Saturday, November 19, 2022

ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮದಿನ ಆಚರಣೆ : ಸೇವಾದಳಕ್ಕೆ ತನ್ನದೇ ಆದ ವಿಶೇಷತೆ ಇದೆ

ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ. ಗಂಗಾಧರ್

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದ ಛಲವಾದಿಗಳ ಸಮಾಜದ ಕಛೇರಿ ಆವರಣದಲ್ಲಿ ಭಾರತೀಯ ಸೇವಾದಳ ವತಿಯಿಂದ ಮಾಜಿ ಪ್ರಧಾನಿ, ಭಾರತರತ್ನ ಇಂದಿರಾಗಾಂಧಿಯವರ ೧೦೫ನೇ ಜನ್ಮ ದಿನ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ನ. ೧೯ : ಭಾರತೀಯ ಸೇವಾದಳ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಸೇವಾ ಮನೋಭಾವ, ಶಿಸ್ತು ರೂಪುಗೊಳ್ಳಲು ಸಹಕಾರಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ. ಗಂಗಾಧರ್ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದ ಛಲವಾದಿಗಳ ಸಮಾಜದ ಕಛೇರಿ ಆವರಣದಲ್ಲಿ ಭಾರತೀಯ ಸೇವಾದಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಇಂದಿರಾಗಾಂಧಿಯವರ ೧೦೫ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಈ ಹಿಂದೆ ಸೇವಾದಳ ಹೆಚ್ಚು ಸಕ್ರಿಯವಾಗಿರುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿ ಎಲ್ಲಾ ರೀತಿಯಿಂದಲೂ ಶಕ್ತಿ ತುಂಬುವಲ್ಲಿ ಯಶಸ್ವಿಯಾಗಿತ್ತು. ನಂತರ ದಿನಗಳಲ್ಲಿ ಕೆಲವು ಕಾರಣಗಳಿಂದಾಗಿ ಸೇವಾದಳ ಚಟುವಟಿಕೆಗಳು ಕುಂಠಿತಗೊಂಡಿದ್ದು, ಇದೀಗ ಪುನಃ ದೇಶಾದ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟಿತಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ವಿಶ್ವಾಸವಿದೆ ಎಂದರು.
    ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚು ಪ್ರಬಲವಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್‌ರವರನ್ನು ಚುನಾವಣೆಯಲ್ಲಿ ಪುನಃ ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬರು ಹೆಚ್ಚು ಗಮನ ಹರಿಸಬೇಕೆಂದರು.
    ಕಾರ್ಯಕ್ರಮವನ್ನು ಯುವ ಮುಖಂಡ ಬಿ.ಎಸ್ ಬಸವೇಶ್ ಉದ್ಘಾಟಿಸಿದರು. ಸೇವಾದಳ ಜಿಲ್ಲಾಧ್ಯಕ್ಷ ಮಂಜುನಾಥ್ ಬಾಬು, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸದಸ್ಯರಾದ ಶೃತಿ ವಸಂತ್, ಲತಾ ಚಂದ್ರಶೇಖರ್, ಟಿಪ್ಪು ಸುಲ್ತಾನ್, ಕಾಂತರಾಜ್, ಸರ್ವಮಂಗಳ ಭೈರಪ್ಪ, ಶೋಭಾ ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ರಾಷ್ಟ್ರೀಯ ವಕ್ತಾರ ಅಮೋಸ್, ಚಿನ್ನಪ್ಪ, ಚೌಡಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸೇವಾದಳದ ಹಿರಿಯ ಮಹಿಳೆ ಸರೋಜಮ್ಮ ಪ್ರಾರ್ಥಿಸಿದರು. ಮುಖಂಡ ಎಸ್.ಎಸ್ ಭೈರಪ್ಪ ಸ್ವಾಗತಿಸಿ, ಡಿ. ನರಸಿಂಹಮೂರ್ತಿ ನಿರೂಪಿಸಿದರು. ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಪ್ರಮುಖರಾದ ಸ್ಟ್ಯಾನ್ಲಿ ಸುದರ್ಶನ್, ಅಂತೋಣಿ, ಶೇಖರ್, ಬಾಬು, ಕುಮಾರ್, ಮಹಾದೇವಯ್ಯ, ಭಾಸ್ಕರ್, ಜೀವಾ, ನೇತ್ರ, ಮಂಗಳ, ವೀಣಾ, ಉಷಾಲಕ್ಷ್ಮೀ, ರತ್ನಮ್ಮ, ಲಕ್ಷ್ಮೀ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment