Thursday, October 12, 2023

ಕೆಂಪಮ್ಮ ನಿಧನ

ಕೆಂಪಮ್ಮ
    ಭದ್ರಾವತಿ : ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಕುರುಬ ಸಮಾಜದ ಮುಖಂಡರಾದ ಹುಚ್ಚಪ್ಪರವರ ತಾಯಿ ಕೆಂಪಮ್ಮ(೯೦) ನಿಧನ ಹೊಂದಿದರು.
    ಹುಚ್ಚಪ್ಪ ಸೇರಿದಂತೆ ೪ ಪುತ್ರರು, ಓರ್ವ ಪುತ್ರಿ ಇದ್ದರು. ಇವರ ಅಂತ್ಯಕ್ರಿಯೆ ಗುರುವಾರ ಸಂಜೆ ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ತಾಲೂಕು ಕುರುಬ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಮುಖಂಡರು ಸಂತಾಪ ಸೂಚಿಸಿದ್ದಾರೆ.

ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ : ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಳ್ಳಲು ಆಗ್ರಹ

ಭದ್ರಾವತಿ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಉಪಾಧ್ಯಕ್ಷರಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣರವರ ಅಧ್ಯಕ್ಷತೆಯಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು.  
    ಭದ್ರಾವತಿ: ತಾಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ, ವಾಲ್ಮೀಕಿ ಸಮಾಜ ಹಾಗು ವಿವಿಧ ಇಲಾಖೆಗಳ ಸಹಯೋಗದಲ್ಲಿ ಅ.೨೮ರಂದು ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
    ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಉಪಾಧ್ಯಕ್ಷರಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಈ ಬಾರಿ ನಗರದ ವೀರಶೈವ ಸಭಾ ಭವನದಲ್ಲಿ ಆಚರಿಸಲು ನಿರ್ಧರಿಸಲಾಯಿತು.
    ಸಭೆ ಆರಂಭದಲ್ಲಿ ಕೆಲವು ಸರ್ಕಾರಿ ಇಲಾಖೆ ಅಧಿಕಾರಿಗಳ ಗೈರು ಹಾಜರಿಗೆ ಅಸಮಾಧಾನ ವ್ಯಕ್ತಪಡಿಸಲಾಯಿತು. ನಗರಸಭೆ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಮಹನೀಯರ ಜಯಂತಿ ಕಾರ್ಯಕ್ರಮಗಳಲ್ಲಿ ಸರ್ಕಾರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಸಮಾಜದ ನಗರ ಅಧ್ಯಕ್ಷ ಬಸವರಾಜ್ ಬಿ. ಆನೇಕೊಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಪೂರ್ವಭಾವಿ ಸಭೆ ೧ ತಿಂಗಳು ಮುಂಚಿತವಾಗಿ ನಡೆಸಬೇಕು. ಇಲ್ಲವಾದರೆ ಆಚರಣೆಗೆ ತೊಡಕಾಗುತ್ತದೆ ಎಂದರು.
    ಸಮಾಜದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪ್ರತಿಭಾ ಪುರಸ್ಕಾರದ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಸಮಾಜದ ಸಾಧಕರಿಗೂ ಪುರಸ್ಕಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಿದರು.
    ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್. ಗೋಪಾಲಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಉಪತಹಸೀಲ್ದಾರ್ ಅರಸು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಟರಾಜ್, ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್, ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ಪೊಲೀಸ್ ನಿರೀಕ್ಷಕ ಜಯಪ್ಪ, ಸಮಾಜದ ಮುಖಂಡರಾದ ಶೇಖರಪ್ಪ, ಶಿವಣ್ಣ, ಶಿವಾನಂದ್, ಲಕ್ಷ್ಮೀದೇವಿ, ದಸಂಸ ಮುಖಂಡರಾದ ಈಶ್ವರಪ್ಪ, ತಮ್ಮಯ್ಯ, ವಿ. ವಿನೋದ್, ರವಿನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಮುಖಂಡರು ಹಾಜರಿದ್ದರು.

ನಗರಸಭೆ ಮಾಜಿ ಸದಸ್ಯ ಜಿ. ಸುರೇಶಯ್ಯ ನಿಧನ

ಜಿ. ಸುರೇಶಯ್ಯ
    ಭದ್ರಾವತಿ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ, ನಗರಸಭೆ ಮಾಜಿ ಸದಸ್ಯ ಜಿ. ಸುರೇಶಯ್ಯ(೫೭) ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರಿ ಇದ್ದರು. ಇವರ ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಗುರುವಾರ ಸಂಜೆ ನಡೆಯಿತು. ಸುರೇಶಯ್ಯ ಕಡದಕಟ್ಟೆ ನಿವಾಸಿವಾಗಿದ್ದು, ಒಂದು ಬಾರಿ ನಗರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೂಲತಃ ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿದ್ದು, ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಳೆದ ಸುಮಾರು ಒಂದೂವರೆ ವರ್ಷದಿಂದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
    ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿ ಸ್ವಾಮೀಜಿ, ಸಂಸದ ಬಿ.ವೈ ರಾಘವೇಂದ್ರ, ಸಮಾಜದ ಜಿಲ್ಲಾ ಪ್ರಮುಖರಾದ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಎಸ್.ಎಸ್ ಜ್ಯೋತಿ ಪ್ರಕಾಶ್, ಶಾಸಕ ಬಿ.ಕೆ ಸಂಗಮೇಶ್ವರ್, ಮಹಾಸಭಾ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಅಂತಿಮ ದರ್ಶನ ಪಡೆದು ಮೃತರ ಆತ್ಮಕ್ಕೆ ಶಾಂತಿ ಕೋರಿದರು.
    ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ, ಸಚಿವ ಈಶ್ವರ್ ಖಂಡ್ರೆ, ರಾಜ್ಯಾಧ್ಯಕ್ಷ ತಿಪ್ಪಣ್ಣ ಸೇರಿದಂತೆ ಇನ್ನಿತರರು ಸುರೇಶಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಂದ ಕಾರ್ಯಾಚರಣೆ

ಗ್ರಾಮಸ್ಥರ ವಿರೋಧದ ನಡುವೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸರ್ವೆ ನಡೆಸಿ ಫಲಕ ಅಳವಡಿಕೆ

ಭದ್ರಾವತಿ ನಗರಸಭೆ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಉಂಟಾಗಿದ್ದ ಜಾಗದ ಸಮಸ್ಯೆಯನ್ನು ಗುರುವಾರ ಅಧಿಕಾರಿಗಳ ತಂಡ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಗ್ರಾಮಸ್ಥರ ವಿರೋಧದ ನಡುವೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮಂಜೂರಾದ ಭೂಮಿಯಲ್ಲಿ ಸರ್ವೆ ನಡೆಸಿ ಫಲಕ ಅಳವಡಿಸಿದೆ.
    ಭದ್ರಾವತಿ : ನಗರಸಭೆ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಉಂಟಾಗಿದ್ದ ಜಾಗದ ಸಮಸ್ಯೆಯನ್ನು ಗುರುವಾರ ಅಧಿಕಾರಿಗಳ ತಂಡ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
    ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು, ಈಗಾಗಲೇ ಈ ಸಂಬಂಧ ಫಲಾನುಭವಿಗಳನ್ನು ಸಹ ಗುರುತಿಸಿ ಎಲ್ಲಾ ಪ್ರಕ್ರಿಯೆಗಳು ಸಹ ಮುಕ್ತಾಯಗೊಂಡಿವೆ. ಅಲ್ಲದೆ ಸರ್ಕಾರ ಸಹ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಿದೆ. ಆದರೆ ಜಾಗದ ಸಮಸ್ಯೆಯಿಂದಾಗಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.


ಭದ್ರಾವತಿ ನಗರಸಭೆ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಉಂಟಾಗಿದ್ದ ಜಾಗದ ಸಮಸ್ಯೆಯನ್ನು ಗುರುವಾರ ಅಧಿಕಾರಿಗಳ ತಂಡ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
    ನಂಜಾಪುರ ಗ್ರಾಮಕ್ಕೆ ಹೊಂದಿಕೊಂಡಂತ್ತಿರುವ ಕಸಬಾ ಹೋಬಳಿ ಬುಳ್ಳಾಪುರ ಗ್ರಾಮದ ಸರ್ವೆ ನಂ. ೫೫ರ ೩೭೮.೨೮ ಎಕರೆ ಗೋಮಾಳ ಪೈಕಿ ೯.೩೮+೬.೦೨ ಒಟ್ಟು ೧೬ ಎಕರೆಯನ್ನು ಜಿಲ್ಲಾಧಿಕಾರಿಗಳು ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ-೧೯೬೪ರ ಕಲಂ-೭೧ರಡಿ ಪೌರಾಯುಕ್ತರು, ನಗರಸಭೆ, ಭದ್ರಾವತಿ ಹೆಸರಿಗೆ ಮಂಜೂರಾತಿ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಸ್ಥಳದಲ್ಲಿ ಕಾಮಗಾರಿ ಆರಂಭಿಸಿಲು ಈ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಲು ಮುಂದಾಗಿದ್ದರು. ಆದರೆ ನಂಜಾಪುರ ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಿಪಡಿಸಿದ್ದರು. ಈ ಸಂಬಂಧ ನಗರಸಭೆ ಸಾಮಾನ್ಯಸಭೆಯಲ್ಲಿ ಚರ್ಚೆ ಸಹ ನಡೆದಿತ್ತು.
ಗುರುವಾರ ಬೆಳಿಗ್ಗೆ ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ನೇತೃತ್ವದ ತಂಡ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸರ್ವೆ ನಡೆಸಿ ಜೆಸಿಬಿ ಬಳಸಿ ಗಿಡಗಂಟಿಗಳನ್ನು ತೆರವುಗೊಳಿಸುವ ಜೊತೆಗೆ ಫಲಕ ಅಳವಡಿಸಿದೆ. ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಕೆ.ಆರ್ ನಾಗರಾಜ್, ನಗರಸಭೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಹಾಗು ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
 ಇದಕ್ಕೂ ಮೊದಲು ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರು. ಸರ್ಕಾರದ ಆದೇಶದಂತೆ ಯಾವುದೇ ಗ್ರಾಮದ ಸಮೀಪ ಗೋಮಾಳ ಜಾಗವಿದ್ದಲ್ಲಿ ಕನಿಷ್ಠ ೩೦ ಎಕರೆ ಜಾಗ ನೀಡಬೇಕು. ಈ ಹಿನ್ನಲೆಯಲ್ಲಿ ಜಾಗ ನೀಡುವಂತೆ ಆಗ್ರಹಿಸಿದರು. ಕಾರ್ಯಾಚರಣೆ ಮುಕ್ತಾಯಗೊಂಡ ನಂತರ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸಾಕಷ್ಟು ಜಾಗ ಉಳಿದಿದ್ದು, ಸರ್ಕಾರದ ಆದೇಶದಂತೆ ಉಳಿದಿರುವ ಜಾಗದಲ್ಲಿ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.
ನಂಜಾಪುರ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ/ಪಂಗಡದವರು ವಾಸಿಸುತ್ತಿದ್ದು, ಜಾಗದ ಅವಶ್ಯಕತೆ ಇರುವುದಾಗಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

ಭದ್ರಾವತಿ ನಗರಸಭೆ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಉಂಟಾಗಿದ್ದ ಜಾಗದ ಸಮಸ್ಯೆಯನ್ನು ಗುರುವಾರ ಅಧಿಕಾರಿಗಳ ತಂಡ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಮುಕ್ತಾಯಗೊಂಡ ನಂತರ ಗ್ರಾಮಸ್ಥರೊಂದಿಗೆ ಅಧಿಕಾರಿಗಳು ಚರ್ಚಿಸಿ ಸರ್ಕಾರದ ಆದೇಶದಂತೆ ಉಳಿದಿರುವ ಭೂಮಿಯಲ್ಲಿ ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
    ಪ್ರಮುಖರಾದ ಪ್ರಜಾಪ್ರತಿನಿಧಿ ಸುರೇಶ್, ಬಿಜೆಪಿ ಪಕ್ಷದ ಯುವ ಮುಖಂಡ ಮಂಗೋಟೆ ರುದ್ರೇಶ್ ಸೇರಿದಂತೆ ಗ್ರಾಮದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಅಡ್ಡಿಯಾಗಿದ್ದ ಜಾಗದ ಸಮಸ್ಯೆ ಒಂದು ಹಂತದಲ್ಲಿ ಬಗೆಹರಿದಿದ್ದು, ಕಾಮಗಾರಿ ಶೀಘ್ರವಾಗಿ ಆರಂಭಗೊಳ್ಳಬೇಕಾಗಿದೆ.