Tuesday, November 23, 2021

ಕೆಸರಿನ ಗದ್ದೆಯಂತಾದ ರಸ್ತೆ : ಗ್ರಾಮಸ್ಥರ ಸಂಚಾರಕ್ಕೆ ತೊಂದರೆ


ಭದ್ರಾವತಿ ತಾಲೂಕಿನ ಸಂಜೀವ ನಗರದಿಂದ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಪರ್ಕಗೊಂಡಿರುವ ರಸ್ತೆ ಸುಮಾರು ೫ ವರ್ಷಗಳಿಂದ ಹಾಳಾಗಿದ್ದು, ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ.
    ಭದ್ರಾವತಿ, ನ. ೨೩: ತಾಲೂಕಿನ ಸಂಜೀವ ನಗರದಿಂದ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಪರ್ಕಗೊಂಡಿರುವ ರಸ್ತೆ ಸುಮಾರು ೫ ವರ್ಷಗಳಿಂದ ಹಾಳಾಗಿದ್ದು, ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ.
    ಸಂಜೀವ ನಗರದಿಂದ ಕೊಮಾರನಹಳ್ಳಿಗೆ ಸಂಚರಿಸಲು ಇರುವ ಪ್ರಮುಖ ರಸ್ತೆ ಇದಾಗಿದ್ದು, ತುಂಬಾ ಹಾಳಾಗಿ ಅಲ್ಲಲ್ಲಿ ಬಾರಿ ಗಾತ್ರದ ಗುಂಡಿಗಳು ಬಿದ್ದಿವೆ. ಜೊತೆಗೆ ಜಲ್ಲಿಕಲ್ಲು ಕಿತ್ತುಕೊಂಡು ಹೊರಬಂದಿವೆ. ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗುತ್ತಿದೆ.
    ಈ ರಸ್ತೆಯನ್ನು ತಕ್ಷಣ ದುರುಸ್ತಿಪಡಿಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ, ಸ್ಥಳೀಯ ಪಂಚಾಯಿತಿ ಸದಸ್ಯರಿಗೆ ಹಾಗು ಶಾಸಕರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ : ಜಂತುಹುಳು ಬಾಧೆಯಿಂದ ಎಚ್ಚರವಹಿಸಿ

ಕಾಗದ ನಗರದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಎಂ. ಅಶೋಕ್

ಭದ್ರಾವತಿ ಕಾಗದ ನಗರದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿದರು.
    ಭದ್ರಾವತಿ, ನ. ೨೩:  ಜಂತುಹುಳುವಿನ ಬಾಧೆಯಿಂದ ಮಕ್ಕಳಲ್ಲಿ ರಕ್ತಹೀನತೆ, ಪೋಷಕಾಂಶದ ಕೊರತೆ, ಹಸಿವಾಗದಿರುವುದು, ನಿಶ್ಯಕ್ತಿ ಮತ್ತು ಆತಂಕ, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ, ತೂಕ ಕಡಿಮೆಯಾಗುವುದು ಇತ್ಯಾದಿ ರೋಗಲಕ್ಷಣಗಳು ಕಾಣಿಸಿಕೊಳ್ಳಲಿವೆ.  ಈ ರೋಗ ಲಕ್ಷಣಗಳನ್ನು ನಿಯಂತ್ರಿಸಲು ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ಜಂತುಹುಳು ಮಾತ್ರೆ ನೀಡಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹೇಳಿದರು.
    ಅವರು ಮಂಗಳವಾರ ಕಾಗದ ನಗರದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜಂತುಹುಳು ಮಾತ್ರೆ ಸೇವನೆಯಿಂದ ರಕ್ತಹೀನತೆ ನಿಯಂತ್ರಿಸುವ ಜೊತೆಗೆ ಪೋಷಕಾಂಶದ ಸುಧಾರಣೆ ಮತ್ತು ಕಲಿಕೆಯಲ್ಲಿ ಏಕಾಗ್ರತೆ ಉಂಟಾಗುತ್ತದೆ ಎಂದರು.
   ಪ್ರಾಂಶುಪಾಲ ಆರ್ ಸತೀಶ್ ಮಾತನಾಡಿ, ಸರ್ಕಾರದಿಂದ ಸಿಗುವ ಜಂತುಹುಳು ಮಾತ್ರೆ ಸದುಪಯೋಗಪಡಿಸಿಕೊಂಡು ಆರೋಗ್ಯ ಸುಧಾರಣೆ ಮಾಡಿಕೊಳ್ಳುವ ಜೊತೆಗೆ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕು. ಕುಡಿಯಲು ಶುದ್ಧವಾದ ನೀರು ಬಳಸಬೇಕು. ಆಹಾರ ಸೇವಿಸುವ ಸ್ಥಳದ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶೌಚಾಲಯ ಬಳಸಿದ ನಂತರ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು ಸೇರಿದಂತೆ ಇತ್ಯಾದಿ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ದತ್ತಾತ್ರೇಯ, ಹಿರಿಯ ಆರೋಗ್ಯ ಸಹಾಯಕಿಯರಾದ ರೇವತಿ, ಪ್ರಭಾವತಿ, ಇಂದ್ರ, ಅಂಕಿತ, ಮಮತಾ, ಹೆನ್ರಿ,  ದೈಹಿಕ ಶಿಕ್ಷಕ ಸಿದ್ದಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಒಕ್ಕಲಿಗರ ಸಂಘದ ಚುನಾವಣೆ : ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ನಾಮಪತ್ರ ಸಲ್ಲಿಕೆ

