Monday, October 25, 2021

ಎರಡೂವರೆ ವರ್ಷಗಳ ನಂತರ ಪುಟಾಣಿ ಮಕ್ಕಳಿಗೆ ಅದ್ದೂರಿ ಸ್ವಾಗತ

೩ನೇ ಅಲೆ ಭೀತಿ ನಡುವೆಯೂ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರಲ್ಲಿ ಉತ್ಸಾಹ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ೧ ರಿಂದ ೫ನೇ ತರಗತಿ ಮಕ್ಕಳನ್ನು ಪೋಷಕರು ಕರೆ ತರುತ್ತಿರುವುದು.
    ಭದ್ರಾವತಿ, ಅ. ೨೫: ಸುಮಾರು ಎರಡೂವರೆ ವರ್ಷಗಳ ನಂತರ ಸರ್ಕಾರ ೧ ರಿಂದ ೫ನೇ ತರಗತಿ ಮಕ್ಕಳಿಗೆ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು  ಅನುಮತಿ ನೀಡಿದ ಹಿನ್ನಲೆಯಲ್ಲಿ ತಾಲೂಕಿನ ಸರ್ಕಾರಿ, ಅನುದಾನಿತ ಹಾಗು ಅನುದಾನ ರಹಿತ ಶಾಲೆಗಳಲ್ಲಿ ಸೋಮವಾರ ಹಬ್ಬದ ವಾತಾವರಣ ಕಂಡು ಬಂದಿತು.
    ಮಹಾಮಾರಿ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ೧ ಮತ್ತು ೨ನೇ ಅಲೆ ಭೀತಿಯಿಂದ ಸ್ವಲ್ಪಮಟ್ಟಿಗೆ ಹೊರ ಬಂದಿರುವ ಜನರು ಕಳೆದ ೩-೪ ತಿಂಗಳಿನಿಂದ ಮೊದಲಿನಂತೆ ಸಹಜ ಬದುಕಿನ ಕಡೆಗೆ ಹೆಚ್ಚಿನ ಗಮನ ಹರಿಸಿದ್ದು, ಈ ನಡುವೆ ೩ನೇ ಅಲೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ತಜ್ಞರ ಎಚ್ಚರಿಕೆ ನಡುವೆಯೂ ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಭೌತಿಕ ತರಗತಿಗಳಿಂದ ವಂಚಿತರಾಗಿದ್ದ ೧ ರಿಂದ ೫ನೇ ತರಗತಿವರೆಗಿನ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಲ್ಲಿ ಪೋಷಕರು ಉತ್ಸುಕರಾಗಿವುದು ಕಂಡು ಬಂದಿತು.
    ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗು ಅನುದಾನ ರಹಿತ ಶಾಲೆಗಳಲ್ಲಿ ೧ ರಿಂದ ೫ನೇ ತರಗತಿ ಮಕ್ಕಳನ್ನು ವಿಭಿನ್ನ ರೀತಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇದಕ್ಕೆ ಪೂರಕವೆಂಬ ಪೋಷಕರಿಂದ ಮೊದಲ ದಿನವೇ ಉತ್ತಮ ಸ್ಪಂದನೆ ವ್ಯಕ್ತಯಾಗಿದ್ದು, ತಮ್ಮ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕರೆ ತರುವ ಮೂಲಕ ಆರಂಭದ ಶುಭ ದಿನಕ್ಕೆ ಮುನ್ನುಡಿ ಬರೆದರು.
    ಶಾಲಾ ಆಡಳಿತ ಮಂಡಳಿಗಳು ಸರ್ಕಾರ ಸೂಚಿಸಿರುವ ಕೋವಿಡ್-೧೯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಹೆಚ್ಚಿನ ಮುಂಜಾಗ್ರತೆ ವಹಿಸಿರುವುದು ಕಂಡು ಬಂದಿತು. ಶಿಕ್ಷಕರು ಮಕ್ಕಳಿಗೆ ಸಿಹಿ ನೀಡುವ ಮೂಲಕ ತರಗತಿಗಳಿಗೆ ಸಡಗರ ಸಂಭ್ರಮದಿಂದ ಬರಮಾಡಿಕೊಂಡು ಮೊದಲ ದಿನದ ಪಾಠ ಪ್ರವಚನ ಆರಂಭಿಸಿದರು.  ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದ್ದ ಬಹುತೇಕ ಶಾಲೆಗಳಿಗೆ ಮಕ್ಕಳ ಆಗಮನ ಸುಮಾರು ಎರಡೂವರೆ ವರ್ಷಗಳಿಂದ ಕಳೆದು ಹೋಗಿದ್ದ ಮೆರಗು ಮರುಕಳುಹಿಸಿದಂತೆ ಕಂಡು ಬಂದಿತು.


ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ಸರ್ಕಾರಿ ಶಾಲೆಯಲ್ಲಿ ೧ ರಿಂದ ೫ನೇ ತರಗತಿ ಮಕ್ಕಳ ಕೈಗಳಿಗೆ ಸ್ಯಾನಿಟೈಜರ್ ಹಾಕುವ ಮೂಲಕ ಕೊಠಡಿಗಳಿಗೆ ಪ್ರವೇಶ ನೀಡಲಾಯಿತು.

ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿ

ಸರ್ವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ ರಾಜ್ಯದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಏಕಾಂಗಿ ಹೋರಾಟ ನಡೆಸಿದರು.
    ಭದ್ರಾವತಿ, ಅ. ೨೫: ಸರ್ವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ ರಾಜ್ಯದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಸೋಮವಾರ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಏಕಾಂಗಿ ಹೋರಾಟ ನಡೆಸುವ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದ್ದಾರೆ.
    ಸರ್ವೋಚ್ಛ ನ್ಯಾಯಾಲಯ ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಾಗು ಪರಿಸರಕ್ಕೆ ಹಾನಿ ಉಂಟು ಮಾಡುವ ೨೦೧೭ಕ್ಕೂ ಮೊದಲು ತಯಾರಿಸುತ್ತಿದ್ದ ಪಟಾಕಿ ಸಂಪೂರ್ಣವಾಗಿ ನಿಷೇಧಿಸುವಂತೆ ಆದೇಶಿಸಿದೆ. ಆದರೆ ಪಟಾಕಿ ತಯಾರಿಸುವ ಕಂಪನಿಗಳು ಮತ್ತು ಮಾರಾಟಗಾರರು ಆದೇಶವನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
    ಹಸಿರು ಪಟಾಕಿಯಿಂದ ಪರಿಸರಕ್ಕೆ ಹೆಚ್ಚಿನ ಹಾನಿ ಉಂಟಾಗುವುದಿಲ್ಲ. ಅಲ್ಲದೆ ಆರೋಗ್ಯದ ಮೇಲೆ ಸಹ ಹೆಚ್ಚಿನ ದುಷ್ಪರಿಣಾಮ ಉಂಟಾಗುವುದಿಲ್ಲ. ಅಲ್ಲದೆ ಕೇಂದ್ರ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿ ಪಿ.ಇ.ಎಸ್.ಓ ಹಸಿರು ಪಟಾಕಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಮಾರಾಟಗಾರರಿಗೆ ಕೇವಲ ಹಸಿರು ಪಟಾಕಿ ಮಾತ್ರ ಮಾರಾಟ ಮಾಡುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮೂಲಕ ಸೂಚಿಸಬೇಕೆಂದು ಒತ್ತಾಯಿಸಿದರು.  

ತಾತಮ್ಮ ನಿಧನ

ತಾತಮ್ಮ
    ಭದ್ರಾವತಿ, ಅ. ೨೫: ನಗರದ ಕಡದಕಟ್ಟೆ ರೈಲ್ವೆ ಗೇಟ್ ಸಮೀಪದ ಬಲಭಾಗದ ನಿವಾಸಿ ದಿವಂಗತ ಪಿ. ಯಲ್ಲಯ್ಯನವರ ಪತ್ನಿ ತಾತಮ್ಮ(೮೬) ನಿಧನ ಹೊಂದಿದರು.
    ೫ ಪುತ್ರರು, ೨ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.


ಅನುದಾನ ಮಂಜೂರಾತಿ ಮಾಡಿಸಿಕೊಟ್ಟಿದ್ದರೂ ಅಭಿವೃದ್ಧಿ ಕಾಮಗಾರಿಗಳು ವಿಳಂಬ

ಕೆಡಿಪಿ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅಸಮಾಧಾನ

ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯಿತು.
    ಭದ್ರಾವತಿ, ಅ. ೨೫: ತಾಲೂಕಿನಾದ್ಯಂತ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಕಿದಿದ್ದು, ಸರ್ಕಾರದಿಂದ ಕೋಟ್ಯಾಂತರ ರು. ಅನುದಾನ ಮಂಜೂರಾತಿ ಮಾಡಿಸಿಕೊಟ್ಟಿದ್ದರೂ ಸಹ ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
    ಅವರು ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ)ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು, ಪ್ರಗತಿಯಲ್ಲಿರುವ ಹಾಗು ಬಾಕಿ ಇರುವ ಕಾಮಗಾರಿಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ. ಆದರೆ ಸಭೆಗೆ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಸಭೆ ಯಾರಿಗಾಗಿ ನಡೆಸಬೇಕಾಗಿದೆ ಎಂಬ ಪ್ರಶ್ನೆ ಎದುರಾಗಿದೆ ಎಂದರು.
    ಪ್ರಮುಖವಾಗಿ ತಾಲೂಕಿನಲ್ಲಿ ಸಾಕಷ್ಟುಗಳು ರಸ್ತೆಗಳು ಹಾಳಾಗಿದ್ದು, ತುರ್ತು ಕಾಮಗಾರಿಗಳಿಗಾಗಿ ಸರ್ಕಾರಿಂದ ೮೦ ಲಕ್ಷ ರು. ಅನುದಾನ ಬಿಡುಗಡೆಯಾಗಿದೆ. ಲೋಕೋಪಯೋಗಿ ಹಾಗು ನೀರಾವರಿ ಇಲಾಖೆಗಳಿಗೆ ಕೋಟ್ಯಾಂತರ ರು. ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಡಲಾಗಿದೆ. ಆದರೆ ಬಹಳಷ್ಟು ಕಾಮಗಾರಿಗಳು ಬಾಕಿ ಉಳಿದಿದ್ದು, ಅಲ್ಲದೆ ಕಾಮಗಾರಿಗಳನ್ನು ವಿಳಂಬವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕೆ ಕಾರಣಗಳು ತಿಳಿದು ಬರುತ್ತಿಲ್ಲ. ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಬೇಕೆಂದರು.
    ಸಭೆಯಲ್ಲಿ ಪಾಲ್ಗೊಂಡಿದ್ದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷಪ್ಪ ಮಾತನಾಡಿ, ಕಂದಾಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು. ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಪ್ರಗತಿ ಮಾಹಿತಿಯನ್ನು ಮಂಡಿಸಿದರು.
    ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಗ್ರಾಮಾಂತರ ವೃತ್ತ ನಿರೀಕ್ಷಕ ಚೈತನ್ಯ ಉಪಸ್ಥಿತರಿದ್ದರು. ಕೆಡಿಪಿ ಸಮಿತಿ ಸದಸ್ಯರಾದ ಸುನೀತಾ ಮೋಹನ್, ನಾಗರಾಜ್‌ರಾವ್ ಅಂಬೋರೆ, ಗಜೇಂದ್ರಜೈನ್ ಮತ್ತು ಚಂದ್ರಪ್ಪ, ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್, ಆರ್. ಮೋಹನ್‌ಕುಮಾರ್,  ನ್ಯಾಯವಾದಿ ಟಿ. ಚಂದ್ರೇಗೌಡ,  ವಿವಿಧ ಇಲಾಖೆ ಅಧಿಕಾರಿಗಳಾದ ಎಸ್.ಎಸ್.ವೈ ಶಿರಸ್ತೇದಾರ್ ರಾಧಾಕೃಷ್ಣಭಟ್, ಸಹಾಯಕ ಕೃಷಿ ನಿರ್ದೇಶಕ ಶಶಿಧರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕೆಎಸ್‌ಆರ್‌ಟಿಸಿ ಭದ್ರಾವತಿ ಘಟಕದ ವ್ಯವಸ್ಥಾಪಕಿ ಅಂಬಿಕಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್, ನಗರಸಭೆ ಸಹಾಯಕ ಇಂಜಿನಿಯರ್ ಶ್ರೀರಂಗರಾಜ ಪುರೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.