ರಾಜ್ಯ ಸರ್ಕಾರ ಗಮನ ಹರಿಸಲಿ
ಭದ್ರಾವತಿ, ಜು. ೫ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಸುಮಾರು ೬ ತಿಂಗಳಿನಿಂದ ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಹಾಗು ಅಗತ್ಯವಿರುವ ಬಂಡವಾಳ ತೊಡಗಿಸಿವಂತೆ ಮತ್ತು ಕಾರ್ಮಿಕರ ಹಿತಕಾಪಾಡುವಂತೆ ಆಗ್ರಹಿಸಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಈಗಾಗಲೇ ಹಲವು ರೀತಿಯ ಹೋರಾಟಗಳನ್ನು ನಡೆಸಲಾಗಿದೆ. ರಾಜ್ಯದ ವಿವಿಧ ಮಠಾಧೀಶರು, ರಾಜಕೀಯ ಪಕ್ಷಗಳು, ಹೋರಾಟಗಾರರು, ಶಾಲಾ-ಕಾಲೇಜುಗಳ ವಿದ್ಯಾಸಂಸ್ಥೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯ ನಾಗರೀಕರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಹಲವಾರು ಬಾರಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಮನವಿ ಸಹ ಸಲ್ಲಿಸಲಾಗಿದೆ. ಆದರೆ ಹೋರಾಟಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ.
ಈ ನಡುವೆ ಇದೀಗ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳ್ಳುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆ ಸ್ವತಃ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಖಾನೆ ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ್ದು, ಆದರೂ ಸಹ ಆಡಳಿತ ಮಂಡಳಿ ಯಾವುದೇ ನಿರ್ಧಾರ ಕೈಗೊಳ್ಳದೆ ಅಸಹಾಯಕತೆ ವ್ಯಕ್ತಪಡಿಸಿದೆ.
ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರ ಇಚ್ಛಾ ಶಕ್ತಿ ಪ್ರದರ್ಶಿಸಬೇಕಾಗಿದೆ. ಕಳೆದ ೩ ದಿನಗಳಿಂದ ವಿಧಾನಮಂಡಲ ಅಧಿವೇಶ ನಡೆಯುತ್ತಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗಮನ ಹರಿಸಬೇಕಾಗಿದೆ.
ಮಳೆ ನಡುವೆ ಹೋರಾಟ:
ಶಾಮಿಯಾನ ಬಳಸಿಕೊಂಡು ಕಳೆದ ೬ ತಿಂಗಳಿನಿಂದ ಮಳೆ-ಗಾಳಿ-ಬಿಸಿಲನ್ನು ಲೆಕ್ಕಿಸದೆ ಗುತ್ತಿಗೆ ಕಾರ್ಮಿಕರು ಹೋರಾಟ ನಡೆಸುತ್ತಿದ್ದು, ಕಳೆದ ಸುಮಾರು ೨ ತಿಂಗಳ ಹಿಂದೆ ಶಾಮಿಯಾನ ಬದಲಿಸಿದ್ದು, ವಾಟರ್ ಪ್ರೂಫ್ ಶಾಮಿಯಾನ ಹಾಕಲಾಗಿದೆ. ಕಳೆದ ೨ ದಿನಗಳಿಂದ ಮಳೆಯಾಗುತ್ತಿದ್ದು, ಆದರೂ ಸಹ ಹೋರಾಟ ಮುಂದುವರೆಯುತ್ತಿದ್ದು, ಶಾಮಿಯಾನ ಭಾಗದಲ್ಲಿ ಮಳೆ ನೀರು ನಿಂತುಕೊಂಡಿದ್ದು, ಹೋರಾಟಗಾರರು ನೀರನ್ನು ತೆರವುಗೊಳಿಸುವ ಮೂಲಕ ಹೋರಾಟಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಿದ್ದಾರೆ.
ಭದ್ರಾವತಿ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಸುಮಾರು ೬ ತಿಂಗಳಿನಿಂದ ಹೋರಾಟ ನಡೆಸುತ್ತಿದ್ದು, ಕಳೆದ ೨ ದಿನಗಳಿಂದ ಮಳೆಯಾಗುತ್ತಿದೆ. ಬುಧವಾರ ಹೋರಾಟದ ಸ್ಥಳದಲ್ಲಿ ಮಳೆ ನೀರು ನಿಂತುಕೊಂಡಿದ್ದು, ತೆರವುಗೊಳಿಸುತ್ತಿರುವುದು.