ವಿಐಎಸ್‌ಎಲ್ ನಗರಾಡಳಿತದಿಂದ ಬೇಡಿಕೆ ಈಡೇರಿಕೆಗೆ ಭರವಸೆ
![](https://blogger.googleusercontent.com/img/b/R29vZ2xl/AVvXsEhqqRf0eHgrliAfj2jzAqMfwyVnyxQNTRB_Hd6lAvgtk3KjOGRhDfZHT0sltH7n2rukdB7P3j_1dWv0yZ7q395H73UmietkEeBOJ1Aq1aYIHsPc5AYQ5kwQIjkkBWAZf23TuQHonKTEXwNH/w400-h190-rw/D16-BDVT-792936.jpg)
ಮನೆ ಬಾಡಿಗೆ ಹೆಚ್ಚಳ, ಅಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿರುವ ಭದ್ರಾವತಿ ವಿಐಎಸ್‌ಎಲ್ ನಗರಾಡಳಿತ ವಿರುದ್ಧ ನಿವೃತ್ತ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು
ಭದ್ರಾವತಿ, ಅ. ೧೬ : ಮನೆ ಬಾಡಿಗೆ ಹೆಚ್ಚಳ, ಅಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿರುವ ವಿಐಎಸ್‌ಎಲ್ ನಗರಾಡಳಿತ ವಿರುದ್ಧ ನಿವೃತ್ತ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಕಾರ್ಖಾನೆಯಲ್ಲಿ ಸುಮಾರು ೩೦-೪೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕಾರ್ಮಿಕರು ವಾಸಿಸುತ್ತಿರುವ ಮನೆಗಳಿಗೆ ಅಧಿಕ ಬಾಡಿಗೆ ನಿಗದಿಪಡಿಸಿರುವುದು ಸರಿಯಲ್ಲ. ವಾಸಕ್ಕೆ ಯೋಗ್ಯವಲ್ಲದ ಹಾಳಾದ ಮನೆಗಳನ್ನು ಸುಮಾರು ೫-೬ ಲಕ್ಷ ರು. ವೆಚ್ಚದಲ್ಲಿ ದುರಸ್ತಿ ಪಡಿಸಿಕೊಂಡು ವಾಸಿಸುತ್ತಿದ್ದು, ನಿವೃತ್ತಿ ಹಣವನ್ನು ಬಹುತೇಕ ವ್ಯಯ ಮಾಡಿದ್ದಾರೆ. ಇದೀಗ ಇದೀಗ ಶೇಕಡ ನೂರರಷ್ಟು ಮನೆ ಬಾಡಿಗೆ ಹೆಚ್ಚಳ ಮಾಡಿರುವುದು ನಿವೃತ್ತ ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ. ಬೆಳಿಗ್ಗೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಕಾರ್ಖಾನೆಯ ನಗರಾಡಳಿತ ಯಾವುದೇ ರೀತಿಯಲ್ಲಿ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಮನೆ ಬಾಡಿಗೆ ಹೆಚ್ಚಳ, ಅಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿರುವ ಭದ್ರಾವತಿ ವಿಐಎಸ್‌ಎಲ್ ನಗರಾಡಳಿತ ವಿರುದ್ಧ ನಿವೃತ್ತ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ಶಾಸಕ ಬಿ.ಕೆ ಸಂಗಮೇಶ್ವರ, ಸಮಿತಿ ಅಧ್ಯಕ್ಷ ಬಾಲಕೃಷ್ಣ, ಡಿಎಸ್‌ಎಸ್ ಮುಖಂಡ ಸತ್ಯ, ಮುಖಂಡರಾದ ಗೋವಿಂದ ಸ್ವಾಮಿ, ಕಾಂತರಾಜು, ವಿಲ್ಸನ್ ಬಾಬು, ಕಬಡ್ಡಿ ಕೃಷ್ಣೇಗೌಡ, ಎನ್, ರಾಮಕೃಷ್ಣ, ಡಿ. ನರಸಿಂಹಮೂರ್ತಿ, ಎಸ್.ಎಸ್ ಭೈರಪ್ಪ, ಮುಕುಂದಯ್ಯ, ವೆಂಕಟೇಶ್, ಕೀರ್ತಿ ಗುಜ್ಜಾರ್, ಚನ್ನಪ್ಪ, ವಿಶ್ವನಾಥಗಾಯಕ್‌ವಾಡ್, ಗಿರಿನಾಯ್ಡು, ಎಎಪಿ ಪಕ್ಷದ ಪ್ರಮುಖರಾದ ಜಿಲ್ಲಾಧ್ಯಕ್ಷ ರವಿಕುಮಾರ್, ಪರಮೇಶ್ವರಾಚಾರ್, ಜಯಶ್ರೀ ವೃತ್ತ ಹಿರಿಯ ನಾಗರೀಕರ ಸಂಘದ ಅಧ್ಯಕ್ಷ ದೊಡ್ಡಯ್ಯ, ಲಾಜರ್, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಪದಾಧಿಕಾರಿಗಳು ಸೇರಿದಂತೆ ನಿವೃತ್ತ ಕಾರ್ಮಿಕರ ಕುಟುಂಬ ವರ್ಗದವರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಪ್ರತಿಭಟನೆಗೆ ಮಣಿದ ವಿಐಎಸ್‌ಎಲ್ ನಗರಾಡಳಿತ:
ಪ್ರತಿಭಟನೆ ಹೆಚ್ಚಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ಹಿರಿಯ ಅಧಿಕಾರಿಗಳು ಉಕ್ಕು ಪ್ರಾಧಿಕಾರದ ಮುಖ್ಯ ಆಡಳಿತ ಕಛೇರಿ ಅಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ಮುಂದಿನ ೬ವರ್ಷಗಳ ವರೆಗೆ ಯಾವುದೇ ಕಾರಣಕ್ಕೂ ಬಾಡಿಗೆ ಹೆಚ್ಚಳ ಮಾಡುವುದಿಲ್ಲ. ಮುಂದಿನ ಒಂದು ವಾರದ ನಂತರ ಸಮರ್ಪಕವಾಗಿ ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು.