Monday, April 24, 2023

ವಿಧಾನಸಭಾ ಚುನಾವಣೆ : ಅಂತಿಮ ಕಣದಲ್ಲಿ ೧೪ ಮಂದಿ

ಭದ್ರಾವತಿ ವಿಧಾನಸಭಾ ಕ್ಷೇತ್ರದ ೨೦೨೩ರ ಚುನಾವಣೆಯಲ್ಲಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು
    ಭದ್ರಾವತಿ, ಏ. ೨೧ : ಈ ಬಾರಿ ವಿಧಾನಸಭಾ ಚುನಾವಣೆ ಅಂತಿಮ ಕಣದಲ್ಲಿ ಒಟ್ಟು ೧೪ ಮಂದಿ ಉಳಿದುಕೊಂಡಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.
    ಚುನಾವಣೆಗೆ ಸ್ಪರ್ಧಿಸಿ ಒಟ್ಟು ೧೭ ಮಂದಿ ೨೫ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆದು ೧೭ ಮಂದಿಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿತ್ತು. ೧೬ ನಾಮಪತ್ರಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಕೆ. ಮೋಹನ್ ಮತ್ತು ನೀಲಂ ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
     ಶಾಸಕ ಬಿ.ಕೆ ಸಂಗಮೇಶ್ವರ್(ಕಾಂಗ್ರೆಸ್), ಶಾರದ ಅಪ್ಪಾಜಿ(ಜೆಡಿಎಸ್), ಮಂಗೋಟೆ ರುದ್ರೇಶ್(ಬಿಜೆಪಿ), ಆನಂದ್(ಎಎಪಿ), ಸುಮಿತ್ರಾ ಬಾಯಿ (ಕೆಆರ್‌ಎಸ್), ಶಶಿಕುಮಾರ್ ಎಸ್. ಗೌಡ(ಜೆಡಿಯು), ಇ.ಪಿ ಬಸವರಾಜ(ಆರ್‌ಪಿಐಕೆ), ಬಿ.ಎನ್ ರಾಜು(ಪಕ್ಷೇತರ), ಅಹಮದ್ ಅಲಿ(ಪಕ್ಷೇತರ), ಜಾನ್‌ಬೆನ್ನಿ(ಪಕ್ಷೇತರ), ಎಸ್.ಕೆ ಸುಧೀಂದ್ರ(ಪಕ್ಷೇತರ), ವೈ. ಶಶಿಕುಮಾರ್(ಪಕ್ಷೇತರ), ಡಿ. ಮೋಹನ್(ಪಕ್ಷೇತರ) ಮತ್ತು ರಾಜಶೇಖರ್(ಪಕ್ಷೇತರ) ಅಂತಿಮ ಕಣದಲ್ಲಿ ಉಳಿದುಕೊಂಡಿರುವ ಅಭ್ಯರ್ಥಿಗಳಾಗಿದ್ದಾರೆ.
    ವಿವಿಧ ರಾಜಕೀಯ ಪಕ್ಷಗಳಿಂದ ೭ ಮಂದಿ ಹಾಗು ಪಕ್ಷೇತರರಾಗಿ ೭ ಮಂದಿ ಒಟ್ಟು ೧೪ ಮಂದಿ ಇದ್ದು, ಈ ಬಾರಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸಮಾನವಾಗಿರುವುದು ವಿಶೇಷತೆಯಾಗಿದೆ.
    ಕಳೆದ ಚುನಾವಣೆ ೨೦೧೮ರಲ್ಲೂ ೧೪ ಮಂದಿ ಕಣದಲ್ಲಿದ್ದರು. ೨೦೧೩ರಲ್ಲಿ ಅತಿಹೆಚ್ಚು ೧೭ ಮಂದಿ ಹಾಗು ೨೦೦೮ರಲ್ಲಿ ಕೇವಲ ೭ ಮಂದಿ ಕಣದಲ್ಲಿದ್ದರು.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ಪಕ್ಷದ ಜನಪರ ಯೋಜನೆಗಳು ಸಂಗಮೇಶ್ವರ್ ಗೆಲುವಿಗೆ ಸಹಕಾರಿ

