Tuesday, November 26, 2024

ಸರ್ಕಾರಿ ಆಸ್ಪತ್ರೆ ೧೫೦ ಹಾಸಿಗೆಗೆ ಮೇಲ್ದೆರ್ಜೆಗೇರಿಸಿ, ಬಡವರ್ಗದವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಿ

ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ. 
    * ಅನಂತಕುಮಾರ್ 
    ಭದ್ರಾವತಿ : ತಾಲೂಕಿನ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕವಾಗಿ ಆರೋಗ್ಯ ಸೇವೆ ಒದಗಿಸುವಲ್ಲಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರ ಇದುವರೆಗೂ ಹೆಚ್ಚಿನ ಆಸಕ್ತಿ ವಹಿಸಿಲ್ಲ. ಇದರಿಂದಾಗಿ ಈಗಲೂ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರವನ್ನು ಅವಲಂಬಿಸಬೇಕಾಗಿದೆ. 
    ತಾಲೂಕಿನಲ್ಲಿ ೧ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ೧ ಸಮುದಾಯ ಆರೋಗ್ಯ ಕೇಂದ್ರ ಹಾಗು ೧೧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಈ ಪೈಕಿ ಅಂತರಗಂಗೆ, ಅರಬಿಳಚಿ ಮತ್ತು ದೊಣಬಘಟ್ಟ ಆರೋಗ್ಯ ಕೇಂದ್ರಗಳನ್ನು ೨೪*೭ ಸೇವೆಗೆ ಮೀಸಲಿರಿಸಲಾಗಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಸೇವೆ ಲಭ್ಯವಾಗುತ್ತಿಲ್ಲ. ಹಲವಾರು ಸಮಸ್ಯೆಗಳಿದ್ದು, ಇದರಿಂದಾಗಿ ಬಡವರ್ಗದವರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ.  
    ತಾಲೂಕಿನಲ್ಲಿ ಕೃಷಿಕರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸುವಂತಾಗಿದೆ. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಇಂದಿಗೂ ಹೆಚ್ಚಿನ ಚಿಕಿತ್ಸಾ ಸೌಲಭ್ಯಗಳು ಇಲ್ಲವಾಗಿದ್ದು, ಇದರಿಂದಾಗಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸುವುದು ಮುಂದುವರೆದಿದೆ. ಅಲ್ಲದೆ ಕೆಲವು ತಪಾಸಣೆಗಳಿಗೆ ಹೊರಗೆ ಖಾಸಗಿ ನರ್ಸಿಂಗ್ ಹೋಂ ಅಥವಾ ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ. ಅಲ್ಲದೆ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಗತ್ಯವಿರುವಷ್ಟು ವೈದ್ಯರು, ಸಿಬ್ಬಂದಿಗಳು ಇಲ್ಲದಿರುವ ಹಿನ್ನಲೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲು ಗಂಟೆಗಟ್ಟಲೆ ಕಾಯಬೇಕಾಗಿದೆ. 
    ಖಾಸಗಿ ಹಗಲು ದರೋಡೆ : 
    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ಹಲವು ನ್ಯೂನ್ಯತೆಗಳಿಂದ ಬೇಸತ್ತಿರುವ ಬಹುತೇಕ ಜನರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ. ಇದನ್ನು ಬಂಡವಾಳವನ್ನಾಗಿಸಿಕೊಂಡಿರುವ ನಗರದ ಕೆಲವು ಖಾಸಗಿ ಆಸ್ಪತ್ರೆಗಳು ಹಗಲು ದರೋಡೆಯಲ್ಲಿ ತೊಡಗಿವೆ. ಬಡರೋಗಿಗಳಿಂದ ಸುಲಿಗೆ ಮಾಡುತ್ತಿದ್ದು, ಬಡವರು ಸಾಲಸೋಲ ಮಾಡಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಈ ನಡುವೆ ಸರ್ಕಾರ ಬಡವರ್ಗದವರಿಗಾಗಿ ಹಲವಾರು ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಹ ಅವುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳತ್ತಿಲ್ಲ. ಆರೋಗ್ಯ ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳೋ ಅಥವಾ ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯವೋ ತಿಳಿಯದಾಗಿದೆ. 
    ೧೫೦ ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಿ: 
    ಸುಮಾರು ೫೦ ವರ್ಷಗಳಿಗೂ ಹಳೇಯದಾದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಪ್ರಸ್ತುತ ೧೦೦ ಹಾಸಿಗೆಯಿಂದ ೧೫೦ ಹಾಸಿಗೆಗೆ ಮೇಲ್ದೆರ್ಜೆಗೇರಿಸಬೇಕಾಗಿದೆ. ಅಲ್ಲದೆ ಅಗತ್ಯವಿರುವ ವೈದ್ಯರು, ಸಿಬ್ಬಂದಿಗಳನ್ನು ನೇಮಕಗೊಳಿಸಬೇಕಾಗಿದೆ. 
ಈ ನಡುವೆ ಅಗತ್ಯವಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ತಪಾಸಣಾ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಗುಣಮಟ್ಟದ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ತಜ್ಞ ವೈದ್ಯರು, ಸಿಬ್ಬಂದಿಗಳ ಕೊರತೆ ಇಲ್ಲದಂತೆ ಎಚ್ಚರ ವಹಿಸಬೇಕಾಗಿದೆ.  
    ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿಸಲಿ: 
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ನಗರದ ಹೃದಯ ಭಾಗದಲ್ಲಿದ್ದು, ಇದರಿಂದಾಗಿ ತಾಲೂಕಿನ ದೂರದ ಗ್ರಾಮಗಳಲ್ಲಿನ ಬಡ ಜನರು ಹೆಚ್ಚಿನ ಚಿಕಿತ್ಸೆಗೆ ಬಂದು ಹೋಗಲು ಹೆಚ್ಚು ಶ್ರಮಪಡುವಂತಾಗಿದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಿ ಅಗತ್ಯವಿರುವ ವೈದ್ಯರು, ಸಿಬ್ಬಂದಿಗಳನ್ನು ನೇಮಕಗೊಳಿಸಬೇಕಾಗಿದೆ. 
    ಶಾಸಕರಿಂದ ಸರ್ಕಾರಕ್ಕೆ ಪ್ರಸ್ತಾವನೆ : 
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ೧೫೦ ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಹಾಗು ಭದ್ರಾಕಾಲೋನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಖಾಲಿ ಜಾಗವಿದ್ದು, ತಾಯಿ-ಮಗು ಆಸ್ಪತ್ರೆ ನಿರ್ಮಿಸಲು ಮತ್ತು ದೊಣಬಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಸುಮಾರು ೮ ಕೋ.ರು. ವೆಚ್ಚದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲು ಮುಂದಾಗಿದ್ದಾರೆ. 
    ನ.೨೭ರಂದು ಆಸ್ಪತ್ರೆಗೆ ಸಚಿವರ ಭೇಟಿ: 
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್‌ರವರು ನ.೨೭ರಂದು ಬೆಳಿಗ್ಗೆ ೮.೩೦ಕ್ಕೆ ಭೇಟಿ ನೀಡಲಿದ್ದು, ಆಸ್ಪತ್ರೆ ಪರಿಶೀಲನೆ ನಡೆಸಿ ವೈದ್ಯರು, ಸಿಬ್ಬಂದಿಗಳೊಂದಿಗೆ ಚರ್ಚಿಸಲಿದ್ದಾರೆ. 

ಯೋಗ ಶಿಕ್ಷಕ ಡಿ. ನಾಗರಾಜ್‌ಗೆ ಪ್ರೋತ್ಸಾಹ ಧನ

ಭದ್ರಾವತಿ  ಹಿರಿಯ ಅಂತರಾಷ್ಟ್ರೀಯ ಯೋಗಪಟು, ನಗರದ ಶ್ರೀ ವಿವೇಕಾನಂದ ಯೋಗ ಕೇಂದ್ರದ ಯೋಗ ಶಿಕ್ಷಕ ಡಿ. ನಾಗರಾಜ್‌ರವರ ಸಾಧನೆಯನ್ನು ಪ್ರಶಂಸಿ ನಗರಸಭೆ ಸಭೆ ವತಿಯಿಂದ ಪ್ರೋತ್ಸಾಹ ಧನದ ಚೆಕ್ ನೀಡಿ ಗೌರವಿಸಲಾಯಿತು.  
    ಭದ್ರಾವತಿ :  ಹಿರಿಯ ಅಂತರಾಷ್ಟ್ರೀಯ ಯೋಗಪಟು, ನಗರದ ಶ್ರೀ ವಿವೇಕಾನಂದ ಯೋಗ ಕೇಂದ್ರದ ಯೋಗ ಶಿಕ್ಷಕ ಡಿ. ನಾಗರಾಜ್‌ರವರ ಸಾಧನೆಯನ್ನು ಪ್ರಶಂಸಿ ನಗರಸಭೆ ಸಭೆ ವತಿಯಿಂದ ಪ್ರೋತ್ಸಾಹ ಧನದ ಚೆಕ್ ನೀಡಿ ಗೌರವಿಸಲಾಯಿತು.  
    ಡಿ. ನಾಗರಾಜ್‌ರವರು ಸುಮಾರು ೪ ದಶಕಗಳಿಂದ ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹಾಗು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ, ಬಿರುದುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರನ್ನು ರಾಜ್ಯ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಇವರ ಸಾಧನೆಯನ್ನು ಪ್ರಶಂಸಿಸಿ ನಗರಸಭೆ ವತಿಯಿಂದ ಪ್ರೋತ್ಸಾಹ ಧನದ ಚೆಕ್ ನೀಡಲಾಯಿತು. 
    ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ಕಾಂಗ್ರೆಸ್ ಹಿಂದುಳಿದ ವಿಭಾಗಗಳ ತಾಲೂಕು ಅಧ್ಯಕ್ಷ  ಬಿ. ಗಂಗಾಧರ್, ನಗರಸಭೆ ಹಿರಿಯ ಸದಸ್ಯ ವಿ.ಕದಿರೇಶ್ ಉಪಸ್ಥಿತರಿದ್ದರು.

ಬಾರಂದೂರು ಗ್ರಾಮ ಪಂಚಾಯಿತಿ ಉಪ ಚುನಾವಣೆ : ಕಿರಣ್ ಗೆಲುವು

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ೧ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಕಿರಣ್ ಗೆಲುವು ಸಾಧಿಸಿದ್ದಾರೆ. 
ಭದ್ರಾವತಿ : ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ೧ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಕಿರಣ್ ಗೆಲುವು ಸಾಧಿಸಿದ್ದಾರೆ. 
ಈ ಹಿಂದೆ ಸದಸ್ಯರಾಗಿದ್ದ ಗೋಪಾಲ್ ಬರ್ಗೆ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಒಟ್ಟು ೪ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನ.೨೩ರಂದು ಮತದಾನ ನಡೆದಿದ್ದು, ಸೋಮವಾರ ಎಣಿಕೆ ನಡೆಯಿತು. ಕಿರಣ್ ೨೧೭ ಮತಗಳನ್ನು ಪಡೆದುಕೊಂಡಿದ್ದು, ಒಟ್ಟು ೧೧೭೦ ಮತಗಳಲ್ಲಿ ೮೨೬ ಮತಗಳು ಚಲಾವಣೆಯಾಗಿದ್ದವು. 
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಿರಣ್‌ರವರನ್ನು ಯುವ ಮುಖಂಡ ಬಿ.ಎಸ್ ಬಸವೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಅಭಿನಂದಿಸಿದ್ದಾರೆ.  

ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ, ಮನಸ್ಸಿಗೆ ಬಂದಂತೆ ಆದೇಶಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ

ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ ಜೊತೆಗೆ ಉಲ್ಲಂಘನೆ ಮಾಡುತ್ತಿರುವ ಹಾಗು ಮನಸ್ಸಿಗೆ ಬಂದಂತೆ ಆದೇಶಿಸುತ್ತಿರುವ ಅಧಿಕಾರಿಗಳ ವಿರುದ್ಧ ಜಾತಿನಿಂದನೆ(ಅಟ್ರಾಸಿಟಿ) ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಮುಂಭಾಗ  ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ : ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ ಜೊತೆಗೆ ಉಲ್ಲಂಘನೆ ಮಾಡುತ್ತಿರುವ ಹಾಗು ಮನಸ್ಸಿಗೆ ಬಂದಂತೆ ಆದೇಶಿಸುತ್ತಿರುವ ಅಧಿಕಾರಿಗಳ ವಿರುದ್ಧ ಜಾತಿನಿಂದನೆ(ಅಟ್ರಾಸಿಟಿ) ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಗ್ರಹಿಸಿದರು.
    ಅವರು ಮಂಗಳವಾರ ತಾಲೂಕು ಪಂಚಾಯಿತಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಧರಣಿ ಸತ್ಯಾಗ್ರಹ ನೇತೃತ್ವವಹಿಸಿ ಮಾತನಾಡಿ, ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರು ದೇಶದ ಶೋಷಿತ ಬಡ ವರ್ಗದ ಜನರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಈ ಪೈಕಿ ಪಿಟಿಸಿಎಲ್ ಕಾಯ್ದೆ ಸಹ ಒಂದಾಗಿದೆ. ಈ ಕಾಯ್ದೆಯನ್ನು ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸುರವರು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರು. ಈ ಕಾಯ್ದೆ ಪ್ರಕಾರ ಶೋಷಿತ ಬಡ ವರ್ಗದ ಜನರಿಗೆ ಸರ್ಕಾರದಿಂದ ಮಂಜೂರಾದ ಭೂಮಿಯನ್ನು ಸರ್ಕಾರದ ಅನುಮತಿ ಇಲ್ಲದೆ ಯಾರು ಸಹ ಖರೀದಿಸುವಂತಿಲ್ಲ. ಒಂದು ವೇಳೆ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಸಾಲ ನೀಡಿ ಬಲವಂತವಾಗಿ ಭೂಮಿ ಬರೆಸಿಕೊಂಡಿದ್ದಲ್ಲಿ ಅಥವಾ ದಬ್ಬಾಳಿಕೆ ಅಥವಾ ಬೆದರಿಕೆ ಮೂಲಕ ಖರೀದಿಸಿದ್ದಲ್ಲಿ ಪುನಃ ಭೂಮಿಯನ್ನು ಮೂಲ ಮಂಜೂರುದಾರರಿಗೆ ಹಿಂದಿರುಗಿಸಬೇಕು. ಆದರೆ ಕಾಯ್ದೆ ಕುರಿತು ಅರಿವಿದ್ದರೂ ಸಹ ವಿನಾಕಾರಣ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುವ ಮೂಲಕ ಬಡ ವರ್ಗದವರನ್ನು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. 


    ಈ ನಡುವೆ ಈ ಕಾಯ್ದೆಯನ್ನು ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿ ವರ್ಗ ವಿಫಲವಾಗುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ಈ ಕಾಯ್ದೆಯನ್ನು ಉಲ್ಲಂಘನೆ ಮಾಡುವ ಜೊತೆಗೆ ಮನಸ್ಸಿಗೆ ಬಂದಂತೆ ಆದೇಶಿಸಲಾಗುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಬಡ ವರ್ಗದವರನ್ನು ರಕ್ಷಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. 
    ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಪ್ರತಿಭಟನಾ ಧರಣಿ ಸತ್ಯಾಗ್ರಹ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಹಾಗು ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸುರವರ ಭಾವಚಿತ್ರ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು. 
    ಪ್ರಮುಖರಾದ ಅರುಣ್‌ಕುಮಾರ್, ಶಶಿಕುಮಾರ್ ಗೌಡ, ಎನ್. ಮಂಜುನಾಥ್, ವೈ. ಶಶಿಕುಮಾರ್, ಎಂ.ವಿ ಚಂದ್ರಶೇಖರ್, ವಿ ಈರೇಶ್, ಪತ್ರೇಶ್, ಸಂಗಮ್ಮ, ಮಂಜಮ್ಮ, ಸುವರ್ಣಮ್ಮ, ಕಮಲಮ್ಮ, ಗೌರಮ್ಮ, ಟಿ. ಶ್ವೇತ, ಪವಿತ್ರ, ಆಶಾ, ಎಸ್. ಈರೇಶ್, ರುದ್ರೇಶಪ್ಪ, ಸೀನಪ್ಪ, ಚಂದ್ರಮ್ಮ, ನಾಗರತ್ನಮ್ಮ, ಜಯಮ್ಮ, ಲಕ್ಷ್ಮಮ್ಮ,  ಸೇರಿದಂತೆ ಮಾನವ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು, ಪಿಟಿಸಿಎಲ್ ಕಾಯ್ದೆಯಿಂದ ವಂಚಿತರಾದ ಫಲಾನುಭವಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.