Saturday, March 15, 2025

ಬಣದೋಕುಳಿಯೊಂದಿಗೆ ಹೋಳಿ ಹಬ್ಬ ಸಂಪನ್ನ

ಭದ್ರಾವತಿ ಹಳೇನಗರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಬಳಿ ಬ್ರಾಹ್ಮಣರ ಬೀದಿಯಲ್ಲಿ ಮಕ್ಕಳು, ಪುರುಷರು, ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಬಣದೋಕುಳಿಯಲ್ಲಿ ತೊಡಕುವ ಮೂಲಕ ಕುಣಿದು ಸಂಭ್ರಮಿಸಿದರು. 
    ಭದ್ರಾವತಿ : ನಗರದ ವಿವಿಧೆಡೆ ಶನಿವಾರ ಬಣದೋಕುಳಿಯೊಂದಿಗೆ ಸಂಭ್ರಮಾಚರಣೆ ನಡೆಸಿ ರತಿಮನ್ಮಥರ ದಹನದೊಂದಿಗೆ ಹೋಳಿ ಹಬ್ಬ ಸಂಪನ್ನಗೊಳಿಸಲಾಯಿತು. 
    ಹಳೇನಗರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಬಳಿ ಬ್ರಾಹ್ಮಣರ ಬೀದಿ ಮತ್ತು ಉಪ್ಪಾರರ ಬೀದಿ ಹಾಗು ಕುಂಬಾರರ ಬೀದಿ ಸೇರಿದಂತೆ ವಿವಿಧೆಡೆ ಬೆಳಿಗ್ಗೆಯಿಂದಲೇ ಮಕ್ಕಳು, ಪುರುಷರು, ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಬಣದೋಕುಳಿಯಲ್ಲಿ ತೊಡಕುವ ಮೂಲಕ ಹಾಡಿನ ಅಬ್ಬರದ ಸದ್ದಿಗೆ ಕುಣಿದು ಸಂಭ್ರಮಿಸಿದರು. ನಂತರ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಭಕ್ತಿ-ಭಾವದೊಂದಿಗೆ ರತಿ-ಮನ್ಮಥರ ಮೆರವಣಿಗೆ ನಡೆಸಿ ದಹನದೊಂದಿಗೆ ಸಂಪನ್ನಗೊಳಿಸಿದರು. 
    ನಗರಸಭೆ ಸಮೀಪದ ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಹಾಗು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ೮೮ನೇ ವರ್ಷದ ಹೋಳಿ ಹಬ್ಬ ಆಚರಣೆ ಸಹ ಸಂಪನ್ನಗೊಂಡಿತು. 


    ನಗರಸಭೆ ಸಮೀಪದ ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಹಾಗು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ೮೮ನೇ ವರ್ಷದ ಹೋಳಿ ಹಬ್ಬ ಆಚರಣೆ ಕೊನೆಯ ದಿನ ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಭವ್ಯ ಮೆರವಣಿಗೆ ನಡೆಸಲಾಯಿತು. 
    ಭೂತನಗುಡಿ ವ್ಯಾಪ್ತಿಯ ರಸ್ತೆ ರಸ್ತೆಗಳಲ್ಲಿ ಮಕ್ಕಳು, ಪುರುಷರು, ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಬಣದೋಕುಳಿಯಲ್ಲಿ ತೊಡಕಿರುವುದು ಕಂಡು ಬಂದಿತು. ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಭವ್ಯ ಮೆರವಣಿಗೆ ನಡೆಸಿ ಅಂತಿಮವಾಗಿ ನಗರಸಭೆ ಬಳಿ ದಹನದೊಂದಿಗೆ ಸಂಪನ್ನಗೊಳಿಸಿದರು. 
    ಉಳಿದಂತೆ ನಗರದಾದ್ಯಂತ ಕಳೆದ ೨-೩ ದಿನಗಳಿಂದ ಸಾಮಾನ್ಯವಾಗಿ ಹೋಳಿ ಆಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು. ವಿಶೇಷ ಎಂದರೆ ಈ ಬಾರಿ ಹೆಚ್ಚಾಗಿ ಯುವಕರು-ಯುವತಿಯರು ಬಣದೋಕುಳಿಯಲ್ಲಿ ತೊಡಗುವ ಮೂಲಕ ಗಮನ ಸೆಳೆದರು. 
    ಹೋಳಿ ಆಚರಣೆ ಹಿನ್ನಲೆಯಲ್ಲಿ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹಾಗು ಹೋಳಿ ಆಚರಣೆ ನಡೆಸುವ ಸ್ಥಳಗಳಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 

ಜಗತ್ತಿನಲ್ಲಿ ಯಾರು ದೊಡ್ಡವರಲ್ಲ ಎಲ್ಲರೂ ಸಮಾನರು : ಅಕ್ರಮ್ ಉಲ್ಲಾ ಷರೀಬ್

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಇಫ್ತಾರ್ ಕೂಟ 

ಪಾವನ ಮಾಸ ರಂಜಾನ್ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ಭದ್ರಾವತಿ ತಾಲೂಕು ಘಟಕದ ವತಿಯಿಂದ ನಗರದ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ಆಯಿಷಾ ಮಸೀದಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಜನಾಬ್ ಅಕ್ರಮ್ ಉಲ್ಲಾ ಷರೀಬ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ: ಜಗತ್ತಿನಲ್ಲಿ ಯಾರು ದೊಡ್ಡವರಲ್ಲ ಎಲ್ಲರೂ ಸಮಾನರು. ನಮ್ಮ ಸೃಷ್ಟಿಕರ್ತ ಮಾತ್ರ ದೊಡ್ಡವನು. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಉದ್ದೇಶದಿಂದ ಇಫ್ತಾರ್ ಕೂಟ ಆಯೋಜಿಸಲಾಗುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಜನಾಬ್ ಅಕ್ರಮ್ ಉಲ್ಲಾ ಷರೀಬ್ ಹೇಳಿದರು. 
    ಅವರು ಶನಿವಾರ ಪಾವನ ಮಾಸ ರಂಜಾನ್ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ವತಿಯಿಂದ ನಗರದ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ಆಯಿಷಾ ಮಸೀದಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಮುಸ್ಲಿಂ ಸಮುದಾಯದವರು ನಮ್ಮ ಸೃಷ್ಟಿಕರ್ತ ಒಬ್ಬನೆ. ಆತ ಮಾತ್ರ ನಮ್ಮೆಲ್ಲರಿಗೂ ದೊಡ್ಡವನು ಎಂಬುದನ್ನು ಅರಿಯಬೇಕು. ಈ ನಿಟ್ಟಿನಲ್ಲಿ ೫ ಕರ್ಮಗಳನ್ನು ಕಡ್ಡಾಯವಾಗಿ ಆಚರಿಸಬೇಕು. ಆಗ ಮಾತ್ರ ನಮ್ಮಲ್ಲಿ ಒಳ್ಳೆಯ ಗುಣಗಳನ್ನು ರೂಪುಗೊಳ್ಳಲು ಸಾಧ್ಯ. ಜಾತಿ-ಧರ್ಮ, ಬಡವ-ಶ್ರೀಮಂತ ಯಾವುದೇ ಭಾವಿಸದೆ ಎಲ್ಲರನ್ನು ಒಂದಾಗಿ ನೋಡುವ ಮನೋಭಾವ, ಕಷ್ಟದಲ್ಲಿ ಇರುವವರಿಗೆ ನೆರವಾಗುವುದು. ಯಾರು ಮೊದಲು ಬರುತ್ತಾರೆಯೋ ಅವರಿಗೆ ಮೊದಲ ಆದ್ಯತೆ ನೀಡುವುದು. ಹೀಗೆ ಹಲವು ಸಮಾನತೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಇಫ್ತಾರ್ ಕೂಟ ಇದನ್ನು ತಿಳಿಸುವ ಉದ್ದೇಶವಾಗಿದೆ ಎಂದರು. 
    ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಸಂಚಾಲಕ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಜಾರ್ಜ್, ಮುಖಂಡರಾದ ತೀರ್ಥೇಶ, ಮಂಜುನಾಥ್, ರಾಜು, ಮಹಮದ್ ರಫಿ(ಟೈಲರ್), ಖದೀರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ವಿಜೃಂಭಣೆಯಿಂದ ಜುರುಗಿದ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

ಭದ್ರಾವತಿ ಶ್ರೀ ಕ್ಷೇತ್ರ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. 
ಭದ್ರಾವತಿ: ಶ್ರೀ ಕ್ಷೇತ್ರ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.    ಪ್ರತಿ ವರ್ಷದಂತೆ ಈ ಬಾರಿ ಸಹ ದೇವಸ್ಥಾನದ ಆವರಣದಿಂದ ಆರಂಭಗೊಂಡ ರಥೋತ್ಸವ ಮಧ್ಯಾಹ್ನ ೧೨.೪೫ಕ್ಕೆ ಗ್ರಾಮದ ಅಗಸೆ ಬಾಗಿಲಿನವರೆಗೆ ಬಂದು ತಲುಪಿತು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಸ್ವಾಮಿಗೆ ಜಯಘೋಷಗಳನ್ನು ಹಾಕಿದರು. ಭಜನಾ ಮಂಡಳಿ ಸದಸ್ಯರಿಂದ ಭಜನೆ ನಡೆಯಿತು. ಸ್ವಾಮಿ ಪ್ರತಿಷ್ಠಾಪನೆಗೊಂಡ ಅಲಂಕೃತ ಭವ್ಯ ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಅಲ್ಲದೆ ಓಂಕಾರ ಚಿತ್ತಾರ ಹಾಗು ಆಯೋಧ್ಯೆ ಶ್ರೀರಾಮನ ಬಿಲ್ಲು-ಬಾಣ ಬಿಡಿಸಿ ಕರ್ಪೂರ ಹಚ್ಚಿ ಭಕ್ತಿಯಿಂದ ಕುಣಿದು ಸಂಭ್ರಮಿಸಲಾಯಿತು. 



ರಥೋತ್ಸವ ನಂತರ ಅನ್ನ ಸಂತರ್ಪಣೆ ನೆರವೇರಿತು. ಅಲ್ಲದೆ ಸೇವಾಕರ್ತರಿಂದ ಮಜ್ಜಿಗೆ, ಪಾನಕ, ಕಲ್ಲು ಸಕ್ಕರೆ ಸೇರಿದಂತೆ ಇನ್ನಿತರೆ ಪ್ರಸಾದ ವಿತರಣೆ ನಡೆಯಿತು. ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು, ಸುಣ್ಣದಹಳ್ಳಿ, ಮಾರುತಿ ನಗರ, ಮೊಸರಹಳ್ಳಿ, ತಾಷ್ಕೆಂಟ್ ನಗರ, ಎರೇಹಳ್ಳಿ, ಆನೆಕೊಪ್ಪ, ಬಾರಂದೂರು, ಉಜ್ಜನಿಪುರ, ಕಾಗದನಗರ, ಜೆಪಿಎಸ್ ಕಾಲೋನಿ ಮತ್ತು ನಗರ ಹಾಗು ಗ್ರಾಮಾಂತರ ಪ್ರದೇಶಗಳ ಭಕ್ತರು ಭಕ್ತರು ಪಾಲ್ಗೊಂಡಿದ್ದರು.