Monday, October 25, 2021

ಎರಡೂವರೆ ವರ್ಷಗಳ ನಂತರ ಪುಟಾಣಿ ಮಕ್ಕಳಿಗೆ ಅದ್ದೂರಿ ಸ್ವಾಗತ

೩ನೇ ಅಲೆ ಭೀತಿ ನಡುವೆಯೂ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರಲ್ಲಿ ಉತ್ಸಾಹ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ೧ ರಿಂದ ೫ನೇ ತರಗತಿ ಮಕ್ಕಳನ್ನು ಪೋಷಕರು ಕರೆ ತರುತ್ತಿರುವುದು.
    ಭದ್ರಾವತಿ, ಅ. ೨೫: ಸುಮಾರು ಎರಡೂವರೆ ವರ್ಷಗಳ ನಂತರ ಸರ್ಕಾರ ೧ ರಿಂದ ೫ನೇ ತರಗತಿ ಮಕ್ಕಳಿಗೆ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು  ಅನುಮತಿ ನೀಡಿದ ಹಿನ್ನಲೆಯಲ್ಲಿ ತಾಲೂಕಿನ ಸರ್ಕಾರಿ, ಅನುದಾನಿತ ಹಾಗು ಅನುದಾನ ರಹಿತ ಶಾಲೆಗಳಲ್ಲಿ ಸೋಮವಾರ ಹಬ್ಬದ ವಾತಾವರಣ ಕಂಡು ಬಂದಿತು.
    ಮಹಾಮಾರಿ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ೧ ಮತ್ತು ೨ನೇ ಅಲೆ ಭೀತಿಯಿಂದ ಸ್ವಲ್ಪಮಟ್ಟಿಗೆ ಹೊರ ಬಂದಿರುವ ಜನರು ಕಳೆದ ೩-೪ ತಿಂಗಳಿನಿಂದ ಮೊದಲಿನಂತೆ ಸಹಜ ಬದುಕಿನ ಕಡೆಗೆ ಹೆಚ್ಚಿನ ಗಮನ ಹರಿಸಿದ್ದು, ಈ ನಡುವೆ ೩ನೇ ಅಲೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ತಜ್ಞರ ಎಚ್ಚರಿಕೆ ನಡುವೆಯೂ ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಭೌತಿಕ ತರಗತಿಗಳಿಂದ ವಂಚಿತರಾಗಿದ್ದ ೧ ರಿಂದ ೫ನೇ ತರಗತಿವರೆಗಿನ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಲ್ಲಿ ಪೋಷಕರು ಉತ್ಸುಕರಾಗಿವುದು ಕಂಡು ಬಂದಿತು.
    ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗು ಅನುದಾನ ರಹಿತ ಶಾಲೆಗಳಲ್ಲಿ ೧ ರಿಂದ ೫ನೇ ತರಗತಿ ಮಕ್ಕಳನ್ನು ವಿಭಿನ್ನ ರೀತಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇದಕ್ಕೆ ಪೂರಕವೆಂಬ ಪೋಷಕರಿಂದ ಮೊದಲ ದಿನವೇ ಉತ್ತಮ ಸ್ಪಂದನೆ ವ್ಯಕ್ತಯಾಗಿದ್ದು, ತಮ್ಮ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕರೆ ತರುವ ಮೂಲಕ ಆರಂಭದ ಶುಭ ದಿನಕ್ಕೆ ಮುನ್ನುಡಿ ಬರೆದರು.
    ಶಾಲಾ ಆಡಳಿತ ಮಂಡಳಿಗಳು ಸರ್ಕಾರ ಸೂಚಿಸಿರುವ ಕೋವಿಡ್-೧೯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಹೆಚ್ಚಿನ ಮುಂಜಾಗ್ರತೆ ವಹಿಸಿರುವುದು ಕಂಡು ಬಂದಿತು. ಶಿಕ್ಷಕರು ಮಕ್ಕಳಿಗೆ ಸಿಹಿ ನೀಡುವ ಮೂಲಕ ತರಗತಿಗಳಿಗೆ ಸಡಗರ ಸಂಭ್ರಮದಿಂದ ಬರಮಾಡಿಕೊಂಡು ಮೊದಲ ದಿನದ ಪಾಠ ಪ್ರವಚನ ಆರಂಭಿಸಿದರು.  ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದ್ದ ಬಹುತೇಕ ಶಾಲೆಗಳಿಗೆ ಮಕ್ಕಳ ಆಗಮನ ಸುಮಾರು ಎರಡೂವರೆ ವರ್ಷಗಳಿಂದ ಕಳೆದು ಹೋಗಿದ್ದ ಮೆರಗು ಮರುಕಳುಹಿಸಿದಂತೆ ಕಂಡು ಬಂದಿತು.


ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ಸರ್ಕಾರಿ ಶಾಲೆಯಲ್ಲಿ ೧ ರಿಂದ ೫ನೇ ತರಗತಿ ಮಕ್ಕಳ ಕೈಗಳಿಗೆ ಸ್ಯಾನಿಟೈಜರ್ ಹಾಕುವ ಮೂಲಕ ಕೊಠಡಿಗಳಿಗೆ ಪ್ರವೇಶ ನೀಡಲಾಯಿತು.

No comments:

Post a Comment