Saturday, December 19, 2020

೪ನೇ ವರ್ಷದ ದೀಪೋತ್ಸವ : ಹೋಮ, ಸತ್ಯನಾರಾಯಣ ಪೂಜೆ

ಭದ್ರಾವತಿ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಛೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ೪ನೇ ವರ್ಷದ ದೀಪೋತ್ಸವ ಅಂಗವಾಗಿ ಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ಭದ್ರಾವತಿ, ಡಿ. ೧೯: ನಗರದ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ  ೪ನೇ ವರ್ಷದ ದೀಪೋತ್ಸವ ಅದ್ದೂರಿಯಾಗಿ ಜರುಗಿತು.
    ಈ ಸಂಬಂಧ ದೇವಸ್ಥಾನದ ಮೂಲ ವಿಗ್ರಹಕ್ಕೆ ಅಭಿಷೇಕ, ಹೋಮ, ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
    ದೇವಸ್ಥಾನದ ಪ್ರಧಾನ ಅರ್ಚಕ ಸಂಜೀವ್‌ಕುಮಾರ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಆರ್. ಮುನಿರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ನೂರಾರು ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.

೨ ದಿನಗಳ ಉಚಿತ ಜನಪದ ಗೀತೆಗಳ ಶಿಬಿರ

ಭದ್ರಾವತಿ, ಡಿ. ೧೯: ನಗರದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜ.೨ ಮತ್ತು ೩ ರಂದು ೨ ದಿನಗಳ ಉಚಿತ ಜನಪದ ಗೀತೆಗಳ ಶಿಬಿರ ಆಯೋಜಿಸಲಾಗಿದೆ.
ಕೇವಲ ೧೫ ಮಂದಿಗೆ ಮಾತ್ರ ಅವಕಾಶವಿದ್ದು, ಹೆಸರು ನೋಂದಾಯಿಸಿಕೊಳ್ಳಲು ಡಿ.೩೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ತಮಟೆ ಜಗದೀಶ್, ಮೊ: ೯೯೪೫೩೧೮೦೨೯, ಕವಿತ ಸುರೇಶ್, ಮೊ: ೯೮೪೫೯೨೭೨೮೪ ಕರೆ ಮಾಡಬಹುದಾಗಿದೆ.




೨ ವರ್ಷಗಳ ನಿರಂತರ ಪ್ರಯತ್ನದಿಂದ ೪೦೦೦ ೩ಜಿ ಗುಂಪು ಮನೆ ಯೋಜನೆ ಯಶಸ್ವಿ

ಫಲಾನುಭವಿಗಳಿಗೆ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಸ

ಭದ್ರಾವತಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ-೨೦೨೨ ಹಾಗು ರಾಜೀವ್ ಗಾಂಧಿ ವಸತಿ ಯೋಜನೆಯಡಿ ೪೦೦೦ ೩ಜಿ ಗುಂಪು ಮನೆಗಳ ಫಲಾನುಭವಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ಭದ್ರಾವತಿ, ಡಿ. ೧೯: ಸುಮಾರು ೨ ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ನಗರ ಪ್ರದೇಶದ ಬಡಕುಟುಂಬದ ವಸತಿ ರಹಿತರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ-೨೦೨೨ ಹಾಗು ರಾಜೀವ್ ಗಾಂಧಿ ವಸತಿ ಯೋಜನೆಯಡಿ ೪೦೦೦ ೩ಜಿ ಗುಂಪು ಮನೆಗಳನ್ನು ನಿರ್ಮಿಸಲಾಗಿದ್ದು, ಯೋಜನೆ ಕಾರ್ಯ ರೂಪಕ್ಕೆ ಬಂದಿರುವುದು ಸಂತಸವನ್ನುಂಟು ಮಾಡಿದೆ. ಫಲಾನುಭವಿಗಳು ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
   ಅವರು ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ಬಡವರಿಗೆ ಸೂರು ಕಲ್ಪಿಸಿಕೊಡಬೇಕೆಂಬ ಆಶಯ ಇದೀಗ ಈಡೇರಿದೆ. ೪೦೦೦ ಅರ್ಹ ಬಡಕುಟುಂಬಗಳನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಕಾರ್ಯ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
   ಫಲಾನುಭವಿಗಳು ಹಂಚಿಕೆ ಮಾಡಲಾಗಿರುವ ಮನೆಗಳನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ಅನುಸರಿಸಬೇಕಾದ ಕ್ರಮಗಳು, ಸಂಪರ್ಕಿಸಬೇಕಾದ ಅಧಿಕಾರಿಗಳು, ಪಾವತಿಸಬೇಕಾದ ಹಣ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಿಳಿಸಲಿದ್ದಾರೆ. ಈ ಮಾಹಿತಿಗಳನ್ನು ಶೀಘ್ರದಲ್ಲಿಯೇ ಕರಪತ್ರದಲ್ಲಿ ಮುದ್ರಿಸಿ ವಿತರಿಸಲಾಗುವುದು. ಆ ಮಾಹಿತಿಯಂತೆ ಫಲಾನುಭವಿಗಳು ನಡೆದುಕೊಳ್ಳಬೇಕು. ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬೇಡಿ, ವಿಳಂಬಮಾಡಿಕೊಂಡು ನನ್ನನ್ನು ದೂರಬೇಡಿ ಎಂದರು.
   ಸಭೆಯಲ್ಲಿ ಯೂನಿಯನ್ ಬ್ಯಾಂಕ್ ವಲಯ ವ್ಯವಸ್ಥಾಪಕ ಪ್ರಭು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಮುಖಂಡರಾದ ಚನ್ನಪ್ಪ, ಕೆ. ಸುದೀಪ್‌ಕುಮಾರ್, ಮಣಿ ಎಎನ್‌ಎಸ್, ರಾಮಕೃಷ್ಣ ಗೌಡ, ಲೋಕೇಶ್, ಬಿ.ಕೆ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.