Saturday, December 10, 2022

ಅನಾಥರು, ವೃದ್ಧರೊಂದಿಗೆ ಹುಟ್ಟುಹಬ್ಬ ಆಚರಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರದಲ್ಲಿ ಅನಾಥಾಶ್ರಮ ಹಾಗು ವೃದ್ಧಾಶ್ರಮ ಆರಂಭಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ  ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಹಾಗು ಸಾಮಾಜಿಕ ಸೇವಾಕರ್ತ ಪ್ರಶಾಂತ್‌ರವರು ತಮ್ಮ ಹುಟ್ಟುಹಬ್ಬವನ್ನು ಅನಾಥರು, ವೃದ್ಧರೊಂದಿಗೆ ಆಚರಿಸಿಕೊಂಡರು. 
    ಭದ್ರಾವತಿ, ಡಿ. ೧೦ : ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರದಲ್ಲಿ ಅನಾಥಾಶ್ರಮ ಹಾಗು ವೃದ್ಧಾಶ್ರಮ ಆರಂಭಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ  ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಹಾಗು ಸಾಮಾಜಿಕ ಸೇವಾಕರ್ತ ಪ್ರಶಾಂತ್‌ರವರು ತಮ್ಮ ಹುಟ್ಟುಹಬ್ಬವನ್ನು ಅನಾಥರು, ವೃದ್ಧರೊಂದಿಗೆ ಆಚರಿಸಿಕೊಂಡರು.
    ಜ್ಯೋತಿ ಸೋಮಶೇಖರ್‌ರವರು ಹಲವಾರು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಗುರುತಿಸಿಕೊಂಡು ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.  ತದನಂತರ ಸುರಕ್ಷಾ ಸೇವಾ ಟ್ರಸ್ಟ್ ಮೂಲಕ ಸುರಕ್ಷಾ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಆರಂಭಿಸಿ ಗಮನ ಸೆಳೆದಿದ್ದಾರೆ.
    ಜ್ಯೋತಿ ಸೋಮಶೇಖರ್ ಹಾಗು ಟ್ರಸ್ಟ್ ಖಜಾಂಚಿ ಪ್ರಶಾಂತ್ ತಮ್ಮ ಹುಟ್ಟುಹಬ್ಬವನ್ನು ಅನಾಥರು ಹಾಗು ವೃದ್ಧರೊಂದಿಗೆ ಆಚರಿಸಿಕೊಂಡರು. ವಿವಿಧ ಸಂಘಟನೆಗಳಿಂದ ಈ ಇಬ್ಬರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಟ್ರಸ್ಟಿಗಳು, ಕರವೇ ಕಾರ್ಯಕರ್ತರು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  



ಹೊಳೆಹೊನ್ನೂರು ಹೋಬಳಿ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಟಿ. ಮಂಜಪ್ಪ ಆಯ್ಕೆ

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತ ಮುಖ್ಯ ಶಿಕ್ಷಕ, ಸಾಹಿತಿ ಟಿ. ಮಂಜಪ್ಪರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಡಿ. ೧೦: ತಾಲೂಕಿನ ಹೊಳೆಹೊನ್ನೂರು ಹೋಬಳಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಮುಖ್ಯ ಶಿಕ್ಷಕ, ಸಾಹಿತಿ ಟಿ.ಮಂಜಪ್ಪ ಆಯ್ಕೆಯಾಗಿದ್ದಾರೆ.     ಮಂಜಪ್ಪರವರು ಮೂಲತಃ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.  
      ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ನೇತೃತ್ವದಲ್ಲಿ ಮಂಜಪ್ಪರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಗೌರವಾಧ್ಯಕ್ಷ ರೇಣುಕೇಶ್, ಹಿರಿಯ ಮಾರ್ಗದರ್ಶಕ ಧ್ಯಾಮಣ್ಣ, ಶಾಂತಕ್ಕ, ಶ್ರೀನಿವಾಸ್, ಮಂಜಣ್ಣ, ರಮೇಶ್ ಮತ್ತು ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದೊಡ್ಡಗೊಪ್ಪೇನಹಳ್ಳಿ ನೀರು ಬಳಕೆದಾರರ ಸಂಘದ ಕಛೇರಿಗೆ ಪವಿತ್ರ ರಾಮಯ್ಯ ಭೇಟಿ : ಅರ್ಜಿ ಸ್ವೀಕಾರ

ಭದ್ರಾವತಿ ತಾಲೂಕಿನ ದೊಡ್ಡಗೊಪ್ಪೇನಹಳ್ಳಿ(ಡಿ.ಜಿ ಹಳ್ಳಿ) ನೀರು ಬಳಕೆದಾರರ ಸಹಕಾರ ಸಂಘದ ಕಛೇರಿಗೆ ಶನಿವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು.
    ಭದ್ರಾವತಿ, ಡಿ. ೧೦: ತಾಲೂಕಿನ ದೊಡ್ಡಗೊಪ್ಪೇನಹಳ್ಳಿ(ಡಿ.ಜಿ ಹಳ್ಳಿ) ನೀರು ಬಳಕೆದಾರರ ಸಹಕಾರ ಸಂಘದ ಕಛೇರಿಗೆ ಶನಿವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು.
      ಗೊಂದಿ ಎಡನಾಲೆ ಸಂಬಂಧ ಸಮಸ್ಯೆಗಳ ಕುರಿತು ಚರ್ಚಿಸಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರುಗಳು ಹಾಗು ರೈತರು ಉಪಸ್ಥಿತರಿದ್ದರು. ಸಂಘದ ವತಿಯಿಂದ ಕೆ.ಬಿ ಪವಿತ್ರ ರಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪುನೀತ್‌ರಾಜ್‌ಕುಮಾರ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ : ೪೨ ಮಂದಿ ದಾನಿಗಳು ಭಾಗಿ

ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ, ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ಡಾ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಶನಿವಾರ ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.  
    ಭದ್ರಾವತಿ, ಡಿ. ೧೦: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ, ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ಡಾ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಶನಿವಾರ ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.  
    ದಾವಣಗೆರೆ ಲಯನ್ಸ್ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಬೆಳಿಗ್ಗೆ ೯.೩೦ರಿಂದ ಆರಂಭಗೊಂಡ ಶಿಬಿರ ಸಂಜೆ ೪.೩೦ರವರೆಗೆ ನಡೆಯಿತು. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸುಮಾರು ೪೨ ಮಂದಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಶಿಬಿರ ಯಶಸ್ವಿಗೊಳಿಸಿದರು.


    ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್ ಶಿಬಿರದ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ಎಂ. ನಾಗರಾಜ್ ಶೇಟ್, ಖಜಾಂಚಿ ಜಿ.ಪಿ ದರ್ಶನ್, ಪ್ರಮುಖರಾದ ಮೋನೇಶ್, ಬಿ. ದಿವಾಕರಶೆಟ್ಟಿ, ಎಲ್. ದೇವರಾಜ್, ಭುವನೇಶ್ವರ್ ಸೇರಿದಂತೆ ಕ್ಲಬ್ ಹಿರಿಯ ಹಾಗು ಕಿರಿಯ ಸದಸ್ಯರು, ಲಯನ್ಸ್ ರಕ್ತನಿಧಿ ಕೇಂದ್ರದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.    

ಅಧಿವೇಶನದಲ್ಲಿ ಎನ್‌ಪಿಎಸ್ ರದ್ದತಿ ಪ್ರಶ್ನಾವಳಿಯ ಮೊದಲ ಆದ್ಯತೆಯಾಗಲಿ : ಮನವಿ

ಬೆಂಗಳೂರಿನ ಫ್ರೀಡಂ ಪಾರ್ಕ್ ಡಿ.೧೯ರಂದು ಹಮ್ಮಿಕೊಳ್ಳಲಾಗಿರುವ 'ಮಾಡು ಇಲ್ಲವೇ ಮಡಿ' ಅನಿರ್ಧಿಷ್ಟ ಹೋರಾಟದ ಅಂಗವಾಗಿ ಪೌರಾಡಳಿತ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಎನ್‌ಪಿಎಸ್ ನೌಕರರು ಶನಿವಾರ ಭದ್ರಾವತಿ ತಾಲೂಕು ಪಂಚಾಯಿತಿ ಆವರಣದಲ್ಲಿ 'ಜಾಗೃತಿ ಜಾಥಾ' ನಡೆಸುವ ಮೂಲಕ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    \ಭದ್ರಾವತಿ, ಡಿ. ೧೦: ವಿಧಾನಸಭಾ ಅಧಿವೇಶನದಲ್ಲಿ ಎನ್‌ಪಿಎಸ್ ರದ್ದತಿ ವಿಷಯ ಪ್ರಶ್ನಾವಳಿಯ ಮೊದಲ ಆದ್ಯತೆಯಲ್ಲಿ ಸೇರಿಸುವ ಮೂಲಕ ಡಿ. ೧೯ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿರುವ 'ಮಾಡು ಇಲ್ಲವೇ ಮಡಿ' ಅನಿರ್ಧಿಷ್ಟ ಹೋರಾಟ ಬೆಂಬಲಿಸುವಂತೆ ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘದ ತಾಲೂಕು ಘಟಕದ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ರವರಿಗೆ ಮನವಿ ಸಲ್ಲಿಸಲಾಯಿತು.
    ಅನಿರ್ಧಿಷ್ಟ ಹೋರಾಟದ ಅಂಗವಾಗಿ ಪೌರಾಡಳಿತ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಎನ್‌ಪಿಎಸ್ ನೌಕರರು ತಾಲೂಕು ಪಂಚಾಯಿತಿ ಆವರಣದಲ್ಲಿ 'ಜಾಗೃತಿ ಜಾಥಾ' ನಡೆಸುವ ಮೂಲಕ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಸರ್ಕಾರಿ ನೌಕರರ ಭವಿಷ್ಯಕ್ಕೆ ಎನ್‌ಪಿಎಸ್ ಮಾರಕವಾಗಿದ್ದು, ಇದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುಕೊಂಡು ಬರಲಾಗುತ್ತಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ವಹಿಸಲಾಗಿದೆ ಎಂದು ದೂರಿದರು.
    ಸಂಘದ ಅಧ್ಯಕ್ಷ ಎ. ರಂಗನಾಥ್ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ಶಿವಾನಾಯ್ಕ, ಖಜಾಂಚಿ ಶ್ರೀಕಾಂತ್, ಉಪಾಧ್ಯಕ್ಷರಾದ ಆರ್.ಯು ಚಂದ್ರಶೇಖರ್, ಹೇಮಂತ್‌ಕುಮಾರ್, ಸಹಕಾರ್ಯದರ್ಶಿಗಳಾದ ಮಹಮದ್ ಜಾಫರ್, ನಂದಿನಿ ಮತ್ತು ಪೂರ್ಣಿಮಾ ಹಾಗು ಸರ್ಕಾರಿ ನೌಕರರ ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.