೨೪ ಗಂಟೆಯೊಳಗೆ ಪ್ರಕರಣ ಭೇದಿಸಿದ ನ್ಯೂಟೌನ್ ಪೊಲೀಸರು
ಘಟನೆ ನಡೆದ ೨೪ ಗಂಟೆಯೊಳಗೆ ಪ್ರಕರಣ ಭೇದಿಸಿ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
ಭದ್ರಾವತಿ: ಘಟನೆ ನಡೆದ ೨೪ ಗಂಟೆಯೊಳಗೆ ಪ್ರಕರಣ ಭೇದಿಸಿ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
ಕಡದಕಟ್ಟೆಯ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಅಪಹರಿಸಿರುವ ಘಟನೆಗೆ ಸಂಬಂಧಿಸಿದ ಮಂಡ್ಯ ಮಳವಳ್ಳಿ ತಾಲೂಕಿನ ಕುರುಬನಪುರ ಗ್ರಾಮದ ನಿವಾಸಿ ಕೆ.ಎನ್ ನಾಗರಾಜ(೩೨) ಎಂಬಾತನನ್ನು ಬಂಧಿಸಿ ೮೮ ಗ್ರಾಂ. ತೂಕದ ಸುಮಾರು ೪.೫ ಲಕ್ಷ ರು. ಮೌಲ್ಯದ ಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಘಟನೆ ವಿವರ: ನ.೬ ರಂದು ಬೆಳಗ್ಗೆ ಕಡದಕಟ್ಟೆಯ ಮಹಿಳೆಯೊಬ್ಬರ ಮನೆಗೆ ಆಕೆಯ ಗಂಡನ ಅಣ್ಣನ ಮಗ ಕೆ.ಎನ್ ನಾಗರಾಜ ಬಂದಿದ್ದು, ಆತನು ತನ್ನ ಹತ್ತಿರ ಇದ್ದ ಟವಲ್ ತೆಗೆದುಕೊಂಡು ಮಹಿಳೆಯ ಕುತ್ತಿಗೆಗೆ ಬಿಗಿದು ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆಂದು ದೂರು ದಾಖಲಾಗಿತ್ತು.
ಈ ಸಂಬಂಧ ಮಹಿಳೆ ನೀಡಿದ ದೂರಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್‌ರವರ ಮೇಲ್ವಿಚಾರಣೆಯಲ್ಲಿ, ನಗರ ಪೊಲೀಸ್ ವೃತ್ತ ನಿರೀಕ್ಷಕ ಜೆ. ಶ್ರೀಶೈಲ ಕುಮಾರ ನೇತೃತ್ವದಲ್ಲಿ ಠಾಣಾಧಿಕಾರಿ ಟಿ. ರಮೇಶ್ ಮತ್ತು ಸಿಬ್ಬಂದಿಗಳಾದ ನವೀನ್, ಮಲ್ಲಿಕಾರ್ಜುನ, ರಾಕೇಶ, ಗಿರೀಶ್ ಮತ್ತು ವಿನೋದ್‌ರವರುಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.
ತನಿಖಾ ತಂಡ ಪ್ರಕರಣ ದಾಖಲಾದ ೨೪ ಗಂಟೆಯೊಳಗಾಗಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಪ್ರಶಂಸಿಸಿ ಅಭಿನಂದಿಸಿದೆ.