Monday, December 19, 2022

ಧನಾತ್ಮಕ ಆಲೋಚನೆಯಿಂದ ಉತ್ತಮ ಕಾರ್ಯ : ಟಿ. ಮಲ್ಲಿಕಾರ್ಜುನ್

ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯತಿ  ಸರ್ಕಾರಿ ಕಿರಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಪ್ರೇಮ ತಂಡದಿಂದ ೪೩ನೇ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಡಿ. ೧೯ : ನಮ್ಮಲ್ಲಿ ಧನಾತ್ಮಕ ಆಲೋಚನೆಯಿಂದ ಉತ್ತಮ ಅನುಷ್ಠಾನ ಮಾಡಲು ಸಾಧ್ಯವಿದ್ದು, ಒಬ್ಬನಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಸುಮ್ಮನಿರಬಾರದು ಬದಲಾಗಿ ಉತ್ತಮ ಕೆಲಸ ಮಾಡುವವರ ಜೊತೆಯಲ್ಲಿ ಕೈ ಜೊಡಿಸಿದರೆ ಯಶಸ್ಸು ಇಬ್ಬರಿಗೂ ದೊರೆಯುತ್ತದೆ ಎಂದು ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ, ಕರ್ನಾಟಕ ಪರಿಸರರತ್ನ ಪ್ರಶಸ್ತಿ ಪುರಸ್ಕೃತ ಟಿ. ಮಲ್ಲಿಕಾರ್ಜುನ್ ಹೇಳಿದರು.
    ಅವರು ತಾಲೂಕಿನ ಹಿರಿಯೂರು ಗ್ರಾಮ ಪಂಚಾಯತಿ  ಸರ್ಕಾರಿ ಕಿರಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಹಮ್ಮಿಕೊಳ್ಳಲಾಗಿದ್ದ ೪೩ನೇ ಶ್ರಮದಾನ ಕಾರ್ಯಕ್ರಮಕ್ಕೆ ಗೋಡೆಗೆ ಬಣ್ಣಹಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿದರು.  
    ತಮ್ಮ ಸ್ವಂತ ಹಣದಿಂದ ಪರಿಸರ ಪ್ರೇಮ ತಂಡ ರೂಪಿಸಿಕೊಂಡು ಇದುವರೆಗೂ ೪೨ ಶ್ರಮದಾನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ನಾವು ಕೈಗೊಳ್ಳುವ ಕಾರ್ಯಗಳು ಸಾರ್ಥಕಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತಿಸಬೇಕೆಂದರು.
    ೭ ಶಾಲಾ ಕೊಠಡಿಗಳಿಗೆ ಬಣ್ಣ ಹಚ್ಚಲಾಯಿತು. ಅಲ್ಲದೆ ಅರೋಗ್ಯ ತಪಾಸಣೆ, ಶಾಲಾ ಸ್ವಚ್ಛತೆ ಕೈಗೊಳ್ಳಲಾಯಿತು. ಮಕ್ಕಳು ಮತ್ತು ಮಹಿಳೆಯರಿಗೆ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯತಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಪೋಷಕರು, ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಕೋಡ್ಲು ಯಜ್ಞ ಯ್ಯ, ಸಿ.ಅರ್.ಪಿ ಜೆ.ಎಚ್ ವೇಣುಗೋಪಾಲ್, ಪರಿಸರ ಪ್ರೇಮ ತಂಡದ ಅಧ್ಯಕ್ಷ ಶಿವಾನಾಯ್ಕ, ಜಿಲ್ಲಾ ಕಾರ್ಯದರ್ಶಿ ಪಿ.ಕೆ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಹಕಾರಿ ಧುರೀಣ ಎನ್. ಕೃಷ್ಣಮೂರ್ತಿಗೆ ಸಾಧನ ಶ್ರೀ ಪ್ರಶಸ್ತಿ


