗಂಟೆಯಿಂದ ಸಾಮೂಹಿಕ ನಾಮಜಪ, ೫.೩೦ ರಿಂದ ಸಾಗರದ ಮಹೇಂದ್ರನಾಥ ರಂಗದೋಳ್‌ರವರಿಂದ ಶ್ರೀ ಜ್ಞಾನೇಶ್ವರಿ ಪ್ರವಚನ, ೭ ಗಂಟೆಯಿಂದ ಡಿ.ಆರ್ ಬಸಪ್ಪಮಾಸ್ತರ್‌ರವರಿಂದ ಪಂಢರಿ ಸಂಪ್ರದಾಯದ(ಕನ್ನಡ) ಕೀರ್ತನೆ, ರಾತ್ರಿ ೧೦.೩೦ರಿಂದ ಅಖಂಡ ಜಾಗರಣೆ ನಡೆಯಲಿದೆ. ಹಿಂದೂಸ್ತಾನಿ ಗ್ರಾಯಕರು, ದೂರದರ್ಶನ ಕಲಾವಿದರಾದ ಗೋಕರ್ಣ ವಿದ್ವಾನ್ ರಾಘವೇಂದ್ರ ಭಟ್, ಶಿವಮೊಗ್ಗ ವಿದ್ವಾನ್ ನಿಶಾದ್ ಹರ್ಲಾಪುರ್ ಹಾಗು ಅರುಣ್ ಅಂಬೇಕರ್ ಮತ್ತು ಸಿದ್ದೇಶ್ ಬಡಿಗೇರ್ ತಂಡದಿಂದ ಸಂತವಾಣಿ ಕಾರ್ಯಕ್ರಮ ನಡೆಯಲಿದೆ.
    ಮೇ.೧೮ರ ಗುರುವಾರ ಮುಂಜಾನೆ ೫ ಗಂಟೆಯಿಂದ ಕಾಕಡಾರತಿ ಭಜನೆ, ಆರತಿ, ಬೆಳಿಗ್ಗೆ ೯ ಗಂಟೆಯಿಂದ ಶ್ರೀ ಪಾಂಡುರಂಗ ಶ್ರೀ ರಖುಮಾಯಿಮಾತೆಯರ ರಾಜಬೀದಿ ಉತ್ಸವ, ಆನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗದೊಂದಿಗೆ ಮಹಾಸಂತರ್ಪಣೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದಿಂಡಿ ಮಹೋತ್ಸವ ಯಶಸ್ವಿಗೊಳಿಸುವಂತೆ ಭಾವಸಾರ ಕ್ಷಿತ್ರಿಯ ಸಮಾಜ ಕೋರಿದೆ.

ಶ್ರೀಮತಿ ಲಕ್ಷ್ಮಮ್ಮನವರ ೩ನೇ ವರ್ಷದ ಪುಣ್ಯಸ್ಮರಣೆ


 

ಕ್ಷೇತ್ರದ ಇತಿಹಾಸದಲ್ಲಿಯೇ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು : ಪಕ್ಷಕ್ಕೆ ನೆಲೆ ಇದೆ

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಮಾತನಾಡಿದರು.
    ಭದ್ರಾವತಿ, ಮೇ. ೧೫: ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಭವಿಷ್ಯದಲ್ಲಿ ನೆಲೆ ಇದೆ ಎಂಬುದನ್ನು ಈ ಚುನಾವಣೆ ಮೂಲಕ ತೋರಿಸಿಕೊಡಲಾಗಿದೆ. ಅತಿ ಹೆಚ್ಚು ಮತಗಳನ್ನು ನೀಡಿರುವ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಹೇಳಿದರು.
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸಿತ್ತೇವೆ. ಕ್ಷೇತ್ರದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಪಕ್ಷದ ಅಭ್ಯರ್ಥಿ ೨೦ ಸಾವಿರಕ್ಕೂ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದು, ಇದರಿಂದಾಗಿ ಭವಿಷ್ಯದಲ್ಲಿ ನೆಲೆ ಇದೆ ಎಂಬುದನ್ನು ತೋರಿಸಿ ಕೊಡಲಾಗಿದೆ. ಇದು ನನಗೆ ತೃಪ್ತಿ ತಂದಿದೆ ಎಂದರು.
    ಕ್ಷೇತ್ರದ ಎಲ್ಲಾ ಬೂತ್‌ಗಳಲ್ಲೂ ನನಗೆ ಮತ ಚಲಾವಣೆಯಾಗಿದ್ದು, ಇದರಿಂದಾಗಿ ಕ್ಷೇತ್ರದಲ್ಲೆಡೆ ಪಕ್ಷ ಸಂಘಟನೆಗೆ ಮತ್ತಷ್ಟು ಸ್ಪೂರ್ತಿ ನೀಡುತ್ತಿದೆ. ಎಲ್ಲಾ ಧರ್ಮ, ಜಾತಿ, ಜನಾಂಗದವರು ನನಗೆ ಮತ ನೀಡಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತೇನೆ  ಎಂದರು.
    ಪಕ್ಷದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪ್ರಮುಖರಾದ ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ವಿ. ಕದಿರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಮತದಾರರಿಗೆ ಕೃತಜ್ಞತೆ : ಎದೆಗುಂದದಿರಿ, ನಿಮ್ಮ ಪರವಾಗಿ ನಿಮ್ಮ ಜೊತೆ ಇದ್ದೇವೆ

 ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಚಿರಋಣಿಯಾಗಿದ್ದು, ಮತನೀಡಿ ಸಹಕರಿಸಿದ ಕ್ಷೇತ್ರದ ಸಮಸ್ತ ಮತದಾರ ಬಂಧುಗಳಿಗೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಿದರು.
    ಭದ್ರಾವತಿ, ಮೇ. ೧೫: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಚಿರಋಣಿಯಾಗಿದ್ದು, ಮತನೀಡಿ ಸಹಕರಿಸಿದ ಕ್ಷೇತ್ರದ ಸಮಸ್ತ ಮತದಾರ ಬಂಧುಗಳಿಗೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು  ಜೆಡಿಎಸ್ ಅಭ್ಯರ್ಥಿ  ಶಾರದ ಅಪ್ಪಾಜಿ ಹೇಳಿದರು.
    ಅವರು ಸೋಮವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ವಿಜೇತ ಅಭ್ಯರ್ಥಿಯ ಹಣದ ಪ್ರಭಾವದ ಎದುರು ಸೋಲಾಗಿದೆ. ಸೋಲಿನ ಅಂತರ ಆತ್ಮವಿಶ್ವಾಸ  ಹೆಚ್ಚಿಸಿದ್ದು, ಸೋಲನ್ನು ಸವಾಲಾಗಿ ಸ್ವೀಕರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಮಧ್ಯೆಯೇ ಉಳಿಯಲು ಬಯಸುತ್ತೇನೆ ಎಂದರು.  
    ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಕ್ಷೇತ್ರದ ಮತದಾರರು ದಿವಂಗತ ಎಂ.ಜೆ ಅಪ್ಪಾಜಿಯವರ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ನನಗೆ ಹೆಚ್ಚಿನ ಮತಗಳನ್ನು ನೀಡಿದ್ದಾರೆ. ಮೊದಲ ಚುನಾವಣೆಯಲ್ಲಿಯೇ ಹೆಚ್ಚಿನ ಮತಗಳನ್ನು ಪಡೆದಿರುವುದು ನನಗೆ ತೃಪ್ತಿ ಇದೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಧೈರ್ಯ ಕಳೆದುಕೊಳ್ಳುವುದು ಬೇಡ. ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಬೇಕು. ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗುವುದು ನಿಲ್ಲಬೇಕು. ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅಭಿವೃದ್ಧಿಗೊಳ್ಳಬೇಕು. ಈ ನಿಟ್ಟಿನಲ್ಲಿ ನನ್ನ ಹೋರಾಟ ಮುಂದುವರೆಯಲಿದೆ.
     ಪುನರಾಯ್ಕೆಯಾಗಿರುವ  ಶಾಸಕರಿಗೆ ಅಭಿನಂದನೆಗಳು. ಊರಿನ ಅಭಿವೃದ್ಧಿಗೆ ಜನತೆಗೆ ನೀಡಿರುವ ಭರವಸೆಗಳನ್ನು ಈ ಬಾರಿಯಾದರೂ ಈಡೇರಿಸಲಿ ಎಂದು ಆಶಿಸುತ್ತೇನೆ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
      ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಗ್ರಾಮಾಂತರ ಘಟಕದ ಅಧ್ಯಕ್ಷ ಧರ್ಮಕುಮಾರ್, ಪ್ರಮುಖರಾದ ಮಹಮದ್ ಸನ್ನಾವುಲ್ಲಾ,  ಎನ್. ಕೃಷ್ಣಪ್ಪ, ಡಿ.ಟಿ ಶ್ರೀಧರ್, ಕರಿಯಪ್ಪ, ತಿಮ್ಮೇಗೌಡ, ತ್ಯಾಗರಾಜ್, ಮೈಲಾರಪ್ಪ, ತರುಣ್‌ಕುಮಾರ್, ಲೋಕೇಶ್ವರ್‌ರಾವ್, ಎಂ. ರಾಜು ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.