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಶಿವಮೊಗ್ಗ-ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ವ್ಯಾಪ್ತಿಯ ನಿರ್ದೇಶಕರ ಸ್ಥಾನದ ಚುನಾವಣೆಗೆ ಮಂಗಳವಾರ ಭದ್ರಾವತಿ ತಾಲೂಕು ಒಕ್ಕಲಿಗರ ಸಂಘ ಪ್ರತಿನಿಧಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ನಾಮಪತ್ರ ಸಲ್ಲಿಸಿದರು.
    ಭದ್ರಾವತಿ, ನ. ೨೩: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಶಿವಮೊಗ್ಗ-ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ವ್ಯಾಪ್ತಿಯ ನಿರ್ದೇಶಕರ ಸ್ಥಾನದ ಚುನಾವಣೆಗೆ ಮಂಗಳವಾರ ತಾಲೂಕು ಒಕ್ಕಲಿಗರ ಸಂಘ ಪ್ರತಿನಿಧಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ನಾಮಪತ್ರ ಸಲ್ಲಿಸಿದರು.
    ಒಕ್ಕಲಿಗ ಸಮುದಾಯದವರು ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ ನಂತರ ಹೆಚ್ಚಿನ ಸಂಖ್ಯೆಯಲ್ಲಿ ೨ನೇ ಸ್ಥಾನದಲ್ಲಿದ್ದರೂ ಸಹ ತಾಲೂಕಿನಿಂದ ಇಲ್ಲಿಯವರೆಗೂ ನಿರ್ದೇಶಕರ ಸ್ಥಾನಕ್ಕೆ ಯಾರೊಬ್ಬರೂ ಸಹ ಆಯ್ಕೆಯಾಗದಿರುವುದು ಇಲ್ಲಿನ ಒಕ್ಕಲಿಗ ಸಮುದಾಯದವರಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಹೇಗಾದರೂ ಮಾಡಿ ನಿರ್ದೇಶಕರ ಸ್ಥಾನ ತನ್ನದಾಗಿಸಿಕೊಳ್ಳಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕು ಒಕ್ಕಲಿಗರ ಸಂಘ ಈ ಬಾರಿ ಮುಂಚೂಣಿಗೆ ಬಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಅವರನ್ನು ಅಧಿಕೃತವಾಗಿ ಕಣಕ್ಕಿಳಿಸಿದೆ.
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಡಿಸಿಸಿ ಬ್ಯಾಂಕ್ ಸದಸ್ಯ, ಸಹಕಾರಿ ಧುರೀಣ ಜೆ.ಪಿ ಯೋಗೇಶ್, ೩೩ನೇ ವಾರ್ಡಿನ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್,  ಶಿಮೂಲ್ ಮಾಜಿ ಅಧ್ಯಕ್ಷ ಡಿ. ಆನಂದ್ ಮತ್ತು ಪ್ರಗತಿಪರ ಹೋರಾಟಗಾರ, ಮುಖಂಡ ಬಾಲಕೃಷ್ಣ ಸೇರಿದಂತೆ ಇನ್ನಿತರರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ತೀವ್ರ ಪೈಪೋಟಿಗೆ ಮುಂದಾಗಿದ್ದರು.
    ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ೨ ದಿನಗಳು ಮಾತ್ರ ಬಾಕಿ ಉಳಿದಿದ್ದ ಹಿನ್ನಲೆಯಲ್ಲಿ ಸೋಮವಾರ ಅಪ್ಪರ್‌ಹುತ್ತಾ ಅನನ್ಯ ವಿದ್ಯಾಸಂಸ್ಥೆ ಆವರಣದಲ್ಲಿ ಸಮುದಾಯದವರ ಬಹಿರಂಗ ಸಭೆ ನಡೆಸುವ ಮೂಲಕ ಅಂತಿಮವಾಗಿ ಎಸ್. ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
    ಎಸ್. ಕುಮಾರ್ ಸಮುದಾಯದ ಪ್ರಮುಖರಾದ ಶಾರದ ಅಪ್ಪಾಜಿ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಂಜುಂಡೇಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಮುಖಂಡರಾದ ಪದ್ಮನಾರಾಯಣ, ಭಾಗ್ಯಮ್ಮ, ಅನಿಲ್‌ಕುಮಾರ್, ಉಮೇಶ್ ಸೇರಿದಂತೆ ಇನ್ನಿತರರೊಂದಿಗೆ ನಾಮಪತ್ರ ಸಲ್ಲಿಸಿದರು.
    ಈ ನಡುವೆ ೩೩ನೇ ವಾರ್ಡಿನ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್ ಸಹ ಮಂಗಳವಾರ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದು, ನನ್ನ ಸ್ಪರ್ಧೆ ವೈಯಕ್ತಿಕವಾಗಿದೆ. ಯಾರ ವಿರುದ್ಧವೂ ನಾನು ಸ್ಪರ್ಧಿಸುತ್ತಿಲ್ಲ ಎಂದು ಆರ್. ಮೋಹನ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.