Saturday, November 19, 2022

ನ.೨೦ರಂದು ಭೂಮಿಕಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮ

    ಭದ್ರಾವತಿ, ನ. ೧೯: ಕನ್ನಡ ನಾಡು-ನಡೆ-ನುಡಿ ಬಿಂಬಿಸುವ ನಗರದ ಭೂಮಿಕಾ ವೇದಿಕೆ ವತಿಯಿಂದ ನ.೨೦ರ ಭಾನುವಾರ ಸಂಜೆ ೬ ಗಂಟೆಗೆ ೬೭ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ನಿವೃತ್ತ ಉಪನ್ಯಾಸಕ, ಅಂಕಣಕಾರ ಹಾಗು ಗಮಕಿ ರಾಮಸುಬ್ರಾಯ ಶೇಟ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ಕ್ಷೇತ್ರದ ಅಭಿವೃದ್ಧಿ ಕುಂಠಿತ

ಶಾಸಕ ಬಿ.ಕೆ ಸಂಗಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಆರೋಪ

ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ನ. ೧೯: ಆಡಳಿತಾರೂಢ ಬಿಜೆಪಿ ರಾಜ್ಯ ಸರ್ಕಾರ ಕಾಂಗ್ರೆಸ್ ಪಕ್ಷ ಪ್ರತಿನಿಧಿಸುವ ಶಾಸಕರ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ನೀಡದೇ ಮಲತಾಯಿ ಧೋರಣೆ ಮುಂದುವರೆಸುತ್ತಾ ಬಂದಿದ್ದು, ಪರಿಣಾಮವಾಗಿ ಕಾರ್ಖಾನೆಗಳ ಅವನತಿ ಸೇರಿದಂತೆ ನಿರೀಕ್ಷಿತ ರೀತಿಯಲ್ಲಿ ಭದ್ರಾವತಿ ಕ್ಷೇತ್ರ ಅಭಿವೃದ್ಧಿ ಸಾಧಿಸದೇ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಆರೋಪಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಹಲವು ಬಾರಿ ಸದನದಲ್ಲಿ  ಗಟ್ಟಿಧ್ವನಿಯಲ್ಲಿ ಮಾತನಾಡಿದರೂ ಸಹ ಯಾವುದೇ ರೀತಿಯ ಪ್ರಯೋಜನವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
    ಡಿಸೆಂಬರ್ ತಿಂಗಳಿನಲ್ಲಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳ ಗಮನವನ್ನು ಈ ಕುರಿತಂತೆ ಸೆಳೆಯಲಾಗುವುದು. ನಂತರದ ದಿನಗಳಲ್ಲಿ ಹೋರಾಟದ ರೂಪು-ರೇಷೆ ಸಿದ್ದಪಡಿಸಲಾಗುವುದು ಎಂದರು.
    ಬಡವರಿಗೆ ಮನೆಕಟ್ಟಿಸಿಕೊಡುವ ಗುಂಪುಮನೆ ಯೋಜನೆಯಡಿ ಕ್ಷೇತ್ರದಲ್ಲಿ ಎರಡುಸಾವಿರ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಮುಂದಿನ ಹತ್ತು ದಿನಗಳ ಒಳಗಾಗಿ ಟೆಂಡರ್ ಕರೆಯದಿದ್ದಲ್ಲಿ ವಸತಿ ಸಚಿವರಾದ ವಿ. ಸೋಮಣ್ಣ ರವರ ಮನೆಯ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಶರಾವತಿ ಮುಳುಗಡೆ ಸಂತ್ರಸ್ತರ ನೆರವಿಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಗೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸದಸ್ಯರಾದ ಬಿ.ಟಿ ನಾಗರಾಜ್, ಲತಾ ಚಂದ್ರಶೇಖರ್, ಜಾರ್ಜ್, ಕಾಂತ್‌ರಾಜ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮುಖಂಡರಾದ ತಳ್ಳಿಕಟ್ಟೆ ಲೋಕೇಶ್, ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮದಿನ ಆಚರಣೆ : ಸೇವಾದಳಕ್ಕೆ ತನ್ನದೇ ಆದ ವಿಶೇಷತೆ ಇದೆ

ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ. ಗಂಗಾಧರ್

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದ ಛಲವಾದಿಗಳ ಸಮಾಜದ ಕಛೇರಿ ಆವರಣದಲ್ಲಿ ಭಾರತೀಯ ಸೇವಾದಳ ವತಿಯಿಂದ ಮಾಜಿ ಪ್ರಧಾನಿ, ಭಾರತರತ್ನ ಇಂದಿರಾಗಾಂಧಿಯವರ ೧೦೫ನೇ ಜನ್ಮ ದಿನ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ನ. ೧೯ : ಭಾರತೀಯ ಸೇವಾದಳ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಸೇವಾ ಮನೋಭಾವ, ಶಿಸ್ತು ರೂಪುಗೊಳ್ಳಲು ಸಹಕಾರಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ. ಗಂಗಾಧರ್ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದ ಛಲವಾದಿಗಳ ಸಮಾಜದ ಕಛೇರಿ ಆವರಣದಲ್ಲಿ ಭಾರತೀಯ ಸೇವಾದಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಇಂದಿರಾಗಾಂಧಿಯವರ ೧೦೫ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಈ ಹಿಂದೆ ಸೇವಾದಳ ಹೆಚ್ಚು ಸಕ್ರಿಯವಾಗಿರುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿ ಎಲ್ಲಾ ರೀತಿಯಿಂದಲೂ ಶಕ್ತಿ ತುಂಬುವಲ್ಲಿ ಯಶಸ್ವಿಯಾಗಿತ್ತು. ನಂತರ ದಿನಗಳಲ್ಲಿ ಕೆಲವು ಕಾರಣಗಳಿಂದಾಗಿ ಸೇವಾದಳ ಚಟುವಟಿಕೆಗಳು ಕುಂಠಿತಗೊಂಡಿದ್ದು, ಇದೀಗ ಪುನಃ ದೇಶಾದ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟಿತಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ವಿಶ್ವಾಸವಿದೆ ಎಂದರು.
    ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚು ಪ್ರಬಲವಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್‌ರವರನ್ನು ಚುನಾವಣೆಯಲ್ಲಿ ಪುನಃ ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬರು ಹೆಚ್ಚು ಗಮನ ಹರಿಸಬೇಕೆಂದರು.
    ಕಾರ್ಯಕ್ರಮವನ್ನು ಯುವ ಮುಖಂಡ ಬಿ.ಎಸ್ ಬಸವೇಶ್ ಉದ್ಘಾಟಿಸಿದರು. ಸೇವಾದಳ ಜಿಲ್ಲಾಧ್ಯಕ್ಷ ಮಂಜುನಾಥ್ ಬಾಬು, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸದಸ್ಯರಾದ ಶೃತಿ ವಸಂತ್, ಲತಾ ಚಂದ್ರಶೇಖರ್, ಟಿಪ್ಪು ಸುಲ್ತಾನ್, ಕಾಂತರಾಜ್, ಸರ್ವಮಂಗಳ ಭೈರಪ್ಪ, ಶೋಭಾ ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ರಾಷ್ಟ್ರೀಯ ವಕ್ತಾರ ಅಮೋಸ್, ಚಿನ್ನಪ್ಪ, ಚೌಡಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸೇವಾದಳದ ಹಿರಿಯ ಮಹಿಳೆ ಸರೋಜಮ್ಮ ಪ್ರಾರ್ಥಿಸಿದರು. ಮುಖಂಡ ಎಸ್.ಎಸ್ ಭೈರಪ್ಪ ಸ್ವಾಗತಿಸಿ, ಡಿ. ನರಸಿಂಹಮೂರ್ತಿ ನಿರೂಪಿಸಿದರು. ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಪ್ರಮುಖರಾದ ಸ್ಟ್ಯಾನ್ಲಿ ಸುದರ್ಶನ್, ಅಂತೋಣಿ, ಶೇಖರ್, ಬಾಬು, ಕುಮಾರ್, ಮಹಾದೇವಯ್ಯ, ಭಾಸ್ಕರ್, ಜೀವಾ, ನೇತ್ರ, ಮಂಗಳ, ವೀಣಾ, ಉಷಾಲಕ್ಷ್ಮೀ, ರತ್ನಮ್ಮ, ಲಕ್ಷ್ಮೀ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಯೋಗ ಆರೋಗ್ಯಕ್ಕೆ ಪೂರಕ ಪ್ರತಿಯೊಬ್ಬರು ರೂಡಿಸಿಕೊಳ್ಳಿ : ಆರ್. ರಾಮಮೂರ್ತಿ

ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ್ಯ ಆರ್. ರಾಮಮೂರ್ತಿ ಭದ್ರಾವತಿ ನ್ಯೂಟೌನ್  ಮಹಾತ್ಮ ಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀರಾಮ ಸಮುದಾಯ ಭವನದಲ್ಲಿ ಕರ್ನಾಟಕ ಯೋಗ ಸಂಸ್ಥೆ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ವಿವೇಕಾನಂದ ಯೋಗ ಅಸೋಸಿಯೇಷನ್ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ೪೧ನೇ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಹಾಗೂ ೨೮ನೇ ಕರ್ನಾಟಕ ರಾಜ್ಯ ವಿಜಯೇತರ ಯೋಗಾಸನ ಸ್ಪರ್ಧೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.  
    ಭದ್ರಾವತಿ, ನ. ೧೯: ಎಲ್ಲರಿಗೂ ಆರೋಗ್ಯ ಮುಖ್ಯವಾಗಿದ್ದು, ಇದಕ್ಕೆ ಪೂರಕವಾಗಿರುವ ಯೋಗ ರೂಡಿಸಿಕೊಳ್ಳಬೇಕೆಂದು ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ್ಯ ಆರ್. ರಾಮಮೂರ್ತಿ ಹೇಳಿದರು.
    ಅವರು ಶನಿವಾರ ನಗರದ ನ್ಯೂಟೌನ್  ಮಹಾತ್ಮ ಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀರಾಮ ಸಮುದಾಯ ಭವನದಲ್ಲಿ ಕರ್ನಾಟಕ ಯೋಗ ಸಂಸ್ಥೆ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ವಿವೇಕಾನಂದ ಯೋಗ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೪೧ನೇ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಹಾಗೂ ೨೮ನೇ ಕರ್ನಾಟಕ ರಾಜ್ಯ ವಿಜಯೇತರ ಯೋಗಾಸನ ಸ್ಪರ್ಧೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.  
    ಮನುಷ್ಯನಿಗೆ ಅಧಿಕಾರ, ಸಂಪತ್ತು ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯ ಬಹಳ ಮುಖ್ಯವಾಗಿದೆ. ಹಿನ್ನೆಲೆಯಲ್ಲಿ ಆರೋಗ್ಯಕ್ಕೆ ಪೂರಕವಾಗಿ ಯೋಗ ರೂಡಿಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
    ಕರ್ನಾಟಕ ಯೋಗ ಸಂಸ್ಥೆ ವತಿಯಿಂದ ೩೦ ವರ್ಷಗಳ ಬಳಿಕ ಎರಡನೇ ಬಾರಿಗೆ ಭದ್ರಾವತಿಯಲ್ಲಿ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂರು ಪಟುಗಳು  ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
    ಸ್ತ್ರೀ ರೋಗ ತಜ್ಞೆ ಡಾ. ವೀಣಾ ಭಟ್ ಮಾತನಾಡಿ, ಯೋಗ ಕೇವಲ ಪ್ರದರ್ಶನಕ್ಕೆ ಮೀಸಲಾಗಿರದೆ ನಿದರ್ಶನವಾಗಬೇಕು. ಯೋಗ ಬದುಕಿನ ಅವಿಭಾಗ್ಯ ಅಂಗವಾಗಬೇಕೆಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು. ಕರ್ನಾಟಕ ಯೋಗ ಸಂಸ್ಥೆ ಉಪಾಧ್ಯಕ್ಷ ರುದ್ರಾರಾಧ್ಯ, ಕಾರ್ಯದರ್ಶಿ ಪುಟ್ಟೇಗೌಡ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಶೃತಿ ವಸಂತ್, ಲತಾ ಚಂದ್ರಶೇಖರ್, ಕಾಂತರಾಜ್, ಶ್ರೀ ಅನ್ನಪೂರ್ಣೇಶ್ವರಿ ವಿವೇಕಾನಂದ ಯೋಗ ಅಸೋಸಿಯೇಷನ್ ಅಧ್ಯಕ್ಷ ಕೆ.ಎಚ್ ಪಾಲಾಕ್ಷಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಸೋಸಿಯೇಷನ್ ಕಾರ್ಯದರ್ಶಿ ಕೆ.ಜೆ ತಮ್ಮಣ್ಣಗೌಡ ನಿರೂಪಿಸಿದರು.