ಪತ್ರಿಕಾಗೋಷ್ಠಿಯಲ್ಲಿ 'ಭದ್ರಾವತಿ ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳು' ಪ್ರಗತಿಯತ್ತ ಭದ್ರಾವತಿ ಬಿಡುಗಡೆ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ 'ಭದ್ರಾವತಿ ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳು' ಪ್ರಗತಿಯತ್ತ ಭದ್ರಾವತಿ ಕಾಂಗ್ರೆಸ್ ಪಕ್ಷದ ಮುಖಂಡರು ಬಿಡುಗಡೆಗೊಳಿಸಿದರು.
    ಭದ್ರಾವತಿ, ಏ. ೨೪ : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ತಮ್ಮ ಅವಧಿಯಲ್ಲಿ ಕೋಟ್ಯಾಂತರ ರು. ವೆಚ್ಚದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅಲ್ಲದೆ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು ಅವರ ಗೆಲುವಿಗೆ ಸಹಕಾರಿಯಾಗಿವೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಹೇಳಿದರು.
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಎಲ್ಲಾ ಭಾಗಗಳಲ್ಲೂ ಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು  ಕೈಗೊಂಡಿದ್ದಾರೆ. ಅವರ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಸುಮಾರು ೪೦ ಪುಟಗಳ 'ಭದ್ರಾವತಿ ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳು' ಪ್ರಗತಿಯತ್ತ ಭದ್ರಾವತಿ ಚುನಾವಣಾ ಆಯೋಗದ ಅನುಮತಿ ಪಡೆದು ಮುದ್ರಣಗೊಳಿಸಲಾಗಿದ್ದು, ಇದನ್ನು ಇದೀಗ ಬಿಡುಗಡೆಗೊಳಿಸಲಾಗುತ್ತಿದೆ ಎಂದರು.
    ಕಾಂಗ್ರೆಸ್ ಜನಪರ ಪಕ್ಷವಾಗಿದ್ದು, ಈಗಾಗಲೇ ಹೊಸ ಯೋಜನೆಗಳನ್ನು ಘೋಷಿಸಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ಗ್ಯಾರಂಟಿ ಕಾರ್ಡ್ ನೀಡುವ ಮೂಲಕ ಭರವಸೆ ಮೂಡಿಸಿದೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈ ಯೋಜನೆಗಳು ಜಾರಿಗೆ ಬರಲಿವೆ. ಬಿಜೆಪಿ ಪಕ್ಷದ ಸುಳ್ಳು ಭರವಸೆಗಳಿಗೆ ಮತದಾರರು ಕಿವಿಗೊಡಬಾರದು. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
    ಕ್ಷೇತ್ರದ ಮತದಾರರು ಶಾಸಕರ ಪರವಾಗಿದ್ದು, ಈ ಬಾರಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಅವರ ಗೆಲುವಿಗಾಗಿ ಒಗ್ಗಟ್ಟಿನಿಂದಾಗಿ ಶ್ರಮಿಸುತ್ತಿದ್ದಾರೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಯುವ ಘಟಕದ ಅಧ್ಯಕ್ಷ ಅಫ್ತಾಬ್ ಅಹಮದ್, ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಪ್ರಮುಖರಾದ ಬಿ.ಕೆ ಮೋಹನ್, ಅನುಸುಧ ಮೋಹನ್ ಪಳನಿ, ಸರ್ವಮಂಗಳ ಬೈರಪ್ಪ, ಬಲ್ಕೀಶ್‌ಬಾನು, ಬಿ.ಟಿ ನಾಗರಾಜ್, ಲಕ್ಷ್ಮೀದೇವಿ, ಲತಾ ಚಂದ್ರಶೇಖರ್, ಅನುಸೂಯ, ಅಂತೋಣಿ ವಿಲ್ಸನ್, ಕಾಂತರಾಜ್, ದಿಲ್‌ದಾರ್, ಪೀರ್‌ಷರೀಫ್, ಅಬ್ದುಲ್ ಖದೀರ್, ಶಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.