ಮಂಗಳೂರಿನ ಕಥಾಬಿಂದು ಕನ್ನಡ ಕಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗು ಬೆಂಗಳೂರಿನ ಸಮೃದ್ಧಿ ಫೌಂಡೇಶನ್ ಮತ್ತು ನಗರದ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ವತಿಯಿಂದ ಉತ್ತರ ಪ್ರದೇಶದ ವಾರಣಾಸಿ ಕಾಶಿ ಜಂಗಮವಾಡಿ ಮಠದಲ್ಲಿ ’ಕನ್ನಡ ಕಂಪು ಸರಣಿ ೫ ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಭದ್ರಾವತಿಯ ಹಿರಿಯ ಸಹಕಾರಿ ಧುರೀಣ ಎನ್. ಕೃಷ್ಣಮೂರ್ತಿ ಅವರಿಗೆ ಸಾಧನ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
     ಭದ್ರಾವತಿ, ಡಿ.೧೯: ಮಂಗಳೂರಿನ ಕಥಾಬಿಂದು ಕನ್ನಡ ಕಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗು ಬೆಂಗಳೂರಿನ ಸಮೃದ್ಧಿ ಫೌಂಡೇಶನ್ ಮತ್ತು ನಗರದ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ವತಿಯಿಂದ ಉತ್ತರ ಪ್ರದೇಶದ ವಾರಣಾಸಿ ಕಾಶಿ ಜಂಗಮವಾಡಿ ಮಠದಲ್ಲಿ ’ಕನ್ನಡ ಕಂಪು ಸರಣಿ ೫ ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ನಗರದ ಹಿರಿಯ ಸಹಕಾರಿ ಧುರೀಣ ಎನ್. ಕೃಷ್ಣಮೂರ್ತಿ ಅವರಿಗೆ ಸಾಧನ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    ಕೃಷ್ಣಮೂರ್ತಿಯವರು ಹಲವಾರು ವರ್ಷಗಳಿಂದ ಹಳೆನಗರದ ಮಾಡಲ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲದೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು  ನೀಡಿ ಗೌರವಿಸಲಾಗಿದೆ.  
ಕಥಾಬಿಂದು ಕನ್ನಡ ಕಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಪಿ.ವಿ ಪ್ರದೀಪ್‌ಕುಮಾರ್, ಸಮೃದ್ಧಿ ಫೌಂಡೇಶನ್ ಅಧ್ಯಕ್ಷ ರುದ್ರಾರಾಧ್ಯ ಮತ್ತು ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಸಿದ್ದಲಿಂಗಯ್ಯ, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ನಿವೃತ್ತ ಅಧೀಕ್ಷಕ ಅಭಿಯಂತರ ರವೀಂದ್ರ ಕಿಣಿ, ಡಿಎಸ್‌ಎಸ್ ಮುಖಂಡ ಕೆ. ನಾಗರಾಜ, ಆಯುರ್ವೇದ ಸಂಕಾಯ ಕಾಶಿ ಹಿಂದೂ ವಿಶ್ವವಿದ್ಯಾಲಯ ವಾರಣಾಸಿ ಪ್ರೊಫೆಸರ್ ಡಾ. ಪರಮೇಶ್ವರಪ್ಪ ಎಸ್. ಬ್ಯಾಡಗಿ, ವಿಜ್ಞಾನ ಸಂಸ್ಥಾನ ಕಾಶಿ ವಿಶ್ವವಿದ್ಯಾಲಯ ವಾರಣಾಸಿ ಪ್ರೊಫೆಸರ್ ಡಾ. ಬಸವಪ್ರಭು ಚಿರಲಿ, ಜಂಗಮವಾಡಿ ಮಠ ವ್ಯವಸ್ಥಾಪಕಿ ನಳಿನಿ ಗಂಗಾಧರ ಚಿಲುಮೆ ಮತ್ತು ಶಿವಾನಂದ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ : ಎನ್‌ಎಸ್‌ಯುಐ ಪ್ರತಿಭಟನೆ

ನೂತನ ರಾಷ್ಟೀಯ ಶಿಕ್ಷಣ ನೀತಿ ವಿರೋಧಿಸಿ ಹಾಗು ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಭದ್ರಾವತಿಯಲ್ಲಿ ನ್ಯಾಷನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್‌ಎಸ್‌ಯುಐ) ತಾಲೂಕು ಶಾಖೆವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯ ಹಾಗು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ, ಡಿ. ೧೯: ನೂತನ ರಾಷ್ಟೀಯ ಶಿಕ್ಷಣ ನೀತಿ ವಿರೋಧಿಸಿ ಹಾಗು ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನ್ಯಾಷನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್‌ಎಸ್‌ಯುಐ) ತಾಲೂಕು ಶಾಖೆವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯ ಹಾಗು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  
    ವಿಶ್ವ ವಿದ್ಯಾನಿಲಯ ಹಾಗು ಸಂಯುಕ್ತ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಪ್ರತಿಭಟನೆ ಮೂಲಕ ರಾಜ್ಯ ಹಾಗು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಮುಸ್ವಿರ್ ಬಾಷ ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಶರಣ್, ಸಲಹೆಗಾರ ಮುರುಗೇಶ್, ಇಮ್ರಾನ್, ಸಿಡಿಸಿ ಸದಸ್ಯರಾದ ಚಂದ್ರಣ್ಣ,  ಪ್ರಮೋದ್ ನಗರಸಭೆ ಸದಸ್ಯ ಜಾರ್ಜ್, ಯುವ ಮುಖಂಡ ಅಭಿಲಾಷ್, ನಾಗರಾಜ್, ಅಭಿ, ಶ್ಯಾಮ್, ಹರ್ಷ, ಮನು, ದೀಕ್ಷಿ, ಸಂಗೀತ, ಬಿಂದು, ಸಿಂಧು, ರಂಜಿತಾ ಮತ್ತು ಭಾವನ  ಪಾಲ್ಗೊಂಡಿದ್ದರು.