Sunday, April 18, 2021

ಏ.೧೯ ನಾಮಪತ್ರ ಹಿಂಪಡೆಯಲು ಕೊನೆಯ ದಿನ

     ಭದ್ರಾವತಿ, ಏ. ೧೮: ನಗರಸಭೆ ೩೫ ವಾರ್ಡ್‌ಗಳ ಚುನಾವಣೆ ಸಂಬಂಧ ನಾಮಪತ್ರ ಹಿಂಪಡೆಯಲು ಏ.೧೯ ಕೊನೆಯ ದಿನವಾಗಿದ್ದು, ನಾಮಪತ್ರ ಪರಿಶೀಲನೆ ನಂತರ ೧೯೫ ನಾಮಪತ್ರಗಳು ಕ್ರಮ ಬದ್ದವಾಗಿವೆ. ಸೋಮವಾರ ಸಂಜೆ ವೇಳೆಗೆ ಅಂತಿಮ ಕಣದಲ್ಲಿರುವವರ ಮಾಹಿತಿ ತಿಳಿದು ಬರಲಿದೆ.
     ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮೂರು ಪಕ್ಷಗಳು ೩೫ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಉಳಿದಂತೆ ೯೦ ಅಭ್ಯರ್ಥಿಗಳ ಪೈಕಿ ಎಎಪಿ-೭, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೨, ಎಐಎಂಐಎಂ-೨, ಎಸ್‌ಡಿಪಿಐ-೩ ಮತ್ತು ಪಕ್ಷೇತರ-೭೬ ಅಭ್ಯರ್ಥಿಗಳು ಇದ್ದು, ಪಕ್ಷೇತರ ಅಭ್ಯರ್ಥಿಗಳ ಪೈಕಿ ಬಹಳಷ್ಟು ಮಂದಿ ನಾಮಪತ್ರ ಹಿಂಪಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಈ ನಡುವೆ ಪ್ರತಿ ಬಾರಿ ೨ ರಿಂದ ೩ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

ರಂಜಾನ್ ಮಾಸ : ದೀನದಲಿತರಿಗೆ ಆಹಾರ ಸಾಮಾಗ್ರಿ ವಿತರಣೆ

ರಂಜಾನ್ ಮಾಸದ ಹಿನ್ನಲೆಯಲ್ಲಿ ಭದ್ರಾವತಿ ಸಫಾ ಬೈತುಲ್ ಮಾಲ್ ರಿಲಿಜನ್ ಅಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ದೀನದಲಿತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಏ. ೧೮: ರಂಜಾನ್ ಮಾಸದ ಹಿನ್ನಲೆಯಲ್ಲಿ ನಗರದ ಸಫಾ ಬೈತುಲ್ ಮಾಲ್ ರಿಲಿಜನ್ ಅಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ದೀನದಲಿತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
    ಟ್ರಸ್ಟ್ ವತಿಯಿಂದ ಪ್ರತಿ ವರ್ಷ ರಂಜಾನ ಮಾಸದಲ್ಲಿ ಆಹಾರ ಸಾಮಗ್ರಿಗಳನ್ನು ದೀನದಲಿತರಿಗೆ ವಿತರಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ದೀನದಲಿತರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಟ್ರಸ್ಟ್ ಅಧ್ಯಕ್ಷ ಮೌಲಾನ ಅಸ್ಲಂ ಸಾಬ್ ಅಧ್ಯಕ್ಷತೆ ವಹಿಸಿದ್ದರು. ನಜೀರ್ ಅಹಮದ್,  ಸನಾವುಲ್ಲಾ ಸಾಬ್, ಮೌಲಾನ ಸಗೀರ್ ಸಾಬ್. ಅಫೀಸ್ ಉಲ್ಲಾ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಮುಸ್ತಿ ಸಾಧಿಕ್ ಸಾಬ್ ಪ್ರಾರ್ಥಿಸಿದರು. ಸಾಧಿಕ್ ಮೌಲಾನ ವಂದಿಸಿದರು.

ಏ.೧೯ರಿಂದ ಚುನಾವಣಾ ಜಾಗೃತಿ ಕಾರ್ಯಕ್ರಮ

ಭದ್ರಾವತಿ, ಏ. ೧೮: ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಏ.೧೯ ರಿಂದ ೨೬ರ ವರೆಗೆ ಭಿತ್ತಿಪತ್ರದ ಮೂಲಕ ನಗರಸಭೆ ೩೫ ವಾರ್ಡ್‌ಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಆಟೋ ಮೂಲಕ ಬೆಳಿಗ್ಗೆ ೮ ರಿಂದ ಸಂಜೆ ೫ ಗಂಟೆವರೆಗೆ ಪ್ರಚಾರ ನಡೆಯಲಿದ್ದು, ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ, ಪ್ರಾಮಾಣಿಕ ಹಾಗು ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಹಾಗು ಹಣ, ಹೆಂಡ ಸೇರಿದಂತೆ ಇನ್ನಿತರ ಅಮಿಷಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸಲಾಗುವುದು.
ಕಾರ್ಯಕ್ರಮಕ್ಕೆ ಏ.೧೯ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಮುಂಭಾಗ ಪೌರಾಯುಕ್ತ ಮನೋಹರ್ ಚಾಲನೆ ನೀಡಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.

ಹೊಸ ಸೇತುವೆ ಕಾಮಗಾರಿ ಶೇ.೮೦ರಷ್ಟು ಪೂರ್ಣ

ಸುಮಾರು ೧೫೦ ವರ್ಷಗಳಿಗೂ ಅಧಿಕ, ಹಳೇಯದಾದ ಭದ್ರಾವತಿ ನಗರದ ಹೃದಯ ಭಾಗದಲ್ಲಿರುವ ಭದ್ರಾ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಇದೀಗ ಶೇ.೮೦ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ.

   ಭದ್ರಾವತಿ, ಏ. ೧೮: ಸುಮಾರು ೧೫೦ ವರ್ಷಗಳಿಗೂ ಅಧಿಕ, ಹಳೇಯದಾದ ನಗರದ ಹೃದಯ ಭಾಗದಲ್ಲಿರುವ ಭದ್ರಾ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಇದೀಗ ಶೇ.೮೦ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ.
  ಸೇತುವೆಯನ್ನು ಸಂಪೂರ್ಣವಾಗಿ ಕಾಂಕ್ರಿಟ್‌ನಿಂದ ನಿರ್ಮಿಸಲಾಗುತ್ತಿದ್ದು, ಎರಡು ಬದಿ ಆಕರ್ಷಕವಾಗಿ ಕಮಾನು ಮಾದರಿಯಲ್ಲಿ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಭಾನುವಾರ ಬೆಳಿಗ್ಗೆ ಸೇತುವೆ ಎರಡನೇ ಕಮಾನು ಅಳವಡಿಸುವ ಕಾರ್ಯ ನಡೆಯಿತು. ಇದರಿಂದಾಗಿ ಬೆಳಿಗ್ಗೆ ಸುಮಾರು ೨ ತಾಸು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
    ಭದ್ರಾ ಸೇತುವೆ ಶಿಥಿಲಗೊಂಡ ಪರಿಣಾಮ ಹೊಸ ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸಿಕೊಂಡು ಬರಲಾಗುತ್ತಿತ್ತು. ಇದರ ಪರಿಣಾಮ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಡಾ. ಎಚ್.ಸಿ ಮಹಾದೇವಪ್ಪ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಸುಮಾರು ೧೮ ತಿಂಗಳ ಅವಧಿಯಲ್ಲಿ ಮುಕ್ತಾಯಗೊಳ್ಳಬೇಕಾದ ಕಾಮಗಾರಿ ಹಲವಾರು ಕಾರಣಗಳಿಂದ ವಿಳಂಬವಾಗಿದ್ದು, ಇದೀಗ ಶೇ.೮೦ರಷ್ಟು ಕಾಮಗಾರಿ ನಡೆದಿದೆ. ಮುಂದಿನ ೨-೩ ತಿಂಗಳಲ್ಲಿ ಸೇತುವೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.