ಶಾಸಕ ಬಿ.ಕೆ ಸಂಗಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಆರೋಪ
ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ನ. ೧೯: ಆಡಳಿತಾರೂಢ ಬಿಜೆಪಿ ರಾಜ್ಯ ಸರ್ಕಾರ ಕಾಂಗ್ರೆಸ್ ಪಕ್ಷ ಪ್ರತಿನಿಧಿಸುವ ಶಾಸಕರ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ನೀಡದೇ ಮಲತಾಯಿ ಧೋರಣೆ ಮುಂದುವರೆಸುತ್ತಾ ಬಂದಿದ್ದು, ಪರಿಣಾಮವಾಗಿ ಕಾರ್ಖಾನೆಗಳ ಅವನತಿ ಸೇರಿದಂತೆ ನಿರೀಕ್ಷಿತ ರೀತಿಯಲ್ಲಿ ಭದ್ರಾವತಿ ಕ್ಷೇತ್ರ ಅಭಿವೃದ್ಧಿ ಸಾಧಿಸದೇ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಆರೋಪಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಹಲವು ಬಾರಿ ಸದನದಲ್ಲಿ ಗಟ್ಟಿಧ್ವನಿಯಲ್ಲಿ ಮಾತನಾಡಿದರೂ ಸಹ ಯಾವುದೇ ರೀತಿಯ ಪ್ರಯೋಜನವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಡಿಸೆಂಬರ್ ತಿಂಗಳಿನಲ್ಲಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳ ಗಮನವನ್ನು ಈ ಕುರಿತಂತೆ ಸೆಳೆಯಲಾಗುವುದು. ನಂತರದ ದಿನಗಳಲ್ಲಿ ಹೋರಾಟದ ರೂಪು-ರೇಷೆ ಸಿದ್ದಪಡಿಸಲಾಗುವುದು ಎಂದರು.
ಬಡವರಿಗೆ ಮನೆಕಟ್ಟಿಸಿಕೊಡುವ ಗುಂಪುಮನೆ ಯೋಜನೆಯಡಿ ಕ್ಷೇತ್ರದಲ್ಲಿ ಎರಡುಸಾವಿರ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಮುಂದಿನ ಹತ್ತು ದಿನಗಳ ಒಳಗಾಗಿ ಟೆಂಡರ್ ಕರೆಯದಿದ್ದಲ್ಲಿ ವಸತಿ ಸಚಿವರಾದ ವಿ. ಸೋಮಣ್ಣ ರವರ ಮನೆಯ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರ ನೆರವಿಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಗೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸದಸ್ಯರಾದ ಬಿ.ಟಿ ನಾಗರಾಜ್, ಲತಾ ಚಂದ್ರಶೇಖರ್, ಜಾರ್ಜ್, ಕಾಂತ್‌ರಾಜ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮುಖಂಡರಾದ ತಳ್ಳಿಕಟ್ಟೆ ಲೋಕೇಶ್, ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment