Thursday, October 12, 2023

ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಂದ ಕಾರ್ಯಾಚರಣೆ

ಗ್ರಾಮಸ್ಥರ ವಿರೋಧದ ನಡುವೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸರ್ವೆ ನಡೆಸಿ ಫಲಕ ಅಳವಡಿಕೆ

ಭದ್ರಾವತಿ ನಗರಸಭೆ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಉಂಟಾಗಿದ್ದ ಜಾಗದ ಸಮಸ್ಯೆಯನ್ನು ಗುರುವಾರ ಅಧಿಕಾರಿಗಳ ತಂಡ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಗ್ರಾಮಸ್ಥರ ವಿರೋಧದ ನಡುವೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮಂಜೂರಾದ ಭೂಮಿಯಲ್ಲಿ ಸರ್ವೆ ನಡೆಸಿ ಫಲಕ ಅಳವಡಿಸಿದೆ.
    ಭದ್ರಾವತಿ : ನಗರಸಭೆ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಉಂಟಾಗಿದ್ದ ಜಾಗದ ಸಮಸ್ಯೆಯನ್ನು ಗುರುವಾರ ಅಧಿಕಾರಿಗಳ ತಂಡ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
    ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು, ಈಗಾಗಲೇ ಈ ಸಂಬಂಧ ಫಲಾನುಭವಿಗಳನ್ನು ಸಹ ಗುರುತಿಸಿ ಎಲ್ಲಾ ಪ್ರಕ್ರಿಯೆಗಳು ಸಹ ಮುಕ್ತಾಯಗೊಂಡಿವೆ. ಅಲ್ಲದೆ ಸರ್ಕಾರ ಸಹ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಿದೆ. ಆದರೆ ಜಾಗದ ಸಮಸ್ಯೆಯಿಂದಾಗಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.


ಭದ್ರಾವತಿ ನಗರಸಭೆ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಉಂಟಾಗಿದ್ದ ಜಾಗದ ಸಮಸ್ಯೆಯನ್ನು ಗುರುವಾರ ಅಧಿಕಾರಿಗಳ ತಂಡ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
    ನಂಜಾಪುರ ಗ್ರಾಮಕ್ಕೆ ಹೊಂದಿಕೊಂಡಂತ್ತಿರುವ ಕಸಬಾ ಹೋಬಳಿ ಬುಳ್ಳಾಪುರ ಗ್ರಾಮದ ಸರ್ವೆ ನಂ. ೫೫ರ ೩೭೮.೨೮ ಎಕರೆ ಗೋಮಾಳ ಪೈಕಿ ೯.೩೮+೬.೦೨ ಒಟ್ಟು ೧೬ ಎಕರೆಯನ್ನು ಜಿಲ್ಲಾಧಿಕಾರಿಗಳು ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ-೧೯೬೪ರ ಕಲಂ-೭೧ರಡಿ ಪೌರಾಯುಕ್ತರು, ನಗರಸಭೆ, ಭದ್ರಾವತಿ ಹೆಸರಿಗೆ ಮಂಜೂರಾತಿ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಸ್ಥಳದಲ್ಲಿ ಕಾಮಗಾರಿ ಆರಂಭಿಸಿಲು ಈ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಲು ಮುಂದಾಗಿದ್ದರು. ಆದರೆ ನಂಜಾಪುರ ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಿಪಡಿಸಿದ್ದರು. ಈ ಸಂಬಂಧ ನಗರಸಭೆ ಸಾಮಾನ್ಯಸಭೆಯಲ್ಲಿ ಚರ್ಚೆ ಸಹ ನಡೆದಿತ್ತು.
ಗುರುವಾರ ಬೆಳಿಗ್ಗೆ ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ನೇತೃತ್ವದ ತಂಡ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸರ್ವೆ ನಡೆಸಿ ಜೆಸಿಬಿ ಬಳಸಿ ಗಿಡಗಂಟಿಗಳನ್ನು ತೆರವುಗೊಳಿಸುವ ಜೊತೆಗೆ ಫಲಕ ಅಳವಡಿಸಿದೆ. ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಕೆ.ಆರ್ ನಾಗರಾಜ್, ನಗರಸಭೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಹಾಗು ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
 ಇದಕ್ಕೂ ಮೊದಲು ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರು. ಸರ್ಕಾರದ ಆದೇಶದಂತೆ ಯಾವುದೇ ಗ್ರಾಮದ ಸಮೀಪ ಗೋಮಾಳ ಜಾಗವಿದ್ದಲ್ಲಿ ಕನಿಷ್ಠ ೩೦ ಎಕರೆ ಜಾಗ ನೀಡಬೇಕು. ಈ ಹಿನ್ನಲೆಯಲ್ಲಿ ಜಾಗ ನೀಡುವಂತೆ ಆಗ್ರಹಿಸಿದರು. ಕಾರ್ಯಾಚರಣೆ ಮುಕ್ತಾಯಗೊಂಡ ನಂತರ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸಾಕಷ್ಟು ಜಾಗ ಉಳಿದಿದ್ದು, ಸರ್ಕಾರದ ಆದೇಶದಂತೆ ಉಳಿದಿರುವ ಜಾಗದಲ್ಲಿ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.
ನಂಜಾಪುರ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ/ಪಂಗಡದವರು ವಾಸಿಸುತ್ತಿದ್ದು, ಜಾಗದ ಅವಶ್ಯಕತೆ ಇರುವುದಾಗಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

ಭದ್ರಾವತಿ ನಗರಸಭೆ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಉಂಟಾಗಿದ್ದ ಜಾಗದ ಸಮಸ್ಯೆಯನ್ನು ಗುರುವಾರ ಅಧಿಕಾರಿಗಳ ತಂಡ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಮುಕ್ತಾಯಗೊಂಡ ನಂತರ ಗ್ರಾಮಸ್ಥರೊಂದಿಗೆ ಅಧಿಕಾರಿಗಳು ಚರ್ಚಿಸಿ ಸರ್ಕಾರದ ಆದೇಶದಂತೆ ಉಳಿದಿರುವ ಭೂಮಿಯಲ್ಲಿ ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
    ಪ್ರಮುಖರಾದ ಪ್ರಜಾಪ್ರತಿನಿಧಿ ಸುರೇಶ್, ಬಿಜೆಪಿ ಪಕ್ಷದ ಯುವ ಮುಖಂಡ ಮಂಗೋಟೆ ರುದ್ರೇಶ್ ಸೇರಿದಂತೆ ಗ್ರಾಮದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಅಡ್ಡಿಯಾಗಿದ್ದ ಜಾಗದ ಸಮಸ್ಯೆ ಒಂದು ಹಂತದಲ್ಲಿ ಬಗೆಹರಿದಿದ್ದು, ಕಾಮಗಾರಿ ಶೀಘ್ರವಾಗಿ ಆರಂಭಗೊಳ್ಳಬೇಕಾಗಿದೆ.

No comments:

Post a Comment